ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಆಡಳಿತ ಸುಧಾರಣಾ ಆಯೋಗದ ಶಿಫಾರಸು ಶೀಘ್ರ ಜಾರಿಗೆ ಬರಲಿ

Last Updated 5 ಜುಲೈ 2021, 19:31 IST
ಅಕ್ಷರ ಗಾತ್ರ

ರಾಜ್ಯ ಸರ್ಕಾರದ ನಿಕಟಪೂರ್ವ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ನೇತೃತ್ವದ ಕರ್ನಾಟಕ ಆಡಳಿತ ಸುಧಾರಣಾ ಆಯೋಗ ತನ್ನ ಮೊದಲ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಈ ವರ್ಷದ ಜನವರಿಯಲ್ಲಿ ತನ್ನ ಕೆಲಸವನ್ನು ಅಧಿಕೃತವಾಗಿ ಆರಂಭಿಸಿದ ಆಯೋಗವು ಆರು ತಿಂಗಳೊಳಗೇ ಮೊದಲ ವರದಿಯನ್ನು ಕ್ಷಿಪ್ರವಾಗಿ ಸಲ್ಲಿಸಿದೆ.

ಈ ವರದಿಯಲ್ಲಿ ಮುಖ್ಯವಾಗಿ ಕಂದಾಯ, ಆಹಾರ ಮತ್ತು ಸಾರಿಗೆ ಇಲಾಖೆಗಳಲ್ಲಿ ಕೈಗೊಳ್ಳಬೇಕಾದ ಹಲವಾರು ಸುಧಾರಣೆಯ ಕ್ರಮಗಳನ್ನು ಸೂಚಿಸಿದೆ. ಆಯೋಗದ ಮುಖ್ಯಸ್ಥರು ಸಂಬಂಧಿಸಿದ ಖಾತೆಗಳ ಸಚಿವರು, ಲೋಕಾಯುಕ್ತ ಸೇರಿದಂತೆ ಸರ್ಕಾರದ ಕೆಲವು ಶಾಸನಬದ್ಧ ಸಂಸ್ಥೆಗಳ ಮುಖ್ಯಸ್ಥರು, ಹಿರಿಯ ಐಎಎಸ್ ಅಧಿಕಾರಿಗಳು, ಐಐಎಸ್‍ಸಿ ಸಹಿತ ಹಲವು ಸಂಸ್ಥೆಗಳ ಮುಖ್ಯಸ್ಥರನ್ನು ಭೇಟಿಯಾಗಿ ಚರ್ಚಿಸಿದ್ದಾರೆ.

ಕ್ಷೇತ್ರ ಅಧ್ಯಯನ, ಗುಂಪು ಚರ್ಚೆ, ಮೌಲ್ಯಮಾಪನ ಮುಂತಾಗಿ ಹಲವು ಉಪಕ್ರಮಗಳ ಮೂಲಕ ಈ ಮೊದಲ ವರದಿಯನ್ನು ತಯಾರಿಸ ಲಾಗಿದೆ. 21 ವರ್ಷಗಳ ಹಿಂದೆ, 2000ನೇ ಇಸವಿಯ ಏಪ್ರಿಲ್‍ನಲ್ಲಿ ರಾಜ್ಯ ಸರ್ಕಾರವು ಹಾರನಹಳ್ಳಿ ರಾಮಸ್ವಾಮಿ ಅಧ್ಯಕ್ಷತೆಯಲ್ಲಿ ರಾಜ್ಯದ ಮೊದಲ ಆಡಳಿತ ಸುಧಾರಣಾ ಆಯೋಗವನ್ನು ರಚಿಸಿತ್ತು. ಆ ಆಯೋಗವು 2001ರ ಡಿಸೆಂಬರ್‌ನಲ್ಲಿ 256 ಶಿಫಾರಸುಗಳನ್ನು ಒಳಗೊಂಡ ತನ್ನ ಅಂತಿಮ ವರದಿಯನ್ನು ಸಲ್ಲಿಸಿತ್ತು. ಈಗ ನೇಮಕವಾಗಿರುವುದು ಎರಡನೇ ಆಯೋಗ. 20 ವರ್ಷಗಳಲ್ಲಿ ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆಗಳೇ ನಡೆದಿವೆ. ಸಂಪರ್ಕ ಕ್ಷೇತ್ರದಲ್ಲಿ ಆಗಿರುವ ಕ್ರಾಂತಿಯ ಕಾರಣದಿಂದ ಆಡಳಿತ ವ್ಯವಸ್ಥೆಯು ಬಹಳಷ್ಟು ಬದಲಾವಣೆಗಳನ್ನು ಕಂಡಿದೆ.

ಹಾರನಹಳ್ಳಿ ರಾಮಸ್ವಾಮಿ ಆಯೋಗವು ಸಲ್ಲಿಸಿದ್ದ ಒಟ್ಟು 256 ಶಿಫಾರಸುಗಳಲ್ಲಿ 234 ಶಿಫಾರಸುಗಳನ್ನು ಜಾರಿಗೆ ತರಲಾಗಿದೆ ಎಂದು ವಿಜಯಭಾಸ್ಕರ್ ಆಯೋಗವು ತನ್ನ ವರದಿಯಲ್ಲಿ ನಮೂದಿಸಿದೆ. ಆದರೆ ಆಗ ಇದ್ದ ಆಡಳಿತ ವ್ಯವಸ್ಥೆಗೂ ಈಗ ಇರುವ ಆಡಳಿತ ವ್ಯವಸ್ಥೆಗೂ ಅಜಗಜಾಂತರ ಇರುವ ಕಾರಣ ಮೊದಲ ಆಯೋಗದ ವರದಿ ಜಾರಿಯ ಕುರಿತ ಮೌಲ್ಯಮಾಪನ ಆಗಬೇಕಾದ ಅವಶ್ಯಕತೆಯಿದೆ. ಹಾರನಹಳ್ಳಿ ರಾಮಸ್ವಾಮಿ ನೇತೃತ್ವದ ಆಯೋಗದ ಶಿಫಾರಸುಗಳ ಅನುಷ್ಠಾನದ ಪರಿಶೀಲನೆಯು ಅಧಿಕೃತವಾಗಿಯೇ ಎರಡನೇ ಆಯೋಗದ ಕಾರ್ಯಸೂಚಿಯಲ್ಲಿದ್ದು, ಈ ಮೌಲ್ಯಮಾಪನ ಹೆಚ್ಚು ಆಳವಾಗಿ ಆಗಬೇಕಿದೆ.

ವಿಜಯಭಾಸ್ಕರ್ ನೇತೃತ್ವದ ಆಯೋಗವು ಸಲ್ಲಿಸಿರುವ ಮೊದಲ ವರದಿಯಲ್ಲಿ ಆಹಾರ ಇಲಾಖೆ ಮತ್ತು ಕಂದಾಯ ಇಲಾಖೆಗೆ ಸಂಬಂಧಿಸಿದ ತಲಾ ಎರಡು ಶಿಫಾರಸುಗಳು ಗಮನಾರ್ಹವಾಗಿವೆ. ಪಡಿತರ ಚೀಟಿದಾರರು ಮತ್ತು ನ್ಯಾಯಬೆಲೆ ಅಂಗಡಿಯವರು ಒಪ್ಪಿದ ಶುಲ್ಕ ಪಾವತಿಸಿ, ಮನೆ ಬಾಗಿಲಿಗೆ ಪಡಿತರ ತಲುಪಿಸುವ ವ್ಯವಸ್ಥೆಯನ್ನು ಮಾಡಬಹುದು ಎಂದು ಈ ವರದಿ ಹೇಳಿದೆ. ಹಾಗೆಯೇ ಜನನ- ಮರಣ ನೋಂದಣಿ ಪ್ರಕ್ರಿಯೆಯನ್ನು ಪಡಿತರ ಚೀಟಿಯ ಡೇಟಾ ಬೇಸ್‍ನೊಂದಿಗೆ ಸಂಯೋಜಿಸಿ, ಪಡಿತರ ಚೀಟಿಯಲ್ಲಿರುವ ಕುಟುಂಬದ ಸದಸ್ಯರ ಪಟ್ಟಿ ಸ್ವಯಂಚಾಲಿತವಾಗಿ ನವೀಕರಣಗೊಳ್ಳುವಂತೆ ಆಗಬೇಕು ಎಂದೂ ಸೂಚಿಸಿದೆ.

ರಾಜ್ಯದಲ್ಲಿ ಪದೇ ಪದೇ ಅಕ್ರಮ ಪಡಿತರ ಚೀಟಿಗಳ ಪತ್ತೆಯ ಹಿನ್ನೆಲೆಯಲ್ಲಿ ಮತ್ತು ಈಗಲೂ ಲಕ್ಷಾಂತರ ಜನರು ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿ ಕಾಯುತ್ತಿರುವ ಕಾರಣ ಇದು ತುರ್ತಾಗಿ ಆಗಬೇಕಾದ ಕೆಲಸ. ಕಂದಾಯ ಇಲಾಖೆಗೆ ಸಂಬಂಧಿಸಿ ಆಯೋಗವು ಸೂಚಿಸಿರುವ ಶಿಫಾರಸುಗಳ ಪೈಕಿ, ಎಲ್ಲ ಇಲಾಖೆಗಳ ಸಕಾಲ ಮತ್ತು ಸಕಾಲವಲ್ಲದ 800 ಇ– ಸೇವೆಗಳಿಗೆ ಸೇವಾ ಸಿಂಧು ಏಕಮಾತ್ರ ವೇದಿಕೆ ಆಗಬೇಕು ಎಂದಿರುವುದು ಉಪಯುಕ್ತ ಸಲಹೆ.

ಸಕಾಲ ಅರ್ಜಿಗಳಲ್ಲಿ ಶೇಕಡ 81ರಷ್ಟು ಮಾತ್ರ ಆನ್‍ಲೈನ್ ಮೂಲಕ ಸಲ್ಲಿಕೆಯಾಗುತ್ತಿವೆ ಎಂದು ಆಯೋಗ ಗುರುತಿಸಿದೆ. ಈ ದಿಸೆಯಲ್ಲಿ ಗ್ರಾಮೀಣ ಜನರಲ್ಲಿ ಹೆಚ್ಚು ಅರಿವು ಮೂಡಿಸಬೇಕಾದ ಅಗತ್ಯವಿದೆ ಎನ್ನುವುದು ನಿಸ್ಸಂಶಯ. ಭೂಸ್ವಾಧೀನ ನಿರ್ವಹಣಾ ಸಾಫ್ಟ್‌ವೇರ್‌ ಅನ್ನು ತ್ವರಿತವಾಗಿ ಅಭಿವೃದ್ಧಿಪಡಿಸಿ ಕೆಐಎಡಿಬಿ, ಬಿಡಿಎ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು ಎನ್ನುವುದೂ ಮಹತ್ವದ ಶಿಫಾರಸು ಎನ್ನಬಹುದು.

ಈ ಸಂಸ್ಥೆಗಳ ಭೂಸ್ವಾಧೀನದ ಕುರಿತು ಜಿಲ್ಲಾಧಿಕಾರಿ ಕೋರ್ಟ್ ಸಹಿತ ವಿವಿಧ ಸಕ್ಷಮ ಪ್ರಾಧಿಕಾರಗಳಲ್ಲಿ ಮೊಕದ್ದಮೆಗಳು ಹಲವು ವರ್ಷಗಳಿಂದ ಇತ್ಯರ್ಥವಾಗದೆ ಉಳಿದಿರುವುದು ಈ ಕ್ಷೇತ್ರಗಳ ಸುಧಾರಣೆಯ ಅಗತ್ಯವನ್ನು ಒತ್ತಿ ಹೇಳುತ್ತಿದೆ. ಈ ಹಿಂದಿನ ಸುಧಾರಣಾ ಆಯೋಗದ ವರದಿಯೂ ಸಮಗ್ರವಾಗಿತ್ತು. ಆದರೆ ಆ ವರದಿ ಜಾರಿಯ ಬಳಿಕವೂ ಕೆಂಪುಪಟ್ಟಿ ಮತ್ತು ಭ್ರಷ್ಟಾಚಾರದ ಹಾವಳಿಯನ್ನು ಸಂಪೂರ್ಣವಾಗಿ ತಡೆಗಟ್ಟಲು ಸರ್ಕಾರಗಳಿಗೆ ಸಾಧ್ಯವಾಗಿಲ್ಲ ಎನ್ನುವುದು ಒಂದಲ್ಲ ಒಂದು ಸಮಯದಲ್ಲಿ ಪ್ರತಿಯೊಬ್ಬರಿಗೂ ಅನುಭವಕ್ಕೆ ಬಂದಿರಬಹುದಾದ ಸತ್ಯ.

ಮಧ್ಯವರ್ತಿಗಳ ಮೋಸ ಮತ್ತು ಅಧಿಕಾರಶಾಹಿಯ ಭ್ರಷ್ಟತೆ ಇವತ್ತಿಗೂ ನಮ್ಮ ಆಡಳಿತ ವ್ಯವಸ್ಥೆಯನ್ನು ಒಳಗಿಂದ ಶಿಥಿಲಗೊಳಿಸುತ್ತಿರುವ ಎರಡು ಮುಖ್ಯ ಅಂಶಗಳು. ಹಾಗೆಂದೇ ಲೋಕಾಯುಕ್ತ ಮತ್ತು ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಇವತ್ತಿಗೂ ಕೈತುಂಬ ಕೆಲಸಗಳಿವೆ. ಪದೇ ಪದೇ ಭ್ರಷ್ಟ ಅಧಿಕಾರಿಗಳು ಮತ್ತು ಸಿಬ್ಬಂದಿ ಸಿಕ್ಕಿಬೀಳುವುದು ನೋಡಿದರೆ ಸರ್ಕಾರದ ಸುಧಾರಣಾ ಕ್ರಮಗಳ ಪ್ರಯೋಜನವು ಜನಸಾಮಾನ್ಯರನ್ನು ಪೂರ್ಣವಾಗಿ ತಲುಪುತ್ತಿಲ್ಲ ಎಂದೇ ಹೇಳಬೇಕಾಗುತ್ತದೆ. ಆದಕಾರಣ ಈಗ ಹೊಸ ಆಯೋಗವು ಸೂಚಿಸಿದ ಶಿಫಾರಸುಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಲು ಯತ್ನಿಸಬೇಕು. ಅದಕ್ಕಾಗಿ ಸಂಪರ್ಕ ಕ್ರಾಂತಿಯ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT