ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಘಟ್ಟಪ್ರದೇಶಗಳಲ್ಲಿ ಭೂಕುಸಿತದ ಸಾಧ್ಯತೆ, ಸಿಗಬೇಕಿದೆ ಆದ್ಯತೆ

Last Updated 21 ಜೂನ್ 2021, 20:25 IST
ಅಕ್ಷರ ಗಾತ್ರ

ಕಳೆದ ವರ್ಷ ಆಗಸ್ಟ್‌ ಮೊದಲ ವಾರದಲ್ಲಿ ಅತಿವೃಷ್ಟಿಯಿಂದಾಗಿ ಕೊಡಗಿನ ತಲಕಾವೇರಿಯಲ್ಲಿ ಸಂಭವಿಸಿದ ಭೂಕುಸಿತವನ್ನು ಯಾರೂ ಮರೆಯುವಂತಿಲ್ಲ. ತಲಕಾವೇರಿಯ ಅರ್ಚಕರ ಆಸ್ತಿ, ಮನೆ ಹಾಗೂ ಕುಟುಂಬವೇ ಮಣ್ಣಿನಲ್ಲಿ ಲೀನವಾಗಿತ್ತು. ಅದಕ್ಕೂ ಹಿಂದೆ 2019ರ ಆಗಸ್ಟ್‌ ತಿಂಗಳಲ್ಲಿ ಸಕಲೇಶಪುರ- ಸುಬ್ರಹ್ಮಣ್ಯ ಘಟ್ಟ ಪ್ರದೇಶಗಳ ರೈಲ್ವೆ ಹಳಿಗುಂಟ ಸುಮಾರು 40 ಸ್ಥಳಗಳಲ್ಲಿ ಸರಣಿ ಭೂಕುಸಿತ ಸಂಭವಿಸಿದ್ದು ದಾಖಲಾಗಿದೆ. ಅದಕ್ಕೂ ಹಿಂದೆ 2018ರ ಆಗಸ್ಟ್‌ ತಿಂಗಳಲ್ಲಿ ಕೇರಳದ ಹಲವೆಡೆ ಹಾಗೂ ಕೊಡಗು, ಚಿಕ್ಕಮಗಳೂರಿನ ವಿಶಾಲ ವ್ಯಾಪ್ತಿಯ ಭೂಪ್ರದೇಶದಲ್ಲಿ ಗುಡ್ಡಗಳು ಕುಸಿದು 350ಕ್ಕೂ ಹೆಚ್ಚು ಸಾವು ಸಂಭವಿಸಿ, ಅನೇಕ ಹಳ್ಳಿಗಳು ಅಕ್ಷರಶಃ ನಾಪತ್ತೆಯಾಗಿ ದುರಂತಗಳ ಶೃಂಖಲೆಯೇ ಹೆಣೆದಂತಿತ್ತು.

ಈ ವರ್ಷ ಜೂನ್‌ ತಿಂಗಳ ಮೊದಲ ಮೂರು ವಾರಗಳಲ್ಲೇ ಭಾರಿ ಅಬ್ಬರದ ಮಳೆ ಬಿದ್ದಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನ ಏಳು ಜಿಲ್ಲೆಗಳಲ್ಲಿ ಮತ್ತೆ ಧಾರಾಕಾರ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಆಪತ್ತಿನ ಹಳದಿ ಬಾವುಟವನ್ನು ಬೀಸುತ್ತಿದೆ. ಅತಿವೃಷ್ಟಿ ಎಲ್ಲೇ ಸಂಭವಿಸಿದರೂ ಅದು ಅಪಾಯಗಳ ಸರಮಾಲೆಯನ್ನೇ ತರುತ್ತದೆ. ಅದರಲ್ಲೂ ವಿಶೇಷವಾಗಿ ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಅದರಿಂದ ಸಂಭವಿಸಬಹುದಾದ ದುರಂತಗಳು ಒಂದೆರಡಲ್ಲ. ಗುಡ್ಡ ಕಣಿವೆಗಳ ಮಡಿಲಲ್ಲಿರುವ ಗ್ರಾಮಗಳಿಗೆ ಸಂಪರ್ಕ ಸಾಧನಗಳೂ ಸಂಚಾರ ಸೌಲಭ್ಯಗಳೂ ಅಷ್ಟಕ್ಕಷ್ಟೇ ಇರುವುದರಿಂದ ಆಪತ್ತಿನ ಘಟನೆ ಹೊರಜಗತ್ತಿಗೆ ಗೊತ್ತಾಗುವುದೂ ತಡವಾಗುತ್ತದೆ; ಸಂರಕ್ಷಣೆಗೆಂದು ಧಾವಿಸುವುದೂ ದುಸ್ತರವಾಗುತ್ತದೆ. ಈ ವರ್ಷ ಈಗಾಗಲೇ ಸಾಕಷ್ಟು ಮಳೆ ಸುರಿದು ಮಣ್ಣಿನ ಆಳಕ್ಕೂ ನೀರಿನ ಪಸೆ ಇಳಿದಿರುವುದರಿಂದ ಇನ್ನಷ್ಟು ಮಳೆ ಸುರಿದರೆ ಈ ವರ್ಷವೂ ಭೂಕುಸಿತದ ಸಾಧ್ಯತೆ ಇದೆಯೆಂದು ತಜ್ಞರು ಎಚ್ಚರಿಸಿದ್ದಾರೆ.

ಆಧುನಿಕ ತಂತ್ರಜ್ಞಾನದಿಂದ ಈಗೀಗ ಹವಾ ಮುನ್ಸೂಚನೆ ಸಾಕಷ್ಟು ನಿಖರವಾಗಿ, ಕ್ಲುಪ್ತ ಸಮಯದಲ್ಲೇ ಸಿಗುತ್ತಿದೆ ನಿಜ. ಬಿರುಗಾಳಿ, ಜಡಿಮಳೆಯ ಮುನ್ಸೂಚನೆಯ ಎಚ್ಚರಿಕೆಯನ್ನು ಮೊದಲೇ ಪಡೆದು ಕರಾವಳಿಯಲ್ಲಿ ಮೀನುಗಾರರ ದೋಣಿಗಳನ್ನು, ಬಸ್‌-ರೈಲು ಸಂಚಾರಗಳನ್ನು ಸ್ಥಗಿತ ಗೊಳಿಸಬಹುದು. ಸಂಕಷ್ಟಕ್ಕೆ ಸಿಲುಕಬಹುದಾದ ಸಮುದಾಯವನ್ನು ದೂರದ ಸುರಕ್ಷಿತ ಸ್ಥಳಗಳಿಗೆ ಸಾಗಿಸಬಹುದು. ಆದರೆ ಪಶ್ಚಿಮ ಘಟ್ಟಗಳ ದುರ್ಗಮ ಪರಿಸರದ ನೈಸರ್ಗಿಕ ವಿಕೋಪಗಳು ಬೇರೆ ಬಗೆಯವಾಗಿವೆ. ನೂರಾರು ಕೋಟಿ ವರ್ಷಗಳ ಶಿಥಿಲ ಶಿಲೆಗಳ ಮೇಲೆ ಹಸಿರು ನಿಸರ್ಗ ಬೆಳೆದು ನಿಂತಿದೆ.

ಒಂದೊಂದು ಬೆಟ್ಟ, ಒಂದೊಂದು ಕಣಿವೆಯ ಭೂಲಕ್ಷಣಗಳೂ ವಿಭಿನ್ನವಾಗಿದ್ದು ಜಡಿಮಳೆಯ ಪರಿಣಾಮ ಹೇಗಿರುತ್ತದೆಂದು ಹಿಂದಿನ ಅನುಭವಗಳ ಅಂದಾಜಿನಲ್ಲಿ ಸ್ಥೂಲವಾಗಿ ಹೇಳಬಹುದೇ ವಿನಾ ಇಂಥದ್ದೇ ಸ್ಥಳದಲ್ಲಿ ಭೂಕುಸಿತ ಸಂಭವಿಸಲಿದೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಮುಂದೆ ಸಂಭವಿಸಬಹುದಾದ ಭೂಕಂಪನ, ಭೂಕುಸಿತದ ಸೂಚನೆಯನ್ನು ನೀಡುವಷ್ಟು ವಿಜ್ಞಾನ, ತಂತ್ರಜ್ಞಾನ ಮುಂದುವರೆದಿಲ್ಲ. ಆದರೆ ಪಶ್ಚಿಮ ಘಟ್ಟಗಳ ಅಸ್ಥಿರ ಗುಡ್ಡಬೆಟ್ಟ ಗಳನ್ನು ಇನ್ನಷ್ಟು ಸಡಿಲಗೊಳಿಸಲು ಬೇಕಾದ ಎಲ್ಲ ಬಗೆಯ ತಂತ್ರಜ್ಞಾನಗಳು (ಜೆಸಿಬಿ ಯಂತ್ರ, ಡೈನಮೈಟ್‌, ಪವರ್‌ ಗರಗಸ, ಡ್ರಿಲ್ಲಿಂಗ್‌ ಸಲಕರಣೆ ಇತ್ಯಾದಿ) ಅಲ್ಲಿ ಧಾರಾಳವಾಗಿ ದಾಂಗುಡಿ ಇಟ್ಟಿವೆ.

ನಾಳೆ ಹೀಗಾದೀತೆಂದು ಹೇಳಲು ಸಾಧ್ಯವಿಲ್ಲವಾದರೂ ದುರಂತ ಸಂಭವಿಸದಂತೆ ಕೈಗೊಳ್ಳಬಹುದಾದ ಕ್ರಮಗಳು ಹಾಗೂ ಸಂಭವಿಸಿದರೆ ಜಾರಿಗೆ ತರಬೇಕಾದ ತುರ್ತು ನೆರವಿನ ಕ್ರಮಗಳನ್ನು ಸಜ್ಜಾಗಿಡಲಂತೂ ಸಾಧ್ಯವಿದೆ. ಅದಕ್ಕೆಂದೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳನ್ನು ರಾಷ್ಟ್ರಮಟ್ಟದಲ್ಲಿ, ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲೂ ನಿಯೋಜಿಸಲಾಗಿದೆ. ಯಾವ ಯಾವ ನೈಸರ್ಗಿಕ ಪ್ರಕೋಪಗಳು ಎದುರಾದಾಗ ಏನೇನು ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಎರಡು ವರ್ಷಗಳ ಹಿಂದೆ ‘ವಿಪತ್ತು ನಿರ್ವಹಣಾ ಯೋಜನೆ’ಯ ನೀಲನಕ್ಷೆಯನ್ನು ಕರ್ನಾಟಕ ಸರ್ಕಾರ ಸಿದ್ಧಪಡಿಸಿದೆ ನಿಜ. ಆದರೆ ಭೂಕುಸಿತಕ್ಕೆ ಸಂಬಂಧಿಸಿದ ತಾಲೀಮುಗಳನ್ನು ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ನಡೆಸಿದ ಉದಾಹರಣೆಗಳೇ ಇಲ್ಲ. ಅಂಥ ಸ್ಥಳಗಳನ್ನು ಗುರುತಿಸಿ, ಅಲ್ಲಿ ಏನೆಲ್ಲ ಬಗೆಯ ಜನಜಾಗೃತಿ ಉಂಟು ಮಾಡಬೇಕು; ಸ್ಥಳೀಯ ಸ್ವಯಂಸೇವಕರನ್ನು ಹಾಗೂ ಸ್ವಯಂಸೇವಾ ಸಂಘಟನೆಗಳನ್ನು ತುರ್ತಾಗಿ ಹೇಗೆ ಸಜ್ಜುಗೊಳಿಸಬೇಕು ಎಂದೆಲ್ಲ ವಿವರಣೆಗಳಿವೆಯಾದರೂ ಜನಜಾಗೃತಿಯ ಅಂಥ ಉಪಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿಲ್ಲ ಎಂಬ ದೂರುಗಳಿವೆ. ಆಪತ್ತಿನ ಸಂದರ್ಭದಲ್ಲಿ ಯಾರನ್ನು ಸಂಪರ್ಕಿಸಬೇಕು ಎಂಬ ಮಾಹಿತಿ ಪ್ರತೀ ಪಂಚಾಯಿತಿ ಕಚೇರಿಯಲ್ಲಿ ಇರಬೇಕಿತ್ತು; ಇಲ್ಲ. ತುರ್ತು ವೈದ್ಯಕೀಯ ವ್ಯವಸ್ಥೆಯಂತೂ ಎಂಥ ಶೋಚನೀಯ ಸ್ಥಿತಿಯಲ್ಲಿದೆ ಎಂಬುದು ಕೊರೊನಾ ಮಹಾ ಮಾರಿಯ ಸಂದರ್ಭದಲ್ಲಿ ಗೊತ್ತಾಗಿದೆ.

ಇನ್ನು, ಮಲೆನಾಡಿನ ಗುಡ್ಡಬೆಟ್ಟಗಳ ಸ್ಥಿರತೆಯನ್ನು ಕಾಪಾಡಲು ಅನುಸರಿಸಬೇಕಾದ ಯಾವ ಕ್ರಮಗಳೂ ಜಾರಿಗೆ ಬಂದಿಲ್ಲ. ರೈಲುಮಾರ್ಗ, ತೈಲ ಮತ್ತು ನೀರಿನ ಕೊಳವೆ ಮಾರ್ಗಕ್ಕೆಂದು ಸುರಂಗ ನಿರ್ಮಾಣ, ವಿದ್ಯುತ್‌ ಸಾಗಣೆಗೆಂದು, ಹೆದ್ದಾರಿ ವಿಸ್ತರಣೆಗೆಂದು ಅರಣ್ಯನಾಶ, ಭೂಕೊರೆತ ಇವೆಲ್ಲ ನಡೆದೇ ಇವೆ. ಇಂಥ ಸರ್ಕಾರಿ ಕಾಮಗಾರಿಗಳ ಜೊತೆಗೆ ಖಾಸಗಿಯಾಗಿ ಮರಳು ಸಾಗಣೆ, ರೆಸಾರ್ಟ್‌ ನಿರ್ಮಾಣ, ಅಕ್ರಮ ಸಾಗುವಳಿಗಾಗಿ ಗುಡ್ಡಗಳ ನೆಲಸಮ ಮಾಡುವ ಕೆಲಸ ನಡೆದೇ ಇದೆ. ಪಶ್ಚಿಮಘಟ್ಟಗಳಲ್ಲಿ ಎಂಥದ್ದೇ ಕಾಮಗಾರಿಗೂ ಮುಂಚೆ ಗಮನಿಸಲೇಬೇಕಾದ ‘ಸಂಭವನೀಯ ಭೂಕುಸಿತದ ನಕ್ಷೆ’ಯನ್ನು ಭಾರತೀಯ ಭೂವಿಜ್ಞಾನ ಸರ್ವೇಕ್ಷಣ ಇಲಾಖೆ ಸಿದ್ಧಪಡಿಸಿದೆ. ಕೇರಳದಲ್ಲಿ ಇಂಥ ನಕ್ಷೆಯನ್ನು ಯಾರು ಬೇಕಾದರೂ ಜಾಲತಾಣದಲ್ಲಿ ನೋಡಬಹುದಾಗಿದೆ. ನಮ್ಮಲ್ಲೂ ಯಾವುದೇ ಸರ್ಕಾರಿ ಕಾಮಗಾರಿಗೆ ಟೆಂಡರ್‌ ಹಾಕುವ ಮುನ್ನ ಅದನ್ನು ಪರಿಶೀಲಿಸಬೇಕು ಎಂಬುದನ್ನು ಕಡ್ಡಾಯ ಮಾಡಬೇಕಾಗಿದೆ. ಇವೆಲ್ಲ ಮುಂಬರುವ ಆಪತ್ತುಗಳ ಪ್ರತಿಬಂಧಕೋಪಾಯಗಳಾದವು. ವರ್ತಮಾನದ ತುರ್ತಿಗಾಗಿ ಪಂಚಾಯಿತಿ ಮಟ್ಟದಲ್ಲಿ ದುರಂತ ಸಂಭವನೀಯ ಸ್ಥಳಗಳ ಜನರಿಗೆ ಮುನ್ನೆಚ್ಚರಿಕೆಯ ಪ್ರಾಥಮಿಕ ಮಾಹಿತಿಗಳಾದರೂ ಕನ್ನಡದಲ್ಲಿ ಲಭಿಸುವ ವ್ಯವಸ್ಥೆಯಾಗಬೇಕು. ಅದಾಗದಿದ್ದರೆ, ಸರ್ಕಾರದ ‘ವಿಪತ್ತು ನಿರ್ವಹಣಾ ಯೋಜನೆ’ಯ ದಢೂತಿ ವರದಿ ಕೇವಲ ಪುಸ್ತಕದ ಬದನೇಕಾಯಿ ಆಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT