ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ದೇಶ, ಒಂದು ಪಡಿತರ: ಆಹಾರ ಭದ್ರತೆಯತ್ತ ಮತ್ತೊಂದು ಹೆಜ್ಜೆ

Last Updated 2 ಡಿಸೆಂಬರ್ 2019, 18:30 IST
ಅಕ್ಷರ ಗಾತ್ರ

ಪಡಿತರ ಚೀಟಿ ಹೊಂದಿರುವ ಕುಟುಂಬಗಳು ದೇಶದ ಯಾವುದೇ ಭಾಗಕ್ಕೆ ವಲಸೆ ಹೋದರೂ ಆಹಾರ ಭದ್ರತೆಯನ್ನು ಖಾತರಿಪಡಿಸುವ ಉದ್ದೇಶದಿಂದ ‘ಒಂದು ದೇಶ, ಒಂದು ಪಡಿತರ ಚೀಟಿ’ ಯೋಜನೆಯನ್ನು ಜಾರಿಗೊಳಿಸಲು ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಜ್ಜಾಗಿದೆ. ಈ ಯೋಜನೆಯುಮೊದಲ ಹಂತದಲ್ಲಿ 2020ರ ಜನವರಿ 1ರಿಂದ ಕರ್ನಾಟಕವೂ ಸೇರಿದಂತೆ ಎಂಟು ರಾಜ್ಯಗಳಲ್ಲಿ ಅನುಷ್ಠಾನಕ್ಕೆ ಬರಲಿದೆ. ಒಂದು ರಾಜ್ಯದ ವಿಳಾಸದಲ್ಲಿ ಪಡಿತರ ಚೀಟಿ ಪಡೆದಿರುವವರು ದೇಶದ ಯಾವುದೇ ರಾಜ್ಯದಲ್ಲಿ ಪಡಿತರ ವಸ್ತುಗಳನ್ನು ಪಡೆಯುವುದಕ್ಕೆ ಈ ಯೋಜನೆ ಅವಕಾಶ ಕಲ್ಪಿಸಲಿದೆ. ಇದಕ್ಕಾಗಿ ‘ಏಕೀಕೃತ ಪಡಿತರ ನಿರ್ವಹಣೆ’ ಎಂಬ ಪ್ರತ್ಯೇಕ ಮಾಹಿತಿಕೋಶ ಸಿದ್ಧಪಡಿಸಿರುವ ಇಲಾಖೆಯು ಪಡಿತರ ಚೀಟಿದಾರರಿಂದ ಆಧಾರ್‌ ಆಧಾರಿತ ಬಯೊಮೆಟ್ರಿಕ್‌ ವ್ಯವಸ್ಥೆ ಮೂಲಕ ಮಾಹಿತಿ ಸಂಗ್ರಹಿಸುವ ಪ್ರಕ್ರಿಯೆ ನಡೆಸುತ್ತಿದೆ. ಕರ್ನಾಟಕ, ಕೇರಳ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಗುಜರಾತ್, ಪಂಜಾಬ್‌ ಮತ್ತು ಹರಿಯಾಣ ರಾಜ್ಯಗಳಲ್ಲಿ ಜ. 1ರಿಂದ ‘ಅಂತರರಾಜ್ಯ ಪೋರ್ಟೆಬಿಲಿಟಿ’ ಮೂಲಕ ಪಡಿತರ ಪಡೆಯಬಹುದಾದ ವ್ಯವಸ್ಥೆ ಕಾರ್ಯರೂಪಕ್ಕೆ ಬರಲಿದೆ. ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕೃತ ಮಾಹಿತಿ ಪ್ರಕಾರ, ದೇಶದಲ್ಲಿ ಈಗ 2.32 ಕೋಟಿ ಅಂತ್ಯೋದಯ ಅನ್ನಯೋಜನೆ ಮತ್ತು 21.08 ಕೋಟಿ ಆದ್ಯತಾ ಕುಟುಂಬಗಳು (ಪಿಎಚ್‌ಎಚ್‌) ಸೇರಿದಂತೆ ಒಟ್ಟು 23.40 ಕೋಟಿ ಪಡಿತರ ಚೀಟಿಗಳಿಗೆ ಸಬ್ಸಿಡಿ ದರದಲ್ಲಿ ಪಡಿತರ ವಸ್ತುಗಳನ್ನು ಪೂರೈಸಲಾಗುತ್ತಿದೆ. ಕೆಲಸ ಅರಸಿಕೊಂಡು ವಲಸೆ ಹೋಗುವ ಅಸಂಘಟಿತ ಕಾರ್ಮಿಕರ ಕುಟುಂಬಗಳು ರಿಯಾಯಿತಿ ದರದ ಪಡಿತರ ಸೌಲಭ್ಯದಿಂದ ವಂಚಿತವಾಗದಂತೆ ಮಾಡುವ ಮಹತ್ವಾಕಾಂಕ್ಷೆಯಿಂದ ಕೇಂದ್ರ ಸರ್ಕಾರ ಈ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವಲಸೆ ಹೋದಾಗ ತಕ್ಷಣವೇ ಹೊಸ ಪಡಿತರ ಚೀಟಿ ಪಡೆಯುವುದು ಕಷ್ಟದ ಕೆಲಸವಾಗುತ್ತದೆ. ಪಡಿತರ ಚೀಟಿಯ ವರ್ಗಾವಣೆಯೂ ತ್ವರಿತವಾಗಿ ಆಗುವುದಿಲ್ಲ. ಕೆಲಸಕ್ಕಾಗಿ ವಲಸೆ ಹೆಚ್ಚುತ್ತಿರುವ ಈ ದಿನಗಳಲ್ಲಿ ಅಂತಹ ಕುಟುಂಬಗಳ ರಕ್ಷಣೆಗೆ ನಿಲ್ಲುವ ದೃಷ್ಟಿಯಿಂದ ಈ ಯೋಜನೆ ಸಕಾಲಿಕವಾದುದು. ಆದರೆ ಅರ್ಹ ಕುಟುಂಬಗಳು, ಯೋಜನೆಯ ಅನುಷ್ಠಾನದಲ್ಲಿ ಆಗಬಹುದಾದ ಲೋಪಗಳು ಮತ್ತು ತಾಂತ್ರಿಕ ದೋಷಗಳ ಕಾರಣದಿಂದ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಲಭ್ಯವಿರುವ ಪಡಿತರದಿಂದ ವಂಚಿತವಾಗದಂತೆ ಎಚ್ಚರಿಕೆ ವಹಿಸಬೇಕಾದ ಹೊಣೆಗಾರಿಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೇಲಿದೆ.

ಪಡಿತರ ವಿತರಣೆಯನ್ನು ಏಕರೂಪದ ವ್ಯವಸ್ಥೆಯಡಿ ತರಲು ಕೇಂದ್ರ ಸರ್ಕಾರ ಹೊರಟಿದೆಯಾದರೂ ದೇಶದಾದ್ಯಂತ ಸಾರ್ವಜನಿಕ ವಿತರಣಾ ವ್ಯವಸ್ಥೆ ಒಂದೇ ರೂಪದಲ್ಲಿಲ್ಲ. ವಿತರಿಸುವ ಪಡಿತರ ವಸ್ತುಗಳು ಹಾಗೂ ದರ ಮತ್ತು ಪ್ರಮಾಣವು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿವೆ. ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಅಂತ್ಯೋದಯ ಹಾಗೂ ಬಿಪಿಎಲ್‌ ಪಡಿತರ ಚೀಟಿದಾರರಿಗೆ ಉಚಿತವಾಗಿ ಆಹಾರ ಧಾನ್ಯ ವಿತರಿಸಲಾಗುತ್ತಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಪ್ರತೀ ಕೆ.ಜಿ.ಗೆ ₹ 1ರ ದರವಿದೆ. ಕೆಲವು ರಾಜ್ಯಗಳು ಕೇಂದ್ರ ಸರ್ಕಾರ ನಿಗದಿಪಡಿಸಿರುವ ದರದಲ್ಲೇ (ಪ್ರತೀ ಕೆ.ಜಿ.ಗೆ ₹ 3) ವಿತರಿಸುತ್ತಿವೆ. ಕರ್ನಾಟಕದಲ್ಲಿ ಬಿಪಿಎಲ್‌ ಪಡಿತರ ಚೀಟಿಯಲ್ಲಿ ಹೆಸರಿರುವ ಪ್ರತೀ ವ್ಯಕ್ತಿಗೆ ತಲಾ ಏಳು ಕೆ.ಜಿ. ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತಿದೆ. ಕೆಲವು ರಾಜ್ಯಗಳಲ್ಲಿ ಗೋಧಿ ಮತ್ತು ಅಕ್ಕಿ ಮಾತ್ರ ವಿತರಿಸಲಾಗುತ್ತಿದೆ. ಅಡುಗೆ ಎಣ್ಣೆ, ಬೇಳೆಕಾಳು, ಸಕ್ಕರೆ, ಸೀಮೆಎಣ್ಣೆ ಸೇರಿದಂತೆ ಇತರ ವಸ್ತುಗಳ ವಿತರಣೆಯಲ್ಲೂ ವ್ಯತ್ಯಾಸ ಇದೆ. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವಲಸೆ ಹೋದ ಕುಟುಂಬಗಳು, ಪಡಿತರ ಚೀಟಿಯಲ್ಲಿ ಹೆಸರಿರುವ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ತಲಾ 5 ಕೆ.ಜಿ. ಅಕ್ಕಿ ಪಡೆಯಬಹುದು. ಆದರೆ, ಇದಕ್ಕೆ ಕೇಂದ್ರ ಸರ್ಕಾರ ನಿಗದಿಪಡಿಸಿರುವ ದರದ ಅನ್ವಯ ಪ್ರತೀ ಕೆ.ಜಿ.ಗೆ ಮೂರು ರೂಪಾಯಿ ಪಾವತಿಸಬೇಕು. ‘ಪಡಿತರ ವಿತರಣಾ ವ್ಯವಸ್ಥೆಯ ಮೇಲಿನ ರಾಜ್ಯಗಳ ಹಕ್ಕನ್ನು ಕಿತ್ತುಕೊಳ್ಳಲು ಕೇಂದ್ರ ಸರ್ಕಾರ ಹೊರಟಿದೆ’ ಎಂದು ಯೋಜನೆಯನ್ನು ವಿರೋಧಿಸುವವರು ಆಕ್ಷೇಪ ಎತ್ತಿದ್ದಾರೆ. ಆದರೆ, ಈ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧಿಕಾರದ ವ್ಯಾಪ್ತಿಗಿಂತಲೂ ಹೆಚ್ಚಾಗಿ ಜನರಿಗೆ ಆಹಾರ ಭದ್ರತೆಯನ್ನು ಖಾತರಿಪಡಿಸುವುದಕ್ಕೆ ಪ್ರಾಮುಖ್ಯ ದೊರೆಯಬೇಕಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿನ ಸೋರಿಕೆ ತಡೆಯುವ ಮತ್ತು ಎಲ್ಲ ಅರ್ಹ ಕುಟುಂಬಗಳಿಗೆ ಸಬ್ಸಿಡಿ ದರದಲ್ಲಿ ಪಡಿತರ ಖಾತರಿಗೊಳಿಸುವ ಶಕ್ತಿ ಹೊಂದಿರುವ ಯೋಜನೆಯ ಅನುಷ್ಠಾನದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಮ್ಮನಸ್ಸಿನಿಂದ ಹೆಜ್ಜೆ ಹಾಕಬೇಕಿದೆ. ಆ ಮೂಲಕ ದೇಶದ ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಹೆಚ್ಚು ಜನಸ್ನೇಹಿ ಮತ್ತು ವಿಶ್ವಾಸಾರ್ಹಗೊಳಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT