ಶನಿವಾರ, ಜುಲೈ 24, 2021
23 °C

ಸಂಪಾದಕೀಯ | ಚಿಲ್ಲರೆ ಹಣದುಬ್ಬರದ ಹೆಚ್ಚಳ; ವ್ಯವಸ್ಥೆಗೆ ಬೇಕಿದೆ ವಿಶ್ವಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊರೊನಾ ವೈರಾಣು ಸೃಷ್ಟಿಸಿದ ಆರೋಗ್ಯ ಬಿಕ್ಕಟ್ಟನ್ನು ಶಮನಗೊಳಿಸಲು ಭಾರತವೂ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳು ಲಾಕ್‌ಡೌನ್‌ ತಂತ್ರದ ಮೊರೆ ಹೋದವು. ಕೆಲವು ದೇಶಗಳಲ್ಲಿ ಲಾಕ್‌ಡೌನ್‌ ಕಟ್ಟುನಿಟ್ಟಾಗಿತ್ತು, ಕೆಲವೆಡೆ ಅದು ಹಲವು ವಿನಾಯಿತಿಗಳನ್ನು ಹೊಂದಿತ್ತು. ಲಾಕ್‌ಡೌನ್‌ನಿಂದಾಗಿ ವೈರಾಣು ಹರಡುವ ವೇಗಕ್ಕೆ ಎಷ್ಟರಮಟ್ಟಿಗೆ ತಡೆ ಬಿತ್ತು ಎಂಬುದು ಚರ್ಚಾರ್ಹ. ಆದರೆ, ಲಾಕ್‌ಡೌನ್‌ನ ಪರಿಣಾಮವಾಗಿ ಹಣದ ಚಲಾವಣೆಗೆ ಭಾರಿ ಪ್ರಮಾಣದಲ್ಲಿ ಅಡ್ಡಿ ಎದುರಾಯಿತು.

ಉದ್ಯಮಗಳಲ್ಲಿ ಉತ್ಪಾದನೆ ಸ್ಥಗಿತಗೊಂಡಿತು, ಸೇವಾ ವಲಯದ ಕಂಪನಿಗಳಿಗೆ ಸೇವೆಗಳನ್ನು ಸಕಾಲದಲ್ಲಿ ಒದಗಿಸಲು ಆಗಲಿಲ್ಲ. ಉತ್ಪಾದನೆ ಹಾಗೂ ಸೇವಾ ವಲಯದ ಕಂಪನಿಗಳು ನಷ್ಟ ಅನುಭವಿಸಿದವು. ಜನರ ಬಳಿ ಹಣದ ಚಲಾವಣೆ ಕಡಿಮೆಯಾಗಿ, ಅವರು ಖರ್ಚಿನ ಮೇಲೆ ಸ್ವಯಂ ನಿಯಂತ್ರಣ ವಿಧಿಸಿಕೊಂಡರು. ಇವುಗಳ ನಡುವೆಯೇ, ವಿವಿಧ ವಲಯಗಳ ಕಂಪನಿಗಳಲ್ಲಿ ಉದ್ಯೋಗ ಕಡಿತ, ವೇತನ ಕಡಿತದ ವರದಿಗಳು ಬಂದವು. ಅರ್ಥವ್ಯವಸ್ಥೆಗೆ ಆರೋಗ್ಯ ಬಿಕ್ಕಟ್ಟು ಬಲವಾದ ಪೆಟ್ಟು ನೀಡಿತು. ಜನ ಮಾರುಕಟ್ಟೆಗೆ ಹೋಗಿ ಹುಮ್ಮಸ್ಸಿನಿಂದ ವಸ್ತುಗಳನ್ನು ಖರೀದಿಸುವ ವಾತಾವರಣ ಇಲ್ಲ ಎಂಬುದು ಅನುಭವವೇದ್ಯ.

ಹೀಗಿದ್ದರೂ, ಜೂನ್‌ ತಿಂಗಳ ಅವಧಿಯಲ್ಲಿ ಚಿಲ್ಲರೆ ಹಣದುಬ್ಬರ ದರವು ಶೇಕಡ 6.09ರಷ್ಟು ಆಗಿತ್ತು. ಇದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ವಿಧಿಸಿಕೊಂಡಿರುವ ಮಿತಿಗಿಂತಲೂ ಹೆಚ್ಚು. ಕಳೆದ ವರ್ಷದ ಜೂನ್‌ ತಿಂಗಳಲ್ಲಿ ಇದು ಶೇಕಡ 3.18ರಷ್ಟು ಇತ್ತು. ಕೋವಿಡ್–19 ಸಾಂಕ್ರಾಮಿಕವು ವ್ಯಾಪಕವಾಗುವ ಮೊದಲೂ ದೇಶದ ಅರ್ಥವ್ಯವಸ್ಥೆಯಲ್ಲಿ ಎಲ್ಲವೂ ಸರಿ ಇರಲಿಲ್ಲ. ಆಗ, ‘ಕೊಳ್ಳುವವರ ಸಾಮರ್ಥ್ಯ, ಆತ್ಮವಿಶ್ವಾಸ ಕುಸಿದಿದೆ. ಅದನ್ನು ಹೆಚ್ಚು ಮಾಡಲು ಸರ್ಕಾರಗಳು ಕ್ರಮ ಕೈಗೊಳ್ಳಬೇಕು’ ಎಂದು ಅರ್ಥಶಾಸ್ತ್ರಜ್ಞರು ಸಲಹೆಗಳನ್ನು ನೀಡಿದ್ದರು. ಅರ್ಥವ್ಯವಸ್ಥೆಯ ಬಹುತೇಕ ಅಂಗಗಳು ವಿಷಮ ಪರಿಸ್ಥಿತಿಯಲ್ಲಿ ಇರುವಾಗಲೇ ಚಿಲ್ಲರೆ ಹಣದುಬ್ಬರ ದರವು ಶೇಕಡ 6ರ ಗಡಿ ದಾಟಿರುವುದು ಕಳವಳ ಮೂಡಿಸುತ್ತದೆ.

ಲಾಕ್‌ಡೌನ್‌ ಸಂದರ್ಭದಲ್ಲಿ ಉತ್ಪನ್ನಗಳ ಸಾಗಾಟಕ್ಕೆ ತೊಂದರೆ ಆಯಿತು. ಇದು, ಹಣದುಬ್ಬರ ಹೆಚ್ಚಾಗಲು ಒಂದು ಕಾರಣವಾಗಿ ಕೆಲಸ ಮಾಡಿರಬಹುದು. ಹಾಗೆಯೇ, ಈಚಿನ ದಿನಗಳಲ್ಲಿ ಇಂಧನ ಬೆಲೆ ನಿರಂತರವಾಗಿ ಹೆಚ್ಚುತ್ತಿರುವುದು ಕೂಡ ಸಾಗಾಟದ ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸಿದೆ. ಹಣದುಬ್ಬರದ ಹೆಚ್ಚಳಕ್ಕೆ ಇದೂ ಕಾರಣವಾಗಿರುತ್ತದೆ. ಏಕದಳ ಧಾನ್ಯಗಳ ಬೆಲೆಯಲ್ಲಿನ ಹೆಚ್ಚಳವು ಶೇಕಡ 6.49ರಷ್ಟು ಇದೆ. ದ್ವಿದಳ ಧಾನ್ಯಗಳ ಬೆಲೆಯಲ್ಲಿನ ಹೆಚ್ಚಳದ ಪ್ರಮಾಣವು ಶೇಕಡ 16.68ರಷ್ಟಿದೆ. ಮಾಂಸ ಮತ್ತು ಮೀನಿನ ಬೆಲೆಯಲ್ಲಿನ ಹೆಚ್ಚಳವು ಶೇಕಡ 16.22ರಷ್ಟಿದೆ.

ಮೊಟ್ಟೆ, ಹಾಲು, ಖಾದ್ಯ ತೈಲಗಳ ಬೆಲೆ ಹೆಚ್ಚಳದ ಪ್ರಮಾಣವು ಶೇಕಡ 7ರಿಂದ 12ರಷ್ಟು ಇದೆ. ಹಣದುಬ್ಬರದ ಹೆಚ್ಚಳದಲ್ಲಿ ಆಹಾರ ಪದಾರ್ಥಗಳ ಬೆಲೆಯಲ್ಲಿ ಆಗಿರುವ ಏರಿಕೆಯ ದೊಡ್ಡ ಪಾಲು ಇರುವುದನ್ನು ಇದು ತೋರಿಸುತ್ತಿದೆ. ಈಗ ದೇಶದ ಹಲವೆಡೆ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯುತ್ತಿರುವ ವರದಿಗಳು ಇವೆ. ಇದು ರೈತರಲ್ಲಿ ಹೊಸ ಚೈತನ್ಯ ಮೂಡಿಸಿ, ಹೆಚ್ಚಿನ ಆಹಾರ ಉತ್ಪಾದನೆಯನ್ನು ಸಾಧ್ಯವಾಗಿಸಬಹುದು. ಅದು ಮುಂದೆ ಹಣದುಬ್ಬರ ತಗ್ಗಿಸಲು ನೆರವಾಗಬಹುದು. ಆದರೂ ದೇಶದ ಬಡ, ಮಧ್ಯಮ ಹಾಗೂ ಮೇಲ್ಮಧ್ಯಮ ವರ್ಗದವರ ಪಾಲಿಗೆ ಶುಭಶಕುನಗಳೇನೂ ತಕ್ಷಣಕ್ಕೆ ಕಾಣುತ್ತಿಲ್ಲ.

ಹಣದುಬ್ಬರ ಹೆಚ್ಚುತ್ತಲೇ ಸಾಗಿದರೆ, ಉದ್ಯಮ ವಲಯಕ್ಕೆ ನೆರವಾಗುವ ರೀತಿಯಲ್ಲಿ ರೆಪೊ ದರ ಕಡಿತ ಮಾಡಲು ಆರ್‌ಬಿಐಗೆ ಸಾಧ್ಯವಾಗುವುದಿಲ್ಲ. ಆಗ, ಕಡಿಮೆ ಬಡ್ಡಿ ದರದಲ್ಲಿ ಸಾಲ ವಿತರಣೆ ಕಷ್ಟಸಾಧ್ಯವಾಗುತ್ತದೆ. ಉದ್ಯಮ ವಲಯ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದರೆ ಉದ್ಯೋಗ ಸೃಷ್ಟಿ ಕೂಡ ಅಪಾಯಕ್ಕೆ ಸಿಲುಕುತ್ತದೆ. ಈ ಸೂಕ್ಷ್ಮ ಸನ್ನಿವೇಶವನ್ನು ನಿಭಾಯಿಸುವ ಹೊಣೆ ಸರ್ಕಾರ ಹಾಗೂ ಆರ್‌ಬಿಐ ಮೇಲಿದೆ. ಎಲ್ಲ ಬಗೆಯ ಉದ್ಯಮಗಳಲ್ಲಿ ಉತ್ಪಾದನೆ ಪುನರಾರಂಭ ಆಗುವಂತೆ ನೋಡಿಕೊಳ್ಳಬೇಕು. ಅಡೆತಡೆ ಇಲ್ಲದೆ ಉತ್ಪಾದನೆ ಸಾಧ್ಯ ಎನ್ನುವ ವಿಶ್ವಾಸ ಉದ್ಯಮಿಗಳಲ್ಲಿ ಮೂಡಬೇಕು. ಅದರ ಫಲವಾಗಿ, ಉದ್ಯೋಗ ಸೃಷ್ಟಿ ಹೆಚ್ಚಬೇಕು. ಇರುವ ಉದ್ಯೋಗಗಳಲ್ಲಿ ಸ್ಥಿರತೆ ಮೂಡಬೇಕು. ಆಗ ಹಣದುಬ್ಬರದ ಹೆಚ್ಚಳವನ್ನೂ ನಿಭಾಯಿಸುವ ವಿಶ್ವಾಸ ವ್ಯವಸ್ಥೆಯಲ್ಲಿ ಮೂಡುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು