ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಆರೋಗ್ಯ ಸೂಚಿ: ಕರ್ನಾಟಕದ ಸಾಧನೆ ನಿರಾಶಾದಾಯಕ

Last Updated 11 ಜನವರಿ 2022, 19:30 IST
ಅಕ್ಷರ ಗಾತ್ರ

ನೀತಿ ಆಯೋಗದ 2019–20ನೇ ಸಾಲಿನ ‘ಆರೋಗ್ಯ ಸೂಚ್ಯಂಕ ವರದಿ’ ಇತ್ತೀಚೆಗೆ ಪ್ರಕಟವಾಗಿದೆ. ದೇಶದ ವಿವಿಧ ರಾಜ್ಯಗಳು ಆರೋಗ್ಯ ಕ್ಷೇತ್ರದಲ್ಲಿ ಸಾಧಿಸಿರುವ ಪ್ರಗತಿಗೆ ಈ ವರದಿಯು ಕನ್ನಡಿ ಹಿಡಿಯುತ್ತದೆ.ದಕ್ಷಿಣ ಭಾರತದ ಬಹುತೇಕ ಎಲ್ಲ ರಾಜ್ಯಗಳು ಆರೋಗ್ಯ ಕ್ಷೇತ್ರದ ವಿವಿಧ ಸೂಚಿಗಳಲ್ಲಿ ಪ್ರಗತಿಯತ್ತ ಮುಖ ಮಾಡಿದ್ದರೆ,ಕರ್ನಾಟಕ ಮಾತ್ರ ಹಿಂದೆ ಬಿದ್ದಿರುವುದು ಕಳವಳಕಾರಿ. 24 ಸೂಚ್ಯಂಕಗಳ ಆಧಾರದ ಮೇಲೆ ರ‍್ಯಾಂಕಿಂಗ್‌ ನೀಡಲಾಗಿದ್ದು, ನಮ್ಮ ರಾಜ್ಯ ಒಂಬತ್ತನೇ ಸ್ಥಾನಕ್ಕೆ ಕುಸಿದಿದೆ.

2018–19ನೇ ಸಾಲಿಗೆ ಹೋಲಿಸಿದರೆ, 2019–20ನೇ ಸಾಲಿನಲ್ಲಿ ಒಂದು ಸ್ಥಾನ ಕುಸಿತ ಕಂಡಿದೆ. ಅಷ್ಟೇ ಅಲ್ಲದೆ, ಆರೋಗ್ಯ ಕ್ಷೇತ್ರದಲ್ಲಿ ಒಟ್ಟಾರೆ ಆಗಿರುವ ಪ್ರಗತಿ ವಿಚಾರದಲ್ಲಿ ರಾಜ್ಯ ಕೊನೆಯ ಸ್ಥಾನದಲ್ಲಿದೆ. ಅಕ್ಕಪಕ್ಕದ ಕೇರಳ ಮತ್ತು ತಮಿಳುನಾಡು ರಾಜ್ಯಗಳು ಆರೋಗ್ಯ ಕ್ಷೇತ್ರದಲ್ಲಿ ಬಹಳಷ್ಟು ಪ್ರಗತಿ ಸಾಧಿಸುವ ಮೂಲಕ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನದಲ್ಲಿರುವಾಗ ರಾಜ್ಯದ ಕಳಪೆ ಸಾಧನೆ ನಿರಾಸೆ ಮೂಡಿಸುತ್ತದೆ. ಆರೋಗ್ಯ ಕ್ಷೇತ್ರದತ್ತ ರಾಜ್ಯ ಎಷ್ಟೊಂದು ನಿರ್ಲಕ್ಷ್ಯ ತಾಳಿದೆ ಎನ್ನುವುದಕ್ಕೆ ಇದು ನಿದರ್ಶನ. ವರದಿಯಲ್ಲಿ ಉಲ್ಲೇಖಿಸಿರುವ ಹಲವು ಅಂಶಗಳು ಆಗಬೇಕಿರುವ ಸುಧಾರಣಾ ಕ್ರಮಗಳತ್ತ ಬೊಟ್ಟು ಮಾಡುತ್ತವೆ.

ಎಲ್ಲೆಲ್ಲಿ ತಪ್ಪು ಹೆಜ್ಜೆ ಇಟ್ಟಿದ್ದೇವೆ, ಏನೆಲ್ಲ ಬದಲಾವಣೆ ಮಾಡಿಕೊಳ್ಳಬೇಕಿದೆ, ಅಗ್ರಕ್ರಮಾಂಕದಲ್ಲಿರುವ ರಾಜ್ಯಗಳಿಂದ ನಾವು ಕಲಿಯುವುದು ಏನಿದೆ ಎಂಬುದನ್ನು ತಿಳಿದುಕೊಳ್ಳಲು ಆರೋಗ್ಯ ಸೂಚ್ಯಂಕ ವರದಿ ಉಪಯುಕ್ತ. ಆರೋಗ್ಯ ಕ್ಷೇತ್ರದಲ್ಲಿ ರಾಜ್ಯ ಹಿಂದೆ ಬೀಳಲು ಹಲವು ಅಂಶಗಳು ಕಾರಣವಾಗಿವೆ. ನವಜಾತ ಶಿಶುಗಳ ಮರಣ ಪ್ರಮಾಣ, ಹೆರಿಗೆ ಸಮಯದಲ್ಲಿ ತಾಯಂದಿರ ಮರಣ ಪ್ರಮಾಣ, ಲಿಂಗಾನುಪಾತ, ಆಸ್ಪತ್ರೆಯಲ್ಲಿ ಆಗುವ ಹೆರಿಗೆಗಳ ಪ್ರಮಾಣ ಹಾಗೂ ರಾಜ್ಯದ ಒಟ್ಟು ವೆಚ್ಚದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಮಾಡಲಾಗುವ ವೆಚ್ಚದ ಪ್ರಮಾಣದಲ್ಲಿ ಕುಸಿತ – ಇವೆಲ್ಲ ರಾಜ್ಯದ ಹಿನ್ನಡೆಗೆ ಕಾರಣ ಎಂಬುದು ದತ್ತಾಂಶಗಳಿಂದ ಸ್ಪಷ್ಟ.

ಆರೋಗ್ಯ ಸೂಚ್ಯಂಕದ ವರದಿಯು ವಸ್ತುಸ್ಥಿತಿಯನ್ನು ಮನದಟ್ಟು ಮಾಡುವ ಕಾರಣದಿಂದ ಮಾತ್ರವಲ್ಲದೆ ಕೇಂದ್ರದ ಅನುದಾನ ಪಡೆಯುವ ದೃಷ್ಟಿಯಿಂದಲೂ ಮಹತ್ವದ ಪಾತ್ರ ವಹಿಸುತ್ತದೆ. ಉತ್ತಮ ಪ್ರಗತಿ ತೋರುತ್ತಿರುವ ರಾಜ್ಯಗಳಿಗೆ ಹೆಚ್ಚಿನ ಅನುದಾನ ನೀಡುವಂತೆ ನೀತಿ ಆಯೋಗ ಶಿಫಾರಸು ಮಾಡಿದೆ. ಕಳಪೆ ಸಾಧನೆ ಎಂದರೆ ಅನುದಾನದ ಪ್ರಮಾಣದಲ್ಲೂ ಕುಸಿತ ಎಂದೇ ಅರ್ಥ. ಆಡಳಿತದ ಹೊಣೆ ಹೊತ್ತವರ ವೈಫಲ್ಯಕ್ಕಾಗಿ ರಾಜ್ಯ ಬೆಲೆ ತೆರಬೇಕಾದುದು ಬೇಸರದ ಸಂಗತಿ. ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಸೇವೆಗೆ ಸಂಬಂಧಿಸಿದ ಕೊರತೆಗಳು ಬಹಳಷ್ಟಿವೆ. ಜಿಲ್ಲಾ ಮಟ್ಟದಲ್ಲಿ ಹೃದಯ ಆರೋಗ್ಯ ಆರೈಕೆ ವ್ಯವಸ್ಥೆ ಕೂಡ ಸಮರ್ಪಕವಾಗಿಲ್ಲ ಎನ್ನುವುದು ಹಿಂದಿನ ಸಮೀಕ್ಷೆಗಳಲ್ಲಿ ಎದ್ದು ಕಂಡಿದೆ.

ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ರಾಜ್ಯ ಸರ್ಕಾರ ಎಷ್ಟು ಮುತುವರ್ಜಿ ತೋರಬೇಕಿತ್ತೋ ಅಷ್ಟನ್ನು ತೋರಿಲ್ಲ ಎಂಬ ಸತ್ಯವನ್ನೂ ಆ ಸಮೀಕ್ಷೆಗಳು ಹೊರಹಾಕಿವೆ. ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಚಿಕಿತ್ಸೆಗೆ ನೆರವಾಗಬಲ್ಲ ತಾಲ್ಲೂಕು ಆಸ್ಪತ್ರೆಗಳ ಸಾಮರ್ಥ್ಯವನ್ನು ಮೇಲ್ದರ್ಜೆಗೆ ಏರಿಸಬೇಕೆಂಬ ಬೇಡಿಕೆ ಕೂಡ ಬಹುದಿನಗಳಿಂದ ಹಾಗೇ ನನೆಗುದಿಗೆ ಬಿದ್ದಿದೆ. ಜಿಲ್ಲಾ ಆಸ್ಪತ್ರೆಯಿಂದ ಹಿಡಿದು ಉಪ ಆರೋಗ್ಯ ಕೇಂದ್ರದವರೆಗೆ ಎಲ್ಲ ಹಂತಗಳಲ್ಲೂ ವೈದ್ಯರ ಕೊರತೆ ತೀವ್ರವಾಗಿ ಬಾಧಿಸುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳು ರೋಗಪೀಡಿತ ಆಗಿರುವುದರಿಂದಲೇ ಜನರಿಗೆ ಅವುಗಳ ಕುರಿತು ಭಯ ಹಾಗೂ ಅಪನಂಬಿಕೆ. ಸುಸ್ಥಿರವಾದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಕಲ್ಪಿಸುವ ದೃಷ್ಟಿಯಲ್ಲಿ ಅಕ್ಕಪಕ್ಕದ ರಾಜ್ಯಗಳಿಂದ ನಾವು ಕಲಿಯುವುದು ಬೇಕಾದಷ್ಟಿದೆ. ತಮಿಳುನಾಡಿನಲ್ಲಿ ಚಿಕಿತ್ಸೆ ಪಡೆಯಲು ಜನ ವಿಶ್ವಾಸದಿಂದ ಆರೋಗ್ಯ ಕೇಂದ್ರಗಳ ಕಡೆಗೆ ತೆರಳುತ್ತಾರೆ. ಆರೋಗ್ಯ ಕೇಂದ್ರಗಳ ಸಾಮರ್ಥ್ಯದ ಕುರಿತು ನಮ್ಮಲ್ಲೂ ಅಂತಹ ನಂಬಿಕೆ ಬೆಳೆಯುವಂತೆ ಸೌಲಭ್ಯಗಳನ್ನು ಮೇಲ್ದರ್ಜೆಗೆ ಏರಿಸಬೇಕು.

ಕೇರಳದಲ್ಲಿ ಪ್ರತೀ ಐದು ಸಾವಿರ ಜನರಿಗೆ ಒಂದರಂತೆ ಆರೋಗ್ಯ ಕೇಂದ್ರವಿದೆ. ರಾಜ್ಯದಲ್ಲೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸುವತ್ತ ಗಮನಹರಿಸಬೇಕು. ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೂ ರಾಜ್ಯದ ಸಾಮಾಜಿಕ ಹಾಗೂ ಆರ್ಥಿಕ ಬೆಳವಣಿಗೆಗೂ ನೇರ ಸಂಬಂಧವಿದೆ ಎಂಬುದನ್ನು ಸರ್ಕಾರ ಅರಿಯಬೇಕು. ವೈಫಲ್ಯಗಳನ್ನು ಅರಿತು, ಪ್ರಗತಿಯತ್ತ ಹೆಜ್ಜೆ ಹಾಕುವಂತಹ ಆರೋಗ್ಯ ನೀತಿಗಳನ್ನು ರೂಪಿಸಬೇಕು. ಆರೋಗ್ಯ ಕ್ಷೇತ್ರವನ್ನು ಆದ್ಯತಾ ವಲಯವನ್ನಾಗಿ ಗುರುತಿಸಿ, ಸಾರ್ವಜನಿಕ ಆರೋಗ್ಯ ರಕ್ಷಣೆಗೆ ಸಮರ್ಪಕವಾದ ವ್ಯವಸ್ಥೆ ರೂಪಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT