‘ಆಪರೇಷನ್ ಸಿಂಧೂರ’ ಮತ್ತು ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿ ಕುರಿತು ಸಂಸತ್ತಿನಲ್ಲಿ ನಡೆದ ಚರ್ಚೆಯು ರಾಜಕೀಯ ಜಿದ್ದಾಜಿದ್ದಿಯ ಮಾತುಗಳಿಗೆ ಸೀಮಿತಗೊಂಡಿತೇ ಹೊರತು, ಚರ್ಚೆಯ ವಿಷಯದ ಬಗ್ಗೆ ಹೆಚ್ಚಿನ ಬೆಳಕು ಚೆಲ್ಲುವಲ್ಲಿ ವಿಫಲವಾಗಿದೆ. ಪಾಕಿಸ್ತಾನದೊಂದಿಗೆ ಸಂಘರ್ಷ ಜಾರಿಯಲ್ಲಿದ್ದ ಸಂದರ್ಭದಲ್ಲಿ, ಭಾರತದ ಸೇನಾಪಡೆಯ ಮುಖ್ಯಸ್ಥರು ಮತ್ತು ಅಧಿಕಾರಿಗಳು ಕಾರ್ಯಾಚರಣೆಯ ಕೆಲವು ವಿವರಗಳನ್ನು ದೇಶಕ್ಕೆ ತಿಳಿಸಿದ್ದರು. ಆ ಸೀಮಿತ ಮಾಹಿತಿಯ ಹೊರತಾಗಿ, ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯ ಗುರಿ ಮತ್ತು ಆ ಕಾರ್ಯಾಚರಣೆಯಲ್ಲಿ ದೇಶ ಗಳಿಸಿದ್ದು ಹಾಗೂ ಕಳೆದುಕೊಂಡಿದ್ದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡುವುದು ಸರ್ಕಾರದ ಹೊಣೆಗಾರಿಕೆಯಾಗಿತ್ತು. ಮಹತ್ವದ ಕಾರ್ಯಾಚರಣೆಯ ಬಗ್ಗೆ ದೇಶಕ್ಕೆ ತಿಳಿಸಲು ಸಂಸತ್ತು ಸರಿಯಾದ ವೇದಿಕೆಯೂ ಆಗಿತ್ತು ಹಾಗೂ ಆ ಚರ್ಚೆಯ ನೇತೃತ್ವವನ್ನು ಸರ್ಕಾರವೇ ವಹಿಸಿಕೊಳ್ಳಬೇಕಾಗಿತ್ತು. ಆದರೆ, ವಿರೋಧ ಪಕ್ಷದ ಒತ್ತಾಯದ ಮೇರೆಗೆ ಕೊನೆಗೂ ಚರ್ಚೆ ನಡೆದರೂ, ಅದು ವಿಷಯದ ಬಗ್ಗೆ ಬೆಳಕು ಚೆಲ್ಲುವ ಬದಲು ರಾಜಕೀಯ ಕೆಸರೆರಚಾಟದಲ್ಲಿ ಕೊನೆಗೊಂಡಿತು.

ಪಹಲ್ಗಾಮ್ನಲ್ಲಿನ ಭದ್ರತಾ ವೈಫಲ್ಯ, ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯ ಸ್ವರೂಪ, ಇದ್ದಕ್ಕಿದ್ದಂತೆ ಘೋಷಣೆಯಾದ ಕದನ ವಿರಾಮ ಮತ್ತು ಸಂಘರ್ಷದಲ್ಲಿ ಸೇನೆಯ ಸಾಧನೆ ಹಾಗೂ ಸೇನೆಗಾದ ನಷ್ಟದ ಬಗ್ಗೆ ವಿರೋಧ ಪಕ್ಷಗಳು ಪ್ರಶ್ನೆ ಎತ್ತಿದ್ದವು. ಈ ಪ್ರಶ್ನೆಗಳಿಗೆ ನೇರ ಉತ್ತರ ಕೊಡುವ ಪ್ರಯತ್ನವನ್ನೇ ಸರ್ಕಾರ ಮಾಡಲಿಲ್ಲ. ವಿರೋಧ ಪಕ್ಷಗಳು ತಪ್ಪು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು. ಭಾರತದ ಐದು ರಫೇಲ್ ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂದು ಪಾಕಿಸ್ತಾನ ಹೇಳಿರುವುದರ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ವಿರೋಧ ಪಕ್ಷ ಕೇಳಿದ ಪ್ರಶ್ನೆಗೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಆಡಳಿತ ಪಕ್ಷದ ಯಾರೊಬ್ಬರೂ ಸ್ಪಷ್ಟ ಉತ್ತರ ನೀಡಲಿಲ್ಲ; ವಿಮಾನ ಕಳೆದುಕೊಂಡಿದ್ದನ್ನು ಒಪ್ಪಿಕೊಳ್ಳಲೂ ಇಲ್ಲ, ನಿರಾಕರಿಸಲೂ ಇಲ್ಲ. ಕದನ ವಿರಾಮ ಘೋಷಣೆಯಾದುದು ತಮ್ಮಿಂದಲೇ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇ ಪದೇ ಹೇಳಿಕೊಳ್ಳುತ್ತಿರುವುದಕ್ಕೆ ಸಂಬಂಧಿಸಿದ ಪ್ರಶ್ನೆಗೆ ದೊರೆತ ಉತ್ತರಗಳಲ್ಲೂ ಸ್ಪಷ್ಟತೆಯಿರಲಿಲ್ಲ. ಕಾರ್ಯಾಚರಣೆ ನಿಲ್ಲಿಸುವಂತೆ ಯಾವ ವಿದೇಶೀ ನಾಯಕರೂ ಭಾರತವನ್ನು ಕೇಳಲಿಲ್ಲ ಎನ್ನುವ ಪ್ರಧಾನಿ ಹೇಳಿಕೆ, ಕದನ ವಿರಾಮಕ್ಕೆ ಸಮರ್ಪಕ ಕಾರಣ ಆಗಿರಲಿಲ್ಲ. ಪಹಲ್ಗಾಮ್ನಲ್ಲಿನ ಭದ್ರತಾ ಲೋಪಕ್ಕೆ ಯಾರನ್ನೂ ಹೊಣೆಗಾರರನ್ನಾಗಿ ಏಕೆ ಮಾಡಿಲ್ಲ ಎನ್ನುವ ಪ್ರಶ್ನೆಗೂ ಸಮಾಧಾನಕರ ಉತ್ತರ ನೀಡುವಲ್ಲಿ ಸರ್ಕಾರ ವಿಫಲವಾಗಿದೆ.

‘ಆಪರೇಷನ್ ಸಿಂಧೂರ’ ಚರ್ಚೆಯ ಕೇಂದ್ರವಾಗಿದ್ದರೂ, ಕಾಂಗ್ರೆಸ್ ಸರ್ಕಾರಗಳ ಅವಧಿಯಲ್ಲಿನ ನೀತಿಗಳಲ್ಲಿ ದೋಷಗಳಿದ್ದವು ಎಂದು ಎತ್ತಿ ಆಡುವುದರಲ್ಲಿ ಸರ್ಕಾರ ಉತ್ಸಾಹ ವ್ಯಕ್ತಪಡಿಸಿತು. ಕಾಂಗ್ರೆಸ್ ಪಕ್ಷದ ತಪ್ಪುಗಳನ್ನು ನೆನಪಿಸುವುದರ ಜೊತೆಗೆ, ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರನ್ನು ಟೀಕಿಸಲಾಯಿತು. ಭಾರತ ಮತ್ತು ಪಾಕಿಸ್ತಾನದ ವಿಭಜನೆ ಹಾಗೂ 1971ರ ಯುದ್ಧದ ಸಂದರ್ಭದಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರದ ಹೊಣೆಗಾರಿಕೆಯನ್ನು ಟೀಕಿಸಿ, ಕಾಂಗ್ರೆಸ್ ಅನ್ನು ಪಾಕಿಸ್ತಾನದ ಬೆಂಬಲಿಗ ಎಂದು ಸರ್ಕಾರ ಕರೆಯಿತು. ರಾಷ್ಟ್ರದ ಸುರಕ್ಷತೆಗೆ ಸಂಬಂಧಿಸಿದಂತೆ ನಡೆಯಬೇಕಾಗಿದ್ದ ಗಂಭೀರ ಚರ್ಚೆ, ರಾಜಕೀಯ ಆರೋಪಗಳ ಆಡುಂಬೊಲವಾದುದು ದುರದೃಷ್ಟಕರ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ವಿದೇಶಾಂಗ ನೀತಿ ಹಾಗೂ ವಿದೇಶಗಳೊಂದಿಗಿನ ಸಂಬಂಧಗಳು ಹಾಗೂ ಸಂಘರ್ಷದ ಸಂದರ್ಭಗಳಲ್ಲಿ ಪಕ್ಷ ರಾಜಕೀಯವನ್ನು ಮೀರಿದ ರಾಜಕೀಯ ಒಮ್ಮತವನ್ನು ದೇಶ ಕಂಡಿದೆ. ಆದರೆ, ಆ ಒಮ್ಮತ ಈಗ ಕಾಣಿಸುತ್ತಿಲ್ಲ. ಈ ಒಡಕಿನಲ್ಲಿ ಎಲ್ಲ ರಾಜಕೀಯ ಪಕ್ಷಗಳ ಪಾತ್ರವೂ ಇರಬಹುದಾದರೂ, ದೇಶದ ಸುರಕ್ಷತೆಗೆ ಸಂಬಂಧಿಸಿದ ಮಹತ್ವಪೂರ್ಣ ಚರ್ಚೆಯನ್ನು ರೂಪಿಸುವಲ್ಲಿ ಕೇಂದ್ರ ಸರ್ಕಾರ ತನ್ನ ಹೊಣೆಗಾರಿಕೆಯನ್ನು ಪ್ರದರ್ಶಿಸುವಲ್ಲಿ ವಿಫಲವಾಗಿದೆ ಎಂದೇ ಹೇಳಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.