ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಆರೋಗ್ಯ ವಿ.ವಿ. ಹಂಗಾಮಿ ಕುಲಪತಿ ನೇಮಕಾತಿ– ಸಂಪ್ರದಾಯಕ್ಕೆ ತಿಲಾಂಜಲಿ

Last Updated 17 ಜೂನ್ 2021, 19:30 IST
ಅಕ್ಷರ ಗಾತ್ರ

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿ ಸ್ಥಾನಕ್ಕೆ ಖಾಸಗಿ ದಂತವೈದ್ಯಕೀಯ ಕಾಲೇಜೊಂದರ ಪ್ರಾಂಶುಪಾಲ ಹುದ್ದೆಯಲ್ಲಿ ಇದ್ದ ಎಸ್.ಎಂ. ಜಯಕರ ಅವರನ್ನು ನೇಮಿಸುವ ಮೂಲಕ ರಾಜ್ಯಪಾಲ ವಜುಭಾಯಿ ವಾಲಾ ಅವರು ವಿವಾದಕ್ಕೆ ಸಿಲುಕಿದ್ದಾರೆ.

ಈ ನೇಮಕ ಮಾಡುವ ಸಂದರ್ಭದಲ್ಲಿ ರಾಜ್ಯಪಾಲರು, ವೈದ್ಯಕೀಯ ಶಿಕ್ಷಣ ಸಚಿವ ಹಾಗೂ ವಿಶ್ವವಿದ್ಯಾಲಯದ ಸಹಕುಲಾಧಿಪತಿ ಸುಧಾಕರ್ ಅವರ ಜೊತೆ ಸಮಾಲೋಚನೆಯನ್ನೂ ಮಾಡಿಲ್ಲ. ಕುಲಪತಿ ಹುದ್ದೆ ಖಾಲಿ ಆದಾಗ ವಿಶ್ವವಿದ್ಯಾಲಯದ ಅತ್ಯಂತ ಹಿರಿಯ ಡೀನ್ ಅಥವಾ ಇಬ್ಬರು ಕುಲಸಚಿವರ ಪೈಕಿ ಒಬ್ಬರನ್ನು ಮಧ್ಯಂತರ ಅವಧಿಗೆ ಕುಲಪತಿ ಸ್ಥಾನಕ್ಕೆ ನೇಮಿಸುವುದು ಅನುಸರಿಸಿಕೊಂಡು ಬಂದಿರುವ ಪದ್ಧತಿ. ಆದರೆ, ಖಾಸಗಿ ಕಾಲೇಜೊಂದರ ಪ್ರಾಂಶುಪಾಲ ಹುದ್ದೆಯಲ್ಲಿ ಇದ್ದವರಿಗೆ ಉನ್ನತ ಅಧಿಕಾರವನ್ನು ಹಸ್ತಾಂತರಿಸುವುದು ಈ ವಿಶ್ವವಿದ್ಯಾಲಯದ ಇತಿಹಾಸದಲ್ಲಿ ಹಿಂದೆಂದೂ ನಡೆದಿಲ್ಲ. ಹಿತಾಸಕ್ತಿಗಳ ಸಂಘರ್ಷವನ್ನು ಗಣನೆಗೆ ತೆಗೆದುಕೊಂಡರೆ, ಈ ನೇಮಕಾತಿಯು ಕೆಟ್ಟ ನಿದರ್ಶನವಾಗುತ್ತದೆ. ರಾಜ್ಯಪಾಲರು ವಿಶ್ವವಿದ್ಯಾಲಯದ ಕುಲಾಧಿಪತಿ ಕೂಡ ಆಗಿರುವ ಕಾರಣ, ಹುದ್ದೆಯೊಂದು ತಾತ್ಕಾಲಿಕವಾಗಿ ತೆರವಾದಾಗ ಅಲ್ಲಿಗೆ ತಮಗೆ ಸೂಕ್ತವೆನಿಸಿದ ವ್ಯಕ್ತಿಯನ್ನು ನೇಮಿಸುವ ಅಧಿಕಾರ ಹೊಂದಿದ್ದಾರೆ ಎಂದು ಸಂಬಂಧಪಟ್ಟ ಕಾಯ್ದೆಗಳು ಹೇಳುತ್ತವೆ. ಆದರೆ, ಅವರು ತಮಗೆ ವಿವೇಚನಾಧಿಕಾರ ಇರುವ ಕೆಲವು ನಿರ್ದಿಷ್ಟ ವಿಷಯಗಳನ್ನು ಹೊರತುಪಡಿಸಿದರೆ, ಉಳಿದಂತೆ ಸಚಿವ ಸಂಪುಟದ ಸಲಹೆಯನ್ನು ಪಡೆದು ಮುಂದಡಿ ಇರಿಸಬೇಕಾಗುತ್ತದೆ ಎಂದು ಸಂವಿಧಾನ ಹೇಳುತ್ತದೆ.

ಈ ಪ್ರಕರಣದಲ್ಲಿ ರಾಜ್ಯಪಾಲರು ಇದುವರೆಗಿನ ಸಂಪ್ರದಾಯವನ್ನು ಮುರಿದಿದ್ದಾರೆ ಎನ್ನಬೇಕಾಗುತ್ತದೆ. ಯಾವುದೇ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಯಲ್ಲಿ ಇರುವವರು ತೆಗೆದುಕೊಳ್ಳುವ ನಿರ್ಧಾರಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಒಳಗಾಗುತ್ತವೆ. ಅವರು ತೆಗೆದುಕೊಳ್ಳುವ ನಿರ್ಧಾರಗಳು ವಿದ್ಯಾರ್ಥಿ ಸಮೂಹದ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ. ಕುಲಪತಿ ಹುದ್ದೆಗೆ ನೇಮಕ ಆಗುವವರು ಶಾಶ್ವತವಾಗಿ ಅಲ್ಲಿಯೇ ಇರುವುದಿಲ್ಲ. ಆದರೆ, ಅವರು ಕೈಗೊಳ್ಳುವ ತೀರ್ಮಾನಗಳು ವಿದ್ಯಾರ್ಥಿ ಸಮೂಹದ ಮೇಲೆ ಶಾಶ್ವತ ಪರಿಣಾಮ ಉಂಟುಮಾಡಬಹುದು. ಹಾಗಾಗಿ, ಇಂತಹ ಹುದ್ದೆಗಳಿಗೆ ನಡೆಯುವ ನೇಮಕಾತಿಯ ಇಡೀ ಪ್ರಕ್ರಿಯೆಯು ಸಂಪೂರ್ಣವಾಗಿ ಪಾರದರ್ಶಕವಾಗಿ ಇರಬೇಕಾದುದು ಅಪೇಕ್ಷಣೀಯ.

ರಾಜ್ಯಪಾಲರ ನಿರ್ಧಾರಕ್ಕೆ ಸುಧಾಕರ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಹಂಗಾಮಿ ಕುಲಪತಿಯ ನೇಮಕದ ವಿಚಾರದಲ್ಲಿ ಸಂಪ್ರದಾಯವನ್ನು ಪಾಲಿಸಬೇಕು ಎಂದು ತಾವು ಹಿಂದೆ ಬರೆದಿದ್ದ ಪತ್ರವನ್ನು ರಾಜ್ಯ‍ಪಾಲರು ನಿರ್ಲಕ್ಷ್ಯ ಮಾಡಿದ್ದಾರೆ, ನೇಮಕ ಕುರಿತು ಚರ್ಚಿಸಲು ಸಮಯಾವಕಾಶ ಕೋರಿದ್ದಾಗ ಸಾಂಕ್ರಾಮಿಕದ ಕಾರಣವನ್ನು ಮುಂದೊಡ್ಡಿ ಅವಕಾಶ ನಿರಾಕರಿಸಿದ್ದರು ಎಂದು ಕೂಡ ಸುಧಾಕರ್ ಹೇಳಿದ್ದಾರೆ. ಸಚಿವರಿಂದ ಅಥವಾ ಸಂಬಂಧಪಟ್ಟ ಇಲಾಖೆಯ ಕಡೆಯಿಂದ ಯಾರ ಹೆಸರನ್ನೂ ಶಿಫಾರಸು ಮಾಡಿರಲಿಲ್ಲ. ಹೀಗಿದ್ದಾಗ ರಾಜ್ಯಪಾಲರು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಹಲವು ಪ್ರೊಫೆಸರ್‌ಗಳ ಸೇವಾ ಹಿರಿತನ ಕಡೆಗಣಿಸಿ, ಜಯಕರ ಅವರನ್ನು ಆಯ್ಕೆ ಮಾಡಿದ್ದಕ್ಕೆ ಕಾರಣ ಏನು ಎಂಬುದು ಸ್ಪಷ್ಟವಾಗಿಲ್ಲ. ಕುಲಪತಿ ಹುದ್ದೆಯನ್ನು ‘ಉನ್ನತ ಅಕಾಡೆಮಿಕ್ ಅರ್ಹತೆ ಮತ್ತು ಪ್ರಾಮಾಣಿಕತೆ ಇರುವವರು’ ಅಲಂಕರಿಸಬೇಕು ಎಂದು ಬಹಿರಂಗವಾಗಿ ಹೇಳುವ ಮೂಲಕ ಈಗಿನ ನೇಮಕದ ಬಗ್ಗೆ ಸುಧಾಕರ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕುಲಪತಿಗಳನ್ನು ನೇಮಕ ಮಾಡುವ ಪ್ರಕ್ರಿಯೆಯೇ ಈಚಿನ ಕೆಲವು ವರ್ಷಗಳಲ್ಲಿ ಪ್ರಶ್ನಾರ್ಹವಾಗುತ್ತಿದೆ. ಅಕಾಡೆಮಿಕ್ ಅರ್ಹತೆ ಹಾಗೂ ಆಡಳಿತಾತ್ಮಕ ಸಾಮರ್ಥ್ಯವನ್ನು ಪರಿಗಣಿಸುವುದಕ್ಕಿಂತ ಹೆಚ್ಚಾಗಿ ಇತರ ಹಲವು ಅಂಶಗಳ ಪರಿಗಣನೆಯೇ ಪ್ರಮುಖವಾಗಿದ್ದ ನಿದರ್ಶನಗಳೂ ಇವೆ. ವಾಲಾ ಅವರು ಈಗ ಮಾಡಿರುವ ನೇಮಕವು ಕೆಲವು ಕಟುವಾದ ಪ್ರಶ್ನೆಗಳಿಗೆ ಗುರಿಯಾಗಬಹುದು. ನೇಮಕಾತಿಯು ಪಾರದರ್ಶಕವಾಗಿ ನಡೆದಿಲ್ಲ ಎಂದು ಮೇಲ್ನೋಟಕ್ಕೆ ಅನಿಸುತ್ತಿದೆ. ಜಯಕರ ಅವರನ್ನು ಹಂಗಾಮಿ ಕುಲಪತಿಯಾಗಿ ನೇಮಿಸಿದ್ದನ್ನು ರಾಜ್ಯಪಾಲರು ಪುನರ್ ವಿಮರ್ಶಿಸಬೇಕು. ಇದುವರೆಗೆ ಪಾಲಿಸಿಕೊಂಡು ಬಂದಿರುವ ನಿಯಮಗಳಿಗೆ ಅನುಸಾರವಾಗಿ, ಪಾರದರ್ಶಕವಾಗಿ ನೇಮಕಾತಿಗಳನ್ನು ನಡೆಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT