ಗುರುವಾರ , ಮೇ 26, 2022
30 °C

ಸಂಪಾದಕೀಯ: ಭಿನ್ನ ಧ್ವನಿಗೆ ಅಸಹನೆ; ಪ್ರಜಾಪ್ರಭುತ್ವಕ್ಕೆ ಒಗ್ಗದ ಪ್ರವೃತ್ತಿ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಚಳವಳಿ ನಡೆಸುತ್ತಿರುವ ರೈತರಿಗೆ ಅವರ ಬಗ್ಗೆ ಸಹಾನುಭೂತಿ ಉಳ್ಳವರು ಹೇಗೆ ಬೆಂಬಲ ಸೂಚಿಸಬಹುದು ಎಂಬುದನ್ನು ವಿವರಿಸುವ ಕಡತವನ್ನು (ಟೂಲ್‌ಕಿಟ್‌) ಸಿದ್ಧಪಡಿಸಿದ ಆರೋಪದಲ್ಲಿ ಬೆಂಗಳೂರಿನ ಪರಿಸರ ಕಾರ್ಯಕರ್ತೆ 21 ವರ್ಷ ವಯಸ್ಸಿನ ದಿಶಾ ರವಿ ಅವರನ್ನು ದೆಹಲಿ ಪೊಲೀಸರು ಬಂಧಿಸಿದ ಪ್ರಕರಣವು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇದೇ ಪ್ರಕರಣದಲ್ಲಿ, ಮುಂಬೈನ ವಕೀಲೆ ಮತ್ತು ಪರಿಸರ ಕಾರ್ಯಕರ್ತೆ ನಿಕಿತಾ ಜೇಕಬ್‌ ಮತ್ತು ಪುಣೆಯ ಎಂಜಿನಿಯರ್‌ ಶಾಂತನು ಮುಲುಕ್‌ ವಿರುದ್ಧ ಪೊಲೀಸರು  ವಾರಂಟ್‌ ಪಡೆದುಕೊಂಡಿದ್ದಾರೆ.

ದಿಶಾ ಬಂಧನ ಮತ್ತು ನಂತರದ ಪ್ರಕ್ರಿಯೆಯಲ್ಲಿ ಪೊಲೀಸರು ನಿಯಮಗಳನ್ನು ಪಾಲಿಸಿಲ್ಲ ಎಂದು ಹಲವು ವಕೀಲರು ಮತ್ತು ಸಾಮಾಜಿಕ ಕಾರ್ಯಕರ್ತರು ದೂರಿದ್ದಾರೆ. ಒಂದು ರಾಜ್ಯದ ಪೊಲೀಸರು ಬೇರೊಂದು ರಾಜ್ಯಕ್ಕೆ ಹೋಗಿ ವ್ಯಕ್ತಿಯನ್ನು ಬಂಧಿಸುವಾಗ ಪಾಲಿಸಬೇಕಾದ ನಿಯಮ ಏನು ಎಂಬುದು ಸ್ಪಷ್ಟವಾಗಿದೆ. ಬಂಧಿತ ವ್ಯಕ್ತಿಯನ್ನು ಅತ್ಯಂತ ಹತ್ತಿರದಲ್ಲಿರುವ ಮ್ಯಾಜಿಸ್ಟ್ರೇಟ್‌ ಮುಂದೆ ಹಾಜರುಪಡಿಸಿ, ಪ್ರಯಾಣದ ಅನುಮತಿ ಪಡೆದುಕೊಳ್ಳಬೇಕು ಎಂದು 2019ರಲ್ಲಿ ದೆಹಲಿ ಹೈಕೋರ್ಟ್‌ ಆದೇಶ ನೀಡಿದೆ. ಬಂಧಿತ ವ್ಯಕ್ತಿಯನ್ನು ಹೇಗೆ ನಡೆಸಿಕೊಳ್ಳಬೇಕು ಎಂಬುದರ ಕುರಿತು ಸುಪ್ರೀಂ ಕೋರ್ಟ್‌ ಮಾರ್ಗಸೂಚಿಯೂ ಇದೆ. ಆದರೆ, ಶನಿವಾರ ರಾತ್ರಿ ಬಂಧಿಸಲಾದ ದಿಶಾ ಅವರನ್ನು ಭಾನುವಾರ ದೆಹಲಿಯಲ್ಲಿ ಮ್ಯಾಜಿಸ್ಟ್ರೇಟ್‌ ಮುಂದೆ ಹಾಜರುಪಡಿಸಲಾಯಿತು. ಮ್ಯಾಜಿಸ್ಟ್ರೇಟ್‌ ಅವರು ದಿಶಾ ಅವರನ್ನು ಐದು ದಿನ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿದರು.

ಈ ಸಂದರ್ಭದಲ್ಲಿ ದಿಶಾ ಪರವಾಗಿ ವಾದಿಸಲು ವಕೀಲರೇ ಇರಲಿಲ್ಲ ಎಂದು ಒಂದು ವರ್ಗ ಹೇಳುತ್ತಿದೆ. ಆದರೆ, ತಾವು ಅಗತ್ಯ ನಿಯಮಗಳನ್ನು ಪಾಲಿಸಿರುವುದಾಗಿ ದೆಹಲಿ ಪೊಲೀಸರು ಹೇಳಿಕೊಂಡಿದ್ದಾರೆ. ನಿಯಮ ಪಾಲನೆ ಆಗದೇ ಇರುವುದು ನಿಜವೇ ಹೌದಾದರೆ, ಅದು ಸಹಜ ನ್ಯಾಯ ತತ್ವಕ್ಕೆ ವಿರುದ್ಧವಾದುದು.

ರೈತರ ಪ್ರತಿಭಟನೆ ಮತ್ತು ಅದಕ್ಕೆ ಸಂಬಂಧಿಸಿ ನಡೆದ ವಿದ್ಯಮಾನಗಳನ್ನು ಕೇಂದ್ರ ಸರ್ಕಾರವು ಅಸಹಿಷ್ಣುತೆಯಿಂದ ನೋಡಿದೆ ಎಂದು ಹೇಳಲು ಪುರಾವೆಗಳಿವೆ. ಪ್ರತಿಭಟನೆ ನಡೆಸುವವರನ್ನು ‘ಆಂದೋಲನಜೀವಿ’ಗಳೆಂದು ಪ್ರಧಾನಿ ನರೇಂದ್ರ ಮೋದಿ ಅವರೇ ಹಂಗಿಸಿದ್ದಾರೆ. ರೈತರ ಚಳವಳಿಪರ ದನಿ ಎತ್ತಿದವರ ಮೇಲೆ ಅಧಿಕಾರಸ್ಥರು ಮುಗಿಬಿದ್ದಿದ್ದಾರೆ. ಭಿನ್ನದನಿ, ಭಿನ್ನಮತ, ಅಸಮಾಧಾನ ವ್ಯಕ್ತಪಡಿಸುವುದು ಆಳುವ ವರ್ಗದ ಸಿಟ್ಟಿಗೆ ಗುರಿಯಾಗುತ್ತಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 124 ಎ ಅಡಿಯಲ್ಲಿ ದೇಶದ್ರೋಹ ಪ್ರಕರಣಗಳನ್ನು ದಾಖಲಿಸುತ್ತಿರುವುದು ಈಚಿನ ದಿನಗಳಲ್ಲಿ ಹೆಚ್ಚಳವಾಗಲು ಇದು ಕಾರಣವಾಗಿರಬಹುದು.

‘ಡಿಜಿಟಲ್‌ ಇಂಡಿಯಾ’ ಎಂಬುದು ಮೋದಿ ನೇತೃತ್ವದ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮ. ಆದರೆ, ಡಿಜಿಟಲ್‌ ಇಂಡಿಯಾವು ಹಣದ ವಹಿವಾಟು ಮತ್ತು ಇ–ಕಾಮರ್ಸ್‌ಗೆ ಸೀಮಿತವಾಗಿರಬೇಕು ಎಂದು ಸರ್ಕಾರವು ಭಾವಿಸಿದಂತಿದೆ. ಜನರು ಅಂತರ್ಜಾಲವನ್ನು ತಮ್ಮೆಲ್ಲ ಚಟುವಟಿಕೆಗಳಿಗೂ ಒಗ್ಗಿಸಿಕೊಳ್ಳಲು ಯತ್ನಿಸುತ್ತಿರುವುದು ಸರ್ಕಾರಕ್ಕೆ ಪಥ್ಯವಾಗುತ್ತಿಲ್ಲ ಎಂಬುದನ್ನು ಟೂಲ್‌ಕಿಟ್‌ ಪ್ರಕರಣವು ತೋರಿಸುತ್ತಿದೆ. ಚಳವಳಿ, ಪ್ರತಿಭಟನೆಗಳಿಗೆ ಬೆಂಬಲ ಒಗ್ಗೂಡಿಸಲು ಅಂತರ್ಜಾಲದ ಬಳಕೆ ಜಗತ್ತಿನಾದ್ಯಂತ ಆಗುತ್ತಿದೆ. ಆಂದೋಲನ ಹೇಗೆ ನಡೆಸಬೇಕು ಎಂಬುದನ್ನು ಜನರಿಗೆ ತಿಳಿಸಲು ಟೂಲ್‌ಕಿಟ್‌ ತಯಾರಿಸುವುದು ಸಹಜ ಮತ್ತು ಸಾಮಾನ್ಯ ಕಾರ್ಯತಂತ್ರ. ಸರ್ಕಾರದ ನೀತಿಯ ವಿರುದ್ಧದ ಪ್ರತಿ ಭಟನೆಯನ್ನು ದೇಶದ್ರೋಹವೆಂದು ಪರಿಗಣಿಸಬಾರದು ಎಂದು ಸುಪ್ರೀಂ ಕೋರ್ಟ್‌ ಹಲವು ಬಾರಿ ಹೇಳಿದೆ.

ಸಾರ್ವಜನಿಕರ ಅವಗಾಹನೆಗೆ ಲಭ್ಯವಿರುವ ಟೂಲ್‌ಕಿಟ್‌ನಲ್ಲಿ ದೇಶದ್ರೋಹದ ಅಂಶಗಳು ಕಾಣುತ್ತಿಲ್ಲ ಎಂದು ನ್ಯಾಯಶಾಸ್ತ್ರಜ್ಞ, ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ದೀಪಕ್ ಗುಪ್ತ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾಗಿ ವರದಿಯಾಗಿದೆ. ಪೊಲೀಸರು ಹೊರಿಸಿರುವ ಗಂಭೀರ ಆರೋಪಗಳೆಲ್ಲವೂ ನಿಜವೇ ಎಂಬುದು ತನಿಖೆಯಿಂದಷ್ಟೇ ಗೊತ್ತಾಗಬೇಕಿದೆ. ಅದರಲ್ಲೂ ಮುಖ್ಯವಾಗಿ, ಈ ಟೂಲ್‌ಕಿಟ್‌ ಯಾವುದಾದರೂ ಪಿತೂರಿಯ ಭಾಗವೇ ಎಂಬುದನ್ನು ವಿಸ್ತೃತ ತನಿಖೆ ಮಾತ್ರ ಬಹಿರಂಗಪಡಿಸಬಲ್ಲದು. ಈ ಪ್ರಕರಣವನ್ನು ಇಡೀ ವಿಶ್ವ ಗಮನಿಸುತ್ತಿದೆ. ಹಾಗಾಗಿ, ಪೊಲೀಸರು ಕೂಡ ರಾಗ–ದ್ವೇಷಗಳಿಗೆ ಒಳಗಾಗದೆ, ಒತ್ತಡಗಳಿಗೆ ಮಣಿಯದೆ ವೃತ್ತಿಪರವಾಗಿ ತಮ್ಮ ಕರ್ತವ್ಯ ನಿಭಾಯಿಸುವ ಗುರುತರ ಹೊಣೆ ಹೊತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು