ಶುಕ್ರವಾರ, ಡಿಸೆಂಬರ್ 3, 2021
25 °C

ಬೈಗುಳವೇ ಚುನಾವಣಾ ವಿಷಯ? ನಾಲಗೆ ಮೇಲೆ ಇರಲಿ ನಿಯಂತ್ರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕರ್ನಾಟಕದ ರಾಜಕೀಯ ವಲಯದಲ್ಲಿ ಸಭ್ಯರು ಕಣ್ಣು, ಕಿವಿ ಮುಚ್ಚಿಕೊಂಡು ಓಡಾಡಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆಯೇ? ರಾಜಕೀಯ ಭಾಷಣ ಎಂದರೆ ವಿರೋಧಿಗಳನ್ನು ಕೀಳು ಮಟ್ಟದ, ಅಸಭ್ಯ ಭಾಷೆಯಲ್ಲಿ ನಿಂದಿಸುವುದು ಮಾತ್ರ ಎಂದಾಗಿದೆಯೇ? ಯಾವುದೇ ವಿವೇಚನೆಯಿಲ್ಲದೆ ಮನಸ್ಸಿಗೆ ಬಂದಂತೆ ಎದುರಾಳಿಗಳನ್ನು ಸಾರ್ವಜನಿಕವಾಗಿ ನಿಂದಿಸುವ ಈ ಚಾಳಿ ರಾಜಕೀಯದ ಕುರಿತು ಈಗಿನ ತಲೆಮಾರಿಗೆ ಇರುವ ಜುಗುಪ್ಸೆ ಮತ್ತು ಅಸಹ್ಯದ ಭಾವವನ್ನು ಇನ್ನಷ್ಟು ಗಟ್ಟಿಗೊಳಿಸುವುದಿಲ್ಲವೇ? ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯನ್ನು ಮುಂದಿಟ್ಟುಕೊಂಡು ರಾಜ್ಯದಲ್ಲೀಗ ಮೂರೂ ಪ್ರಮುಖ ಪಕ್ಷಗಳ ಮುಖಂಡರು ಸಾರ್ವಜನಿಕ ಸಭೆಗಳಲ್ಲಿ ಮಾಡುತ್ತಿರುವ ಭಾಷಣಗಳನ್ನು ಗಮನಿಸಿದರೆ ಈ ಎಲ್ಲ ಪ್ರಶ್ನೆಗಳೂ ಉದ್ಭವಿಸುತ್ತಿವೆ. ‘ರಾಹುಲ್ ಗಾಂಧಿ ಒಬ್ಬ ಡ್ರಗ್ಸ್‌ ವ್ಯಸನಿ ಮತ್ತು ಡ್ರಗ್ಸ್‌ ಪೆಡ್ಲರ್ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಅಂಥವರು ಹೇಗೆ ರಾಷ್ಟ್ರ ಮುನ್ನಡೆಸಲು ಸಾಧ್ಯ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ಭಾಷಣವೊಂದರಲ್ಲಿ ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಕಾಂಗ್ರೆಸ್ ನಾಯಕರು ಕಟೀಲ್‌ ಅವರನ್ನು ‘ಹುಚ್ಚ, ಮಾನಸಿಕ ಸ್ಥಿಮಿತ ಕಳೆದುಕೊಂಡವ, ಅಯೋಗ್ಯ, ಜೋಕರ್’ ಎಂದೆಲ್ಲ ಟೀಕಿಸಿದ್ದಾರೆ. ‘ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ನಳಿನ್ ಕುಮಾರ್‌ ಅವರನ್ನು ವ್ಯಸನಮುಕ್ತ ಕೇಂದ್ರಕ್ಕೆ ಸೇರಿಸಬೇಕು’ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಹೇಳಿದರೆ, ‘ನಿಮ್ಹಾನ್ಸ್‌ಗೆ ಸೇರಿಸಬೇಕು’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಕಾಂಗ್ರೆಸ್‌ ಮುಖಂಡ ಎಚ್.ಸಿ.ಮಹದೇವಪ್ಪ, ನಳಿನ್ ಕುಮಾರ್‌ ಅವರನ್ನು ‘ಅಯೋಗ್ಯ’ ಎಂದಿದ್ದರೆ, ಶಾಸಕ ದಿನೇಶ್ ಗುಂಡೂರಾವ್, ‘ಜೋಕರ್, ಸಂಸ್ಕಾರವಿಲ್ಲದ ತುಚ್ಛ ವ್ಯಕ್ತಿ’ ಎಂದು ಟೀಕಿಸಿದ್ದಾರೆ. ಈ ರೀತಿ ಪರಸ್ಪರರ ಬಗ್ಗೆ ಅವಹೇಳನಕಾರಿ ಪದಪ್ರಯೋಗಗಳನ್ನು ಮಾಡುವುದು ರಾಜಕೀಯದಲ್ಲಿ ಈಗ ಸಹಜ ಎಂಬಂತಾಗಿರುವುದು ರಾಜ್ಯದ ರಾಜಕೀಯಕ್ಕೆ ಬಡಿದಿರುವ ಬೌದ್ಧಿಕ ದಾರಿದ್ರ್ಯ
ವನ್ನು ಎತ್ತಿ ತೋರಿಸುವಂತಿದೆ. ಹಿಂದೆಲ್ಲಾ ಹೊಸದಾಗಿ ಶಾಸಕರಾದವರು ಆವೇಶದಿಂದ ಇಂತಹ ಕೀಳುಮಟ್ಟದ ಭಾಷೆಯನ್ನು ಬಳಸಿದಾಗ, ಆಯಾ ಪಕ್ಷದ ಹಿರಿಯರು ಬುದ್ಧಿ ಹೇಳಿ ತಿದ್ದುತ್ತಿದ್ದರು.
ಒಂದು ಕಾಲದಲ್ಲಿ ಬಿಜೆಪಿಯಲ್ಲಿಯೇ ಅಟಲ್‌ ಬಿಹಾರಿ ವಾಜಪೇಯಿ ಅವರಂತಹ ಅತ್ಯುತ್ತಮ ಸಂಸದೀಯ ಪಟುಗಳಿದ್ದರು. ಸಾರ್ವಜನಿಕ ಸಭೆಗಳಲ್ಲಿ ವಾಜಪೇಯಿ ಅವರ ಆಕರ್ಷಕ ನುಡಿಗಟ್ಟುಗಳ ಭಾಷಣವನ್ನು ಕೇಳಲು ವಿರೋಧಿಗಳೂ ಬಂದು ಸೇರುತ್ತಿದ್ದರು. ವಿರೋಧಿಗಳನ್ನು ಎಷ್ಟೇ ಕಟುವಾಗಿ ಟೀಕಿಸಿದರೂ ಘನತೆ, ವ್ಯಂಗ್ಯ ಮತ್ತು ಕಾವ್ಯಾತ್ಮಕತೆಯಿಂದ ಕೂಡಿದ ಸಭ್ಯ ಭಾಷೆಯನ್ನೇ ಅವರು ಬಳಸುತ್ತಿದ್ದರು. ಆದರೆ ಈಗ ಬಿಜೆಪಿಯಲ್ಲಿ ಇಂತಹ ಮುತ್ಸದ್ದಿ ನಾಯಕರ ಕೊರತೆ ಎದ್ದು ಕಾಣುವಂತಿದೆ. ರಾಜ್ಯ ಘಟಕದ ಅಧ್ಯಕ್ಷತೆಯಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವ ನಳಿನ್‌ ಅವರೇ ಇಂತಹ ಅಭಿರುಚಿಹೀನ ಹೇಳಿಕೆಯನ್ನು ನೀಡಿರುವುದು ಪಕ್ಷ ಯಾವ ದಿಕ್ಕಿನತ್ತ ಸಾಗುತ್ತಿದೆ ಎನ್ನುವುದನ್ನು ಸೂಚಿಸುತ್ತದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತ್ರ ನಳಿನ್‌ ಹೀಗೆ ಅಗೌರವದಿಂದ ಮಾತನಾಡಿರುವುದು ಎಳ್ಳಷ್ಟೂ ಸರಿಯಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಕೆಪಿಸಿಸಿ ಐ.ಟಿ ಘಟಕವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಈಚೆಗೆ ‘ಹೆಬ್ಬೆಟ್ಟು ಗಿರಾಕಿ’ ಎಂದು ಅವಹೇಳನ ಮಾಡಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪಕ್ಷದ ಪರವಾಗಿ ಕ್ಷಮೆ ಯಾಚಿಸಿದ್ದಲ್ಲದೆ, ಇದಕ್ಕೆ ಕಾರಣರಾದವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದಾಗಿಯೂ ಹೇಳಿದ್ದಾರೆ. ಇವು ಒಂದೆರಡು ಅಪವಾದಗಳಷ್ಟೇ. ಬಹುತೇಕ ರಾಜಕಾರಣಿಗಳು ಪಕ್ಷಭೇದವಿಲ್ಲದೆ ಅಭಿರುಚಿಹೀನ, ಕೀಳು ಮಟ್ಟದ ಭಾಷಾ ಪ್ರಯೋಗವನ್ನೇ ದೊಡ್ಡಸ್ತಿಕೆ ಎಂದು ತಿಳಿದುಕೊಂಡಂತಿದೆ. ‘ರಾಜಕೀಯ ಎನ್ನುವುದು ಫಟಿಂಗರ ಕೊನೆಯ ತಾಣ’ ಎಂಬ ಜನಪ್ರಿಯ ಆಡುಮಾತೊಂದನ್ನು ಸಮರ್ಥಿಸುವಂತೆ ಕರ್ನಾಟಕದ ರಾಜಕಾರಣಿಗಳು ಇವತ್ತು ವರ್ತಿಸುತ್ತಿರುವುದು ಖಂಡನೀಯ. 

ನಳಿನ್‌ ಕುಮಾರ್‌ ಮಾತನಾಡಿದ್ದು ವಿಧಾನ ಪರಿಷತ್ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ. ಸಾಮಾನ್ಯವಾಗಿ ಇಂತಹ ಸಭೆಯಲ್ಲಿ ‘ವಿಧಾನ ಪರಿಷತ್‌ಗೆ ಎಂತಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು, ಗೆಲ್ಲುವುದಕ್ಕಾಗಿ ಯಾವ ರೀತಿ ರಾಜಕೀಯ ತಂತ್ರಗಾರಿಕೆ ಮಾಡಬೇಕು’ ಎನ್ನುವುದೆಲ್ಲ ಚರ್ಚೆಯಾಗುವುದು ವಾಡಿಕೆ. ಆದರೆ ನಳಿನ್‌ ಅವರು ಸಭೆಯಲ್ಲಿ ಉದ್ದಕ್ಕೂ ಕಾಂಗ್ರೆಸ್‌ ಮತ್ತು ಅದರ ನಾಯಕರ ಕುರಿತು ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಆಡಳಿತಾರೂಢ ಪಕ್ಷವು ತನ್ನ ಸರ್ಕಾರದ ಸಾಧನೆಗಳನ್ನು ಜನರ ಮುಂದಿಟ್ಟು ಮತ ಯಾಚಿಸುವುದು ಸಹಜವಾಗಿ ಆಗಬೇಕಾದ ಕೆಲಸ. ಅದೇ ರೀತಿ ವಿರೋಧ ಪಕ್ಷದ ನಾಯಕರು ಆಡಳಿತದ ಹುಳುಕುಗಳನ್ನು ಮತ್ತು ವೈಫಲ್ಯವನ್ನು ಎತ್ತಿ ತೋರಿಸಬೇಕು. ಅದನ್ನು ಬಿಟ್ಟು ನಾಯಕರ ವೈಯಕ್ತಿಕ ತೇಜೋವಧೆಯೇ ಚುನಾವಣಾ ಅಖಾಡದ ಮುಖ್ಯ ವಿಷಯ ಎನ್ನುವಂತಾಗಿರುವುದು ಶೋಚನೀಯ ಸಂಗತಿ.

ಸಂಸತ್ತು ಮತ್ತು ವಿಧಾನಮಂಡಲದಲ್ಲಿ ಅಸಭ್ಯ ಹಾಗೂ ಸಂಸ್ಕೃತಿಹೀನ ಶಬ್ದಗಳನ್ನು ಬಳಸಿದರೆ ಅಸಂಸದೀಯ ಎಂದು ಪರಿಗಣಿಸಿ ಆ ಮಾತುಗಳನ್ನು ಕಡತದಿಂದ ತೆಗೆದುಹಾಕುವ ಪರಂಪರೆ ಇದೆ. ಚುನಾವಣಾ ಭಾಷಣಗಳಲ್ಲಿಯೂ ರಾಜಕಾರಣಿಗಳು ಬಳಸುವ ಭಾಷೆ ಅಸಂಸದೀಯ ಆಗದಂತೆ ನೋಡಿಕೊಳ್ಳಬೇಕು. ಲಂಗುಲಗಾಮಿಲ್ಲದೆ, ಲಜ್ಜೆಯ ಲವಲೇಶವೂ ಇಲ್ಲದೆ ರಾಜಕಾರಣಿಗಳು ಹೀಗೆ ನಾಲಗೆ ಹರಿಬಿಡುವುದನ್ನು ಪ್ರಜ್ಞಾವಂತ ಮತದಾರರು ಸಹಿಸಿಕೊಳ್ಳಬಾರದು. ಇಂತಹ ಅಭಿರುಚಿಹೀನ ವ್ಯಕ್ತಿಗಳೇ ಜವಾಬ್ದಾರಿಯುತ ಸ್ಥಾನಗಳಲ್ಲಿ ಕುಳಿತುಕೊಳ್ಳುವುದರಿಂದ ಆಡಳಿತವೂ ಬಿಗು ಕಳೆದು
ಕೊಳ್ಳುತ್ತದೆ. ಅದಕ್ಕಿಂತ ಮುಖ್ಯವಾಗಿ ರಾಜಕಾರಣದ ಕುರಿತು ಯುವಜನರಲ್ಲಿ ಜುಗುಪ್ಸೆ ಮತ್ತು ಸಿನಿಕತನ ಹೆಚ್ಚಾಗುತ್ತದೆ. ಇಂತಹ ಹೇಳಿಕೆಗಳಿಗೆ ತಡೆಯೊಡ್ಡಲು ಚುನಾವಣಾ ಆಯೋಗವೂ ತನ್ನ ನೀತಿಸಂಹಿತೆಯಲ್ಲಿ ಕ್ರಮಗಳನ್ನು ಅಡಕಗೊಳಿಸುವ ಬಗ್ಗೆ ಆಲೋಚಿಸಲು ಇದು ಸಕಾಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು