ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ | ಏಕೀಕೃತ ಪಿಂಚಣಿ ಯೋಜನೆ: ಸಮತೋಲನ ಸಾಧಿಸುವ ಯತ್ನ

ಪಿಂಚಣಿ ಹೊರೆ ಹೆಚ್ಚಳದ ಬಗ್ಗೆ ವಿಶ್ವದ ಹಲವು ಸರ್ಕಾರಗಳು ಕಳವಳ ಹೊಂದಿವೆ
Published 27 ಆಗಸ್ಟ್ 2024, 23:30 IST
Last Updated 27 ಆಗಸ್ಟ್ 2024, 23:30 IST
ಅಕ್ಷರ ಗಾತ್ರ

ಸರ್ಕಾರಿ ನೌಕರರ ಪಿಂಚಣಿ ವಿಚಾರವಾಗಿ ವಿರೋಧ ಪಕ್ಷಗಳು ರೂಪಿಸಿದ ತಂತ್ರಗಾರಿಕೆಯ ಕಾರಣದಿಂದ ಚುನಾವಣೆಯಲ್ಲಿ ಅನುಭವಿಸಿದ ಹಿನ್ನಡೆಗೆ ಪ್ರತಿಕ್ರಿಯೆಯಾಗಿ ಕೇಂದ್ರ ಸರ್ಕಾರವು ಏಕೀಕೃತ ಪಿಂಚಣಿ ಯೋಜನೆಯನ್ನು (ಯುಪಿಎಸ್‌) ಘೋಷಣೆ ಮಾಡಿರುವಂತಿದೆ. ಆದರೆ, ಮೇಲ್ನೋಟಕ್ಕೆ ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಹಾಗೂ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್) ನಡುವೆ ಸಮತೋಲನವೊಂದನ್ನು ಸಾಧಿಸುವ ಪ್ರಯತ್ನವು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಈಗ ಪ್ರಕಟಿಸಿರುವ ಯುಪಿಎಸ್ ಯೋಜನೆಯಲ್ಲಿ ಇದೆ. 2004ರವರೆಗೆ ಒಪಿಎಸ್ ಜಾರಿಯಲ್ಲಿತ್ತು, ನಂತರದಲ್ಲಿ ಎನ್‌ಪಿಎಸ್ ವ್ಯವಸ್ಥೆ ಜಾರಿಗೆ ಬಂದಿದೆ. ಎನ್‌ಪಿಎಸ್‌ನ ಭಾಗವಾಗಿದ್ದ ‘ಪಿಂಚಣಿ ನಿಧಿಗೆ ನೌಕರರಿಂದಲೂ ಕೊಡುಗೆ ಇರಬೇಕು’ ಎಂಬ ಅಂಶವನ್ನು ಹಾಗೂ ಒಪಿಎಸ್ ವ್ಯವಸ್ಥೆಯಲ್ಲಿ ಇದ್ದ ‘ಖಾತರಿ ಮೊತ್ತದ ಪಿಂಚಣಿ’ ಅಂಶವನ್ನು ಯುಪಿಎಸ್ ಒಳಗೊಂಡಿದೆ. ಪಿಂಚಣಿ ನಿಧಿಗೆ ಕೇಂದ್ರ ಸರ್ಕಾರ ನೀಡುವ ಮೊತ್ತದ ಪ್ರಮಾಣವು ಶೇಕಡ 14ರಿಂದ ಶೇ 18.5ಕ್ಕೆ ಹೆಚ್ಚಳ ಕಾಣಲಿದೆ. ಇದರ ಪರಿಣಾಮವಾಗಿ, ಕೇಂದ್ರ ಸರ್ಕಾರದ ಮೇಲೆ ಹೆಚ್ಚುವರಿಯಾಗಿ ವಾರ್ಷಿಕ ₹6,250 ಕೋಟಿ ಹೊರೆ ಬೀಳಲಿದೆ. ಕನಿಷ್ಠ 10 ವರ್ಷ ಕರ್ತವ್ಯ ನಿರ್ವಹಿಸಿ ನಿವೃತ್ತರಾದವರಿಗೆ ಯುಪಿಎಸ್‌ ವ್ಯವಸ್ಥೆಯ ಅಡಿಯಲ್ಲಿ ಕನಿಷ್ಠ ₹10 ಸಾವಿರವು ಪಿಂಚಣಿ ರೂಪದಲ್ಲಿ ಸಿಗಲಿದೆ. ಪೂರ್ಣ ಅವಧಿಗೆ ಕರ್ತವ್ಯ ನಿರ್ವಹಿಸಿದವರಿಗೆ ಅವರು ನಿವೃತ್ತರಾಗುವುದಕ್ಕಿಂತ ಮೊದಲಿನ 12 ತಿಂಗಳ ಸರಾಸರಿ ಮೂಲ ವೇತನದ ಶೇಕಡ 50ರಷ್ಟು ಮೊತ್ತವು ಪಿಂಚಣಿಯಾಗಿ ಸಿಗಲಿದೆ. ಯುಪಿಎಸ್‌ ಅಡಿ ಸಿಗಲಿರುವ ಪ್ರಯೋಜನಗಳು ಒಪಿಎಸ್‌ಗೆ ಸರಿಸಮ ಅಲ್ಲದಿದ್ದರೂ ಯುಪಿಎಸ್‌ ಆಯ್ಕೆ ಮಾಡಿಕೊಂಡವರಿಗೆ ಖಾತರಿ ಮೊತ್ತದ ಪಿಂಚಣಿ ಸಿಗುತ್ತದೆ.

ಸರ್ಕಾರಿ ನೌಕರರ ಸಂಘಟನೆಗಳು ಈ ಯೋಜನೆ ಬಗ್ಗೆ ಹಲವು ಪ್ರಶ್ನೆಗಳನ್ನು ಹೊಂದಿವೆ. ಅಲ್ಲದೆ, ಯೋಜನೆಯ ಸ್ಪಷ್ಟ ವಿವರಗಳಿಗಾಗಿ ಅವು ಕಾಯುತ್ತಿವೆ. ಹೀಗಿದ್ದರೂ, ಕೇಂದ್ರವು ಪ್ರಕಟಿಸಿರುವ ಈ ಯೋಜನೆಯ ಕಾರಣದಿಂದಾಗಿ ವಿರೋಧ ಪಕ್ಷಗಳು ತಮ್ಮ ನಿಲುವಿನ ಬಗ್ಗೆ ಮರು ಅವಲೋಕನ ನಡೆಸಬೇಕಾದ ಪರಿಸ್ಥಿತಿ ಎದುರಾಗಿದೆ. ಒಪಿಎಸ್ವ್ಯವಸ್ಥೆಯನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರುವ ಭರವಸೆ ನೀಡುವ ಮೂಲಕ ಕಾಂಗ್ರೆಸ್ ಪಕ್ಷವು ಕೆಲವು ರಾಜ್ಯಗಳಲ್ಲಿ ಬಲ ಹೆಚ್ಚಿಸಿಕೊಂಡಿದೆ. ಈಗ ಯುಪಿಎಸ್‌ ಯೋಜನೆಯು ಕಾಂಗ್ರೆಸ್ ನೇತೃತ್ವದ ಸರ್ಕಾರಗಳಿಗೆ ಪಕ್ಷದ ಭರವಸೆಯನ್ನು ಭಾಗಶಃ ಈಡೇರಿಸಲು ಒಂದು ಅವಕಾಶ ಒದಗಿಸಿಕೊಟ್ಟಿದೆ. ಅಲ್ಲದೆ, ಒಪಿಎಸ್‌ನಲ್ಲಿ ಇರುವಂತೆ ಪಿಂಚಣಿಯ ಭಾರಿ ಹೊರೆಯು ಯುಪಿಎಸ್‌ ಅಡಿಯಲ್ಲಿ ಸರ್ಕಾರದ ಮೇಲೆ ಇರುವುದಿಲ್ಲ. ಕಾಂಗ್ರೆಸ್ ನೇತೃತ್ವದ ಸರ್ಕಾರಗಳು ತಮಗೆ ಬಿಜೆಪಿಯ ವಿರುದ್ಧ ನೈತಿಕ ಜಯ ಸಿಕ್ಕಿದೆ ಎಂದೂ ಹೇಳಿಕೊಳ್ಳಬಹುದು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಜಕೀಯ ಲಾಭ ಪಡೆಯಲು ಅವಕಾಶ ಸಿಗದಿರಲಿ ಎಂಬ ಉದ್ದೇಶದೊಂದಿಗೆ, ಮಹಾರಾಷ್ಟ್ರದ ಏಕನಾಥ ಶಿಂದೆ ನೇತೃತ್ವದ ಸರ್ಕಾರವು ಯುಪಿಎಸ್‌ ಯೋಜನೆಯನ್ನು ಜಾರಿಗೆ ತರುವುದಾಗಿ ಈಗಾಗಲೇ ಘೋಷಿಸಿ ಆಗಿದೆ. ಬಿಜೆಪಿಯ ಆಡಳಿತ ಇರುವ ಹರಿಯಾಣದಲ್ಲಿಯೂ ಇದೇ ತಂತ್ರವನ್ನು ಅನುಸರಿಸುವ ನಿರೀಕ್ಷೆ ಇದೆ.

ದೇಶದ ಜನರ ಸರಾಸರಿ ಜೀವಿತಾವಧಿಯು ಈಗ 70 ವರ್ಷಗಳು. ಇದು ಹೆಚ್ಚುತ್ತಿದೆ ಕೂಡ. ಹೀಗಿರುವಾಗ, ಪಿಂಚಣಿ ಪಾವತಿಗಾಗಿ ವಿನಿಯೋಗಿಸಬೇಕಿರುವ ಮೊತ್ತವು ಹೆಚ್ಚುತ್ತ ಸಾಗಿದೆ. ಮುಂದಿನ ದಶಕಗಳಲ್ಲಿ ಈ ಮೊತ್ತವು ನಿಯಂತ್ರಣ ಮೀರಿ ಹೋಗಬಹುದು ಎಂದು ಹಲವು ಸರ್ಕಾರಗಳಿಗೆ ಅನ್ನಿಸಿದೆ. ಪಿಂಚಣಿದಾರರು ತಾವು ಹಿಂದೆ ಕರ್ತವ್ಯ ನಿರ್ವಹಿಸಿದ್ದ ಅವಧಿಗಿಂತ ಹೆಚ್ಚಿನ ಅವಧಿಗೆ ಪಿಂಚಣಿ ಪಡೆದಿರುವ ನಿದರ್ಶನಗಳು ಇವೆ. ವಿಶ್ವದಲ್ಲಿ ಹಲವು ಸರ್ಕಾರಗಳು ಹೆಚ್ಚುತ್ತಿರುವ ಪಿಂಚಣಿ ಹೊರೆಯ ಬಗ್ಗೆ ಕಳವಳ ಹೊಂದಿವೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಪಿಂಚಣಿ ಹೊರೆಯನ್ನು ತಗ್ಗಿಸಿಕೊಳ್ಳುವ ಉದ್ದೇಶದಿಂದಲೇ ತನ್ನ ಎರಡನೆಯ ಅವಧಿಯಲ್ಲಿ ಅಗ್ನಿವೀರ ಯೋಜನೆ, ಲ್ಯಾಟರಲ್ ಎಂಟ್ರಿ, ಹಲವು ಹುದ್ದೆಗಳನ್ನು ಖಾಲಿ ಬಿಡುವ ಕ್ರಮಗಳ ಮೊರೆ ಹೋಗಿತ್ತು. ಈಗ ಘೋಷಣೆಯಾಗಿರುವ ಯುಪಿಎಸ್‌ ವ್ಯವಸ್ಥೆಯು ಪಿಂಚಣಿ ಹೊರೆಯನ್ನು ನಿಭಾಯಿಸುವ ಹಾಗೂ ನೌಕರರ ಬೇಡಿಕೆಗಳಿಗೆ ಸ್ಪಂದಿಸುವ ವಿಚಾರವಾಗಿ ಸರ್ಕಾರದ ಕಡೆಯಿಂದ ಬಂದಿರುವ ಬಹಳ ಸುಧಾರಿತ ಪ್ರತಿಕ್ರಿಯೆಯಾಗಿ ಕಾಣುತ್ತಿದೆ. ಚುನಾವಣೆಗಳು ಹತ್ತಿರವಾದಂತೆಲ್ಲ ಇಂತಹ ಹಲವು ಕ್ರಮಗಳನ್ನು ನಿರೀಕ್ಷಿಸಬಹುದು. ಒಪಿಎಸ್ ಬದಲು ಯುಪಿಎಸ್‌ ವ್ಯವಸ್ಥೆ ಜಾರಿಗೆ ಬಂದ ನಂತರವೂ ತಮ್ಮ ಸ್ಥಿತಿಯು ಇತರರಿಗೆ ಹೋಲಿಸಿದರೆ ಬಹಳ ಉತ್ತಮವಾಗಿಯೇ ಇರುತ್ತದೆ ಎಂಬುದನ್ನು ಸರ್ಕಾರಿ ನೌಕರರು ಅರಿತರೆ ಚೆನ್ನ. ಈ ದೇಶದ ಬಹುಪಾಲು ಜನರಿಗೆ ಯಾವ ಪಿಂಚಣಿಯೂ ಇಲ್ಲ, ಸಾಮಾಜಿಕ ಭದ್ರತೆಯೂ ಇಲ್ಲ ಎಂಬ ವಾಸ್ತವವು ಎಲ್ಲರಿಗೂ ತಿಳಿದಿರಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT