ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜತಾಂತ್ರಿಕ ಸಂಬಂಧ ಮೊಟಕು ಪಾಕಿಸ್ತಾನದ ಕ್ರಮ ಜಾಣ ನಡೆಯಲ್ಲ

Last Updated 9 ಆಗಸ್ಟ್ 2019, 20:15 IST
ಅಕ್ಷರ ಗಾತ್ರ

ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿ ಅನ್ವಯ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರದ ಕ್ರಮದಿಂದ ನೆರೆಯ ಪಾಕಿಸ್ತಾನವು ರಾಜಕೀಯ ಗೊಂದಲಕ್ಕೆ ಒಳಗಾದಂತಿದೆ. ಇಮ್ರಾನ್‌ ಖಾನ್‌ ನೇತೃತ್ವದ ಅಲ್ಲಿನ ಸರ್ಕಾರ ಪಾಕಿಸ್ತಾನದಲ್ಲಿದ್ದ ಭಾರತೀಯ ಹೈಕಮಿಷನರ್‌ ಅವರನ್ನು ವಾಪಸು ಕಳುಹಿಸಲು ನಿರ್ಧರಿಸಿರುವುದಲ್ಲದೆ, ಭಾರತದ ಜೊತೆಗಿನ ವ್ಯಾಪಾರ ಸಂಬಂಧವನ್ನೂ ಕಡಿದುಕೊಂಡಿದೆ. ಭಾರತದ ಸ್ವಾತಂತ್ರ್ಯ ದಿನವಾದ ಆಗಸ್ಟ್‌ 15 ಅನ್ನು ಕರಾಳ ದಿನವನ್ನಾಗಿ ಆಚರಿಸುವುದಾಗಿಯೂ ಅಲ್ಲಿನ ಸರ್ಕಾರ ಹೇಳಿಕೊಂಡಿದೆ. ಜಮ್ಮು– ಕಾಶ್ಮೀರ ಕುರಿತ ಭಾರತದ ನಿರ್ಧಾರವನ್ನು ಅಂತರ
ರಾಷ್ಟ್ರೀಯ ವಿಷಯವನ್ನಾಗಿಸಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ ಎನ್ನುವುದು ಸ್ಪಷ್ಟ. ವಿಶ್ವಸಂಸ್ಥೆಯಲ್ಲೂ ಈ ವಿಷಯವನ್ನು ಎತ್ತುವ ಮೂಲಕ ಜಮ್ಮು– ಕಾಶ್ಮೀರದ ಜನರಿಗೆ ಬಾಯಿಮಾತಿನ ಸಹಾನುಭೂತಿ ತೋರುವ ಪಾಕಿಸ್ತಾನದ ಪ್ರಯತ್ನಕ್ಕೆ ಯಶಸ್ಸು ದಕ್ಕುವುದಿಲ್ಲ. ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರದ ಕ್ರಮದಿಂದ ಜಮ್ಮು– ಕಾಶ್ಮೀರದ ಕೆಲವರಿಗೆ ಭ್ರಮನಿರಸನ ಉಂಟಾಗಿರಬಹುದು. ಆದರೆ, ಅದು ಭಾರತದ ಆಂತರಿಕ ವಿಷಯ ಎನ್ನುವುದನ್ನು ಪಾಕಿಸ್ತಾನ ಅರಿತುಕೊಳ್ಳಬೇಕು. ಜಮ್ಮು– ಕಾಶ್ಮೀರಕ್ಕೆ ಭಾರತ ಸರ್ಕಾರವು ನೀಡಿದ್ದ ವಿಶೇಷ ಸ್ಥಾನಮಾನದ ಬಗ್ಗೆ ಈ ಹಿಂದೆ ಪಾಕಿಸ್ತಾನ ಯಾವತ್ತೂ ಕಾಳಜಿಯನ್ನು ಪ್ರಕಟಿಸಿದ್ದು ದಾಖಲಾಗಿಲ್ಲ. ಹಾಗಾಗಿ, ಈಗ ಅಲ್ಲೇನೋ ಪ್ರಮಾದವಾಗಿದೆ ಎನ್ನುವಂತೆ ಪಾಕಿಸ್ತಾನ ವರ್ತಿಸುವುದೂ ಸರಿಯಲ್ಲ. ವಿಶ್ವಸಂಸ್ಥೆಯಲ್ಲಿ ಈ ವಿಷಯವನ್ನು ಎತ್ತಿ ಭಾರತಕ್ಕೆ ಮುಜುಗರ ಉಂಟುಮಾಡುವ ಪ್ರಯತ್ನವನ್ನು ಪಾಕಿಸ್ತಾನ ಕೈಗೊಂಡರೆ ಅದನ್ನು ರಾಜತಾಂತ್ರಿಕವಾಗಿ ಯಶಸ್ವಿಯಾಗಿ ಎದುರಿಸುವ ಸಾಮರ್ಥ್ಯ ಭಾರತಕ್ಕಿದೆ. ವಿಶ್ವ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಭಾರತವು ಈಗ ಹೆಚ್ಚು ಜಾಣ್ಮೆಯಿಂದ ವರ್ತಿಸಬೇಕು. ಜಮ್ಮು– ಕಾಶ್ಮೀರದಲ್ಲಿ ದೂರಸಂಪರ್ಕ, ಅಂತರ್ಜಾಲ ಸೌಕರ್ಯವನ್ನು ಸಹಜ ಸ್ಥಿತಿಗೆ ತರಬೇಕು. ಜನಸಾಮಾನ್ಯರ ಮುಕ್ತ ಓಡಾಟಕ್ಕೆ ಅನುವಾಗಿಸಬೇಕು. ಜನರ ಪ್ರಜಾತಾಂತ್ರಿಕ ಹಕ್ಕುಗಳನ್ನು ರಕ್ಷಿಸಬೇಕು. ಅಲ್ಲಿನ ಜನರಲ್ಲಿ ಈ ಹೊಸ ಉಪಕ್ರಮದ ಬಗ್ಗೆ ಹುಟ್ಟಿರುವ ಅನುಮಾನಗಳನ್ನು ದೂರ ಮಾಡಬೇಕು. ಈ ಎಲ್ಲ ಕೆಲಸಗಳನ್ನು ಕೇಂದ್ರ ಸರ್ಕಾರ ಆದ್ಯತೆಯ ನೆಲೆಯಲ್ಲಿ ಕೈಗೊಳ್ಳಬೇಕು.

ಭಾರತದ ಜೊತೆಗೆ ವ್ಯಾಪಾರ ಸಂಬಂಧವನ್ನು ಕಡಿದುಕೊಳ್ಳುವುದರ ಮೂಲಕ ಏನನ್ನೂ ಸಾಧಿಸಲಾಗದು ಎನ್ನುವುದನ್ನು ಪಾಕಿಸ್ತಾನ ಸರ್ಕಾರ ಅರಿತುಕೊಳ್ಳಬೇಕು. ಅಂತರರಾಷ್ಟ್ರೀಯ ವ್ಯಾಪಾರ ಕ್ಷೇತ್ರದಲ್ಲಿ ಭಾರತ ತನ್ನದೇ ಆದ ಛಾಪು ಮೂಡಿಸಿದ್ದು, ಪಾಕಿಸ್ತಾನದ ಈ ಕ್ರಮದಿಂದ ಭಾರತಕ್ಕೆ ಯಾವುದೇ ನಷ್ಟವಿಲ್ಲ. ಬದಲಾಗಿ ಈ ಕ್ರಮ ಪಾಕಿಸ್ತಾನದ ಹಿತಾಸಕ್ತಿಗೇ ಹೆಚ್ಚು ಧಕ್ಕೆ ಉಂಟು ಮಾಡಲಿದೆ. ಗಡಿಯಾಚೆಗಿನ ಭಯೋತ್ಪಾದನೆಗೆ ಪಾಕಿಸ್ತಾನ ಸರ್ಕಾರ ಕುಮ್ಮಕ್ಕು ಕೊಟ್ಟ ಹಿನ್ನೆಲೆಯಲ್ಲಿ ಭಾರತವೂ ಈ ಹಿಂದೆ ದ್ವಿಪಕ್ಷೀಯ ಸಂಬಂಧಗಳನ್ನು ಮೊಟಕುಗೊಳಿಸಿತ್ತು. 2001ರಲ್ಲಿ ಭಾರತದ ಸಂಸತ್ತಿನ ಮೇಲೆ ಪಾಕಿಸ್ತಾನ ಬೆಂಬಲಿತ ಉಗ್ರರ ದಾಳಿ ನಡೆದ ಹಿನ್ನೆಲೆಯಲ್ಲಿ ಭಾರತವು ಪಾಕಿಸ್ತಾನದಿಂದ ತನ್ನ ಹೈಕಮಿಷನರ್‌ ಅವರನ್ನು ಹಿಂದಕ್ಕೆ ಕರೆಸಿಕೊಂಡಿತ್ತು.

ಆದರೆ, ನವದೆಹಲಿಯಲ್ಲಿ ಇದ್ದ ಪಾಕಿಸ್ತಾನದ ಹೈಕಮಿಷನರ್‌ ಅವರನ್ನು ವಾಪಸು ಕಳಿಸಿರಲಿಲ್ಲ. ರಾಜತಾಂತ್ರಿಕ ಪ್ರಕ್ಷುಬ್ಧತೆಯು ಆಗಾಗ್ಗೆ ಉಂಟಾಗುವುದರ ಹೊರತಾಗಿಯೂ ಉಭಯ ದೇಶಗಳ ರಾಜತಂತ್ರಜ್ಞರು ತಮ್ಮ ಕೆಲಸವನ್ನು ಜಾಣ್ಮೆಯಿಂದ ಮುಂದುವರಿಸಿಕೊಂಡು ಬಂದಿದ್ದಾರೆ. 2001ರಲ್ಲಿ ಉಂಟಾದ ಪ್ರಕ್ಷುಬ್ಧತೆ 2003ರ ವೇಳೆಗೆ ತಣ್ಣಗಾಗಿತ್ತು. ಜಮ್ಮು– ಕಾಶ್ಮೀರಕ್ಕೆ ಸಂಬಂಧಿಸಿ ಈಗ ಏನು ನಡೆದಿದೆಯೋ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದನ್ನು ಬಿಟ್ಟು ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಯನ್ನು ಮಟ್ಟ ಹಾಕುವುದರ ಬಗ್ಗೆ ಯೋಚಿಸಲಿ. ವಿಶೇಷ ಸ್ಥಾನಮಾನ ರದ್ದತಿಯನ್ನು ಅಂತರರಾಷ್ಟ್ರೀಯ ವಿಷಯವನ್ನಾಗಿಸಲು ಪಾಕಿಸ್ತಾನ ಶ್ರಮ ಹಾಕುವುದು ವ್ಯರ್ಥ. ಇನ್ನು ಮುಂದೆ ಜಮ್ಮು– ಕಾಶ್ಮೀರದಲ್ಲಿ ಹೆಚ್ಚು ಹೆಚ್ಚು ಅಭಿವೃದ್ಧಿ ಕೆಲಸಗಳು ನಡೆಯಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಅದಕ್ಕೆ ಬದ್ಧರಾಗಿ ಅವರು ನಡೆದುಕೊಳ್ಳಲಿ. ಯುವಪೀಳಿಗೆಗೆ ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿ. ಜಮ್ಮು– ಕಾಶ್ಮೀರದ ವಿಶೇಷಾಧಿಕಾರವನ್ನು ರದ್ದುಗೊಳಿಸಿರುವ ಕೇಂದ್ರದ ಕ್ರಮವು ಕೆಲವು ವಿಶೇಷಾಧಿಕಾರಗಳನ್ನು ಹೊಂದಿರುವ ಈಶಾನ್ಯ ರಾಜ್ಯಗಳ ಜನರನ್ನೂ ಗೊಂದಲದಲ್ಲಿ ಕೆಡಹುವ ಸಾಧ್ಯತೆ ಇದೆ. ಅರುಣಾಚಲ ಪ್ರದೇಶ ಮತ್ತು ಈಶಾನ್ಯ ಭಾಗದ ಇತರ ರಾಜ್ಯಗಳಲ್ಲಿ ಈ ಗೊಂದಲದ ಲಾಭ ಗಳಿಸಲು ಚೀನಾ ಪ್ರಯತ್ನಿಸಬಹುದು. ಈ ಹಿನ್ನೆಲೆಯಲ್ಲಿಕೇಂದ್ರ ಸರ್ಕಾರ ಎಚ್ಚರದ ಹೆಜ್ಜೆ ಇಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT