ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಬಯಲುಶೌಚ: ಘೋಷಣೆಯೇನೋ ಆಕರ್ಷಕ, ವಸ್ತುಸ್ಥಿತಿ ಬೇರೆಯೇ ಇದೆ

Last Updated 4 ಅಕ್ಟೋಬರ್ 2019, 4:56 IST
ಅಕ್ಷರ ಗಾತ್ರ

‘ಭಾರತ ಈಗ ಬಯಲುಶೌಚ ಮುಕ್ತ ರಾಷ್ಟ್ರವಾಗಿದೆ. ತಮ್ಮದು ಬಯಲುಶೌಚ ಮುಕ್ತ ಗ್ರಾಮ ಎಂದು ಗ್ರಾಮಗಳು ತಾವಾಗಿಯೇ ಘೋಷಿಸಿಕೊಂಡಿವೆ. 60 ತಿಂಗಳಲ್ಲಿ 11 ಕೋಟಿಗೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಈ ಯಶಸ್ಸನ್ನು ಕಂಡು ವಿಶ್ವವೇ ಬೆರಗಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ, ಸಾಬರಮತಿ ಆಶ್ರಮದಲ್ಲಿ ‘ಸ್ವಚ್ಛ ಭಾರತ ದಿನ’ ಕಾರ್ಯಕ್ರಮದಲ್ಲಿ ಘೋಷಿಸಿದ್ದಾರೆ.

ಪ್ರಧಾನಿಯವರ ಈ ಘೋಷಣೆ ಆಕರ್ಷಕವಾಗಿದ್ದು, ರೋಮಾಂಚನ ಹುಟ್ಟಿಸುವಂತಿದೆ. ಆದರೆ ವಾಸ್ತವ ಗೊತ್ತಿರುವವರಿಗೆ, ‘ಇದು ಬರೀ ಭಾಷಣ’ ಎನ್ನುವುದು ಮೇಲ್ನೋಟಕ್ಕೇ ಗೋಚರಿಸುತ್ತದೆ. ಭಾರತದ ಸಾವಿರಾರು ಹಳ್ಳಿಗಳಲ್ಲಿ ಮತ್ತು ನಗರ– ಪಟ್ಟಣಗಳಲ್ಲಿ ಬೆಳಿಗ್ಗೆ ಮತ್ತು ಸೂರ್ಯಾಸ್ತದ ಬಳಿಕ ಚೊಂಬು ಹಿಡಿದುಕೊಂಡು ಬಯಲಿನ ಕಡೆಗೆ ಹೋಗುವವರ ಸಂಖ್ಯೆ ಎದ್ದು ಕಾಣುವಂತೆಯೇ ಇದೆ. ಕೇಂದ್ರ ಸರ್ಕಾರದ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯವುಇತ್ತೀಚೆಗೆ ಬಿಡುಗಡೆ ಮಾಡಿರುವ ರಾಷ್ಟ್ರೀಯ ಗ್ರಾಮೀಣ ನೈರ್ಮಲ್ಯ ಸಮೀಕ್ಷೆ (2018–19) ವರದಿಯ ಅಂಕಿ ಅಂಶಗಳೂ ಇದನ್ನೇ ಹೇಳುತ್ತಿವೆ. ದೇಶದಲ್ಲಿ ಶೇ 93.1ರಷ್ಟು ಕುಟುಂಬಗಳಿಗೆ ಮಾತ್ರ ಶೌಚಾಲಯದ ವ್ಯವಸ್ಥೆಯಿದೆ ಎನ್ನುತ್ತದೆ ಈ ವರದಿ.

‘ಮನೆಯಲ್ಲಿ ಶೌಚಾಲಯವಿದ್ದರೂ ಶೇ 3.5ರಷ್ಟು ಜನರು ಅದನ್ನು ಬಳಸುತ್ತಿಲ್ಲ. ತಮ್ಮದು ಸಂಪೂರ್ಣ ಬಯಲುಶೌಚ ಮುಕ್ತ ಗ್ರಾಮ ಎಂದು ಘೋಷಿಸಿರುವ ಗ್ರಾಮಗಳಲ್ಲಿ ಶೇ 9.3ರಷ್ಟು ಗ್ರಾಮಗಳು ಇನ್ನೂ ಬಯಲುಶೌಚ ವ್ಯವಸ್ಥೆಯನ್ನೇ ಹೊಂದಿವೆ’ ಎಂದು ಈ ನೈರ್ಮಲ್ಯ ಸಮೀಕ್ಷೆ ಗುರುತಿಸಿದೆ. ವಸ್ತುಸ್ಥಿತಿ ಕಣ್ಣಮುಂದೆ ಇರುವಾಗ ಪ್ರಧಾನಿಯವರು ಹೀಗೆ ಘೋಷಣೆ ಹೊರಡಿಸಿರುವುದು ವಾಸ್ತವವನ್ನು ಬಿಂಬಿಸುವುದಿಲ್ಲ. ಮೋದಿ ನೇತೃತ್ವದ ಸರ್ಕಾರ ‘ಸ್ವಚ್ಛ ಭಾರತ ಅಭಿಯಾನ’ವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದಲ್ಲ. ಆದರೆ, ಯೋಜನೆಯ ಜಾರಿ ಸಂಪೂರ್ಣ ಯಶಸ್ವಿಯಾಗಿಲ್ಲ ಎನ್ನುವುದು ಕಟು ವಾಸ್ತವ.

ಬಯಲುಶೌಚ ಪದ್ಧತಿಯು ಸಾಮಾಜಿಕ ಜಾಡ್ಯವೆಂಬಂತೆ ದೇಶಕ್ಕೆ ಅಂಟಿಕೊಂಡಿದೆ. ಇದಕ್ಕೆ ಕಾರಣಗಳೂ ಹಲವು. ಈ ಜಾಡ್ಯವನ್ನು ಇಲ್ಲದಂತೆ ಮಾಡಲು, ಆರ್ಥಿಕವಾಗಿ ದುರ್ಬಲ ಕುಟುಂಬಗಳಿಗೆ ವೈಯಕ್ತಿಕ ಶೌಚಾಲಯಗಳನ್ನು ಕಟ್ಟಿಸಲು ನೆರವು ನೀಡಿದರೆ ಮಾತ್ರ ಸಾಲದು; ಬಯಲುಶೌಚದ ವಿರುದ್ಧ ಸಾಮಾಜಿಕ ಎಚ್ಚರವನ್ನು ಮೂಡಿಸುವ ಅಗತ್ಯವೂ ಇದೆ. ದೇಶವನ್ನು ಬಯಲುಶೌಚ ಮುಕ್ತಗೊಳಿಸುವ ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎರಡು ದಶಕಗಳಿಂದಲೂ ಜಾರಿಯಲ್ಲಿ ಇಟ್ಟಿವೆ.

ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಶೌಚಾಲಯಗಳಿಲ್ಲದ ಮನೆಗಳಿಗೆ ಶೌಚಾಲಯವನ್ನು ಕಟ್ಟಲು ನೆರವು ನೀಡುವ ‘ಸಂಪೂರ್ಣ ನೈರ್ಮಲ್ಯ ಆಂದೋಲನ’ವು ಮೊದಲು ಆರಂಭವಾದದ್ದು 1999ರಲ್ಲಿ. ಈ ಯೋಜನೆಯನ್ನು 2012ರಲ್ಲಿ ‘ನಿರ್ಮಲ ಭಾರತ ಅಭಿಯಾನ’ ಎಂದು ಪುನರ್‌ರೂಪಿಸಿ ಪ್ರೋತ್ಸಾಹಧನವನ್ನು ₹10 ಸಾವಿರಕ್ಕೆ ಏರಿಸಲಾಯಿತು. ಮೋದಿ ಪ್ರಧಾನಿಯಾದ ಬಳಿಕ ಈ ಯೋಜನೆಗೆ ‘ಸ್ವಚ್ಛ ಭಾರತ ಅಭಿಯಾನ’ ಎಂದು ಮರುನಾಮಕರಣ ಮಾಡಿ ಪ್ರೋತ್ಸಾಹಧನವನ್ನು ₹ 12 ಸಾವಿರಕ್ಕೆ ಏರಿಸಿದರು. ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ಗಣ್ಯರು, ತಾರೆಯರನ್ನು ‘ಸ್ವಚ್ಛ ಭಾರತ ಅಭಿಯಾನ’ದ ರಾಯಭಾರಿಗಳೆಂದು ಹೆಸರಿಸಿ ಅವರು ಒಂದು ದಿನ ಸಾರ್ವಜನಿಕ ಸ್ಥಳಗಳಲ್ಲಿ ಕಸ ಗುಡಿಸುವಂತೆ ಮಾಡಿ, ದೃಶ್ಯಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರವನ್ನೂ ನೀಡಲಾಯಿತು.

ಎಲ್ಲವೂ ಸರಿ. ಹಾಗೆಂದು ಅವಾಸ್ತವ ಅಂಕಿ ಅಂಶಗಳ ಆಧಾರದ ಮೇಲೆ ಪೊಳ್ಳು ಘೋಷಣೆಯನ್ನು ಹೊರಡಿಸಬೇಕಾದ ಅಗತ್ಯವಿಲ್ಲ. ಯೋಜನೆಯ ವೈಫಲ್ಯದ ಕಾರಣಗಳನ್ನು ಪತ್ತೆ ಹಚ್ಚಿ ಯಶಸ್ಸು ಸಾಧಿಸುವತ್ತ ಇನ್ನಷ್ಟು ಗಮನ ಹರಿಸಬೇಕು. ಉತ್ತರ ಭಾರತದ ಹಲವು ರಾಜ್ಯಗಳಂತೆ ಕರ್ನಾಟಕದಲ್ಲೂ ಈ ಯೋಜನೆ ಸಂಪೂರ್ಣ ಜಾರಿಗೆ ಇನ್ನಷ್ಟು ಪರಿಣಾಮಕಾರಿ ಯತ್ನಗಳನ್ನು ಕೈಗೊಳ್ಳಬೇಕಿದೆ. ರಾಜ್ಯದಲ್ಲಿ 2014ರಿಂದ ಈಚೆಗೆ 35 ಲಕ್ಷ ಶೌಚಾಲಯಗಳನ್ನು ಕಟ್ಟಿಸಲಾಗಿದೆ ಎಂದು ಅಂಕಿ ಅಂಶಗಳು ಹೇಳುತ್ತಿವೆ. ‘ಇವುಗಳಲ್ಲಿ ಗಣನೀಯ ಪ್ರಮಾಣದ ಶೌಚಾಲಯಗಳು ಬಳಕೆಯಾಗುತ್ತಿಲ್ಲ’ ಎಂದು ಅಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ.

ಹಿಂದೆ ರಾಜ್ಯ ಸರ್ಕಾರವು ಈ ಯೋಜನೆಯ ವಸ್ತುಸ್ಥಿತಿ ಕುರಿತು ಖಾಸಗಿ ಸಂಸ್ಥೆಯಿಂದ ‘ಸಾಮಾಜಿಕ ಪರಿಶೋಧನೆ’ (ಸೋಷಿಯಲ್ ಆಡಿಟ್‌) ನಡೆಸುತ್ತಿತ್ತು. ಈಗ ಅದೂ ನಡೆಯುತ್ತಿಲ್ಲ. ಸರ್ಕಾರದಿಂದ ಹಣ ಪಡೆದುಹಳ್ಳಿಗಳಲ್ಲಿ ಕಟ್ಟಿಸಿದ ಶೌಚಾಲಯಗಳು ಕುರಿದೊಡ್ಡಿಗೆ, ಉರುವಲು ಪೇರಿಸಿಡಲು, ಬಳಕೆಗೆ ಬಾರದ ವಸ್ತುಗಳನ್ನು ತುಂಬಿಸಿಡಲು ಬಳಕೆಯಾಗಿರುವ ನಿದರ್ಶನಗಳು ಬಹಳಷ್ಟಿವೆ. ನೀರಿನ ಲಭ್ಯತೆ ಇಲ್ಲದ ಕಾರಣ ಬಹಳಷ್ಟುಶೌಚಾಲಯಗಳು ಪಾಳು ಬಿದ್ದಿವೆ. ಇಂತಹ ಪ್ರಾಯೋಗಿಕ ಸಮಸ್ಯೆಗಳ ನಿವಾರಣೆ ಕಡೆಗೂ ಸರ್ಕಾರ ದೃಷ್ಟಿ ಹರಿಸುವ ಅಗತ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT