ಶುಕ್ರವಾರ, ಜನವರಿ 22, 2021
28 °C

ಸಂಪಾದಕೀಯ: ಭಾರತದಲ್ಲಿಯೇ ಲಂಚ ಹೆಚ್ಚು ಅಭಿವೃದ್ಧಿ ಹಾದಿಯ ಕಂಟಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಏಷ್ಯಾ ಖಂಡದಲ್ಲಿ ಲಂಚದ ಪಿಡುಗು ಅತ್ಯಂತ ಹೆಚ್ಚಾಗಿರುವ ದೇಶ ಭಾರತ ಎಂದು ಭ್ರಷ್ಟಾಚಾರದ ಮೇಲಿನ ಕಣ್ಗಾವಲು ಸಂಸ್ಥೆ ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್‌ ನಡೆಸಿದ ಸಮೀಕ್ಷೆಯು ಹೇಳಿದೆ. ಏಷ್ಯಾದ 17 ದೇಶಗಳ 20 ಸಾವಿರ ಮಂದಿಯ ಅಭಿಪ್ರಾಯ ಪಡೆದು ವರದಿಯನ್ನು ಸಿದ್ಧಪಡಿಸಲಾಗಿದೆ.

ಭಾರತದ ಎರಡು ಸಾವಿರ ಮಂದಿ ತಮ್ಮ ಅಭಿಮತವನ್ನು ವ್ಯಕ್ತಪಡಿಸಿದ್ದಾರೆ. ಸಮೀಕ್ಷೆಗೆ ಒಳಗಾದವರಲ್ಲಿ ಶೇ 39ರಷ್ಟು ಮಂದಿ ಕಳೆದ 12 ತಿಂಗಳಲ್ಲಿ ಸರ್ಕಾರದ ಸೇವೆಗಳನ್ನು ಪಡೆದುಕೊಳ್ಳುವುದಕ್ಕಾಗಿ ಲಂಚ ನೀಡಿದ್ದೇವೆ ಎಂದು ಹೇಳಿದ್ದಾರೆ. ಇದು ಇನಾಮು ರೂಪದಲ್ಲಿ ನೀಡಿದ ಹಣವೇನೂ ಅಲ್ಲ, ಅಧಿಕಾರಿಗಳ ಒತ್ತಡದಿಂದಾಗಿಯೇ ಲಂಚ ನೀಡಿದ್ದೇವೆ ಎಂದು ಲಂಚ ನೀಡಿದವರಲ್ಲಿ ಸುಮಾರು ಶೇ 50ರಷ್ಟು ಮಂದಿ ತಿಳಿಸಿದ್ದಾರೆ. ಆಡಳಿತವು ಕಟ್ಟುನಿಟ್ಟಾಗಿ, ಬಿಗಿಯಾಗಿ ಇಲ್ಲ ಎಂದೇ ಇದನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ.

ಸಂಸ್ಥೆಯು ಈ ಬಾರಿಯ ಸಮೀಕ್ಷೆಯಲ್ಲಿ ಕೆಲವು ಹೊಸ ಅಂಶಗಳನ್ನು ಸೇರಿಸಿಕೊಂಡಿತ್ತು– ಸರ್ಕಾರದ ಸೌಲಭ್ಯ ಪಡೆದುಕೊಳ್ಳಲು ವೈಯಕ್ತಿಕ ಸಂಪರ್ಕಗಳ ಬಳಕೆ, ಲೈಂಗಿಕ ಶೋಷಣೆ ಮತ್ತು ಮತಕ್ಕಾಗಿ ಲಂಚ ಅಂತಹ ಸೇರ್ಪಡೆಗಳು. ವೈಯಕ್ತಿಕ ಸಂಪರ್ಕವನ್ನು ಬಳಸಿಕೊಂಡು ಸೇವೆಯನ್ನು ಪಡೆದುಕೊಂಡಿದ್ದೇವೆ ಎಂದು ಶೇ 46ರಷ್ಟು ಮಂದಿ ಹೇಳಿದ್ದಾರೆ. ಈ ಸಂಪರ್ಕಗಳು ತಮಗೆ ಇಲ್ಲದಿರುತ್ತಿದ್ದರೆ ಸೇವೆ ದೊರೆಯುತ್ತಲೇ ಇರಲಿಲ್ಲ ಎಂದು ಇವರ ಪೈಕಿ ಶೇ 32ರಷ್ಟು ಮಂದಿ ಹೇಳಿದ್ದಾರೆ.

ವಾರ್ಡ್‌ ಮಟ್ಟದಿಂದ ಕೇಂದ್ರ ಸರ್ಕಾರದವರೆಗೆ ಸ್ವಜನಪಕ್ಷಪಾತದ ಹಲವು ಉದಾಹರಣೆಗಳನ್ನು ಕಾಣಬಹುದಾದ ನಮ್ಮ ದೇಶದಲ್ಲಿ ಇದು ಆಶ್ಚರ್ಯದ ಸಂಗತಿ ಏನೂ ಅಲ್ಲ. ಆದರೆ, ಸಂಪರ್ಕ ಇಲ್ಲದಿರುತ್ತಿದ್ದರೆ ಮೂಲಭೂತ ಸೌಕರ್ಯವೇ ಸಿಗುತ್ತಿರಲಿಲ್ಲ ಎಂಬ ವಿಚಾರ ಮಾತ್ರ ಕಳವಳಕಾರಿ. ಇಂತಹ ವ್ಯವಸ್ಥೆಯಲ್ಲಿ ವೈಯಕ್ತಿಕ ಸಂಪರ್ಕಗಳು ಇಲ್ಲದವರ ಗತಿ ಏನು? ಮತ ನೀಡಿದರೆ ಅದಕ್ಕೆ ಪ್ರತಿಫಲವಾಗಿ ಹಣದ ಕೊಡುಗೆಯನ್ನು ತಮ್ಮ ಮುಂದೆ ಇರಿಸಲಾಗಿತ್ತು ಎಂದು ಸಮೀಕ್ಷೆಯಲ್ಲಿ ಭಾಗಿಯಾದ ಶೇ. 18ರಷ್ಟು ಮಂದಿ ಹೇಳಿದ್ದಾರೆ. ಸರ್ಕಾರದ ಸೌಲಭ್ಯಕ್ಕಾಗಿ ಲೈಂಗಿಕ ಶೋಷಣೆಗೆ ಒಳಗಾಗಿದ್ದೇವೆ ಎಂದು ಶೇ 11ರಷ್ಟು ಮಂದಿ ಹೇಳಿದ್ದಾರೆ. ಅಧಿಕಾರಿ ವರ್ಗದ ಇಂತಹ ನಡವಳಿಕೆಯು ಅಮಾನವೀಯ ಮತ್ತು ಅಕ್ಷಮ್ಯ.

ಆಡಳಿತ ಪ್ರಕ್ರಿಯೆಯ ಸಂಕೀರ್ಣತೆ, ಆಮೆಗತಿ, ಅಸ್ಪಷ್ಟ ನಿಯಮಗಳಿಂದಾಗಿ ಜನರು ಸೌಲಭ್ಯಗಳನ್ನು ಪಡೆದುಕೊಳ್ಳಲು ಲಂಚ ನೀಡಿಕೆಯಂತಹ ಪರ್ಯಾಯ ಮಾರ್ಗಗಳನ್ನು ಅನುಸರಿಸಬೇಕಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಲಂಚ ಮತ್ತು ಭ್ರಷ್ಟಾಚಾರದ ಪಿಡುಗು ಯಾವುದೇ ದೇಶದ ಅಭಿವೃದ್ಧಿ ಹಾದಿಯ ಬಹುದೊಡ್ಡ ಕಂಟಕ. ನಮ್ಮ ದೇಶದಲ್ಲಿ ಜನಸಂಖ್ಯೆ ಹೆಚ್ಚು; ಇವರಲ್ಲಿ ಬಹುದೊಡ್ಡ ವರ್ಗವು ಸರ್ಕಾರ ನೀಡುವ ಸೇವೆ ಹಾಗೂ ಸೌಲಭ್ಯಗಳ ಮೇಲೆ ಅವಲಂಬಿತವಾಗಿರುವುದರಿಂದ ಭ್ರಷ್ಟಾಚಾರಕ್ಕೆ ಅವಕಾಶಗಳು ಹೆಚ್ಚು. ಹಾಗಾಗಿ, ಲಂಚದ ಹಾವಳಿ ತಡೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಶೇಷ ಮುತುವರ್ಜಿ ವಹಿಸಬೇಕಾದ ಅಗತ್ಯ ಇದೆ. ಆರೋಗ್ಯ ಮತ್ತು ಶಿಕ್ಷಣದಂತಹ ಮೂಲಭೂತ ಸೇವೆಗಳನ್ನು ಪಡೆದುಕೊಳ್ಳುವುದಕ್ಕೆ ಕೂಡ ಲಂಚ ಕೊಡಲೇಬೇಕಾದ ಸ್ಥಿತಿ ನಿರ್ಮಾಣ ಆಗಿರುವುದಕ್ಕೆ ಅಧಿಕಾರಸ್ಥರೇ ಪೂರ್ಣವಾಗಿ ಹೊಣೆಗಾರರು.

ಮತಕ್ಕೆ ಹಣದ ಕೊಡುಗೆ ಬಂದಿತ್ತು ಎಂದು ಶೇ 18ರಷ್ಟು ಮಂದಿ ಹೇಳಿದ್ದಾರೆ ಎಂಬುದನ್ನು ಗಮನಿಸಿದರೆ ರಾಜಕೀಯ ಪಕ್ಷಗಳು ಮತ್ತು ನಾಯಕರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲವೇ ಎಂಬ ಅನುಮಾನ ಮೂಡುತ್ತದೆ. ಮತ ವಿಭಜನೆಯ ಕಾರಣದಿಂದಾಗಿ, ನಮ್ಮ ದೇಶದಲ್ಲಿ ಶೇ 30ರಷ್ಟು ಮತ ಪಡೆದ ಪಕ್ಷವೂ ಅಧಿಕಾರಕ್ಕೆ ಏರುವುದಕ್ಕೆ ಸಾಧ್ಯವಿದೆ. ಅಂತಹ ಸನ್ನಿವೇಶದಲ್ಲಿ ಶೇ 18ರಷ್ಟು ಜನರು ಹಣ ಪಡೆದು ಮತ ಚಲಾಯಿಸಿದ್ದರೆ ಅದು ಪ್ರಜಾಪ್ರಭುತ್ವದ ದುರಂತ. ಮತಕ್ಕಾಗಿ ಹಣ ನೀಡಲಾಗಿದೆ ಎಂಬ ಆರೋಪ ಕೇಳಿಬರುತ್ತಲೇ ಇರುತ್ತದೆ. ಆದರೆ, ಇಂತಹ ಪ್ರಕರಣದಲ್ಲಿ ಶಿಕ್ಷೆ ಆಗಿರುವ ಉದಾಹರಣೆ ಇಲ್ಲ.

‘ಕಾನೂನಿನಲ್ಲಿಯೇ ಇರುವ ಲೋಪಗಳು ಇದಕ್ಕೆ ಕಾರಣ’ ಎಂದು ವರದಿಯು ಹೇಳಿದೆ. ಮತದಾರನಿಗೆ ಹಣ ಕೊಟ್ಟು, ಆತನನ್ನೂ ಭ್ರಷ್ಟನನ್ನಾಗಿ ಮಾಡಿದವರೇ ಅಧಿಕಾರಕ್ಕೆ ಏರಿದರೆ ಲಂಚಮುಕ್ತ ವ್ಯವಸ್ಥೆಯ ನಿರ್ಮಾಣ ಸಾಧ್ಯವೇ? ಸೌಲಭ್ಯ ಪಡೆಯುವುದಕ್ಕಾಗಿ ಲಂಚ ನೀಡಿ‌ದವರು ಮತ್ತು ವೈಯಕ್ತಿಕ ಸಂಪರ್ಕ ಬಳಸಿಕೊಂಡವರಲ್ಲಿ 18ರಿಂದ 34ರ ವಯೋಮಾನದವರೇ ಹೆಚ್ಚು ಎಂದು ಸಮೀಕ್ಷೆ ಹೇಳಿದೆ. ದೇಶದ ಯುವ ಸಮೂಹವೇ ಹೆಚ್ಚು ಲಂಚ ನೀಡುತ್ತಿದೆ ಎನ್ನುವುದು ಭವಿಷ್ಯದ ಬಗ್ಗೆ ಇನ್ನಷ್ಟು ಆತಂಕಕ್ಕೆ ಕಾರಣವಾಗುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು