ಸೋಮವಾರ, ಅಕ್ಟೋಬರ್ 26, 2020
27 °C

ಸಂಪಾದಕೀಯ: ಜಪಾನ್‌ ನಾಯಕತ್ವ ಬದಲು: ನೀತಿಯಲ್ಲಿ ಆಗದಿರಲಿ ಪಲ್ಲಟ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಅತಿ ದೀರ್ಘ ಅವಧಿಗೆ ಜಪಾನ್‌ನ ಪ್ರಧಾನಿಯಾಗಿದ್ದ ಶಿಂಜೊ ಅಬೆ ಅವರು ಆರೋಗ್ಯ ಸಮಸ್ಯೆಯ ಕಾರಣಕ್ಕೆ ಹುದ್ದೆಯನ್ನು ತೊರೆದಿದ್ದಾರೆ. 2012ರಲ್ಲಿ ಅಬೆ ಅವರು ಅಧಿಕಾರಕ್ಕೆ ಬರುವುದಕ್ಕೆ ಮುಂಚಿನ ಐದು ವರ್ಷಗಳಲ್ಲಿ ಪ್ರಧಾನಿ ಹುದ್ದೆಯನ್ನು ಐದು ಮಂದಿ ನಿಭಾಯಿಸಿದ್ದರು. ಜಪಾನ್‌ಗೆ ರಾಜಕೀಯ ಸ್ಥಿರತೆಯನ್ನು ತಂದುಕೊಟ್ಟವರು ಅಬೆ.

ಸಂಪಾದಕೀಯ ಕೇಳಿ: ಜಪಾನ್‌ ನಾಯಕತ್ವ ಬದಲು: ನೀತಿಯಲ್ಲಿ ಆಗದಿರಲಿ ಪಲ್ಲಟ

ದೂರದೃಷ್ಟಿಯ ನಾಯಕ ಅಬೆ ಅಧಿಕಾರದಲ್ಲಿದ್ದಾಗ ಹಲವು ಸವಾಲುಗಳನ್ನು ಎದುರಿಸಬೇಕಾಗಿತ್ತು. ಭೂಕಂಪ, ಸುನಾಮಿ ಮತ್ತು ಅಣು ದುರಂತಗಳು ದೇಶವನ್ನು ಕಾಡಿದ್ದವು. ಈ ಎಲ್ಲವನ್ನೂ ಅಬೆ ಬಹಳ ಚೆನ್ನಾಗಿಯೇ ನಿಭಾಯಿಸಿದ್ದರು. ಆರ್ಥಿಕವಾಗಿ ಜಪಾನ್‌ ಚೇತರಿಸಿಕೊಳ್ಳುವಂತೆ ಅವರು ನೋಡಿಕೊಂಡಿದ್ದಾರೆ. ವಿದೇಶಾಂಗ ನೀತಿಯ ವಿಚಾರದಲ್ಲಿಯೂ ಅತ್ಯಂತ ಸ್ಪಷ್ಟ ನಿಲುವನ್ನು ಅಬೆ ಹೊಂದಿದ್ದರು.

‘ಮಹತ್ವದ ರಾಜಕೀಯ ನಿರ್ಧಾರಗಳಲ್ಲಿ ತಪ್ಪಾಗುವುದನ್ನು ನಾನು ಬಯಸುವುದಿಲ್ಲ. ಅನಾರೋಗ್ಯದ ಈ ಸಂದರ್ಭದಲ್ಲಿ, ಜನಾದೇಶಕ್ಕೆ ಆತ್ಮವಿಶ್ವಾಸದಿಂದ ಸ್ಪಂದಿಸಲು ಸಾಧ್ಯವಿಲ್ಲದ ಸ್ಥಿತಿಯಲ್ಲಿ ಅಧಿಕಾರದಲ್ಲಿ ಇರಬಾರದು ಎಂದು ನಿರ್ಧರಿಸಿದ್ದೇನೆ’ ಎಂದು ಅಧಿಕಾರ ತೊರೆಯುವಾಗ ಅಬೆ ಹೇಳಿದ್ದು ಅವರ ಮುತ್ಸದ್ದಿತನದ ಪ್ರತೀಕ.

ಅಬೆಯವರ ದೀರ್ಘಕಾಲದ ಒಡನಾಡಿ ಯೋಶಿಹಿಡೆ ಸುಗಾ ಈಗ ಪ‍್ರಧಾನಿ ಹುದ್ದೆಗೆ ಏರಿದ್ದಾರೆ. ಜಪಾನ್‌ನ ಪ್ರಧಾನಿ ಹುದ್ದೆ ಈಗ ಹೂವಿನ ಹಾಸಿಗೆಯೇನೂ ಅಲ್ಲ. ಇಡೀ ಜಗತ್ತನ್ನು ಕಾಡುತ್ತಿರುವ ಕೋವಿಡ್‌–19 ಪಿಡುಗು ಆ ದೇಶವನ್ನು ಕೂಡ ತೀವ್ರವಾಗಿ ಕಾಡಿದೆ. ಆರ್ಥಿಕವಾಗಿ ದೊಡ್ಡ ಏಟು ಕೊಟ್ಟಿದೆ. ಜಪಾನ್‌ನ ಜನಸಂಖ್ಯೆಯಲ್ಲಿ ಯುವ ಸಮೂಹದ ಪ್ರಮಾಣ ಕಡಿಮೆ. ಇದು ಕೂಡ ಆರ್ಥಿಕ ಚೇತರಿಕೆಗೆ ಪ್ರತಿಕೂಲವಾಗಿ ಕಾಡಬಹುದು. ಚೀನಾ ಜತೆಗಿನ ಸಂಘರ್ಷ ಹಿಂದೆಂದಿಗಿಂತಲೂ ಹೆಚ್ಚು ತೀವ್ರವಾಗಿದೆ.

ಚೀನಾದ ಅತಿಕ್ರಮಣಕಾರಿ ಮನೋಭಾವವನ್ನು ನಿಯಂತ್ರಿಸುವುದು ಸುಲಭವಲ್ಲ. ಈ ಎಲ್ಲವನ್ನೂ ನಿಭಾಯಿಸುವ ಸವಾಲು ಸುಗಾ ಮುಂದೆ ಇದೆ. ಅಬೆಯವರ ಯಶಸ್ಸಿನ ಹಿಂದಿನ ಶಕ್ತಿ ಎಂದೇ ಗುರುತಿಸಲಾಗುವ ಸುಗಾ, ಚತುರ ಕೆಲಸಗಾರ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಅಬೆಯವರ ನೆರಳಿನಲ್ಲಿಯೇ ಬೆಳೆದಿರುವ ಅವರು, ಜಪಾನ್‌ನ ನೀತಿಯ ವಿಚಾರದಲ್ಲಿ ಹೆಚ್ಚಿನ ಬದಲಾವಣೆ ತರುವ ಸಾಧ್ಯತೆ ಇಲ್ಲ. ಅಬೆಯವರ ಸಚಿವ ಸಂಪುಟವನ್ನು ಬಹುಪಾಲು ಹಾಗೆಯೇ ಉಳಿಸಿಕೊಳ್ಳಲಾಗಿದೆ. ವಿದೇಶಾಂಗ, ರಕ್ಷಣೆ, ಪರಿಸರ, ರಕ್ಷಣಾ ಸಚಿವರಾಗಿ ಹಿಂದೆ ಇದ್ದವರೇ ಮುಂದುವರಿಯಲಿದ್ದಾರೆ ಎಂಬುದು ಹೆಚ್ಚಿನ ಬದಲಾವಣೆ ಇಲ್ಲ ಎಂಬುದರ ಸೂಚನೆಯಾಗಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಅಬೆಯವರ ನಡುವೆ ವೈಯಕ್ತಿಕ ಎನ್ನುವಂತಹ ಬಾಂಧವ್ಯ ಇತ್ತು. ಭಾರತ– ಜಪಾನ್‌ ನಡುವಣ ಸಂಬಂಧಕ್ಕೆ ಚಾರಿತ್ರಿಕ ಹಿನ್ನೆಲೆಯೂ ಇದೆ. ಪಿ.ವಿ. ನರಸಿಂಹ ರಾವ್‌ ಮತ್ತು ಅಟಲ್‌ ಬಿಹಾರಿ ವಾಜಪೇಯಿ ಅವರು ಪ‍್ರಧಾನಿಯಾಗಿದ್ದಾಗ ರೂಪಿಸಿದ ‘ಪೂರ್ವದತ್ತ ನೋಟ’ ನೀತಿಯಿಂದಾಗಿ ಎರಡೂ ದೇಶಗಳು ಬಹಳ ಹತ್ತಿರ ಬಂದಿದ್ದವು. ಈ ಸಂಬಂಧದಲ್ಲಿ ಎಂದೂ ಬಿರುಕು ಕಾಣಿಸಿದ್ದಿಲ್ಲ. ಸಾಮಾಜಿಕ ಅಭಿವೃದ್ಧಿ ಯೋಜನೆಗಳ ಜತೆಗೆ, ಹೈಸ್ಪೀಡ್‌ ರೈಲಿನಂತಹ ಯೋಜನೆಗಳಲ್ಲಿಯೂ ಜಪಾನ್‌ ದೇಶವು ಭಾರತದ ಸಹಭಾಗಿ.

ಭಾರತದಲ್ಲಿರುವ ಜಪಾನ್‌ನ ಹೂಡಿಕೆಯೂ ದೊಡ್ಡದು. ಇವೆಲ್ಲದರ ಜತೆಗೆ, ರಕ್ಷಣೆಯ ವಿಚಾರದಲ್ಲಿ ಎರಡೂ ದೇಶಗಳ ನಡುವೆ ಪಾಲುದಾರಿಕೆ ಇದೆ. ಹಿಂದೂ ಮಹಾಸಾಗರ–ಪೆಸಿಫಿಕ್‌ ಪ್ರದೇಶದಲ್ಲಿ ಚೀನಾದ ಅಟಾಟೋಪ ಹೆಚ್ಚುತ್ತಿದೆ. ಆ ದೇಶವನ್ನು ಹದ್ದುಬಸ್ತಿನಲ್ಲಿ ಇರಿಸಬೇಕಾದರೆ ಭಾರತ–ಜಪಾನ್‌ ಜತೆಗೆ ಇರುವುದು ಬಹಳ ಮುಖ್ಯ. ಅಮೆರಿಕ, ಆಸ್ಟ್ರೇಲಿಯಾ, ಜಪಾನ್‌ ಮತ್ತು ಭಾರತ ಇರುವ ಕ್ವಾಡ್‌ ಕೂಟ ರಚನೆಯಲ್ಲಿ ಅಬೆಯವರು ಮುಖ್ಯ ಪಾತ್ರ ವಹಿಸಿದ್ದರು. ಇವೆಲ್ಲವನ್ನೂ ಹೀಗೆಯೇ ಮುಂದುವರಿಸಿಕೊಂಡು ಹೋಗುವ ಹೊಣೆಗಾರಿಕೆ ಸುಗಾ ಮೇಲಿದೆ.

ಸುಗಾ ಅವರು ಏಳು ವರ್ಷಗಳಿಗೂ ಹೆಚ್ಚು ಕಾಲ ಸಂಪುಟದ ಮುಖ್ಯ ಕಾರ್ಯದರ್ಶಿಯಂತಹ ಮಹತ್ವದ ಹುದ್ದೆಯಲ್ಲಿದ್ದರೂ ಜಾಗತಿಕವಾಗಿ ಗುರುತಿಸಿಕೊಂಡವರಲ್ಲ. ಆದರೆ, ಈಗ ಅವರು ವಿದೇಶಾಂಗ ನೀತಿಯಲ್ಲಿ ಯಾವ ಲೋಪವೂ ಆಗದಂತೆ ನೋಡಿಕೊಳ್ಳಬೇಕಾದುದು ಅಗತ್ಯ. ಜಾಗತಿಕ ಮತ್ತು ಪ್ರಾದೇಶಿಕ ಅಧಿಕಾರ ಸಮತೋಲನದ ದೃಷ್ಟಿಯಿಂದ ಜಪಾನ್‌ಗೆ ವರ್ಚಸ್ವಿ ನಾಯಕನ ಅಗತ್ಯ ಇದೆ. ಆಡಳಿತದ ಆಳ–ಅಗಲ ಬಲ್ಲ ಸುಗಾ ಅವರಿಗೆ ಇದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವೇನಲ್ಲ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು