ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ‘ಪಿಎಂ ಕೇರ್ಸ್’ ನಿಧಿಯ ಮಾಹಿತಿ ಮುಚ್ಚಿಡುವುದು ಸರಿಯಾದ ನಿಲುವು ಅಲ್ಲ

Last Updated 5 ಅಕ್ಟೋಬರ್ 2021, 21:15 IST
ಅಕ್ಷರ ಗಾತ್ರ

ಕೋವಿಡ್‌–19 ಸಾಂಕ್ರಾಮಿಕದ ಪರಿಹಾರ ಕಾರ್ಯಾಚರಣೆಗೆ ಹಣ ಒದಗಿಸುವ ಉದ್ದೇಶದಿಂದ ಕಳೆದ ವರ್ಷ ಸ್ಥಾಪಿಸಲಾದ ‘ಪಿಎಂ ಕೇರ್ಸ್‌’ ನಿಧಿಗೆ ಸಂಬಂಧಿಸಿ ಯಾವುದೇ ಪ್ರಶ್ನೆ ಕೇಳಿದರೂ ಸರ್ಕಾರವು ಆ ಬಗೆಗಿನ ಮಾಹಿತಿಯನ್ನು ನಿರಂತರವಾಗಿ ಮುಚ್ಚಿಡುತ್ತಲೇ ಬಂದಿದೆ. ಪಿಎಂ ಕೇರ್ಸ್‌ ನಿಧಿಯ ಕುರಿತು ಕೇಳಲಾಗುವ ಯಾವುದೇ ಪ್ರಶ್ನೆಗೆ ಉತ್ತರಿಸುವ ಬಾಧ್ಯತೆ ತನಗೆ ಇಲ್ಲ ಎಂದುದೆಹಲಿ ಹೈಕೋರ್ಟ್‌ಗೆ ಕೇಂದ್ರ ಸರ್ಕಾರ ಕಳೆದ ವಾರ ಹೇಳಿದೆ. ಯಾವುದೇ ಪ‍್ರಶ್ನೆಗೆ ಉತ್ತರ ಕೊಡುವ ಅಗತ್ಯ ಇಲ್ಲ ಎಂಬುದಕ್ಕೆ ಸರ್ಕಾರ ಕಾರಣಗಳನ್ನೂ ಕೊಟ್ಟಿದೆ. ಈ ನಿಧಿಯು ಭಾರತ ಸರ್ಕಾರದ ನಿಯಂತ್ರಣದಲ್ಲಿ ಇಲ್ಲ; ಈ ನಿಧಿಯು ಒಂದು ಸಾರ್ವಜನಿಕ ನಿಧಿ ಅಲ್ಲ ಮತ್ತು ಅದೊಂದು ಸಾಮಾಜಿಕ ಸೇವಾ ಟ್ರಸ್ಟ್‌ ಎಂಬುದು ಸರ್ಕಾರ ಕೊಟ್ಟಿರುವ ಕಾರಣಗಳು. ಪಿಎಂ ಕೇರ್ಸ್‌ ನಿಧಿಯನ್ನು ಸಂವಿಧಾನದ ಅಡಿಯಲ್ಲಿರುವ ಅವಕಾಶಗಳಿಗೆ ಅನುಗುಣವಾಗಿ ‘ಸರ್ಕಾರಿ ನಿಧಿ’ ಎಂದು ಘೋಷಿಸಬೇಕು ಮತ್ತು ಅದನ್ನು ಒಂದು ಸಾರ್ವಜನಿಕ ಪ್ರಾಧಿಕಾರವಾಗಿಸಬೇಕು. ಇದರಿಂದಾಗಿ ನಿಧಿಯು ಮಾಹಿತಿ ಹಕ್ಕು ಕಾಯ್ದೆಯ (ಆರ್‌ಟಿಐ) ವ್ಯಾಪ್ತಿಗೆ ಬರುವಂತೆ ಆಗಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗೆ ಸರ್ಕಾರ ಈ ಪ್ರತಿಕ್ರಿಯೆ ನೀಡಿದೆ. ಪ್ರಧಾನ ಮಂತ್ರಿಯವರ ಕಾರ್ಯಾಲಯದ ಅಧಿಕಾರಿ ಪಿ.ಕೆ. ಶ್ರೀವಾಸ್ತವ ಅವರು ಸರ್ಕಾರದ ಪರವಾದ ಸಮಜಾಯಿಷಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಈ ನಿಧಿಯು ಸರ್ಕಾರದ ನಿಧಿಯೇ ಆಗಿರಲಿ, ಸಂವಿಧಾನದ ಅವಕಾಶ ಅನುಸಾರ ಸ್ಥಾಪಿತವಾದ ಪ್ರಾಧಿಕಾರ ಆಗಿರಲಿ ಅಥವಾ ಸಾರ್ವಜನಿಕ ಪ್ರಾಧಿಕಾರ ಆಗಿರಲಿ– ಏನೇ ಆಗಿದ್ದರೂ ನಿಧಿಯ ಬಗೆಗಿನ ಮಾಹಿತಿಯನ್ನು ಆರ್‌ಟಿಐ ಅಡಿಯಲ್ಲಿ ಬಹಿರಂಗಪ‍ಡಿಸುವ ಬಾಧ್ಯತೆಯು ತನಗೆ ಇಲ್ಲ ಎಂದು ಸರ್ಕಾರವು ಹೇಳಿದೆ.

ಸರ್ಕಾರವು ತಳೆದಿರುವ ನಿಲುವು ಹಲವು ರೀತಿಯಲ್ಲಿ ತಪ್ಪು. ಇದು ಸರ್ಕಾರದ ಕಾರ್ಯನಿರ್ವಹಣೆಗೆ ಮಾರ್ಗದರ್ಶಿಯಾಗಿ ಇರಬೇಕಾದ ಪಾರದರ್ಶಕತೆಯ ನಿಯಮಗಳು ಮತ್ತು ವಿಶ್ವಾಸಾರ್ಹತೆಗೆ ವಿರುದ್ಧವಾದುದಾಗಿದೆ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್‌) ಮತ್ತು ಪ್ರಧಾನಿಯವರ ರಾಷ್ಟ್ರೀಯ ಪರಿಹಾರ ನಿಧಿ ಈಗಾಗಲೇ ಅಸ್ತಿತ್ವದಲ್ಲಿ ಇವೆ. ಪಿಎಂ ಕೇರ್ಸ್‌ ನಿಧಿಯನ್ನು ಸ್ಥಾಪಿಸಲು ಸರ್ಕಾರ ಯಾವ ಕಾರಣವನ್ನು ನೀಡಿತ್ತೋ, ಈ ನಿಧಿಗಳು ನಿರ್ದಿಷ್ಟವಾಗಿ ಅದೇ ಉದ್ದೇಶವನ್ನು ಹೊಂದಿವೆ. ಹಾಗಿರುವಾಗ, ಪಿಎಂ ಕೇರ್ಸ್‌ ನಿಧಿಯನ್ನು ಸ್ಥಾಪಿಸುವ ಅಗತ್ಯ ಏನಿತ್ತು ಎಂಬುದೇ ಅರ್ಥ ಆಗುವುದಿಲ್ಲ. ಈ ನಿಧಿಯನ್ನು ಸ್ಥಾಪಿಸಿದ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದರು. ಸಾರ್ವಜನಿಕರು ಈ ನಿಧಿಗೆ ದೇಣಿಗೆ ನೀಡುವಂತೆ ಅವರು ಕೋರಿದ್ದರು. ಪ್ರಧಾನಿಯವರು ಈ ನಿಧಿಗೆ ಪದನಿಮಿತ್ತ ಅಧ್ಯಕ್ಷ ಮತ್ತು ಮೂವರು ಹಿರಿಯ ಸಚಿವರು ಪದನಿಮಿತ್ತ ಸದಸ್ಯರಾಗಿದ್ದಾರೆ. ಪ್ರಧಾನಿ ಕಾರ್ಯಾಲಯವು ನಿಧಿಯ ನಿರ್ವಹಣೆಯನ್ನು ನೋಡಿಕೊಳ್ಳುತ್ತದೆ. ದೇಶದ ಅಧಿಕೃತ ಲಾಂಛನಗಳು ಮತ್ತು ಭಾರತ ಸರ್ಕಾರದ ವೆಬ್‌ಸೈಟ್‌ ಅನ್ನು ನಿಧಿಯು ಬಳಸುತ್ತಿದೆ. ಸರ್ಕಾರ ಮತ್ತು ಖಾಸಗಿ ಕ್ಷೇತ್ರದ ಉದ್ಯೋಗಿಗಳು ತಮ್ಮ ಒಂದು ದಿನದ ಸಂಬಳವನ್ನು ಈ ನಿಧಿಗೆ ದೇಣಿಗೆಯಾಗಿ ನೀಡಿದ್ದಾರೆ. ಈ ನಿಧಿಗೆ ನೀಡಿದ ದೇಣಿಗೆಗೆ ಆದಾಯ ತೆರಿಗೆ ಕಾಯ್ದೆ ಅಡಿಯಲ್ಲಿನ ವಿನಾಯಿತಿ ದೊರೆಯುತ್ತದೆ. ಈ ನಿಧಿಗೆ ನೀಡುವ ಮೊತ್ತವನ್ನು ಉದ್ಯಮ ಸಾಮಾಜಿಕ ಹೊಣೆಗಾರಿಕೆ ವೆಚ್ಚವಾಗಿ ಪರಿಗಣಿಸಲು ಅವಕಾಶ ಮಾಡಿಕೊಡಲಾಗಿದೆ.

ಪಿಎಂ ಕೇರ್ಸ್‌ ನಿಧಿಯು ಸರ್ಕಾರದ ಪ್ರಾಧಿಕಾರ ಅಲ್ಲ ಎಂದು ಭಾವಿಸಲು ಸಾಧ್ಯವೇ ಇಲ್ಲದಷ್ಟು ಪ್ರಮಾಣದಲ್ಲಿ ನಿಧಿಯ ಸ್ಥಾಪನೆ ಮತ್ತು ಕಾರ್ಯನಿರ್ವಹಣೆಯಲ್ಲಿ ಸರ್ಕಾರದ ಪಾಲ್ಗೊಳ್ಳುವಿಕೆ ಇದೆ. ಸಾವಿರಾರು ಕೋಟಿ ರೂಪಾಯಿ ಸಾರ್ವಜನಿಕ ಹಣವು ಈ ನಿಧಿಗೆ ಸಂದಾಯವಾಗಿದೆ. ಹಾಗಾಗಿಯೇ, ಇದರ ಆದಾಯ ಮತ್ತು ವೆಚ್ಚವು ಸಾರ್ವಜನಿಕ ಪರಿಶೀಲನೆಗೆ ಒಳಪಡಲೇಬೇಕು. ಮಹಾಲೇಖಪಾಲರಿಂದ ಲೆಕ್ಕ ಪರಿಶೋಧನೆ ಅಥವಾ ಆರ್‌ಟಿಐ ಅಡಿಯಲ್ಲಿ ಸಾರ್ವಜನಿಕರು ಮಾಹಿತಿ ಪಡೆದು ಈ ನಿಧಿಯನ್ನು ಪರಿಶೀಲನೆಗೆ ಒಳಪಡಿಸುವ ಅಗತ್ಯ ಇಲ್ಲ ಎಂಬ ವಾದವೇ ಸರಿಯಲ್ಲ. ನಿಧಿಯು ಸರ್ಕಾರದ ಭಾಗ ಎಂಬಂತೆಯೇ ಕಾರ್ಯನಿರ್ವಹಿಸುತ್ತಿದೆ. ಪ್ರಧಾನಿ ಮತ್ತು ಸಚಿವರು ಈ ನಿಧಿಯ ಕೆಲಸಗಳಲ್ಲಿ ಭಾಗಿಯಾಗಿರುವುದು ವೈಯಕ್ತಿಕ ನೆಲೆಯಿಂದ ಅಲ್ಲ. ಹಾಗಾಗಿಯೇ, ಈ ನಿಧಿಯ ಬಗ್ಗೆ ಯಾವ ಪ್ರಶ್ನೆಗೂ ಉತ್ತರಿಸುವ ಹೊಣೆಗಾರಿಕೆ ಇಲ್ಲ ಎಂಬ ಸರ್ಕಾರದ ನಿಲುವು ಸಮರ್ಥನೀಯ ಅಲ್ಲ. ನಿಧಿಯ ವಹಿವಾಟನ್ನು ಆರ್‌ಟಿಐ ಅಡಿಯಲ್ಲಿ ಸಾರ್ವಜನಿಕ ಪರಿಶೀಲನೆಗೆ ಒಳಪಡಿಸುವುದಿಲ್ಲ ಎಂಬುದೂ ಸರಿಯಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT