ಬಡವರಿಗೆ ಹಾಗೂ ಜನಸಾಮಾನ್ಯರಿಗೆ ವಸತಿ ಕಲ್ಪಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಅನೇಕ ಯೋಜನೆಗಳ ನಡುವೆಯೂ, ರಾಜ್ಯದಲ್ಲಿನ 37.48 ಕುಟುಂಬಗಳಿಗೆ ಈವರೆಗೂ ಸ್ವಂತ ಸೂರು ಹೊಂದುವುದು ಸಾಧ್ಯವಾಗಿಲ್ಲ ಎನ್ನುವುದು ಕಳವಳಕಾರಿ ಸಂಗತಿ. ತಲಾ ಆದಾಯದಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿರುವ ಹಾಗೂ ಕಲ್ಯಾಣ ಕಾರ್ಯಕ್ರಮಗಳ ಮೂಲಕ ದೇಶಕ್ಕೇ ಮಾದರಿಯಾಗಿರುವ ರಾಜ್ಯದಲ್ಲಿ ಕೋಟ್ಯಂತರ ನಾಗರಿಕರು ಸೂರಿಲ್ಲದೆ ಇರುವುದು ವಿರೋಧಾಭಾಸದಂತಿದೆ. ಕೇಂದ್ರ ಸರ್ಕಾರದ ಸೂಚನೆಯಂತೆ ರಾಜ್ಯ ಸರ್ಕಾರ ನಡೆಸಿದ ಸಮೀಕ್ಷೆ, ನಾಡಿನ 37.48 ಲಕ್ಷ ಕುಟುಂಬಗಳು ಸ್ವಂತ ಮನೆ ಹೊಂದಿಲ್ಲದಿರುವುದನ್ನು ಬೆಳಕಿಗೆ ತಂದಿದೆ. ಇವರಲ್ಲಿ 17.31 ಲಕ್ಷ ಕುಟುಂಬಗಳು ಸ್ವಂತ ನಿವೇಶನವನ್ನೂ ಹೊಂದಿಲ್ಲ. ಸುಮಾರು 20.17 ಲಕ್ಷ ಜನರು ಸಾಲ ಮಾಡಿ ಸ್ವಂತ ನಿವೇಶನಗಳನ್ನು ಖರೀದಿಸಿದ್ದರೂ, ಮನೆ ಕಟ್ಟಿಕೊಳ್ಳಲು ಅವರಿಗೆ ಸಾಧ್ಯವಾಗಿಲ್ಲ.

ಬಡವರಿಗೆ ಹಾಗೂ ಜನಸಾಮಾನ್ಯರಿಗೆ ವಸತಿ ಕಲ್ಪಿಸಿಕೊಡುವ ಉದ್ದೇಶದಿಂದ ಹಲವು ಸರ್ಕಾರಿ ಯೋಜನೆಗಳು ರೂಪುಗೊಂಡಿವೆ. ಬಸವ ವಸತಿ ಯೋಜನೆ, ಡಾ. ಬಿ.ಆರ್. ಅಂಬೇಡ್ಕರ್ ನಗರ ಮತ್ತು ಗ್ರಾಮೀಣ ವಸತಿ ಯೋಜನೆ, ದೇವರಾಜ ಅರಸು ವಸತಿ ಯೋಜನೆ, ವಾಜಪೇಯಿ ನಗರ ವಸತಿ ಯೋಜನೆಗಳನ್ನು ರಾಜ್ಯ ಸರ್ಕಾರ ರೂಪಿಸಿದೆ. ಬೆಂಗಳೂರು ಮಹಾನಗರದಲ್ಲಿನ ವಸತಿ ರಹಿತರಿಗೆಂದು ಬಹುಮಹಡಿ ವಸತಿ ಯೋಜನೆ ಜಾರಿಯಲ್ಲಿದೆ. ಕೇಂದ್ರ ಸರ್ಕಾರ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ವಸತಿ ರಹಿತರಿಗಾಗಿ ಪ್ರಧಾನಮಂತ್ರಿ ಆವಾಸ್ ಯೋಜನೆ ಜಾರಿಗೊಳಿಸಿದೆ. ಪಿಎಂ–ಜನಮನ್ ಯೋಜನೆ ಅಡಿಯೂ ಮನೆಗಳನ್ನು ಮಂಜೂರು ಮಾಡುತ್ತಿದೆ. ಇಷ್ಟೆಲ್ಲ ಯೋಜನೆಗಳು ಇರುವಾಗಲೂ 37.48 ಕುಟುಂಬಗಳು ಈಗಲೂ ಮನೆ ಹೊಂದಿಲ್ಲದಿರುವುದು, ಯೋಜನೆಗಳ ಫಲಶ್ರುತಿಯಲ್ಲಿ ಸಮಸ್ಯೆ ಇರುವುದರ ಸೂಚನೆಯಂತಿದೆ. ವಸತಿ ಯೋಜನೆಗಳ ಆಮೆಗತಿಯೂ ಸ್ವಂತ ಸೂರಿಲ್ಲದವರ ಸಂಖ್ಯೆ ಹೆಚ್ಚಾಗುವುದಕ್ಕೆ ಕಾರಣವಾಗಿದೆ. ರಾಜ್ಯ ಸರ್ಕಾರ, 2024–25ನೇ ಸಾಲಿನಲ್ಲಿ 7.38 ಲಕ್ಷ ಮನೆಗಳನ್ನು ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ನಿರ್ಮಿಸುವುದಾಗಿ ಘೋಷಿಸಿತ್ತು. ಆದರೆ, 3.27 ಲಕ್ಷ ಮನೆಗಳ ನಿರ್ಮಾಣಕ್ಕೆ ಅನುಮೋದನೆ ದೊರೆತಿದ್ದು, ಅವುಗಳಲ್ಲಿ ಈವರೆಗೆ 9,839 ಮನೆಗಳಷ್ಟೇ ಪೂರ್ಣಗೊಂಡಿವೆ; 46,540 ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಇನ್ನೂ 4.11 ಲಕ್ಷ ಮನೆಗಳ ಅನುಮೋದನೆ ಬಾಕಿ ಉಳಿದಿದೆ. ಕೇಂದ್ರದ ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ 2024–25ರಲ್ಲಿ ರಾಜ್ಯದಲ್ಲಿ 2.74 ಲಕ್ಷ ಮನೆ ನಿರ್ಮಾಣದ ಗುರಿ ಹೊಂದಿದ್ದರೂ, ಇಲ್ಲಿಯವರೆಗೆ 4,443 ಮನೆಗಳು ನಿರ್ಮಾಣವಷ್ಟೇ ಪೂರ್ಣವಾಗಿವೆ.

ನಗರೀಕರಣ, ಬಡತನ, ವಲಸೆ ಮತ್ತು ಅಸಮರ್ಪಕ ಆಡಳಿತ ನೀತಿಗಳಿಂದಾಗಿ ವಸತಿ ಸಮಸ್ಯೆ ಹೆಚ್ಚಾಗುತ್ತಿದೆ. ನಿರ್ವಸಿತರಿಗಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸಲಾಗಿದ್ದರೂ, ಅವುಗಳ ಅನುಷ್ಠಾನದಲ್ಲಿನ ವಿಳಂಬ, ಭ್ರಷ್ಟಾಚಾರ ಮತ್ತು ಅರ್ಹತಾ ಮಾನದಂಡಗಳ ಸಮಸ್ಯೆಯು ಯೋಜನೆಗಳ ಉದ್ದೇಶಗಳು ಪೂರ್ಣರೂಪದಲ್ಲಿ ಈಡೇರದಿರಲು ಕಾರಣವಾಗಿವೆ. ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ವಿಳಂಬ, ನಿವೇಶನಗಳ ಪಕ್ಕಾ ದಾಖಲೆಗಳ ಕೊರತೆ, ಸಾಲ ಮಂಜೂರಾತಿ ವಿಳಂಬದಂಥ ಸಮಸ್ಯೆಗಳೂ ಮನೆಗಳ ನಿರ್ಮಾಣ ಕುಂಟುವಂತೆ ಮಾಡಿವೆ. ಸರ್ಕಾರದ ಮಹತ್ವಾಕಾಂಕ್ಷೆಯ ವಸತಿ ಯೋಜನೆಯಲ್ಲಿ ಸರ್ಕಾರ ನೀಡುವ ಕಡಿಮೆ ವಂತಿಗೆ ಪ್ರಮಾಣ ಕನಿಷ್ಠ ಪ್ರಮಾಣದಲ್ಲಿದೆ. ಉದ್ಯೋಗಖಾತರಿ ಯೋಜನೆಯಡಿ ದೊರೆಯುವ ₹20,000 ಸೇರಿದಂತೆ ಸರ್ಕಾರದಿಂದ ₹1.40 ಲಕ್ಷ ದೊರೆಯಲಿದ್ದು, ಉಳಿದ ಮೊತ್ತವನ್ನು ಫಲಾನುಭವಿಯೇ ಭರಿಸಬೇಕಾಗಿದೆ. ತನ್ನ ಪಾಲಿನ ಮೊತ್ತ ಭರಿಸುವುದು ಬಹುತೇಕರಿಗೆ ಸಾಧ್ಯವಿಲ್ಲದೆ ಇರುವುದು ಮನೆಯ ನಿರ್ಮಾಣ ಕನಸಾಗಿಯೇ ಉಳಿಯಲು ಕಾರಣವಾಗಿದೆ. ಆಹಾರ, ನೀರು ಹಾಗೂ ವಸತಿ ಪ್ರತಿಯೊಬ್ಬ ನಾಗರಿಕನಿಗೆ ಅವಶ್ಯವಾದ ಮೂಲ ಸೌಕರ್ಯಗಳು. ಆಹಾರ ಮತ್ತು ನೀರು ಒದಗಿಸಲು ಸರ್ಕಾರ ಕೈಗೊಂಡಿರುವ ಕಲ್ಯಾಣ ಕಾರ್ಯಕ್ರಮಗಳು ಸಾಕಷ್ಟು ಯಶಸ್ಸು ಪಡೆದಿವೆ. ವಸತಿಗೆ ಸಂಬಂಧಿಸಿದ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದ ತೊಡಕುಗಳ ಬಗ್ಗೆ ಸರ್ಕಾರ ಪರಾಮರ್ಶೆ ನಡೆಸಬೇಕಾಗಿದೆ. ಹೆಚ್ಚಿನ ಬಜೆಟ್ ನೀಡುವುದರ ಜೊತೆಗೆ ಯೋಜನೆಗಳ ಪಾರದರ್ಶಕ ಹಾಗೂ ತ್ವರಿತ ಅನುಷ್ಠಾನದ ಬಗ್ಗೆಯೂ ಗಮನನೀಡಬೇಕಾಗಿದೆ. ಸ್ವಂತ ಸೂರು ಹೊಂದುವುದು ಪ್ರತಿಯೊಬ್ಬರ ಹಕ್ಕಾಗಿದ್ದು, ಆ ಹಕ್ಕನ್ನು ದೊರಕಿಸಿಕೊಡುವುದು ಸರ್ಕಾರದ ಕರ್ತವ್ಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.