ಬುಧವಾರ, ಏಪ್ರಿಲ್ 14, 2021
31 °C

ಕಾನೂನಾತ್ಮಕ ಗೊಂದಲ ಹೆಚ್ಚಿಸಿದ ಸುಪ್ರೀಂ ಕೋರ್ಟ್ ತೀರ್ಪು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ವಿರುದ್ಧ ಬಂಡೆದ್ದು, ತಮ್ಮ ಶಾಸಕತ್ವಕ್ಕೆ ರಾಜೀನಾಮೆ ಸಲ್ಲಿಸಿದ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಹದಿನೈದು ಶಾಸಕರು ಸುಪ್ರೀಂ ಕೋರ್ಟ್‌ ಮುಂದೆ ಸಲ್ಲಿಸಿದ ಅರ್ಜಿಯ ಕುರಿತು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ತ್ರಿಸದಸ್ಯ ಪೀಠ ನೀಡಿರುವ ತೀರ್ಪು, ರಾಜ್ಯದ ರಾಜಕೀಯದಲ್ಲಿ ಹೊಸ ಕಾನೂನಾತ್ಮಕ ಗೊಂದಲಗಳನ್ನು ಹುಟ್ಟುಹಾಕಿದೆ. ‘ನಾವು ಈಗಾಗಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇವೆ. ನಮ್ಮ ರಾಜೀನಾಮೆಯನ್ನು ಶೀಘ್ರ ಇತ್ಯರ್ಥಪಡಿಸಲು ಸಭಾಧ್ಯಕ್ಷರಿಗೆ ನಿರ್ದೇಶನ ನೀಡಿ’ ಎನ್ನುವುದು ಬಂಡುಕೋರ ಶಾಸಕರ ಮುಖ್ಯ ಅಹವಾಲು ಆಗಿತ್ತು. ಅರ್ಜಿಯ ವಿಚಾರಣೆ ನಡೆಸಿದ ತ್ರಿಸದಸ್ಯ ಪೀಠವು ‘ಸಭಾಧ್ಯಕ್ಷರಿಗೆ ಯಾವುದೇ ನಿರ್ದೇಶನ ನೀಡಲು ಸಾಧ್ಯವಿಲ್ಲ. ರಾಜೀನಾಮೆಯ ಕುರಿತು ಸಭಾಧ್ಯಕ್ಷರು, ತಮ್ಮದೇ ಆದ ಕಾಲಮಿತಿಯಲ್ಲಿ ನಿರ್ಧಾರ ತೆಗೆದುಕೊಳ್ಳಲು ಸ್ವತಂತ್ರರಿದ್ದಾರೆ’ ಎಂದು ತಿಳಿಸಿದೆ. ಆದರೆ ರಾಜ್ಯ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಗುರುವಾರ ವಿಶ್ವಾಸಮತ ಯಾಚನೆ ಮಾಡಲಿರುವ ಹಿನ್ನೆಲೆಯಲ್ಲಿ, ‘ಮುಂದಿನ ಆದೇಶದವರೆಗೆ ಈ 15 ಮಂದಿ ಶಾಸಕರು ಈಗಿನ ಅಧಿವೇಶನದ ಕಲಾಪದಲ್ಲಿ ಭಾಗವಹಿಸುವಂತೆ ಒತ್ತಾಯ ಹೇರಲಾಗದು. ಅವರು ಕಲಾಪದಲ್ಲಿ ಭಾಗವಹಿಸಲೂಬಹುದು ಅಥವಾ ದೂರವಿರಲೂಬಹುದು’ ಎಂದೂ ತೀರ್ಪು ತಿಳಿಸಿದೆ. ಸಹಜವಾಗಿಯೇ ಈ ತೀರ್ಪನ್ನು ಆಡಳಿತ ಮೈತ್ರಿಕೂಟ ಮತ್ತು ವಿರೋಧ ಪಕ್ಷಗಳು ತಮ್ಮ ಮೂಗಿನ ನೇರಕ್ಕೆ ವಿಶ್ಲೇಷಣೆ ಮಾಡುತ್ತಿವೆ. ‘ವಿಪ್‌ ನೀಡಬಾರದು ಎಂಬ ಯಾವುದೇ ಸೂಚನೆ ಸುಪ್ರೀಂ ಕೋರ್ಟ್‌ ತೀರ್ಪಿನಲ್ಲಿ ಇಲ್ಲ. ವಿಪ್‌ ನೀಡುವುದು ರಾಜಕೀಯ ಪಕ್ಷಗಳ ಶಾಸನಬದ್ಧ ಹಕ್ಕು’ ಎಂದು ವಾದಿಸಿರುವ ಕಾಂಗ್ರೆಸ್‌ ಮತ್ತು ಜೆಡಿಎಸ್‌, ಬಂಡುಕೋರರ ಸಹಿತ ತಮ್ಮ ಎಲ್ಲ ಶಾಸಕರಿಗೂ ಈಗಾಗಲೇ ವಿಪ್‌ ನೀಡಿವೆ. ‘ಸುಪ್ರೀಂ ಕೋರ್ಟ್‌ನ ತೀರ್ಪು ಬಂಡಾಯ ಶಾಸಕರಿಗೆ ಸಿಕ್ಕಿರುವ ನೈತಿಕ ಗೆಲುವು. ಗುರುವಾರ ಅಧಿವೇಶನದಲ್ಲಿ ಭಾಗವಹಿಸದಿದ್ದರೆ ಅವರ ವಿರುದ್ಧ ವಿಪ್‌ ‍ಪರಿಣಾಮ ಬೀರುವುದಿಲ್ಲ’ ಎಂದು ವಿರೋಧ ಪಕ್ಷದ ನಾಯಕರು ವ್ಯಾಖ್ಯಾನ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಗುರುವಾರ ನಡೆಯಲಿರುವ ಮೈತ್ರಿ ಸರ್ಕಾರದ ವಿಶ್ವಾಸಮತ ನಿರ್ಣಯದ ಪರಿಣಾಮವು ರಾಜಕೀಯ ವಲಯದಲ್ಲಿ ಮಾತ್ರವಲ್ಲ, ಸಂವಿಧಾನ ತಜ್ಞರಲ್ಲೂ ಹೆಚ್ಚಿನ ಕುತೂಹಲ ಮೂಡಿಸಿದೆ. ಸುಪ್ರೀಂ ಕೋರ್ಟ್‌ ತನ್ನ ತೀರ್ಪಿನಲ್ಲಿ ‘ಕರ್ನಾಟಕದ ಈಗಿನ ರಾಜಕೀಯ ಸ್ಥಿತಿಯಲ್ಲಿ ಉದ್ಭವಿಸುವ ವಿಶಾಲವ್ಯಾಪ್ತಿಯ ಸಾಂವಿಧಾನಿಕ ವಿಷಯಗಳನ್ನು ಆಮೇಲೆ ಪರಿಶೀಲಿಸಬಹುದು. ಈ ಹಂತದಲ್ಲಿ ಸಾಂವಿಧಾನಿಕ ಸಮತೋಲನವನ್ನು ಕಾಪಾಡುವ ಅವಶ್ಯಕತೆ ಇದೆ ಮತ್ತು ವಾದಿ–ಪ್ರತಿವಾದಿಗಳ ಸಂಘರ್ಷ ಹಾಗೂ ಹಕ್ಕುಗಳ ಕುರಿತು ಎದ್ದಿರುವ ಪ್ರಶ್ನೆಗಳಿಗೆ ಉತ್ತರಿಸಬೇಕಿದೆ. ವಿಧಾನಸಭೆಯ ಕಲಾಪಗಳ ನಿಯಮದ ಅನ್ವಯ ಸಭಾಧ್ಯಕ್ಷರು ತಮ್ಮ ಕಾರ್ಯವನ್ನು ಮುಕ್ತವಾಗಿ ನಿರ್ವಹಿಸಲಿ. ಸಭಾಧ್ಯಕ್ಷರು ಕೈಗೊಳ್ಳುವ ನಿರ್ಧಾರವನ್ನು ಬಳಿಕ ನ್ಯಾಯಾಲಯದ ಮುಂದೆ ತರಲಿ’ ಎಂದೂ ಹೇಳಿದೆ. ಇದರಿಂದಾಗಿ, ಮುಂದಿನ ದಿನಗಳಲ್ಲಿ ಶಾಸಕಾಂಗ ಮತ್ತು ನ್ಯಾಯಾಂಗದ ಅಧಿಕಾರ ವ್ಯಾಪ್ತಿಯು ಇನ್ನಷ್ಟು ನಿಕಷಕ್ಕೆ ಒಳಗಾಗಬಹುದು. 

ಕರ್ನಾಟಕದ ಇವತ್ತಿನ ಇಡೀ ರಾಜಕೀಯ ಸನ್ನಿವೇಶ ಎತ್ತಿರುವ ವಿಶಾಲ ವ್ಯಾಪ್ತಿಯ ಪ್ರಶ್ನೆಗಳು ಯಾವುವು ಎನ್ನುವುದು ಸುಪ್ರೀಂ ಕೋರ್ಟಿನ ತೀರ್ಪಿನಲ್ಲಿ ಸ್ಪಷ್ಟವಾಗಿಲ್ಲ. ಆದರೆ ಬಂಡಾಯ ಎದ್ದು ಮುಂಬೈಯ ಪಂಚತಾರಾ ಹೋಟೆಲ್‌ನಲ್ಲಿ ಗುಂಪುಗೂಡಿರುವ ಶಾಸಕರು, ತಮ್ಮ ಪಕ್ಷದ ಜೊತೆಗೆ ಯಾವುದೇ ಸೈದ್ಧಾಂತಿಕ ಭಿನ್ನಮತ ಹೊಂದಿ ರಾಜೀನಾಮೆ ನೀಡಿದ್ದಾರೆ ಎಂದು ಅನ್ನಿಸುವುದಿಲ್ಲ. ಈ ಸರ್ಕಾರ ಉರುಳಿದ ನಂತರ ಇನ್ನೊಂದು ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದರೆ ಅಲ್ಲಿಯೂ ಸಚಿವ ಸ್ಥಾನ ಅಥವಾ ಉನ್ನತ ಅಧಿಕಾರ ಪಡೆಯುವ ಗುರಿ ಇಟ್ಟುಕೊಂಡೇ ಅವರು ರಾಜೀನಾಮೆ ನೀಡಿದ್ದಾರೆ ಎನ್ನುವುದು ಸ್ಪಷ್ಟ. ಇದರ ಜೊತೆಗೇ ಶಾಸಕರಿಗೆ ತಾವು ಈಗಿರುವ ಪಕ್ಷ ತ್ಯಜಿಸಲು ಅಥವಾ ಅದೇ ಪಕ್ಷದಲ್ಲೇ ಉಳಿದುಕೊಳ್ಳಲು ಭಾರಿ ಆಮಿಷಗಳನ್ನು ಒಡ್ಡಲಾಗಿದೆ ಎಂದು ಹರಿದಾಡುತ್ತಿರುವ ಸುದ್ದಿಗಳಲ್ಲಿ ಹುರುಳಿಲ್ಲ ಎನ್ನಲಾಗದು. ಶಾಸಕರು ಹೀಗೆ ಅಧಿಕಾರ ಮತ್ತು ಆಮಿಷಗಳ ಬೆನ್ನು ಹತ್ತುವ ಮೂಲಕ ಆಯಾರಾಂ ಗಯಾರಾಂ ಸಂಸ್ಕೃತಿಯನ್ನು ಅಧಿಕೃತಗೊಳಿಸುವ ವಿದ್ಯಮಾನ ನಿಜಕ್ಕೂ ಪ್ರಜಾಪ್ರಭುತ್ವಕ್ಕೆ ಆತಂಕಕಾರಿ. ಪಕ್ಷಾಂತರದ ಕಾರಣಕ್ಕೇ ಸರ್ಕಾರಗಳು ಉರುಳಿರುವ ಹಲವು ನಿದರ್ಶನಗಳು ನಮ್ಮ ಮುಂದಿವೆ. ಪಕ್ಷಾಧಾರಿತ ಪ್ರಜಾಪ್ರಭುತ್ವ ಪದ್ಧತಿಯಲ್ಲಿ, ಪಕ್ಷಾಂತರ ನಿಷೇಧ ಕಾಯ್ದೆಯ ಸಡಿಲ ಹೆಣಿಗೆಗಳನ್ನು ದುರುಪಯೋಗ ಪಡಿಸಿಕೊಂಡು ನಡೆಯುತ್ತಿರುವ ಇಂತಹ ವಿದ್ಯಮಾನಗಳ ಬಗ್ಗೆಯೂ ಸುಪ್ರೀಂ ಕೋರ್ಟ್ ಗಮನಹರಿಸಬೇಕಾದ ಅಗತ್ಯವಿದೆ. ಶಾಸಕರ ಅಧಿಕಾರಲಾಲಸೆಯ ತಂತ್ರಗಳನ್ನು ವಿಫಲಗೊಳಿಸಲು ಪಕ್ಷಾಂತರ ನಿಷೇಧ ಕಾಯ್ದೆಯ ವಿಧಿಗಳನ್ನು ಇನ್ನಷ್ಟು ಕಠಿಣಗೊಳಿಸುವ ಅಗತ್ಯ ಈಗ ಹಿಂದೆಂದಿಗಿಂತ ಹೆಚ್ಚಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು