ಗುರುವಾರ , ಸೆಪ್ಟೆಂಬರ್ 23, 2021
25 °C

ಒಬಿಸಿ ಪಟ್ಟಿ: ರಾಜ್ಯಗಳಿಗೆ ಅಧಿಕಾರ ಒಕ್ಕೂಟ ವ್ಯವಸ್ಥೆಯ ತತ್ವಕ್ಕೆ ಮಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಇತರೆ ಹಿಂದುಳಿದ ವರ್ಗಗಳನ್ನು (ಒಬಿಸಿ) ಗುರುತಿಸುವ ಮತ್ತು ರಾಜ್ಯಕ್ಕೆ ಸೀಮಿತವಾಗಿ ಒಬಿಸಿ ಪ್ರತ್ಯೇಕ ಪಟ್ಟಿ ರೂಪಿಸುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ಮತ್ತೆ ದೊರಕಿಸಿಕೊಡುವ ಉದ್ದೇಶದ ಸಂವಿಧಾನದ 127ನೇ ತಿದ್ದುಪಡಿ ಮಸೂದೆಯನ್ನು ಲೋಕಸಭೆ ಅನುಮೋದಿಸಿದೆ. ಈ ಮಸೂದೆಯನ್ನು ರಾಜ್ಯಸಭೆಯೂ ಅಂಗೀಕರಿಸಿ ಆ ಬಳಿಕ ರಾಷ್ಟ್ರಪತಿಗಳ ಅಂಕಿತ ಬಿದ್ದರೆ, ಮೂರು ವರ್ಷಗಳ ಹಿಂದೆ ರಾಜ್ಯ ಸರ್ಕಾರಗಳಿಂದ ಕಸಿದುಕೊಂಡಿದ್ದ ಸಾಂವಿಧಾನಿಕ ಹಕ್ಕೊಂದನ್ನು ಕೇಂದ್ರವು ರಾಜ್ಯಗಳಿಗೆ ಮರಳಿಸಿದಂತಾಗುತ್ತದೆ. 2018ರಲ್ಲಿ ಕೇಂದ್ರ ಸರ್ಕಾರವು ಸಂವಿಧಾನಕ್ಕೆ 102ನೇ ತಿದ್ದುಪಡಿಯನ್ನು ತಂದು ಕೆಲವು ಮಾರ್ಪಾಡುಗಳನ್ನು ಮಾಡಿತ್ತು. ಅದರ ಪರಿಣಾಮವಾಗಿ ಇತರೆ ಹಿಂದುಳಿದ ವರ್ಗಗಳ ಪಟ್ಟಿಯನ್ನು ಸಿದ್ಧಪಡಿಸುವ ಅಧಿಕಾರವು ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ ದಕ್ಕಿತು. ಈ ಆಯೋಗವು ಸಿದ್ಧಪಡಿಸಿದ ಇತರೆ ಹಿಂದುಳಿದ ವರ್ಗಗಳ ಪಟ್ಟಿಯು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅನ್ವಯವಾಗುತ್ತಿತ್ತು. ಈಗ ಲೋಕಸಭೆ ಅನುಮೋದಿಸಿರುವ 127ನೇ ತಿದ್ದುಪಡಿಯು ಒಕ್ಕೂಟ ವ್ಯವಸ್ಥೆಯ ತತ್ವಗಳಿಗೆ ಸಂದ ಜಯವೂ ಹೌದು. ಕೇಂದ್ರ ಸರ್ಕಾರದ ಆಗಿನ ಕ್ರಮವನ್ನು ವಿರೋಧ ಪಕ್ಷಗಳು ಮಾತ್ರವಲ್ಲ, ಹಲವು ರಾಜ್ಯ ಸರ್ಕಾರಗಳೂ ವಿರೋಧಿಸಿದ್ದವು. ವಿರೋಧ ಪಕ್ಷಗಳು ಸಂಸತ್ತಿನಲ್ಲೂ ಪ್ರತಿಭಟನೆ ನಡೆಸಿದ್ದವು. ಮಹಾರಾಷ್ಟ್ರ ಸರ್ಕಾರವು ಮರಾಠಾ ಸಮುದಾಯಕ್ಕೆ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಕಲ್ಪಿಸಿದ್ದ ಮೀಸಲಾತಿ ಸೌಲಭ್ಯವನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದಾಗ, ಸಂವಿಧಾನದ 102ನೇ ತಿದ್ದುಪಡಿಯನ್ನೇ ಆಧಾರವಾಗಿ ಪರಿಗಣಿಸಿತ್ತು. ಈ ತಿದ್ದುಪಡಿಯು ಇತರೆ ಹಿಂದುಳಿದ ವರ್ಗಗಳನ್ನು ಗುರುತಿಸುವ ವಿಷಯದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮಧ್ಯೆ ಹಲವು ಗೊಂದಲಗಳನ್ನೂ ಸೃಷ್ಟಿಸಿತ್ತು. ಈ ಗೊಂದಲಗಳನ್ನು ನಿವಾರಿಸುವ ದಿಸೆಯಲ್ಲಿ ಸಂವಿಧಾನದ 127ನೇ ತಿದ್ದುಪಡಿಯು ಮಹತ್ವದ್ದಾಗಿದ್ದು, ದೂರಗಾಮಿ ಪರಿಣಾಮವನ್ನೂ
ಬೀರಲಿದೆ.

ಇತರೆ ಹಿಂದುಳಿದ ವರ್ಗಗಳ ಪಟ್ಟಿ ವಿಚಾರದಲ್ಲಿ ನಿರ್ಧಾರ ಕೈಗೊಳ್ಳುವ ಅಧಿಕಾರ ಮರಳಿ ಸಿಕ್ಕಿದಾಕ್ಷಣ ರಾಜ್ಯ ಸರ್ಕಾರಗಳಿಗೆ ಮನಬಂದಂತೆ ತೀರ್ಮಾನ ಕೈಗೊಳ್ಳುವ ಅಧಿಕಾರ ದೊರೆಯಲಿದೆ ಎಂದು ಅರ್ಥವಲ್ಲ. ರಾಜಕೀಯ ಒತ್ತಡಗಳಿಗೆ ಒಳಗಾಗದೆ, ಹೆಚ್ಚು ಜವಾಬ್ದಾರಿಯಿಂದ ಮತ್ತು ವಿವೇಚನೆಯಿಂದ ಈ ಅಧಿಕಾರವನ್ನು ಬಳಸಬೇಕಿದೆ. ರಾಜ್ಯ ಸರ್ಕಾರಗಳು ಈಗಾಗಲೇ ಸಿದ್ಧಪಡಿಸಿರುವ ಇತರೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ವಿವಿಧ ವರ್ಗಗಳ ಮೀಸಲು ಪ್ರಮಾಣವನ್ನು ವ್ಯತ್ಯಾಸ ಮಾಡುವುದಿದ್ದರೂ ಅದಕ್ಕೆ ರಾಜ್ಯದ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಯನ ಮತ್ತು ವರದಿಗಳೇ ಮುಖ್ಯ ಅಳತೆಗೋಲಾಗುತ್ತವೆ. ಕರ್ನಾಟಕದಲ್ಲಿ ಇತರೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿಬದಲಾವಣೆಗಳನ್ನು ಕೋರಿ ಹಲವು ಸಮುದಾಯಗಳು ಈಗಾಗಲೇ ಬೇಡಿಕೆಗಳನ್ನು ಮಂಡಿಸಿವೆ. ತಮ್ಮ ಸಮುದಾಯವನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಪ್ರವರ್ಗ ‘2ಎ’ಗೆ ಸೇರಿಸಬೇಕೆಂದು ಲಿಂಗಾಯತ ಪಂಚಮಸಾಲಿ ಸಮುದಾಯವು ಬಲವಾದ ಆಗ್ರಹ ಮಂಡಿಸಿದೆ. ಇನ್ನೊಂದೆಡೆ, ಇತರೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ಕುರುಬ ಸಮುದಾಯವು ತಮ್ಮನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಬೇಕೆಂದು ಬೇಡಿಕೆ ಮುಂದಿಟ್ಟಿದೆ. ಇನ್ನೂ ಹಲವು ಸಮುದಾಯಗಳು ಇಂತಹ ಬೇಡಿಕೆ ಮಂಡಿಸಿವೆ. ಈ ಬೇಡಿಕೆಗಳ ಸಹಿತ ಇತರ ಯಾವುದೇ ಬದಲಾವಣೆಗಳನ್ನು ರಾಜ್ಯ ಸರ್ಕಾರ ಮಾಡುವುದಿದ್ದರೂ ಇಂದಿರಾ ಸಾಹ್ನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟಿನ ಒಂಬತ್ತು ನ್ಯಾಯಮೂರ್ತಿಗಳ ಪೀಠವು ನೀಡಿದ ಒಟ್ಟು ಮೀಸಲು ಪ್ರಮಾಣವು ಶೇಕಡ 50 ಮೀರುವಂತಿಲ್ಲ ಎಂಬ ತೀರ್ಪನ್ನು ಅನುಸರಿಸಲೇಬೇಕಾಗುತ್ತದೆ. ಮಹಾರಾಷ್ಟ್ರ ಸರ್ಕಾರ ರೂಪಿಸಿದ್ದ ಮರಾಠಾ ಮೀಸಲು ನೀತಿಯನ್ನು ರದ್ದುಗೊಳಿಸಿದಾಗ ಸುಪ್ರೀಂ ಕೋರ್ಟಿನ ಐವರು ನ್ಯಾಯಮೂರ್ತಿಗಳ ಪೀಠವೂ ಶೇ 50ರ ಮಿತಿಯ ತತ್ವವನ್ನು ಎತ್ತಿಹಿಡಿದಿದೆ. ರಾಜ್ಯದಲ್ಲಿ ವಿವಿಧ ಸಮುದಾಯಗಳ ಮೀಸಲು ಬೇಡಿಕೆಗಳನ್ನು ಪರಿಗಣಿಸುವ ದಿಸೆಯಲ್ಲಿ ಕರ್ನಾಟಕ ಸರ್ಕಾರ ಒಟ್ಟು ಮೀಸಲು ಪ್ರಮಾಣವನ್ನು
ಹೆಚ್ಚಿಸಲು ಪ್ರಯತ್ನಿಸುವುದಿದ್ದರೂ, ಹಾಗೆ ಮಾಡುವಾಗ ಸಂವಿಧಾನದ ಮೂಲ ಆಶಯಗಳಿಗೆ ಧಕ್ಕೆ ಬರದಂತೆ ಕ್ರಮ ಕೈಗೊಳ್ಳಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಗಮನಿಸಿದರೆ, ಸಂವಿಧಾನದ 127ನೇ ತಿದ್ದುಪಡಿ ಮಸೂದೆಯು ರಾಜ್ಯ ಸರ್ಕಾರಕ್ಕೆ ಅಪರಿಮಿತ ಅಧಿಕಾರವನ್ನು ನೀಡಲಿದೆ ಎಂದು ಭಾವಿಸುವಂತಿಲ್ಲ. ಬದಲಾಗಿ, ಮೀಸಲಾತಿ ವರ್ಗೀಕರಣ ಮಾಡುವಾಗ ರಾಜ್ಯ ಸರ್ಕಾರದ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದೇ ಹೇಳಬೇಕಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು