ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ರೈತರ ಅಹವಾಲು ಆಲಿಸಿ ಆತಂಕ ದೂರ ಮಾಡಿ

Last Updated 30 ನವೆಂಬರ್ 2020, 3:52 IST
ಅಕ್ಷರ ಗಾತ್ರ

ಪಂಜಾಬ್‌ ಮತ್ತು ಹರಿಯಾಣದ ರೈತರು ಆಕ್ರೋಶಗೊಂಡಿದ್ದಾರೆ. ಟ್ರ್ಯಾಕ್ಟರ್‌ ಟ್ರೈಲರ್‌ಗಳು, ಲಾರಿಗಳಲ್ಲಿ ಹತ್ತಿ ಸಾವಿರಾರು ರೈತರು ದೆಹಲಿಯತ್ತ ಬಂದಿದ್ದಾರೆ. ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಮೂರು ಕಾಯ್ದೆಗಳ ಬಗ್ಗೆ ಅವರಲ್ಲಿ ಅಸಮಾಧಾನವಿದೆ. ಕೃಷಿ ಉತ್ಪನ್ನ ಮಾರಾಟ ಮತ್ತು ವಾಣಿಜ್ಯ (ಪ್ರೋತ್ಸಾಹ ಮತ್ತು ನೆರವು) ಕಾಯ್ದೆ, ಬೆಲೆ ಖಾತರಿಗೆ ರೈತರ ಒಪ್ಪಿಗೆ (ಸಶಕ್ತೀಕರಣ ಮತ್ತು ರಕ್ಷಣೆ) ಕಾಯ್ದೆ ಮತ್ತು ಕೃಷಿ ಸೇವೆಗಳು ಮತ್ತು ಅಗತ್ಯ ವಸ್ತು ತಿದ್ದುಪಡಿ ಕಾಯ್ದೆಯನ್ನು ರದ್ದು ಮಾಡಬೇಕು ಎಂಬುದು ಅವರ ಮುಖ್ಯ ಬೇಡಿಕೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (ಎಪಿಎಂಸಿ) ಹೊರಗೆ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಅವಕಾಶ, ಅಂತರರಾಜ್ಯ ಮಾರಾಟಕ್ಕೆ ಇದ್ದ ತಡೆ ತೆರವು ಮತ್ತು ಆನ್‌ಲೈನ್‌ ವ್ಯಾಪಾರಕ್ಕೆ ವ್ಯವಸ್ಥೆ ಕಲ್ಪಿಸುವುದರಿಂದ ಎಪಿಎಂಸಿ ವ್ಯವಸ್ಥೆಯೇ ನಗಣ್ಯವಾಗುತ್ತದೆ. ಕೃಷಿ ಉತ್ಪನ್ನಗಳ ವ್ಯಾಪಾರವು ಸಂಪೂರ್ಣವಾಗಿ ವ್ಯಾಪಾರಿಗಳ ನಿಯಂತ್ರಣಕ್ಕೆ ಒಳಪಡುತ್ತದೆ, ಬೆಂಬಲ ಬೆಲೆ ವ್ಯವಸ್ಥೆ ರದ್ದಾಗುತ್ತದೆ, ಸರ್ಕಾರವು ನೇರವಾಗಿ ಖರೀದಿ ಮಾಡುವುದು ನಿಲ್ಲುತ್ತದೆ ಎಂದು ರೈತರು ಭಾವಿಸಿದ್ದಾರೆ. ಹಾಗಾಗಿ, ಈ ಕಾಯ್ದೆಗಳ ವಿರುದ್ಧ ಸೆಪ್ಟೆಂಬರ್‌ನಲ್ಲಿಯೇ ರೈತರು ಪ್ರತಿಭಟನೆ ಆರಂಭಿಸಿದ್ದರು. ಭಾರತೀಯ ಕಿಸಾನ್ ಯೂನಿಯನ್‌ ಸದಸ್ಯರು ಅಂಬಾಲಾ–ದೆಹಲಿ ಹೆದ್ದಾರಿಯನ್ನು ಸುಮಾರು ಮೂರು ತಾಸು ತಡೆದಿದ್ದರು. ಲಾಠಿ ಪ್ರಹಾರ ನಡೆಸಿ ರೈತರನ್ನು ಪೊಲೀಸರು ಚದುರಿಸಿದ್ದರು. ರೈತರ ಮೇಲೆ ಕೊಲೆಯತ್ನದಂತಹ ಪ್ರಕರಣಗಳನ್ನು ದಾಖಲಿಸಿದ್ದರು. ‘ದೆಹಲಿ ಚಲೋ’ಗೆ ರೈತರು ಆಗಲೇ ನಿರ್ಧರಿಸಿದ್ದರು. ದೆಹಲಿಯತ್ತ ಹೊರಟ ರೈತರನ್ನು ಪಂಜಾಬ್‌–ಹರಿಯಾಣ ಗಡಿ ಮತ್ತು ಹರಿಯಾಣ–ದೆಹಲಿ ಗಡಿಯಲ್ಲಿ ತಡೆಯಲು ಪೊಲೀಸರು ಯತ್ನಿಸಿದ್ದಾರೆ. ರಸ್ತೆಗಳಲ್ಲಿ ಟಿಪ್ಪರ್‌ಗಳನ್ನು ನಿಲ್ಲಿಸಿದ್ದಾರೆ, ಕಂದಕ ತೋಡಿದ್ದಾರೆ, ಮುಳ್ಳು ಬೇಲಿ ಹಾಕಿದ್ದಾರೆ. ಲಾಠಿ ಬೀಸಿದ್ದಾರೆ, ಅಶ್ರುವಾಯು ಷೆಲ್‌ ಸಿಡಿಸಿದ್ದಾರೆ, ಜಲಫಿರಂಗಿ ಬಳಸಿದ್ದಾರೆ.

ದೇಶದ ಜನಸಂಖ್ಯೆಯ ಶೇ 50ಕ್ಕಿಂತಲೂ ಹೆಚ್ಚು ಮಂದಿ ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ. ದೇಶದ ಒಟ್ಟು ಆಂತರಿಕ ಉತ್ಪನ್ನದಲ್ಲಿ (ಜಿಡಿಪಿ) ಕೃಷಿಯ ಪಾಲು ಶೇ 18ರಷ್ಟಿದೆ. ದೇಶದ ಜನರಿಗೆ ಆಹಾರ ಭದ್ರತೆ ನೀಡುವ ವರ್ಗಕ್ಕೆ ಸಂಬಂಧಿಸಿದ ಕಾನೂನುಗಳನ್ನು ರೂಪಿಸುವಾಗ, ಆ ವರ್ಗವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಅಪೇಕ್ಷಣೀಯ. ಕೃಷಿ ಕ್ಷೇತ್ರದ ಸುಧಾರಣೆಗಾಗಿ ಜಾರಿಗೆ ತಂದಿರುವ ಕಾಯ್ದೆಗಳು ‘ರೈತರ ಮುಂದೆ ಹೊಸ ಅವಕಾಶಗಳ ಬಾಗಿಲು ತೆರೆದಿವೆ, ರೈತರಿಗೆ ಅದರ ಪ್ರಯೋಜನ ಸಿಗಲು ಆರಂಭವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಕಾಯ್ದೆಗಳನ್ನು ರೈತರು ಮತ್ತು ಸರ್ಕಾರ ನೋಡುತ್ತಿರುವ ದೃಷ್ಟಿ ಭಿನ್ನವಾಗಿದೆ. ಪ್ರಧಾನಿಯ ಮಾತು ನಿಜವೇ ಆಗಿದ್ದರೆ, ಅತ್ಯುತ್ತಮ ವಾಗ್ಮಿಯೂ ಆಗಿರುವ ಅವರು ಈ ಅಂಶಗಳನ್ನು ರೈತರಿಗೆ ಮನವರಿಕೆ ಮಾಡಿಕೊಡಬೇಕು. ಪ್ರತಿಭಟನೆ ಕೈಬಿಡುವಂತೆ ಮನವೊಲಿಸಬೇಕು. ಅದು ಬಿಟ್ಟು, ಸರ್ಕಾರಗಳು ರೈತರ ಜೊತೆ ಒರಟಾಗಿ ವರ್ತಿಸುವುದು ಸರಿಯಲ್ಲ. ಮಧ್ಯರಾತ್ರಿಯ ಥರಗುಟ್ಟುವ ಚಳಿಯಲ್ಲಿ ಜಲಫಿರಂಗಿಯನ್ನು ಪದೇ ಪದೇ ಪ್ರಯೋಗಿಸಿರುವುದು ಅಮಾನವೀಯ. ಪ್ರತಿಭಟನೆ ಯಲ್ಲಿ ಭಾಗಿಯಾಗಿದ್ದ ವಯೋವೃದ್ಧ ರೈತರೊಬ್ಬರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ ಚಿತ್ರ ಮಾಧ್ಯಮದಲ್ಲಿ ಪ್ರಕಟವಾಗಿದೆ. ವೃದ್ಧರು, ಮಹಿಳೆಯರೆನ್ನದೆ ಎಲ್ಲರನ್ನೂ ತದಕುವ ಪೊಲೀಸರ ಮನೋಭಾವವೇ ಪ್ರಶ್ನಾರ್ಹ. ಕೋವಿಡ್‌ ಹಾವಳಿಯ ಈ ಕಾಲದಲ್ಲಿ ಜನರು ಅನಾರೋಗ್ಯಕ್ಕೆ ಈಡಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆಯೂ ಸರ್ಕಾರಕ್ಕೆ ಇದೆ. ಪ್ರತಿಭಟನೆ ನಡೆಸುತ್ತಿರುವ ರೈತರು ಅನಾರೋಗ್ಯಕ್ಕೆ ಈಡಾದರೆ ಅದರ ಹೊಣೆ ಸರ್ಕಾರದ್ದೇ ಆಗಿರುತ್ತದೆ. ತಮ್ಮನ್ನು ಭಯೋತ್ಪಾದಕರಂತೆ ಬಿಂಬಿಸಲಾಗಿದೆ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ. ಬಿಎಸ್‌ಎಫ್‌ ಸಿಬ್ಬಂದಿ ಸೇರಿ ಭಾರಿ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿರುವುದು ಭೀತಿಯ ವಾತಾವರಣಕ್ಕೆ ಕಾರಣವಾಗಿದೆ. ಪರಿಸ್ಥಿತಿ ಈ ಹಂತಕ್ಕೆ ಹೋಗಲು ಸರ್ಕಾರ ಅವಕಾಶ ಕೊಡಬಾರದಿತ್ತು. ಕೇಂದ್ರವು ರೈತರ ಜತೆ ಸಂಘರ್ಷಕ್ಕೆ ಇಳಿಯಬಾರದು. ರೈತರ ಅಹವಾಲು ಕೇಳಿ, ಅವರ ಆತಂಕಗಳನ್ನು ದೂರ ಮಾಡುವ ಕೆಲಸ ತಕ್ಷಣ ಆಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT