ಭಾನುವಾರ, ಜುಲೈ 25, 2021
21 °C

ಸಂಪಾದಕೀಯ | ಮಾನಸಿಕ ಆರೋಗ್ಯದ ನಿರ್ಲಕ್ಷ್ಯಇದು ಎಚ್ಚರಗೊಳ್ಳುವ ಸಮಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವು ಯುವ ತಲೆಮಾರಿನ ಮಾನಸಿಕ ಒತ್ತಡಗಳ ಕುರಿತ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ. ಬದುಕಿನಲ್ಲಿನ ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ ಎಂದು ಪ್ರತಿಪಾದಿಸುವ ಪಾತ್ರದಲ್ಲಿ ನಟಿಸಿದ್ದ ನಟ, ಸ್ವತಃ ಆತ್ಮಹತ್ಯೆ ಮಾಡಿಕೊಂಡಿರುವುದು ಮಾನಸಿಕ ಸಮಸ್ಯೆಗಳ ಸಂಕೀರ್ಣತೆಯನ್ನು ಸೂಚಿಸುವಂತಿದೆ. ವರ್ಣರಂಜಿತ ವ್ಯಕ್ತಿತ್ವದ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ ಕಲಾವಿದನ ಅಂತರಂಗದೊಳಗೆ ಯಾವ ಪ್ರಮಾಣದ ತುಮುಲ ಕಾಡುತ್ತಿದ್ದಿರಬಹುದು ಎನ್ನುವುದನ್ನು ಊಹಿಸಿಕೊಳ್ಳುವುದೂ ಕಷ್ಟ. ಆಕರ್ಷಕ ರೂಪು, ವೃತ್ತಿಯಲ್ಲಿ ಯಶಸ್ಸು, ಸಾಮಾಜಿಕ ಮನ್ನಣೆ ಮತ್ತು ಜನಪ್ರಿಯತೆ ಹೊಂದಿದ್ದ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ ಎನ್ನುವ ಪ್ರಶ್ನೆಗೆ ಉತ್ತರ ಸುಲಭಕ್ಕೆ ಸಿಗುವಂತಹದ್ದಲ್ಲ.

ಖಿನ್ನತೆಗೂ ಕಲಾವಿದರಿಗೂ ಇರುವ ಸಮೀಪದ ನಂಟಿನ ರೂಪದಲ್ಲಿ ಸುಶಾಂತ್ ಅವರ ಸಾವನ್ನು ನೋಡಬಹುದು. ಬದುಕಿನ ಕುರಿತ ಅತಿಯಾದ ನಿರೀಕ್ಷೆಗಳು ಹಾಗೂ ಭ್ರಮೆಗಳು ನಿರಾಶೆಗೆ ಕಾರಣ ವಾಗುತ್ತವೆ. ಸೆಲೆಬ್ರಿಟಿಗಳಂತೂ ಸೋಲುಗಳಿಂದ ಅಥವಾ ಸೋಲಿನ ಭಯದಿಂದ ಸದಾ ಆತಂಕದಲ್ಲಿರುತ್ತಾರೆ. ತಾವೇ ಕಟ್ಟಿಕೊಂಡ ಕೋಟೆಗಳಿಂದ ಹೊರಬರಲಾಗದೆ ಒಂಟಿತನ ಅನುಭವಿಸುತ್ತ, ಕೊನೆಗೆ ಜೀವನದ ದಾರಿಗಳನ್ನೇ ಮುಚ್ಚಿಕೊಳ್ಳತೊಡಗುತ್ತಾರೆ. ಕೆಲವರು ತಮ್ಮ ಒತ್ತಡಗಳನ್ನು ನಿವಾರಿಸಿಕೊಳ್ಳಲು ಮದ್ಯಪಾನ ಮತ್ತು ಮಾದಕ ವಸ್ತುಗಳ ಮೊರೆಹೋಗುತ್ತಾರೆ. ಈ ವ್ಯಸನಗಳಿಂದ ಮನಸ್ಸಿನ ಜೊತೆಗೆ ದೈಹಿಕ ಸ್ವಾಸ್ಥ್ಯವೂ ಹಾಳಾಗುತ್ತದೆಯೇ ವಿನಾ ಸಮಸ್ಯೆಯಿಂದ ಹೊರಬರಲು ಸಾಧ್ಯವಾಗುವುದಿಲ್ಲ.

ಮರ್ಲಿನ್ ಮನ್ರೊ, ಸಿಲ್ಕ್ ಸ್ಮಿತಾ, ರಾಬಿನ್ ವಿಲಿಯಮ್ಸ್, ನಫೀಸಾ ಜೋಸೆಫ್ ಮುಂತಾದ ಖ್ಯಾತನಾಮರೆಲ್ಲ ಮಾನಸಿಕ ಸಂಘರ್ಷದಿಂದ ಹೊರಬರಲಾರದೆಯೇ ಸಾವಿಗೆ ಶರಣಾದುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಈ ನತದೃಷ್ಟರ ಸಾಲಿಗೀಗ ಸುಶಾಂತ್ ಸೇರಿದ್ದಾರೆ.

ಸುಶಾಂತ್ ಅವರ ಸಾವನ್ನು ಸೆಲೆಬ್ರಿಟಿಯೊಬ್ಬನ ದುರಂತದ ರೂಪದಲ್ಲಿ ಕಾಣುವುದರ ಜೊತೆಗೆ, ಯುವತಲೆಮಾರಿನ ಪ್ರತಿನಿಧಿಯ ರೂಪದಲ್ಲೂ ನೋಡಬೇಕಿದೆ. ಮಾನಸಿಕ ಒತ್ತಡ ಹಾಗೂ ಖಿನ್ನತೆಗೆ ಉಳ್ಳವರು, ಪ್ರಸಿದ್ಧರು ಮಾತ್ರವಲ್ಲದೆ, ಸಮಾಜದ ಯಾವ ವರ್ಗದವರೂ ಒಳಗಾಗಬಹುದು. ವರ್ಣ-ವರ್ಗ ಭೇದವಿಲ್ಲದ ಮಾನಸಿಕ ಸಮಸ್ಯೆಗಳು ಹಿರಿಯ ನಾಗರಿಕರಿಂದ ಹಿಡಿದು ಮಕ್ಕಳವರೆಗೆ ಯಾರನ್ನು ಬೇಕಾದರೂ ಕಾಡಿ ಕಂಗೆಡಿಸಬಲ್ಲವು. ವಿಶ್ವದಾದ್ಯಂತ ವರ್ಷಕ್ಕೆ 8 ಲಕ್ಷ ಜನ ಮಾನಸಿಕ ಸಮಸ್ಯೆಗಳಿಗೆ
ಬಲಿಯಾಗುತ್ತಿದ್ದಾರೆ ಎನ್ನುವ ವಿಶ್ವ ಆರೋಗ್ಯ ಸಂಸ್ಥೆಯ ಅಂಕಿಅಂಶಗಳು ಸಮಸ್ಯೆಯ ಸಂಕೀರ್ಣತೆ ಯನ್ನು ಸೂಚಿಸುವಂತಿವೆ.

15ರಿಂದ19 ವರ್ಷದೊಳಗಿನವರ ಸಾವಿನ ಪ್ರಮುಖ ಕಾರಣಗಳಲ್ಲಿ ಆತ್ಮಹತ್ಯೆಯೂ ಸೇರಿರುವುದನ್ನು ಗಮನಿಸಬೇಕು. ಅಂತರ್ಜಾಲ ನಮ್ಮ ಖಾಸಗಿತನವನ್ನು ಕಸಿದುಕೊಂಡಿದ್ದು, ಸಾಮಾಜಿಕ ಜಾಲತಾಣಗಳ ರೂಪದ ಭಾವಲೋಕವೊಂದು ರೂಪುಗೊಂಡಿದ್ದರೂ ಮನುಷ್ಯ ಆಳದಲ್ಲಿ ಒಂಟಿ ಯಾಗಿಯೇ ಇರುತ್ತಾನೆ, ಅಂತರಂಗದ ಸಾಂಗತ್ಯಕ್ಕೆ ಹಾತೊರೆಯುತ್ತಿರುತ್ತಾನೆ ಎನ್ನುವುದಕ್ಕೆ ಮತ್ತೆ ಮತ್ತೆ ಉದಾಹರಣೆಗಳು ಸಿಗುತ್ತಲೇ ಇವೆ. ಭಾರತದಲ್ಲಂತೂ ಮಾನಸಿಕ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಚರ್ಚಿಸಲು ಅನೇಕರು ಹಿಂಜರಿಯುತ್ತಾರೆ. ಆಂತರಿಕ ಕ್ಷೋಭೆಯನ್ನು ಹುಚ್ಚೆಂದು ತಪ್ಪಾಗಿ ಅರ್ಥೈಸುವವರೂ ಇದ್ದಾರೆ. ಈ ಪೂರ್ವಗ್ರಹದಿಂದಲೇ ತಜ್ಞರ ನೆರವು ಪಡೆಯಲು ಹಿಂಜರಿದು ತಮ್ಮ ಬದುಕನ್ನು ದುರಂತಗೊಳಿಸಿಕೊಳ್ಳುತ್ತಾರೆ.

ಸೂಕ್ತ ವೈದ್ಯಕೀಯ ಸಲಹೆ-ಚಿಕಿತ್ಸೆಯಿಂದ ಮಾನಸಿಕ ತಲ್ಲಣಗಳಿಗೆ ಉತ್ತರ ಕಂಡುಕೊಳ್ಳಲು ಸಾಧ್ಯವಿದೆ. ದೇಹಕ್ಕೆ ಅನಾರೋಗ್ಯ
ವುಂಟಾದಾಗ ಚಿಕಿತ್ಸೆ ಪಡೆದಷ್ಟೇ ಸಹಜವಾಗಿ ಮನಸ್ಸಿನ ಅನಾರೋಗ್ಯಕ್ಕೂ ಚಿಕಿತ್ಸೆ ಪಡೆಯುವ ದಿಸೆಯಲ್ಲಿ ಸಮಾಜದ ದೃಷ್ಟಿಕೋನ ಬದಲಾಗಬೇಕಾಗಿದೆ. ಕೊರೊನಾ ಭೀತಿಯ ಜೊತೆಗೆ ಉಂಟಾಗಿರುವ ಸಾಮಾಜಿಕ-ಆರ್ಥಿಕ ಬಿಕ್ಕಟ್ಟುಗಳು ಅಪಾಯಕಾರಿಯಾಗಿದ್ದು, ಇವು ಮಾನಸಿಕ ಖಿನ್ನತೆಗೆ ಪೂರಕವಾದ ವಾತಾವರಣ ಸೃಷ್ಟಿಸುತ್ತಿವೆ. ಕೆಲಸದ ಒತ್ತಡ, ಉದ್ಯೋಗದ ಅಸುರಕ್ಷತೆ ಹಾಗೂ ಸೋಂಕಿನ ಭೀತಿ ಮಾನಸಿಕ ಸ್ವಾಸ್ಥ್ಯವನ್ನು ಸುಲಭವಾಗಿ ಹಾಳು ಮಾಡಬಲ್ಲವು.

ಇಂಥ ಸಂಕ್ರಮಣದ ಸಂದರ್ಭದಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ದೊಡ್ಡ ಪ್ರಮಾಣದಲ್ಲಿ ನಡೆಯಬೇಕಾಗಿದೆ. ಬದುಕಿನ ಕುರಿತ ಭ್ರಮೆಗಳನ್ನು ನಿವಾರಿಸುತ್ತ, ವಸ್ತುಸ್ಥಿತಿಯನ್ನು ಒಪ್ಪಿಕೊಂಡೇ ದೈನಿಕವನ್ನು ಸಹನೀಯವಾಗಿಸಿಕೊಳ್ಳುವ ‘ಜೀವನ ಕಲೆ’ ಈ ಹೊತ್ತಿನ ಜರೂರು ಅಗತ್ಯ. ಈ ಕಲೆಯನ್ನು ವ್ಯಕ್ತಿ ತನ್ನ ಜೀವನದಲ್ಲಿ ಅನುಷ್ಠಾನಗೊಳಿಸಿಕೊಳ್ಳುವ ದಿಸೆಯಲ್ಲಿ ಮಾನಸಿಕ ತಜ್ಞರ ನೆರವು ದೊರೆಯುವಂತಾಗುವುದರ ಜೊತೆಗೆ, ಸಮಾಜ ಹಾಗೂ ಕುಟುಂಬಗಳು ಸಾಂತ್ವನ ಕೇಂದ್ರಗಳಾಗಿ ರೂಪುಗೊಳ್ಳಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು