ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ‘ಜನಸಂಖ್ಯಾ ಅಸಮತೋಲನ’ ತಪ್ಪು ಗ್ರಹಿಕೆ, ಕುಟಿಲ ತಂತ್ರ

Last Updated 9 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

ಆರ್‌ಎಸ್‌ಎಸ್‌ ಸರಸಂಘಚಾಲಕ ಮೋಹನ್‌ ಭಾಗವತ್‌ ಅವರು ನಾಗಪುರದಲ್ಲಿರುವ ಸಂಘದ ಕೇಂದ್ರ ಕಚೇರಿಯಲ್ಲಿ ವಿಜಯದಶಮಿಯ ದಿನ ಮಾಡಿದ ಭಾಷಣದಲ್ಲಿ ಆಡಿದ ಕೆಲವು ಮಾತುಗಳು ಮತ್ತು ನೀಡಿದ ಕೆಲವು ಸಲಹೆಗಳು ಸತ್ಯದ ನೆಲೆಯ ಮೇಲೆ ನಿಂತಿಲ್ಲ. ಅಷ್ಟೇ ಅಲ್ಲದೆ, ಅವು ತಪ್ಪು ಗ್ರಹಿಕೆಗಳಿಂದ ಕೂಡಿವೆ. ವಿಜಯದಶಮಿಯ ಭಾಷಣದಲ್ಲಿ ವ್ಯಕ್ತಪಡಿಸಲಾಗುವ ಅಭಿಪ್ರಾಯಗಳನ್ನು ವಿವಿಧ
ವಿಚಾರಗಳ ಬಗ್ಗೆ ಸಂಘದ ಅಧಿಕೃತ ನಿಲುವು ಎಂದೇ ಪರಿಗಣಿಸಲಾಗುತ್ತದೆ. ಸಂಘದ ಕಾರ್ಯಕರ್ತರು ಇದನ್ನು ಎದುರು ನೋಡುತ್ತಿರುತ್ತಾರೆ. ದೇಶದ ಜನಸಂಖ್ಯೆ ಮತ್ತು ಅದರಲ್ಲಿ ವಿವಿಧ ಧರ್ಮಗಳ ಪಾಲು ಎಷ್ಟು ಎಂಬುದರ ಕುರಿತ ಚರ್ಚೆಯು ಸಂಘದ ನೆಚ್ಚಿನ ವಿಷಯ. ಸಮಾಜವನ್ನು ವಿಭಜಿಸಲು ಮತ್ತು ದೇಶದಲ್ಲಿ ಹಿಂದೂಗಳು ಅಪಾಯದಲ್ಲಿದ್ದಾರೆ ಎಂದು ಬಿಂಬಿಸಲು ಇದನ್ನು ಸದಾ ಬಳಸಿಕೊಳ್ಳಲಾಗಿದೆ. ಭಾಗವತ್‌ ಅವರು ಈ ವಿಷಯವನ್ನು ಮತ್ತೆ ಕೆದಕಿದ್ದಾರೆ. ಜನಸಂಖ್ಯಾ ನಿಯಂತ್ರಣದ ಕುರಿತು ಅವರು ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಪರಿಶೀಲನೆಗೆ ಒಳಪಡಿಸಿದರೆ ಅವು ಬಿದ್ದು ಹೋಗುತ್ತವೆ. ಜನಸಂಖ್ಯೆಗೆ ಸಂಬಂಧಿಸಿದ ಹಲವು ವಿಚಾರಗಳನ್ನು ಅವರು ಪ್ರಸ್ತಾಪಿಸಿದ್ದಾರೆ. ಜನಸಂಖ್ಯೆ ಏರಿಕೆಯ ದರ, ಜನಸಂಖ್ಯೆಯ ಏರಿಕೆಯಿಂದಾಗಿ ಆರ್ಥಿಕತೆ ಮೇಲಾಗುವ ಪರಿಣಾಮ, ಮಹಿಳೆಯರ ಸಬಲೀಕರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳು ಮುಂತಾದ ವಿಚಾರಗಳನ್ನು ಅವರು ಚರ್ಚಿಸಿದ್ದಾರೆ. ‘ಜನಸಂಖ್ಯಾ ಅಸಮತೋಲನ’ ಮತ್ತು ಜನಸಂಖ್ಯಾ ‘ನಿಯಂತ್ರಣ’ದ ಅಗತ್ಯದಂತಹ ತಪ್ಪು ಗ್ರಹಿಕೆಗಳಿಗೆ ಅವರು ಒತ್ತು ನೀಡಿದ್ದಾರೆ.

ಜನಸಂಖ್ಯಾ ಬೆಳವಣಿಗೆಯಲ್ಲಿನ ಅಸಮತೋಲನ ಮತ್ತು ಜನಸಂಖ್ಯೆಯ ಧರ್ಮವಾರು ಪ್ರಾತಿನಿಧ್ಯದಲ್ಲಿ ಆಗುವ ಬದಲಾವಣೆಗಳು ಭೌಗೋಳಿಕ ಗಡಿ ಗುರುತುಗಳಲ್ಲಿಯೂ ಬದಲಾವಣೆಗೆ ಕಾರಣವಾಗಬಹುದು ಎಂದು ಅವರು ಹೇಳಿದ್ದಾರೆ. ‘ಜನಸಂಖ್ಯಾ ನಿಯಂತ್ರಣ ಮತ್ತು ಧರ್ಮ ಆಧಾರಿತ ಜನಸಂಖ್ಯಾ ಸಮತೋಲನವು ಮಹತ್ವದ ವಿಚಾರವಾಗಿದ್ದು ಅದನ್ನು ನಿರ್ಲಕ್ಷಿಸಲು ಸಾಧ್ಯವೇ ಇಲ್ಲ’ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ. ಇದು ತಪ್ಪು ಮತ್ತು ಕುಟಿಲವಾದ ಯೋಚನೆ. ಭಾರತದ ಒಟ್ಟು ಫಲವಂತಿಕೆಯ ದರವು ಸತತವಾಗಿ ಕುಸಿಯುತ್ತಲೇ ಇದೆ ಮತ್ತು ದೇಶವು ಕಡಿಮೆ ಫಲವಂತಿಕೆ ಹಂತವನ್ನು ಪ್ರವೇಶಿಸಿರುವ ಸಾಧ್ಯತೆಯೂ ಇದೆ. ಒಟ್ಟು ಫಲವಂತಿಕೆ ದರವು 2ಕ್ಕೆ ಇಳಿದಿದೆ ಮತ್ತು ಅದು ಜನಸಂಖ್ಯೆ ಮರುಭರ್ತಿಗೆ ಬೇಕಾದ ದರವಾದ 2.1ಕ್ಕಿಂತಲೂ ಕಡಿಮೆ ಆಗಿದೆ. ಜನಸಂಖ್ಯೆಯ ವಾರ್ಷಿಕ ಹೆಚ್ಚಳ ದರ ಕೂಡ ಕಡಿಮೆ ಆಗುತ್ತಲೇ ಇದೆ. ಭಾಗವತ್‌ ಅವರು ಜನಸಂಖ್ಯೆ ಏರಿಕೆ ದರ ಕುರಿತು ಆಡಿದ ಮಾತುಗಳು ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್‌ನಂತಹ ರಾಜ್ಯಗಳಿಗೆ ಮಾತ್ರ ಅನ್ವಯ ಆಗುತ್ತವೆ. ದೇಶದ ಹೆಚ್ಚಿನ ಭಾಗಗಳಲ್ಲಿ ಜನಸಂಖ್ಯೆಯು ಸ್ಥಿರಗೊಂಡಿರುವ ಕಾರಣದಿಂದಾಗಿ ಜನಸಂಖ್ಯಾ ನಿಯಂತ್ರಣದ ಪ್ರಯತ್ನ
ಗಳನ್ನು ಈ ರಾಜ್ಯಗಳಿಗೆ ಕೇಂದ್ರೀಕರಿಸಬಹುದು.

ಆರ್‌ಎಸ್‌ಎಸ್‌ ಮುಖ್ಯಸ್ಥರು ಪ್ರತಿಪಾದಿಸಿದ ಜನಸಂಖ್ಯಾ ಅಸಮತೋಲನ, ಅಂದರೆ ಹಿಂದೂಗಳ ಜನಸಂಖ್ಯೆ ಬೆಳವಣಿಗೆ ದರ ಮತ್ತು ಮುಸ್ಲಿಮರ ಜನಸಂಖ್ಯೆ ಬೆಳವಣಿಗೆ ದರ ನಡುವೆ ಅಸಮತೋಲನ ಇದೆ ಎಂಬ ಗ್ರಹಿಕೆಯೂ ತಪ್ಪು. ದೇಶದ ಎಲ್ಲ ಧರ್ಮಗಳಲ್ಲಿಯೂ ಜನಸಂಖ್ಯೆ ಮತ್ತು ಏರಿಕೆ ದರವು ಕುಸಿದಿದೆ. ಮುಸ್ಲಿಮರ ಒಟ್ಟು ಫಲವಂತಿಕೆ ದರವು ಈಗ 2.3ರಷ್ಟಿದೆ. ಕಳೆದ ಎರಡು ದಶಕಗಳಲ್ಲಿ ಈ ಸಮುದಾಯದ ಫಲವಂತಿಕೆ ದರವು ಇತರ ಸಮುದಾಯಗಳಿಗೆ ಹೋಲಿಸಿದರೆ ಹೆಚ್ಚು ವೇಗದಲ್ಲಿ ಕುಸಿಯುತ್ತಿದೆ. ಕೇರಳ, ಜಮ್ಮು–ಕಾಶ್ಮೀರ ಮತ್ತು ಅಸ್ಸಾಂನಲ್ಲಿ ಮುಸ್ಲಿಂ ಸಮುದಾಯದ ಫಲವಂತಿಕೆ ದರವು ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಇದೆ. ಭಾಗವತ್‌ ಅವರು ಮತಾಂತರ ಮತ್ತು ಒಳನುಸುಳುವಿಕೆ ಕುರಿತು ಎತ್ತಿರುವ ಪ್ರಶ್ನೆಗಳಿಗೆ ಕೂಡ ಸಮರ್ಥನೆ ಇಲ್ಲ. ಹಿಂದೂಗಳನ್ನು ಈ ದೇಶದಲ್ಲಿ ಅಲ್ಪಸಂಖ್ಯಾತರನ್ನಾಗಿಸಲುಮುಸ್ಲಿಮರು ಯತ್ನಿಸುತ್ತಿದ್ದಾರೆ ಎಂಬುದನ್ನು ಸಂಘ ಮತ್ತು ಅದರ ಜೊತೆಗೆ ಇರುವವರು ಪ್ರತಿಪಾದಿಸುತ್ತಿದ್ದಾರೆ. ಇದು ಸುಳ್ಳು ಮಾತ್ರವಲ್ಲ, ರಾಜಕೀಯ ಮತ್ತು ಕೋಮುವಾದಿ ಯೋಜನೆಯನ್ನು ಹೊಂದಿರುವ ಕುಟಿಲ ತಂತ್ರ. ‘ಜನಸಂಖ್ಯಾ ಅಸಮತೋಲನ’ ಮತ್ತು ಅದರ ಪರಿಣಾಮಗಳ ಕುರಿತು ಮಾತನಾಡುವ ಮೂಲಕ ಇದನ್ನು ಮತ್ತೆ ಮುನ್ನೆಲೆಗೆ ತರಲು ಭಾಗವತ್‌ ಯತ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT