ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಆನ್‌ಲೈನ್‌ ಜೂಜಿಗೆ ಕಡಿವಾಣ; ಎಚ್ಚರಿಕೆಯ ನಡೆ ಅಗತ್ಯ

Last Updated 22 ನವೆಂಬರ್ 2020, 21:20 IST
ಅಕ್ಷರ ಗಾತ್ರ

ದೇಶದಲ್ಲಿ ಇಂಟರ್ನೆಟ್‌ ಬಳಕೆ ಮಾಡುತ್ತಿರುವವರ ಪೈಕಿ ಶೇಕಡ 46ರಷ್ಟು ಮಂದಿ ಆನ್‌ಲೈನ್‌ ಮೂಲಕ ಹತ್ತು ಹಲವು ಬಗೆಯ ಆಟಗಳನ್ನು ಆಡುತ್ತಿದ್ದಾರೆ ಎಂದು ವರದಿಯೊಂದು ಹೇಳುತ್ತದೆ. ದೇಶದಲ್ಲಿ ಆನ್‌ಲೈನ್‌ ಆಟಗಳನ್ನು ಒದಗಿಸುವ ಉದ್ಯಮವೂ ಬೆಳೆದಿದೆ. ಈ ಉದ್ಯಮವು 2024ರ ವೇಳೆಗೆ ₹ 27 ಸಾವಿರ ಕೋಟಿ ಮೌಲ್ಯದ್ದಾಗಿರುತ್ತದೆ ಎಂದು ಅಂದಾಜಿಸಲಾಗಿದೆ. 2014ರಿಂದ 2020ರ ನಡುವಿನ ಅವಧಿಯಲ್ಲಿ ಉದ್ಯಮವು ₹ 2,500 ಕೋಟಿಯಷ್ಟು ಬಂಡವಾಳವನ್ನು ಆಕರ್ಷಿಸಿದೆ ಎಂಬ ಅಂದಾಜು ಕೂಡ ಇದೆ. ಈ ಉದ್ಯಮವು ವಾರ್ಷಿಕ ಶೇಕಡ 22ರಷ್ಟು ಪ್ರಮಾಣದಲ್ಲಿ ಬೆಳವಣಿಗೆ ಸಾಧಿಸುತ್ತಿದೆ ಎಂದು ಮೇಪಲ್ ಕ್ಯಾಪಿಟಲ್ ಅಡ್ವೈಸರ್ಸ್ ವರದಿ ಹೇಳಿದೆ.

ಇಷ್ಟು ದೊಡ್ಡ ಪ್ರಮಾಣದಲ್ಲಿ ಬಂಡವಾಳ ಆಕರ್ಷಿಸಿರುವ, ಬೃಹತ್ ಮೊತ್ತದ ಉದ್ಯಮವಾಗಿ ಬೆಳವಣಿಗೆ ಕಾಣುವ ಶಕ್ತಿ ಹೊಂದಿರುವ ಆನ್‌ಲೈನ್‌ ಆಟಗಳ ಜಗತ್ತು ನೂರಾರು ಕುಟುಂಬಗಳನ್ನು ಸಾಕುತ್ತಿದ್ದಿರಬಹುದು. ಆನ್‌ಲೈನ್‌ ಆಟಗಳಲ್ಲಿ ಖುಷಿಗಾಗಿ ಆಡುವ ಆಟಗಳೂ ಇವೆ, ದುಡ್ಡು ಕಟ್ಟಿ ಜೂಜಿನ ರೀತಿಯಲ್ಲಿ ಆಡುವ ಆಟಗಳೂ ಇವೆ. ಈಗ, ಕರ್ನಾಟಕದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು, ಹಣವನ್ನು ಕಟ್ಟಿ ಜೂಜಿನ ರೀತಿಯಲ್ಲಿ ಆಡುವ ಆನ್‌ಲೈನ್‌ ಆಟಗಳಿಗೆ ಕರ್ನಾಟಕದಲ್ಲಿ ನಿಷೇಧ ಹೇರುವ ಕುರಿತು ಚಿಂತನೆ ನಡೆದಿದೆ, ಇದಕ್ಕಾಗಿ ಕಾನೂನು ರೂಪಿಸಲಾಗುವುದು ಎಂದು ಹೇಳಿದ್ದಾರೆ.

ಜೂಜಿನ ರೂಪದ ಆಟಗಳಲ್ಲಿ ಹಣ ತೊಡಗಿಸಿದ ಹಲವರು ಕಷ್ಟಪಟ್ಟು ದುಡಿದ ಹಣವನ್ನು ಕಳೆದುಕೊಂಡಿರುವ ಬಗ್ಗೆ ತಮಗೆ ಮಾಹಿತಿ ಬಂದಿರುವುದಾಗಿಯೂ, ಕೆಲವರ ಪಾಲಿಗೆ ಈ ಆಟಗಳು ದುಶ್ಚಟಗಳಂತೆ ಪರಿಣಮಿಸಿವೆ ಎಂದೂ ಅವರು ಹೇಳಿರುವುದಾಗಿ ವರದಿಯಾಗಿದೆ. ಜೂಜು ಯಾವುದೇ ರೀತಿಯಲ್ಲಿದ್ದರೂ ಅದನ್ನು ನಿಷೇಧಿಸಬೇಕು, ಜೂಜು ಒಳ್ಳೆಯದಲ್ಲ ಎಂಬ ನಿಲುವನ್ನು ಅವರು ಹೊಂದಿರುವಂತೆ ಕಾಣುತ್ತಿದೆ. ಜೂಜಿನ ಅಡ್ಡ ಪರಿಣಾಮಗಳನ್ನು ನಾವು ವರ್ತಮಾನದಲ್ಲೂ ಇತಿಹಾಸದಲ್ಲೂ ಪುರಾಣಗಳಲ್ಲೂ ಕಾಣಬಹುದು.

ಆದರೆ, ಈಗಾಗಲೇ ಬೃಹತ್ ಉದ್ದಿಮೆಯ ಸ್ವರೂಪವನ್ನು ಪಡೆದುಕೊಂಡಿರುವ ಆನ್‌ಲೈನ್‌ ಆಟಗಳನ್ನು ನಿಷೇಧಿಸುವ ಸಂದರ್ಭದಲ್ಲಿ ಬಹಳ ಎಚ್ಚರಿಕೆ ವಹಿಸಬೇಕಿರುವುದು ಅಗತ್ಯ. ವಾಸ್ತವದಲ್ಲಿ, ಆನ್‌ಲೈನ್‌ ಜಗತ್ತಿನಲ್ಲಿ ‘ನಿಷೇಧ’ ಎಂಬುದನ್ನು ಜಾರಿಗೆ ತರುವುದು ಸುಲಭದ್ದಲ್ಲ. ಒಂದು ಡೊಮೈನ್‌ ಹೆಸರನ್ನು ನಿಷೇಧಿಸಿದರೆ, ಆ ಹೆಸರಿನಲ್ಲಿ ಒಂಚೂರು ಬದಲಾವಣೆ ಮಾಡಿಕೊಂಡು ಇನ್ನೊಂದು ಡೊಮೈನ್‌ ಹೆಸರಿನಲ್ಲಿ ಹಳೆಯ ಆಟಗಳು ಮತ್ತೆ ಲಭ್ಯವಾಗುವಂತೆ ಮಾಡುವುದು ಕಷ್ಟವೇನಲ್ಲ. ಕೌಶಲ ಆಧಾರಿತ ಆಟಗಳು ಯಾವುವು, ಅದೃಷ್ಟ ಬಲವೊಂದನ್ನೇ ನೆಚ್ಚಿಕೊಂಡ ಆಟಗಳು ಯಾವುವುಎಂಬುದನ್ನು ಸ್ಪಷ್ಟವಾಗಿ ಗುರುತಿಸುವುದು ಸವಾಲಿನ ಕೆಲಸ.

ಈ ಗುರುತಿಸುವಿಕೆಯನ್ನು ಸರಿಯಾಗಿ ಮಾಡದೆ ಇದ್ದರೆ, ಜೂಜಿನಂತಹ ಆಟಗಳನ್ನು ನಿರ್ಬಂಧಿಸುವುದು ಕಷ್ಟವಾಗುತ್ತದೆ ಎಂಬ ಎಚ್ಚರ ಆಳುವವರಿಗೆ ಇರಬೇಕಾಗುತ್ತದೆ. ವ್ಯಕ್ತಿಯ ಕೌಶಲದ ಆಧಾರದಲ್ಲಿ ಮುನ್ನಡೆಯುವ ಆಟಗಳನ್ನು ನಿಷೇಧಿಸುವುದರಿಂದ ಬಹಳ ದೊಡ್ಡ ಮಟ್ಟದಲ್ಲಿ ಬೆಳೆದುನಿಲ್ಲುವ ಶಕ್ತಿಯನ್ನೂ ದೊಡ್ಡ ಮೊತ್ತದ ಬಂಡವಾಳವನ್ನು ಆಕರ್ಷಿಸುವ ಸಾಮರ್ಥ್ಯವನ್ನೂ ಹೊಂದಿರುವ ಆನ್‌ಲೈನ್‌ ಆಟಗಳ ಉದ್ಯಮದ ಬುಡಕ್ಕೇ ಕೊಡಲಿ ಪೆಟ್ಟು ಕೊಟ್ಟಂತೆ ಆಗುತ್ತದೆ ಎಂಬುದನ್ನು ಮರೆಯಬಾರದು.

ಆನ್‌ಲೈನ್‌ ಆಟಗಳ ಉದ್ಯಮ ಕೂಡ ತನಗೆ ಅಂಟಿರುವ ಚಿಕ್ಕದೊಂದು ‘ಕಳಂಕ’ವನ್ನು ತೊಡೆದುಹಾಕಿಕೊಳ್ಳುವ ಮನಸ್ಸು ಮಾಡಬಹುದು. ಆನ್‌ಲೈನ್‌ ಆಟಗಳ ಉದ್ದಿಮೆಗಳ ಪ್ರತಿನಿಧಿಗಳೇ ಒಂದೆಡೆ ಸೇರಿ, ಸ್ವಯಂ ನಿಯಂತ್ರಣದ ಬಗ್ಗೆ ಚರ್ಚಿಸಬಹುದು. ಉದ್ಯಮದ ಹಿತದೃಷ್ಟಿಯಿಂದ ಕೂಡ ಇದು ಒಳ್ಳೆಯ ಕೆಲಸ ಆಗುತ್ತದೆ. ವ್ಯಕ್ತಿಯ ಕೌಶಲ ಆಧರಿಸಿ ಮುನ್ನಡೆಯುವ ಆಟಗಳನ್ನು ಹೆಚ್ಚೆಚ್ಚು ಬೆಳೆಸಿದರೆ, ಹೂಡಿಕೆದಾರರ ಹಿತವನ್ನೂ ಕಾಯ್ದಂತೆ ಆಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT