ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಹಾಥರಸ್‌ ಪ್ರಕರಣ: ನಾಗರಿಕ ಸಮಾಜ ತಲೆತಗ್ಗಿಸುವಂಥ ಕೃತ್ಯ

Last Updated 1 ಅಕ್ಟೋಬರ್ 2020, 20:01 IST
ಅಕ್ಷರ ಗಾತ್ರ

ಅಪರಾಧಿಗಳು ಯಾವ ವರ್ಗಕ್ಕೆ ಸೇರಿರಲಿ, ಎಷ್ಟೇ ಪ್ರಭಾವಿಗಳಾಗಿರಲಿ ಶಿಕ್ಷೆ ತಪ್ಪದು ಎನ್ನುವ ಭಾವನೆಯನ್ನು ಉತ್ತರಪ್ರದೇಶ ಸರ್ಕಾರ ಮೂಡಿಸಬೇಕಾಗಿದೆ

ಉತ್ತರಪ್ರದೇಶದ ಹಾಥರಸ್‌ನಲ್ಲಿ ನಡೆದಿರುವ ದಲಿತ ಯುವತಿಯ ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣವು ಪ್ರಜ್ಞಾವಂತರನ್ನು ಬೆಚ್ಚಿಬೀಳಿಸುವಂಥದ್ದು, ನಾಗರಿಕ ಸಮಾಜ ಲಜ್ಜೆಯಿಂದ ತಲೆತಗ್ಗಿಸುವಂಥದ್ದು, ಕಾನೂನು ಸುವ್ಯವಸ್ಥೆಯ ಮೇಲಿನ ಜನಸಾಮಾನ್ಯರ ನಂಬಿಕೆಯನ್ನು ಕುಗ್ಗಿಸುವಂಥದ್ದು.

19 ವರ್ಷ ವಯಸ್ಸಿನ ಯುವತಿಯ ಮೇಲೆ ನಾಲ್ವರು ಯುವಕರು ಸೆಪ್ಟೆಂಬರ್‌ 14ರಂದು ಅಮಾನುಷವಾಗಿ ಹಲ್ಲೆ ನಡೆಸಿ, ಅತ್ಯಾಚಾರ ಎಸಗಿದ್ದಾರೆ. ಈ ಪೈಶಾಚಿಕ ಕೃತ್ಯದಲ್ಲಿ ಯುವತಿಯ ಬೆನ್ನುಮೂಳೆ ಗಾಸಿಗೊಂಡು, ಎರಡೂ ಕಾಲು ಹಾಗೂ ಒಂದು ತೋಳಿನ ಮೂಳೆಗಳು ಮುರಿದಿವೆ. ನಾಲಗೆ ತುಂಡಾಗಿದೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನು ದೆಹಲಿಯ ಸಪ್ಧರ್‌ಜಂಗ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೆಪ್ಟೆಂಬರ್ 29ರಂದು ಆಸ್ಪತ್ರೆಯಲ್ಲಿ ಮೃತಪಟ್ಟ ಸಂತ್ರಸ್ತೆಯ ಅಂತ್ಯಸಂಸ್ಕಾರ ಕೂಡ ಅಮಾನವೀಯವಾಗಿ ನಡೆದಿದೆ.

ಮೃತಪಟ್ಟ ಯುವತಿಯ ಕುಟುಂಬದವರನ್ನು ಬಲವಂತದಿಂದ ದೂರವಿರಿಸಿ, ಮೃತಳ ಅಂತಿಮ ದರ್ಶನಕ್ಕೂ ಅವಕಾಶ ನೀಡದೆ, ಪೊಲೀಸರೇ ಅಂತ್ಯಸಂಸ್ಕಾರ ನಡೆಸಿದ್ದಾರೆ. ಸಾವಿಗೀಡಾದ ಯುವತಿಯ ಕುಟುಂಬದವರ ಭಾವನೆಗಳಿಗೆ ಅಧಿಕಾರದ ದರ್ಪದೆದುರು ಚಿಕ್ಕಾಸಿನ ಬೆಲೆಯೂ ದೊರೆತಿಲ್ಲ. ನಾಪತ್ತೆಯಾಗಿದ್ದ ಯುವತಿಯನ್ನು ಹುಡುಕಿಕೊಡಲು ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ. ಆಕೆಯ ಮೇಲೆ ನಡೆದಿರುವುದು ಅತ್ಯಾಚಾರವೋ ಸಾಮೂಹಿಕ ಅತ್ಯಾಚಾರವೋ ಎನ್ನುವುದರ ಕುರಿತು ತೀರ್ಮಾನಕ್ಕೆ ಬರಲು ವಿಳಂಬ ಧೋರಣೆ ಅನುಸರಿಸಿದ್ದಾರೆ. ಆದರೆ, ಅಂತ್ಯಸಂಸ್ಕಾರಕ್ಕೆ ವಿಪರೀತ ಉತ್ಸಾಹ ತೋರಿಸಿದ್ದು, ನಸುಕಿನ ಮೂರು ಗಂಟೆ ಸುಮಾರಿನಲ್ಲಿ ಯುವತಿಯ ದೇಹವನ್ನು ದಹಿಸಿದ್ದಾರೆ.

ಪೊಲೀಸರ ಈ ಎಲ್ಲ ನಡವಳಿಕೆಗಳು, ಪ್ರಕರಣದಲ್ಲಿ ಭಾಗಿಯಾದ ಪ್ರಭಾವಿಗಳನ್ನು ರಕ್ಷಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎನ್ನುವ ಭಾವನೆ ಮೂಡಲು ಕಾರಣವಾಗಿವೆ.ಛಿದ್ರಗೊಂಡ ಹೆಣ್ಣಿನ ದೇಹದ ಸ್ಥಿತಿ ನಮ್ಮ ಸಾಮಾಜಿಕ ಹಾಗೂ ಕಾನೂನು ವ್ಯವಸ್ಥೆಯ ಸ್ಥಿತಿಯನ್ನು ಅಣಕಿಸುವಂತಿದೆ. ಸಂತ್ರಸ್ತೆಯ ನಾಲಗೆ ತುಂಡಾಗಿರುವುದು, ಸಾಮಾಜಿಕ ನ್ಯಾಯದ ನಾಲಗೆಯನ್ನು ಕಸಿದುಕೊಂಡ ರೂಪಕದಂತೆ ದಲಿತರಿಗೆ ಕಾಣಿಸಿದರೆ
ಆಶ್ಚರ್ಯವೇನೂ ಇಲ್ಲ.

ದಲಿತರಿಗೆ ಹಾಗೂ ದಲಿತ ಹೆಣ್ಣುಮಕ್ಕಳಿಗೆ ಉತ್ತರ ಪ್ರದೇಶದಲ್ಲಿ ರಕ್ಷಣೆಯಿಲ್ಲ ಎನ್ನುವ ಭಾವನೆ ಬಲಪಡಿಸುವಂತಹ ವಿದ್ಯಮಾನಗಳು ಮತ್ತೆ ಮತ್ತೆ ನಡೆಯುತ್ತಿವೆ. ದೇಶದಲ್ಲಿ 2019ರಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯ ಪ್ರಕರಣಗಳಲ್ಲಿ ಶೇಕಡ 14.7ರಷ್ಟು ಉತ್ತರಪ್ರದೇಶದಿಂದಲೇ ವರದಿಯಾಗಿವೆ. ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರದ ಅವಧಿಯಲ್ಲಿ ದಲಿತರ ಮೇಲಿನ ದೌರ್ಜನ್ಯದ ಪ್ರಕರಣಗಳು ಶೇ 27.9ರಷ್ಟು ಹೆಚ್ಚಾಗಿವೆ ಎಂದು ವರದಿಯಾಗಿದೆ.

ಹಾಥರಸ್‌ ಪ್ರಕರಣದ ಬೆನ್ನಿಗೇ ಸಾಮೂಹಿಕ ಅತ್ಯಾಚಾರದ ಮತ್ತೊಂದು ಪ್ರಕರಣ ಉತ್ತರಪ್ರದೇಶದ ಬಲರಾಂಪುರದಿಂದ ವರದಿಯಾಗಿದೆ. ಕೆಲಸದಿಂದ ಮನೆಗೆ ಮರಳುತ್ತಿದ್ದ 22 ವರ್ಷ ವಯಸ್ಸಿನ ದಲಿತ ಯುವತಿಯ ಮೇಲೆ ಇಬ್ಬರು ಅತ್ಯಾಚಾರವೆಸಗಿದ್ದಾರೆ. ಗಂಭೀರ ಪರಿಸ್ಥಿತಿಯಲ್ಲಿ ಮನೆಗೆ ಮರಳಿದ ಯುವತಿಯನ್ನು ಆಸ್ಪತ್ರೆಗೆ ಸೇರಿಸುವ ಮಾರ್ಗಮಧ್ಯದಲ್ಲಿ ಆಕೆ ನಿಧನಳಾಗಿದ್ದಾಳೆ.

ಹೆಣ್ಣುಮಕ್ಕಳ ಜಂಘಾಬಲವನ್ನೇ ಉಡುಗಿಸುವಂತಹ ಈ ಕೃತ್ಯಗಳು, ಸಮಾಜದಲ್ಲಿ ಅಡಗಿರುವ ಕ್ರೌರ್ಯವನ್ನು ಸೂಚಿಸುವಂತಿವೆ. ಅತ್ಯಾಚಾರಗಳನ್ನು ಪುರುಷ ಅಹಂಕಾರದ ಪ್ರತಿಫಲನದ ರೂಪದಲ್ಲಿ ವ್ಯಾಖ್ಯಾನಿಸುತ್ತೇವೆ. ಆದರೆ, ದಲಿತ ವರ್ಗದ ಹೆಣ್ಣುಮಕ್ಕಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳು ಪುರುಷ ಅಹಂಕಾರದ ಜೊತೆಗೆ, ಸಮಾಜದಲ್ಲಿ ಹೆಪ್ಪುಗಟ್ಟಿರುವ ಜಾತೀಯತೆಯ ದ್ಯೋತಕವೂ ಆಗಿವೆ.

ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳಿಗೆ ಅಧಿಕಾರ ಹಾಗೂ ರಾಜಕೀಯ ಪ್ರಭಾವವೂ ಒತ್ತಾಸೆಯಾಗಿರುವಂತಿವೆ. ಹಾಥರಸ್ ಪ್ರಕರಣದ ತನಿಖೆಗೆ ಅಲ್ಲಿನ ಸರ್ಕಾರವು ವಿಶೇಷ ತನಿಖಾ ತಂಡ ರಚಿಸಿದೆ. ತನಿಖಾ ತಂಡ ರಚಿಸಿದರಷ್ಟೇ ಸಾಲದು. ತನಿಖೆ ಪಾರದರ್ಶಕವಾಗಿ ನಡೆದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕಾಗಿದೆ. ದಲಿತ ವರ್ಗದವರಲ್ಲಿನ ಅಸುರಕ್ಷಿತ ಭಾವನೆಯನ್ನು ಹೋಗಲಾಡಿಸುವ ಕೆಲಸವನ್ನೂ ಸರ್ಕಾರ ಮಾಡಬೇಕಾಗಿದೆ. ಅಪರಾಧ ಪ್ರಕರಣಗಳಲ್ಲಿ ಭಾಗಿಯಾದವರು ಯಾವ ವರ್ಗಕ್ಕೆ ಸೇರಿದವರಾಗಿದ್ದರೂ ಎಷ್ಟೇ ಪ್ರಭಾವಿಗಳಾಗಿದ್ದರೂ ಶಿಕ್ಷೆ ತಪ್ಪದು ಎನ್ನುವ ಭಾವನೆಯನ್ನು ಮೂಡಿಸುವ ಸವಾಲನ್ನು ಉತ್ತರಪ್ರದೇಶ ಸರ್ಕಾರ ಎದುರಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT