ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ಸೃಷ್ಟಿಯ ಕನಸು ನನಸಾಗಿಸದ ‘ಮುದ್ರಾ’

Last Updated 6 ಫೆಬ್ರುವರಿ 2019, 20:15 IST
ಅಕ್ಷರ ಗಾತ್ರ

ಮಹತ್ವಾಕಾಂಕ್ಷೆಯ ಪ್ರಧಾನಮಂತ್ರಿ ಮುದ್ರಾ ಯೋಜನೆಯು ಭಾರಿ ಪ್ರಮಾಣದಲ್ಲಿ ಉದ್ಯೋಗಗಳನ್ನು ಸೃಷ್ಟಿಸಿದೆ ಎಂದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹೇಳಿಕೊಳ್ಳುತ್ತಿದೆ. ಆದರೆ, ವಸ್ತುಸ್ಥಿತಿ ಬೇರೆಯೇ ಇದೆ. ಪ್ರತಿವರ್ಷ 1 ಕೋಟಿಯಷ್ಟು ಉದ್ಯೋಗ ಸೃಷ್ಟಿಸುವ ತಮ್ಮ ಭರವಸೆ ಕಾರ್ಯಗತಗೊಳಿಸಲು ಮೋದಿ ಅವರು, 2015ರ ಏಪ್ರಿಲ್‌ನಲ್ಲಿ ‘ಪ್ರಧಾನಮಂತ್ರಿ ಮುದ್ರಾ ಯೋಜನೆ’ಗೆ (ಪಿಎಂಎಂವೈ) ಅಬ್ಬರದ ಚಾಲನೆ ನೀಡಿದ್ದರು. ಯೋಜನೆಯು ನಿರುದ್ಯೋಗಿಗಳು ಮತ್ತು ಬಡವರ ಬದುಕನ್ನು ಹಸನು ಮಾಡಲಿದೆ ಎಂಬ ಕನಸು ಬಿತ್ತಿದ್ದರು. ಆದರೆ ಅದು ನನಸಾದಂತಿಲ್ಲ. ‘ನಾಲ್ಕು ವರ್ಷಗಳಲ್ಲಿ 15.61 ಕೋಟಿ ಫಲಾನುಭವಿಗಳಿಗೆ ‘ಮುದ್ರಾ’ ಸಾಲಗಳನ್ನು ಮಂಜೂರು ಮಾಡಲಾಗಿದ್ದು, ಕೋಟ್ಯಂತರ ಉದ್ಯೋಗಗಳು ಸೃಷ್ಟಿಯಾಗಿವೆ. ಉದ್ಯೋಗಕ್ಕೆ ಅಲೆಯುವವರು ಈ ಯೋಜನೆಯ ನೆರವಿನಿಂದ ಉದ್ದಿಮೆದಾರರಾಗಿ ಬದಲಾಗಿದ್ದಾರೆ’ ಎಂದು ಪ್ರಚಾರ ಮಾಡಲಾಗುತ್ತಿದೆ. ಆದರೆ, ಈ ಯೋಜನೆಯ ನೆರವಿನಿಂದ ಸೃಷ್ಟಿಯಾಗಿರುವ ಹೊಸ ಉದ್ಯೋಗಗಳ ಬಗ್ಗೆ ಬ್ಯಾಂಕ್‌ ಮತ್ತು ಸರ್ಕಾರದ ಬಳಿ ನಂಬಲರ್ಹವಾದ ಖಚಿತ ದಾಖಲೆಗಳೇ ಇಲ್ಲ! ಎಲ್ಲವೂ ಬರೀ ಬಾಯುಪಚಾರ. 2018–19ನೇ ಹಣಕಾಸು ವರ್ಷದಲ್ಲಿ ಸಾಲ ನೀಡಿಕೆಯಲ್ಲಿ ಇದುವರೆಗೆ ಅರ್ಧದಷ್ಟು ಗುರಿ ಮಾತ್ರ ತಲುಪಲಾಗಿದೆ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅಂಕಿ ಅಂಶಗಳೇ ಈ ವಸ್ತುಸ್ಥಿತಿ ಬಿಂಬಿಸಿವೆ. ಯೋಜನೆಯು ಕುಂಟುತ್ತಾ ಸಾಗಿರುವುದನ್ನು ಇದು ದೃಢಪಡಿಸುತ್ತದೆ. ಉದ್ಯೋಗ ಸೃಷ್ಟಿ ಉದ್ದೇಶಕ್ಕೆ ಸುಲಭವಾಗಿ ಹಣಕಾಸು ನೆರವು ನೀಡುವ ಯೋಜನೆ ನಿರೀಕ್ಷಿತ ಯಶಸ್ಸು ಕಂಡಿಲ್ಲದಿರುವುದು ಇದರಿಂದ ವೇದ್ಯವಾಗುತ್ತದೆ.

ನಾಲ್ಕು ವರ್ಷಗಳಲ್ಲಿ ₹ 7.27 ಲಕ್ಷ ಕೋಟಿ ಮೊತ್ತದ ‘ಮುದ್ರಾ’ ಸಾಲ ವಿತರಿಸಲಾಗಿದೆ. ಈ ಮೊತ್ತದಲ್ಲಿನ ಶೇ 90ರಷ್ಟು ಸಾಲದ ಸರಾಸರಿ ಮೊತ್ತ ಕೇವಲ ₹ 23 ಸಾವಿರ! ಈ ಅಲ್ಪ ಮೊತ್ತದಿಂದ ಉದ್ಯೋಗಗಳು ಸೃಷ್ಟಿಯಾಗಲು ಸಾಧ್ಯವೇ? ಬಹುತೇಕ ಸಾಲಗಳನ್ನು ದೈನಂದಿನ ವಹಿವಾಟಿಗಾಗಿ ಅಥವಾ ವೈಯಕ್ತಿಕ ಬಳಕೆಗೆ ಉಪಯೋಗಿಸಿಕೊಂಡಿರುವ ಸಾಧ್ಯತೆಯೇ ಹೆಚ್ಚು. ಈ ಬಗ್ಗೆಯೂ ಸರ್ಕಾರದ ಬಳಿ ಸಮಗ್ರವಾದ ಮಾಹಿತಿ ಇಲ್ಲ. ₹ 2 ಲಕ್ಷದಷ್ಟು ಸಾಲ ಮಂಜೂರು ಮಾಡಿರುವ ಪ್ರಮಾಣ ಶೇ 7ರಷ್ಟು. ₹ 5 ಲಕ್ಷದಿಂದ ₹ 10 ಲಕ್ಷದವರೆಗಿನ ಸಾಲ ನೀಡಿರುವ ಪ್ರಮಾಣ ಶೇ 3ರಷ್ಟು ಮಾತ್ರ. ಈ ದೊಡ್ಡ ಮೊತ್ತದ ಸಾಲಗಳಿಂದ ಮಾತ್ರ ಕೆಲಮಟ್ಟಿಗೆ ಉದ್ಯೋಗಗಳು ಸೃಷ್ಟಿಯಾಗಿರಬಹುದು. 2017–18ರಲ್ಲಿ ಬ್ಯಾಂಕ್‌ಗಳಿಂದ ಪಡೆದಿರುವ ಶೇ 96ರಷ್ಟು ಸಾಲಗಳು ಉತ್ಪಾದನೆಯೇತರ ಉದ್ದೇಶಕ್ಕೆ ಬಳಕೆಯಾಗಿರುವುದನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಅಂಕಿಅಂಶಗಳು ಖಚಿತಪಡಿಸಿವೆ. ಕಿರು ಕೈಗಾರಿಕಾ ಘಟಕಗಳ ಅಭಿವೃದ್ಧಿ ಮತ್ತು ಮರು ಹಣಕಾಸು ಸಂಸ್ಥೆಯ (ಮುದ್ರಾ) ನೆರವಿನ ಈ ಯೋಜನೆ ಭಾರಿ ಬದಲಾವಣೆ ತರಲಿದೆ ಎಂದೇ ನಿರೀಕ್ಷಿಸಲಾಗಿತ್ತು. ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಗರಿಷ್ಠ ₹ 10 ಲಕ್ಷದವರೆಗಿನ ಸಾಲವನ್ನು ಯಾವುದೇ ಭದ್ರತೆ ಇಲ್ಲದೆ ಒದಗಿಸಲಾಗುತ್ತಿದೆ. ಆದರೆ ಇದು ಸಮರ್ಪಕವಾಗಿ ಬಳಕೆ ಆಗಿರುವುದರ ಬಗ್ಗೆ ಪುರಾವೆಗಳು ಇಲ್ಲ. ಸ್ವಯಂ ಉದ್ಯೋಗ ಆರಂಭಿಸಲು ಅಗತ್ಯವಾದ ಸಾಂಸ್ಥಿಕ ಹಣಕಾಸಿನ ನೆರವನ್ನು ಯಾವುದೇ ಕಿರಿಕಿರಿ ಇಲ್ಲದೆ, ತ್ವರಿತವಾಗಿ ಮತ್ತು ಸುಲಭವಾಗಿ ಒದಗಿಸುವುದು ‘ಮುದ್ರಾ’ದ ಆಶಯ. ಈ ಆಶಯ ಒಳ್ಳೆಯದೇ. ಆದರೆ, ಸಾಲ ವಸೂಲಾತಿಗೆ ಗಮನಹರಿಸದೇ ಇದ್ದರೆ ಉದ್ಯಮಶೀಲತೆಯ ಉದ್ದೇಶವೇ ಮುರುಟಿ ಹೋಗುತ್ತದೆ. ಸಾಲದ ಸದ್ಬಳಕೆ ಬಗ್ಗೆ ದಕ್ಷ ಸ್ವರೂಪದ ನಿಗಾ ವ್ಯವಸ್ಥೆ ರೂಪಿಸಬೇಕು. ಸದ್ಯದ ವೈಫಲ್ಯದಿಂದ ಪಾಠ ಕಲಿಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT