ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಬಿಬಿಎಂಪಿ ಎಚ್ಚರಗೊಳ್ಳಲಿ ಮುಂಗಾರಿಗೆ ಸನ್ನದ್ಧವಾಗಲಿ

Published 21 ಮೇ 2024, 23:30 IST
Last Updated 21 ಮೇ 2024, 23:30 IST
ಅಕ್ಷರ ಗಾತ್ರ

ಬೆಂಗಳೂರಿನ ಮಟ್ಟಿಗೆ ಹೇಳುವುದಾದರೆ, ಪ್ರತಿವರ್ಷದ ಮಳೆಗಾಲದಲ್ಲೂ ಅದೇ ಹಳೆಯ ಕಥೆ ಪುನರಾವರ್ತನೆ ಆಗುತ್ತದೆ. ಮೊದಲ ಮಳೆಗೇ ನಗರದ ರಸ್ತೆಗಳಲ್ಲಿ ಪ್ರವಾಹದ ಪರಿಸ್ಥಿತಿ ಉಂಟಾಗುತ್ತದೆ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಯಥಾಪ್ರಕಾರ ನಿದ್ರೆಯಲ್ಲಿ ಮೈಮರೆತಿ
ರುತ್ತದೆ. ಜಗತ್ತಿನ ಅತ್ಯಂತ ಯೋಜನಾಬದ್ಧ ನಗರಗಳು ಕೂಡ ಅತಿಯಾದ ಮಳೆಯಾದಾಗ ಪ್ರವಾಹದ
ಸನ್ನಿವೇಶವನ್ನು ಎದುರಿಸಬೇಕಾಗುತ್ತದೆ ಎನ್ನುವುದು ದಿಟ. ಆದರೆ, ಬೆಂಗಳೂರಿನ ಸಮಸ್ಯೆ ಹೇಗಿದೆಯೆಂದರೆ ಸಣ್ಣ ಮಳೆಗೂ ಇಲ್ಲಿ ‘ನಗರ ಮಹಾಪೂರ’ ಉಂಟಾಗುತ್ತದೆ. ಆಗ ಯರ‍್ರಾಬಿರ‍್ರಿ ಸಂಚಾರ ದಟ್ಟಣೆಯೂ ಆಗುತ್ತದೆ. ಸಾಮಾನ್ಯವಾಗಿ ಮಳೆಗಾಲಕ್ಕೆ ಬೇಸಿಗೆಯಲ್ಲೇ ತಯಾರಿ ಮಾಡಿಕೊಳ್ಳುವುದು ವಾಡಿಕೆ. ಹೂಳನ್ನು ತೆಗೆಯುವುದು, ಮೋರಿ ದುರಸ್ತಿಗೊಳಿಸುವುದು, ಚರಂಡಿ ಗೋಡೆಯನ್ನು ಸರಿಪಡಿಸುವುದು– ಹೀಗೆ ಎಲ್ಲ ಕಾರ್ಯಗಳೂ ಆಗಲೇ ಆಗಬೇಕು. ಆದರೆ, ಪಾಲಿಕೆ ಆಡಳಿತ ತನ್ನ ಹೊಣೆಯನ್ನು ಮರೆತು ಕುಳಿತಿದೆ. ನಗರದಲ್ಲಿ ವಿಪರೀತ ಎನಿಸುವಷ್ಟು ‘ಅಭಿವೃದ್ಧಿ’ ಚಟುವಟಿಕೆಗಳು ನಡೆದಿರುವುದು ಹಾಗೂ ಮಳೆಗೆ ತಯಾರಿ ಮಾಡಿಕೊಳ್ಳುವಲ್ಲಿ ಬಿಬಿಎಂಪಿ ಮುಗ್ಗರಿಸಿರುವುದು ಅವಘಡಗಳಿಗೆ ಕಾರಣ ಎನ್ನದೆ ವಿಧಿಯಿಲ್ಲ. ಮುಂಗಾರುಪೂರ್ವ ಮಳೆ ಶುರುವಾಗು ವುದಕ್ಕಿಂತ ಕೇವಲ ಒಂದು ವಾರದ ಮೊದಲು ಬೆಂಗಳೂರಿನ ಜನ ವಿಪರೀತ ತಾಪಮಾನದಿಂದ ಬಳಲಿದ್ದರು. ಈ ಮಳೆ ಅವರಿಗೆ ಆಹ್ಲಾದವನ್ನು ಉಂಟುಮಾಡಿರಲಿಕ್ಕೆ ಸಾಕು. ಆದರೆ, ಈಗ ಅತಿವೃಷ್ಟಿ ಏನೂ ಆಗಿಲ್ಲ. ಅಷ್ಟರಲ್ಲಿ, ನಗರದ ಕೆಲವು ಪ್ರದೇಶಗಳು ಜಲಾವೃತಗೊಂಡಿವೆ. ಮಳೆ ಸುರಿದ ಸಂದರ್ಭಗಳಲ್ಲಿ, ಬೆಂಗಳೂರಿನ ಬಹುಪಾಲು ರಸ್ತೆಗಳಲ್ಲಿ ಸಂಚಾರ ದಟ್ಟಣೆ ತೀವ್ರವಾಗಿತ್ತು. ಹಾಗೆ ನೋಡಿದರೆ, ಇನ್ನೂ ಇದು ಪೂರ್ವ ಮುಂಗಾರು. ಇನ್ನೇನು ಮುಂಗಾರು ಶುರುವಾಗಲಿದ್ದು, ಒಳ್ಳೆಯ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಳೆ ಮುಂದೆ ಜೋರಾಗಿ ಸುರಿದರೆ ಆಗಿನ ಸ್ಥಿತಿ ಇನ್ನೂ ಎಷ್ಟು ಹದಗೆಡಲಿದೆ ಎಂಬುದನ್ನು ಊಹಿಸುವುದು ಕಷ್ಟವಲ್ಲ.

‘ಮಳೆಗಾಲಕ್ಕೆ ಸರ್ವಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಬಿಬಿಎಂಪಿಯ ಮುಖ್ಯ ಆಯುಕ್ತರು ಕೆಲವೇ ದಿನಗಳ ಹಿಂದೆ ಹೇಳಿದ್ದರು. ನೆಲದ ವಾಸ್ತವಕ್ಕೂ ಅವರ ಭರವಸೆಗೂ ಅಜಗಜಾಂತರ ಇರುವುದು ಕನ್ನಡಿಯ ಬಿಂಬದಷ್ಟೇ ಸ್ಪಷ್ಟ. ಯಲಹಂಕ ಭಾಗದಲ್ಲಿ ರಾಜಕಾಲುವೆಯಲ್ಲಿ ಉಂಟಾದ ಪ್ರವಾಹದಿಂದ 22 ಐಷಾರಾಮಿ ವಿಲ್ಲಾಗಳು ಜಲಾವೃತವಾದ ಘಟನೆ ಇದಕ್ಕೆ ಸಾಕ್ಷಿ. ರಾಜಕಾಲುವೆಯು ಕೆರೆಯನ್ನು ಸೇರುವ ಪ್ರದೇಶವು ಹೂಳಿನಿಂದ ತುಂಬಿದ್ದೇ ಘಟನೆಗೆ ಕಾರಣ ಎಂದು ಹೇಳಲಾಗಿದೆ. ಕಾಲುವೆಗಳ ಹೂಳನ್ನು ಮುಂಚಿತವಾಗಿಯೇ ಸಂಪೂರ್ಣವಾಗಿ ತೆರವುಗೊಳಿಸಿದ್ದರೆ ಈ ಘಟನೆಯನ್ನು ಸುಲಭವಾಗಿ ತಪ್ಪಿಸಬಹುದಿತ್ತು. ಬೊಮ್ಮನಹಳ್ಳಿ ಭಾಗದಲ್ಲಿ, ಪ್ರವಾಹದ ನೀರನ್ನು ಪಂಪ್ ಮಾಡಲು ಪಾಲಿಕೆಯು ಖಾಸಗಿಯವರೊಂದಿಗೆ ಮಾಡಿಕೊಂಡಿರುವ ಒಪ್ಪಂದದ ಅವಧಿ ಮುಗಿದಿದ್ದು, ಅದು ನವೀಕರಣಗೊಂಡಿಲ್ಲ. ಹೀಗಾಗಿ, ಮನೆಗಳಿಗೆ ನುಗ್ಗಿದ ನೀರನ್ನು ನಿವಾಸಿಗಳೇ ಹೊರಹಾಕಿ ತಮ್ಮನ್ನು ತಾವು ರಕ್ಷಿಸಿಕೊಳ್ಳುವಂತಹ ಅನಿವಾರ್ಯ ಸೃಷ್ಟಿಯಾಯಿತು. ಬೆಂಗಳೂರು ಈ ಸಲ 150 ದಿನಗಳವರೆಗೆ ಒಂದೇ ಒಂದು ಮಳೆಯನ್ನೂ ಕಾಣಲಿಲ್ಲ. ಹೀಗಾಗಿ, ಮಳೆಗಾಲಕ್ಕೆ ತಯಾರಿ ನಡೆಸಲು ಬಿಬಿಎಂಪಿ ಬಳಿ ಅಗತ್ಯಕ್ಕಿಂತ ಹೆಚ್ಚಿನ ಸಮಯಾವಕಾಶ ಇತ್ತು. ಆದರೆ ಅದನ್ನು ಪೂರ್ಣ ಪ್ರಮಾಣದಲ್ಲಿ ಸದ್ಬಳಕೆ ಮಾಡಿಕೊಂಡಂತೆ ತೋರುತ್ತಿಲ್ಲ. ನಗರದ ವಿವಿಧ ಕಡೆಗಳಲ್ಲಿ ಹೂಳು ತೆಗೆಯಲು ಬಿಬಿಎಂಪಿ ನಡೆಸಿದ ಕಾಮಗಾರಿ ಅಪೂರ್ಣವಾಗಿದೆ. ತೆಗೆದ ಹೂಳನ್ನೂ ರಸ್ತೆ ಪಕ್ಕವೇ ಗುಡ್ಡೆ ಹಾಕಿದ್ದರಿಂದ, ಮಳೆನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ರಸ್ತೆಗಳಲ್ಲಿ ಪ್ರವಾಹ ಉಂಟಾಗಲು ಕಾರಣವಾಗಿದೆ.

ಮಳೆ ಅನಾಹುತಗಳು, ನಗರ ಮಹಾಪೂರಗಳು ಇತ್ತೀಚಿನ ವರ್ಷಗಳಲ್ಲಿ ತೀವ್ರಗತಿಯಲ್ಲಿ ಹೆಚ್ಚುತ್ತಿ
ದ್ದರೂ ಯೋಜನಾಬದ್ಧವಾಗಿ ಕ್ರಮ ಕೈಗೊಳ್ಳದ ಬಿಬಿಎಂಪಿಯ ನಿರ್ಲಕ್ಷ್ಯ ಆಶ್ಚರ್ಯ ಹುಟ್ಟಿಸುತ್ತದೆ. ಮಳೆನೀರು ಮನೆಗಳಿಗೆ ನುಗ್ಗಿದಾಗ ಅರೆಮಂಪರಿನಲ್ಲಿ ಒಂದಿಷ್ಟು ಕಾಮಗಾರಿ ನಡೆಸುವುದು, ಪುನಃ ಕುಂಭಕರ್ಣ ನಿದ್ರೆಗೆ ಜಾರುವುದು ಪಾಲಿಕೆಗೆ ಚಾಳಿಯಾಗಿಬಿಟ್ಟಿದೆ. ‘ಬ್ರ್ಯಾಂಡ್ ಬೆಂಗಳೂರು’ ಎಂಬ ಜಪದಲ್ಲಿ ಭಾರಿ ಯೋಜನೆ ಹಾಕಿಕೊಳ್ಳುವ ಉಮೇದು ಬೆಂಗಳೂರು ಅಭಿವೃದ್ಧಿ ಖಾತೆಯನ್ನೂ ಹೊಂದಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ. ಆದರೆ, ನಾಗರಿಕರಿಗೆ ದುಃಸ್ವಪ್ನವಾಗಿ ಕಾಡುವಂತಹ ರಾಜಕಾರಣಿಗಳ ಕನಸಿನ ಯೋಜನೆಗಳಿಗೆ ಸಾವಿರಾರು ಕೋಟಿ ರೂಪಾಯಿ ಸುರಿಯುವ ಮೊದಲು ನಗರದ ಮೂಲ ಸೌಕರ್ಯವನ್ನು ಸರಿಪಡಿಸುವ ಕಡೆ ಗಮನ ಹರಿಸಬೇಕಾದುದು ತುರ್ತು ಅಗತ್ಯ. ಮಳೆಗಾಲದ ನಿರ್ವಹಣೆಯಲ್ಲಿ ಯಾವುದೇ ಲೋಪ ಆಗದಂತೆ ಬಿಬಿಎಂಪಿ ಅಧಿಕಾರಿಗಳನ್ನು ಎಚ್ಚರಗೊಳಿಸಬೇಕಾದ ಹೊಣೆ ಕೂಡ ಉಪಮುಖ್ಯಮಂತ್ರಿಯವರ ಮೇಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT