ಬೆಂಗಳೂರು ನಗರದಲ್ಲಿ ಪ್ರತಿದಿನ ಸುಮಾರು ಒಂಬತ್ತು ಲಕ್ಷ ಸ್ಯಾನಿಟರಿ ಪ್ಯಾಡ್ಗಳನ್ನು ಬಳಸಿ ಎಸೆಯಲಾಗುತ್ತಿದೆ. ಈ ಪ್ಯಾಡ್ಗಳ ಪೈಕಿ ಹೆಚ್ಚಿನವು ಒಣ ತ್ಯಾಜ್ಯದ ಜೊತೆ ಸೇರುತ್ತವೆ. ಅಪಾಯಕಾರಿ ತ್ಯಾಜ್ಯ ಎಂದು ಪರಿಗಣಿಸಿ, ಪ್ರತ್ಯೇಕವಾಗಿ ಹಾಗೂ ಜಾಗರೂಕತೆಯಿಂದ ವಿಲೇವಾರಿ ಮಾಡಬೇಕಿದ್ದ ಸ್ಯಾನಿಟರಿ ಪ್ಯಾಡ್ಗಳನ್ನು ಬೇಜವಾಬ್ದಾರಿಯಿಂದ ಕಸದ ಬುಟ್ಟಿಗೆ ಎಸೆಯಲಾಗುತ್ತಿದೆ. ಇದರಿಂದಾಗಿ ನಗರದ ಪೌರಕಾರ್ಮಿಕರು ಹಾಗೂ ತ್ಯಾಜ್ಯವನ್ನು ಆಯುವ 22 ಸಾವಿರಕ್ಕೂ ಹೆಚ್ಚು ಮಂದಿ ವಿವಿಧ ಸೋಂಕುಗಳಿಗೆ ತುತ್ತಾಗುವ ಅಪಾಯ ಎದುರಿಸುತ್ತಿದ್ದಾರೆ. ಈ ಹಿಂದೆ ಅಸ್ತಿತ್ವದಲ್ಲಿ ಇದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಸ್ಯಾನಿಟರಿ ಪ್ಯಾಡ್, ಡೈಪರ್ಗಳು ಮತ್ತು ವೈದ್ಯಕೀಯ ತ್ಯಾಜ್ಯವನ್ನು ಪ್ರತ್ಯೇಕಿಸುವಂತೆ ಮೊದಲ ಬಾರಿಗೆ ಮನವಿ ಮಾಡಿದ್ದು 2016ರಲ್ಲಿ. ಆದರೆ, ತ್ಯಾಜ್ಯವನ್ನು ಪ್ರತ್ಯೇಕಿಸುವ ಕೆಲಸವು ಈಗಲೂ ತೃಪ್ತಿಕರ ಮಟ್ಟದಲ್ಲಿ ಆಗುತ್ತಿಲ್ಲ. ನಗರದ ನಿವಾಸಿಗಳು ವೈದ್ಯಕೀಯ ತ್ಯಾಜ್ಯವನ್ನು ಮನೆಯ ಇತರ ತ್ಯಾಜ್ಯಗಳ ಜೊತೆಯೇ ಇರಿಸುತ್ತಿದ್ದಾರೆ ಅಥವಾ ಅಂತಹ ತ್ಯಾಜ್ಯವನ್ನು ಖಾಲಿ ನಿವೇಶನಗಳಲ್ಲಿ ಸುರಿಯುತ್ತಿದ್ದಾರೆ. ನಗರದ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ತ್ಯಾಜ್ಯ ಆಯುವವರು ಈ ಬಗೆಯ ತ್ಯಾಜ್ಯವನ್ನು ಬರಿಗೈಯಲ್ಲಿ ಹೆಕ್ಕುತ್ತಿದ್ದಾರೆ. ಬಹುತೇಕ ಸಂದರ್ಭಗಳಲ್ಲಿ ಅವರಿಗೆ ಕೈಗವಸು, ಮುಖಗವಸು ಇರುವುದಿಲ್ಲ. ಬಳಸಿ ಬಿಸಾಡಿದ ಪ್ಯಾಡ್ಗಳು, ಗಾಜಿನ ಚೂರುಗಳು, ಚುಚ್ಚುಮದ್ದಿನಲ್ಲಿ ಬಳಸಿದ ಸೂಜಿಗಳು ಕೂಡ ಇರುವ ತ್ಯಾಜ್ಯದ ಗುಪ್ಪೆಯಿಂದ ಅವರು ಪುನರ್ಬಳಕೆಗೆ ಬರುವ ತ್ಯಾಜ್ಯವನ್ನು ಆಯಲು ಮುಂದಾಗುತ್ತಾರೆ. ಈ ಕೆಲಸದಲ್ಲಿ ಅವರು ಗಾಯಗಳಿಗೆ, ಸೋಂಕುಗಳಿಗೆ, ವಿವಿಧ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಅವರು ಮಾಡಿದ ಕೆಲಸವು ಯಾರ ಕಣ್ಣಿಗೂ ಬೀಳುವುದಿಲ್ಲ, ಆ ಕೆಲಸಕ್ಕೆ ಬೆಲೆಕಟ್ಟುವ ಕಾರ್ಯವೂ ಆಗುವುದಿಲ್ಲ.

ನಾಗರಿಕರು ಸ್ಯಾನಿಟರಿ ಪ್ಯಾಡ್ಗಳನ್ನು ಹಾಗೂ ಬಳಸಿದ ಸೂಜಿಗಳನ್ನು ತೆಳುವಾದ ಪ್ಲಾಸ್ಟಿಕ್ ಪೊಟ್ಟಣಗಳಲ್ಲಿ ಅಥವಾ ಕಾಗದದ ಪೊಟ್ಟಣಗಳಲ್ಲಿ ಸುತ್ತಿ ಎಸೆಯುತ್ತಿದ್ದರೆ, ಅವರು ನಗರವನ್ನು ಸ್ವಚ್ಛವಾಗಿ ಇರಿಸಲು ಯತ್ನಿಸುತ್ತಿರುವ ಪೌರ ಕಾರ್ಮಿಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದೇ ಅರ್ಥ. ಪ್ರತ್ಯೇಕಿಸದ ವೈದ್ಯಕೀಯ ತ್ಯಾಜ್ಯವು ರಕ್ತದ ಮೂಲಕ ಹರಡುವ ಕಾಯಿಲೆಗಳನ್ನು ಒಬ್ಬರಿಂದ ಇನ್ನೊಬ್ಬರಿಗೆ ಅಂಟಿಸುವ ಅಪಾಯ ಇರುತ್ತದೆ. ಅದರ ಜೊತೆಯಲ್ಲೇ ಅಂತಹ ತ್ಯಾಜ್ಯವು, ಪುನರ್ಬಳಕೆ ಮಾಡಬಹುದಾದ ಇತರ ತ್ಯಾಜ್ಯಗಳನ್ನೂ ಕಲುಷಿತಗೊಳಿಸುತ್ತದೆ. ‘ಮಾರ್ಕ್ಇಟ್ರೆಡ್’ ಹೆಸರಿನಲ್ಲಿ ನಡೆದಿರುವ ಅಭಿಯಾನವು, ವೈದ್ಯಕೀಯ ತ್ಯಾಜ್ಯ ಹಾಗೂ ಸ್ಯಾನಿಟರಿ ಪ್ಯಾಡ್ಗಳನ್ನು ಕಾಗದದ ಪೊಟ್ಟಣದಲ್ಲಿ ಇರಿಸಿ, ಅದರ ಮೇಲೆ ರೆಡ್ಕ್ರಾಸ್ನ ಗುರುತು ಮಾಡಿ, ನಂತರ ಅದನ್ನು ಪೌರಕಾರ್ಮಿಕರಿಗೆ ಪ್ರತ್ಯೇಕವಾಗಿ ನೀಡಲು ಜನರನ್ನು ಉತ್ತೇಜಿಸುತ್ತಿದೆ. ಈ ಅಭಿಯಾನವು ಜವಾಬ್ದಾರಿಯುತ ನಾಗರಿಕರು ಏನು ಸಾಧಿಸಬಹುದು ಎಂಬುದನ್ನು ತೋರಿಸಿದೆ. ಬೆಂಗಳೂರಿನ ಜೆ.ಪಿ. ನಗರದಲ್ಲಿ ಇಂತಹ ತ್ಯಾಜ್ಯದ ಪೈಕಿ ಸರಿಸುಮಾರು ಶೇ 60ರಷ್ಟನ್ನು ಈಗ ಸರಿಯಾದ ಬಗೆಯಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಈ ಬಗೆಯ ಜಾಗೃತಿಯು ರಾಜ್ಯದ ಇತರ ಕಡೆಗಳಲ್ಲಿಯೂ ಮೂಡಬೇಕು.

ದುರದೃಷ್ಟದ ಸಂಗತಿಯೆಂದರೆ, ವೈದ್ಯಕೀಯ ತ್ಯಾಜ್ಯವನ್ನು ವಿಲೇವಾರಿ ಮಾಡುವುದಕ್ಕೆ ಸಂಬಂಧಿಸಿದಂತೆ ನಗರದಾದ್ಯಂತ ಅನ್ವಯವಾಗುವ ಶಿಷ್ಟಾಚಾರವೊಂದನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಇನ್ನಷ್ಟೇ ರೂಪಿಸಬೇಕಿದೆ. ಅಪಾಯಕಾರಿ ಆಗಬಲ್ಲ ತ್ಯಾಜ್ಯಗಳನ್ನು ವಿಲೇವಾರಿ ಮಾಡಲು ಪ್ರತ್ಯೇಕವಾದ ಕಸದಬುಟ್ಟಿಗಳು ಇಲ್ಲ. ಕೆಲವು ಕುಟುಂಬಗಳು ತ್ಯಾಜ್ಯವನ್ನು ವೈಜ್ಞಾನಿಕವಾಗಿ ಪ್ರತ್ಯೇಕಿಸಿದರೂ ಅದನ್ನು ಸಾಗಾಟ ಮಾಡುವಾಗ ಮತ್ತೆ ಒಂದರಲ್ಲಿ ಇನ್ನೊಂದನ್ನು ಸೇರಿಸುವ ಪ್ರವೃತ್ತಿ ಇದೆ. ತ್ಯಾಜ್ಯದ ವಿಲೇವಾರಿ, ಸಾಗಾಟಕ್ಕೆ ಸೂಕ್ತವಾದ ವ್ಯವಸ್ಥೆ ಇಲ್ಲದಿದ್ದರೆ ಪೌರಕಾರ್ಮಿಕರಿಗೇ ಅಪಾಯ ಎದುರಾಗುತ್ತದೆ, ನಾಗರಿಕರ ಪ್ರಯತ್ನಕ್ಕೆ ಬೆಲೆ ಇಲ್ಲದಂತಾಗುತ್ತದೆ. ವೈದ್ಯಕೀಯ ತ್ಯಾಜ್ಯ ಹಾಗೂ ಸ್ಯಾನಿಟರಿ ಪ್ಯಾಡ್ಗಳನ್ನು ಸೂಕ್ತವಾಗಿ ವಿಲೇವಾರಿ ಮಾಡುವುದು ನಗರ ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ಚರ್ಚೆಯ ಕೇಂದ್ರಬಿಂದುವಿನಂತಿದೆ. ವೈದ್ಯಕೀಯ ತ್ಯಾಜ್ಯವನ್ನು ವಿಲೇವಾರಿ ಮಾಡಲು ಆಡಳಿತ ವ್ಯವಸ್ಥೆಯು ಪ್ರತ್ಯೇಕವಾದ ಕಸದ ಬುಟ್ಟಿಯನ್ನು ಇರಿಸಬೇಕು. ಅವುಗಳನ್ನು ಸರಿಯಾಗಿ ವಿಲೇವಾರಿ ಮಾಡುವ ಬಗ್ಗೆ ಪೌರ ಕಾರ್ಮಿಕರಿಗೆ ಪಾಠ ಹೇಳಬೇಕು, ಅವರಿಗೆ ಅಗತ್ಯ ಉಪಕರಣಗಳನ್ನು ಒದಗಿಸಬೇಕು. ಆದರೆ, ನಾಗರಿಕರ ಉಪೇಕ್ಷೆಯು ದೊಡ್ಡ ತಲೆನೋವಾಗಿ ಮುಂದುವರಿದಿದೆ. ಜವಾಬ್ದಾರಿಯು ಮನೆಗಳಿಂದಲೇ ಆರಂಭವಾಗುತ್ತದೆ ಎಂಬುದನ್ನು ನಾಗರಿಕರು ಅರ್ಥ ಮಾಡಿಕೊಳ್ಳಬೇಕು. ತ್ಯಾಜ್ಯದ ಮೇಲೆ ಕೆಂಪು ಬಣ್ಣದಿಂದ ಗುರುತುಹಾಕುವುದು ಸಾಂಕೇತಿಕ ಕೆಲಸ ಅಲ್ಲ. ಅದು ನಗರವನ್ನು ಸ್ವಚ್ಛವಾಗಿ ಇರಿಸುವ ಕಾರ್ಮಿಕರಿಗೆ ಗೌರವ ತೋರಬೇಕಾದ ನೈತಿಕ ಅಗತ್ಯವೂ ಹೌದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.