ಶನಿವಾರ, ಜುಲೈ 24, 2021
21 °C

ಸಂಪಾದಕೀಯ | ಆರೋಗ್ಯ ಮೂಲಸೌಕರ್ಯ ವೃದ್ಧಿ ಸಮರೋಪಾದಿಯಲ್ಲಿ ನಡೆಯಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋವಿಡ್‌– 19 ಪಿಡುಗು ಹರಡುವಿಕೆ ತಡೆಯುವುದಕ್ಕಾಗಿ ಕರ್ನಾಟಕದ ವಿವಿಧ ಭಾಗಗಳಲ್ಲಿ ಜನ ಸ್ವಯಂಪ್ರೇರಿತರಾಗಿ ಲಾಕ್‌ಡೌನ್‌ ಮಾಡಿದ್ದಾರೆ. ಶನಿವಾರ ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ಸರ್ಕಾರವು ಜನರ ಸಂಚಾರದ ಮೇಲೆ ನಿರ್ಬಂಧ ವಿಧಿಸಿದೆ. ಆದರೆ, ಸೋಂಕು ಹರಡುವಿಕೆ ನಿಯಂತ್ರಿಸುವುದು ಇದರಿಂದ ಸಾಧ್ಯವಾಗಿಲ್ಲ ಎಂಬುದನ್ನು ಅಂಕಿಅಂಶಗಳು ಹೇಳುತ್ತಿವೆ. ಪ್ರತಿದಿನ ದೃಢಪಡುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ‌ಹಾಗಾಗಿ,ಕೋವಿಡ್‌ ನಿಯಂತ್ರಣದ ವಿಚಾರದಲ್ಲಿ ಗಂಭೀರವಾದ ಕ್ರಮಗಳನ್ನು ಕೈಗೊಳ್ಳಲೇಬೇಕಾದ ಸ್ಥಿತಿ ನಿರ್ಮಾಣ ಆಗಿದೆ.

ಕರ್ನಾಟಕದಲ್ಲಿ ಈವರೆಗೆ 38 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಅವುಗಳ ಪೈಕಿ ಸುಮಾರು ಅರ್ಧದಷ್ಟು ಬೆಂಗಳೂರಿನಲ್ಲಿ ದೃಢಪಟ್ಟಿವೆ. ಕಳೆದ ಒಂದು ವಾರದಲ್ಲಿ ಬೆಂಗಳೂರಿನಲ್ಲಿ ಪ್ರತಿದಿನ ಸಾವಿರಕ್ಕೂ ಹೆಚ್ಚು ಮಂದಿಗೆ ರೋಗ ತಗುಲಿದೆ. ರೋಗ ಇನ್ನಷ್ಟು ವ್ಯಾಪಿಸುವುದನ್ನು ತಡೆಯುವುದಕ್ಕಾಗಿ ಬೆಂಗಳೂರು ನಗರ ಜಿಲ್ಲೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ 8 ಗಂಟೆಯಿಂದ ಮುಂದಿನ ಬುಧವಾರ (ಜುಲೈ 22) ಬೆಳಿಗ್ಗೆ 5ರವರೆಗೆ ಲಾಕ್‌ಡೌನ್‌ ವಿಧಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಸೋಂಕು ಹರಡುವಿಕೆಯ ಕೊಂಡಿಯನ್ನು ಕತ್ತರಿಸದೇ ಇದ್ದರೆ ಕೋವಿಡ್‌ ನಿಯಂತ್ರಣ ಅಸಾಧ್ಯ. ಆದರೆ, ಬೆಂಗಳೂರಿನ ಹೆಚ್ಚಿನ ಪ್ರಕರಣಗಳ ಸೋಂಕು ಮೂಲವನ್ನು ಪತ್ತೆ ಮಾಡುವುದು ಸಾಧ್ಯವಾಗುತ್ತಿಲ್ಲ.

ಸೋಂಕಿನ ಮೂಲ ಪತ್ತೆ ಸಾಧ್ಯವಾಗುತ್ತಿಲ್ಲ ಎಂದಾದರೆ ಸೋಂಕು ಸಮುದಾಯ ಮಟ್ಟದಲ್ಲಿ ಹರಡಿರಬಹುದೇ ಎಂಬ ಅನುಮಾನ ಮೂಡುತ್ತದೆ. ಬೆಂಗಳೂರು ನಗರದಲ್ಲಿ ಕೋವಿಡ್‌ ನಿಯಂತ್ರಣದ ಒಟ್ಟಾರೆ ಹೊಣೆ ಬೃಹತ್‌ ಬೆಂಗಳೂರು ಮಹಾನಗರಪಾಲಿಕೆಯದ್ದು (ಬಿಬಿಎಂಪಿ). ಸಿಬ್ಬಂದಿ ಕೊರತೆಯಿಂದಾಗಿ ಸೋಂಕಿನ ಮೂಲ ಪತ್ತೆ ಮಾಡುವುದು ಬಿಬಿಎಂಪಿಗೆ ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ. ಜತೆಗೆ, ಈಗಾಗಲೇ ಸಂಗ್ರಹಿಸಲಾದ ದೊಡ್ಡ ಸಂಖ್ಯೆಯ ಮಾದರಿಗಳ ಪರೀಕ್ಷಾ ಫಲಿತಾಂಶ ಇನ್ನೂ ಬಂದಿಲ್ಲ. ಪರೀಕ್ಷೆ, ಪ್ರತ್ಯೇಕವಾಸ ಮತ್ತು ಸೋಂಕು ಮೂಲ ಪತ್ತೆ ಮಾಡುವುದು ಕೋವಿಡ್‌ ನಿಯಂತ್ರಣದ ಮೂಲ ಪಾಠ. ಈ ವಿಚಾರದಲ್ಲಿ ಬಿಬಿಎಂಪಿ ಮತ್ತು ರಾಜ್ಯ ಸರ್ಕಾರ ಎಡವಿವೆಯೇ ಎಂಬ ಅನುಮಾನವನ್ನು ಈಗಿನ ಸ್ಥಿತಿಯು ಮೂಡಿಸಿದೆ. 

ಸುಮಾರು 500 ಪ್ರಕರಣಗಳಷ್ಟೇ ಇದ್ದಾಗ ಮಾರ್ಚ್‌ 24ರಂದು ದೇಶವ್ಯಾಪಿ ಲಾಕ್‌ಡೌನ್‌ ಹೇರಲಾಗಿತ್ತು. ಅದು ಮೇ 31ರವರೆಗೆ ಜಾರಿಯಲ್ಲಿತ್ತು. ಲಾಕ್‌ಡೌನ್‌ ಅವಧಿಯು ದೇಶದ ಅರ್ಥವ್ಯವಸ್ಥೆಗೆ ಬಹುದೊಡ್ಡ ಹೊಡೆತ ನೀಡಿತ್ತು. ಸೋಂಕು ನಿಯಂತ್ರಣಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುವುದು ಲಾಕ್‌ಡೌನ್‌ನ ಮುಖ್ಯ ಉದ್ದೇಶ. ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಂಖ್ಯೆ ಹೆಚ್ಚಳ, ವೆಂಟಿಲೇಟರ್‌ ಮತ್ತು ಇತರ ಸಾಧನಗಳನ್ನು ಸಜ್ಜು ಮಾಡುವುದು ಲಾಕ್‌ಡೌನ್‌ ಅವಧಿಯಲ್ಲಿ ಆಗಬೇಕಿತ್ತು. ಈಗ, ಹಲವು ರಾಜ್ಯಗಳಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಬೇಕಾದ ಆರೋಗ್ಯ ಮೂಲಸೌಕರ್ಯ ಕೊರತೆ ಕಾಡುತ್ತಿದೆ.

ಬೆಂಗಳೂರಿನ ಆಸ್ಪತ್ರೆಗಳಲ್ಲಿಯೂ ಹಾಸಿಗೆಗಳು ಲಭ್ಯ ಇಲ್ಲ, ಪರೀಕ್ಷೆ ಮತ್ತು ಚಿಕಿತ್ಸೆ ಸಕಾಲದಲ್ಲಿ ನಡೆಯುತ್ತಿಲ್ಲ ಎಂಬ ದೂರುಗಳಿವೆ. ಮಳೆಗಾಲದಲ್ಲಿ ಡೆಂಗಿ ಜ್ವರ ಕೂಡ ಜನರನ್ನು ಕಾಡಲು ತೊಡಗುತ್ತದೆ. ಕೋವಿಡ್‌ ಮತ್ತು ಡೆಂಗಿ ಲಕ್ಷಣಗಳಲ್ಲಿ ದೊಡ್ಡ ವ್ಯತ್ಯಾಸಗಳೇನೂ ಇಲ್ಲ. ಹಾಗಾಗಿ, ಇಂತಹ ಲಕ್ಷಣ ಇರುವವರನ್ನು ಎರಡೂ ಪರೀಕ್ಷೆಗೆ ಒಳಪಡಿಸಬೇಕಾದ ಅನಿವಾರ್ಯ ಉಂಟಾಗುತ್ತದೆ. ಇದು, ಈಗಾಗಲೇ ಏದುಸಿರು ಬಿಡುತ್ತಿರುವ ಆರೋಗ್ಯ ವ್ಯವಸ್ಥೆಯ ಮೇಲೆ ಇನ್ನಷ್ಟು ಒತ್ತಡ ಹೇರಬಹುದು. ಮತ್ತೆ ಲಾಕ್‌ಡೌನ್‌ ಹೇರಿದ್ದಕ್ಕೆ ಕೈಗಾರಿಕೋದ್ಯಮಿಗಳು ಮತ್ತು ಹೋಟೆಲ್‌ ಮಾಲೀಕರು ಆಕ್ಷೇ‌ಪ ವ್ಯಕ್ತಪಡಿಸಿದ್ದಾರೆ. ಒಂದು ಲಾಕ್‌ಡೌನ್‌ ಏಟಿನಿಂದ ಚೇತರಿಸಿಕೊಳ್ಳಲು ಆರಂಭಿಸಿರುವ ಉದ್ಯಮ ವಲಯವು ಇನ್ನೊಂದು  ಹೊಡೆತವನ್ನು ತಾಳಿಕೊಳ್ಳಲು ಸಾಧ್ಯವಾಗದು ಎಂದು ಅವರು ಹೇಳಿದ್ದಾರೆ.

ಈ ಆಕ್ಷೇಪವನ್ನು ಸುಮ್ಮನೆ ತಳ್ಳಿಹಾಕಲಾಗದು. ದೇಶವ್ಯಾಪಿ ಲಾಕ್‌ಡೌನ್‌ ಸಂದರ್ಭದಲ್ಲಿ ಜನ ಅನುಭವಿಸಿದ ಸಂಕಷ್ಟದ ನೆನಪು ಇನ್ನೂ ಮಾಸಿಲ್ಲ. ಬೆಂಗಳೂರಿನ ಲಾಕ್‌ಡೌನ್ ಇಡೀ ರಾಜ್ಯದ ಮೇಲೆ ಪರಿಣಾಮ ಬೀರುತ್ತದೆ. ಮತ್ತೆ ಬದುಕು ಕಟ್ಟಿಕೊಳ್ಳಲು ಆರಂಭಿಸಿದ ಜನರಿಗೆ ಇದರಿಂದ ಕಷ್ಟವಾಗಬಹುದು. ಜನರ ಜೀವ ಮತ್ತು ಜೀವನೋಪಾಯದ ರಕ್ಷಣೆ ತನ್ನ ಹೊಣೆ ಎಂಬ ವಿವೇಚನೆಯಲ್ಲಿ ಸರ್ಕಾರ ಕೆಲಸ ಮಾಡಬೇಕು. ನಾಗರಿಕರು ಜವಾಬ್ದಾರಿ ಅರಿತು ನಡೆದುಕೊಳ್ಳಬೇಕು. ಸದ್ಯದ ತುರ್ತಾಗಿರುವ ಆರೋಗ್ಯ ಮೂಲಸೌಕರ್ಯ ವೃದ್ಧಿ ಸಮರೋಪಾದಿಯಲ್ಲಿ ಆಗಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು