ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಪ್ರಯಾಣಿಕರ ಸುರಕ್ಷತೆಯೇ ಆದ್ಯತೆಯಾಗಲಿ; RTO ಕಚೇರಿಗಳು ಲಂಚಮುಕ್ತ ಆಗಲಿ

Published 29 ಡಿಸೆಂಬರ್ 2023, 0:00 IST
Last Updated 29 ಡಿಸೆಂಬರ್ 2023, 0:00 IST
ಅಕ್ಷರ ಗಾತ್ರ

ಸರ್ಕಾರಿ ಸ್ವಾಮ್ಯದ ಸಾರಿಗೆ ನಿಗಮಗಳ ಬಸ್‌ಗಳನ್ನು ಸುಸ್ಥಿತಿಯಲ್ಲಿ ಇಡುವುದರ ಜೊತೆಗೆ, ಬಳಕೆಗೆ ಯೋಗ್ಯವಲ್ಲದ ಬಸ್‌ಗಳ ಸಂಚಾರಕ್ಕೆ ತಡೆ ಒಡ್ಡುವಂತೆ ಹೈಕೋರ್ಟ್‌ ನೀಡಿರುವ ಆದೇಶವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ. ಬಡವರು, ಮಧ್ಯಮವರ್ಗದವರು, ಪ್ರಮುಖವಾಗಿ ಮಹಿಳೆಯರು ತಮ್ಮ ದಿನನಿತ್ಯದ ಕಾಯಕ, ಓಡಾಟಗಳಿಗೆ ನಾಲ್ಕು ನಿಗಮಗಳ ಬಸ್‌ಗಳನ್ನೇ ನೆಚ್ಚಿ
ಕೊಂಡಿದ್ದಾರೆ. ಈ ಬಸ್‌ಗಳು ಸುಸ್ಥಿತಿಯಲ್ಲಿ ಇಲ್ಲದಿದ್ದರೆ, ಕಾಲಕಾಲಕ್ಕೆ ಅವುಗಳನ್ನು ನಿರ್ವಹಣೆ ಮಾಡದಿದ್ದರೆ ಅದರಿಂದಾಗುವ ಅನಾಹುತಗಳಿಗೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ. ಹೀಗಾಗಿ, ಕೋರ್ಟ್‌ನ ಸೂಚನೆಯನ್ನು ಸರ್ಕಾರ ಮತ್ತು ನಿಗಮಗಳ ಮುಖ್ಯಸ್ಥರು ಗಂಭೀರವಾಗಿ ಪರಿಗಣಿಸ
ಬೇಕಾಗಿದೆ. ಇಬ್ಬರು ಮಕ್ಕಳು ಸಾವಿಗೀಡಾದ ಅಪಘಾತ ಪ್ರಕರಣವೊಂದರ ವಿಚಾರಣೆ ನಡೆಸಿದ ಹೈಕೋರ್ಟ್‌, ‘ನಿಗದಿತ ಕಿಲೊ ಮೀಟರ್‌ಗಳಷ್ಟು ಸಂಚರಿಸಿದ ಬಳಿಕ ಸಾಮರ್ಥ್ಯ ಕಳೆದುಕೊಂಡ ಸಾರಿಗೆ ನಿಗಮಗಳ ಬಸ್‌ಗಳನ್ನು ಗುಜರಿಗೆ ಹಾಕಬೇಕು. ಇಂತಹ ಸ್ಥಿತಿಯಲ್ಲಿರುವ ಬಸ್‌ಗಳನ್ನು ಪುನಃ ನಗರ, ಹಳ್ಳಿಗಳ ಮಾರ್ಗದಲ್ಲಿ ಅಥವಾ ಬೇರಾವುದೇ ಮಾರ್ಗದಲ್ಲಿ ಸಂಚರಿಸಲು ಅನುಮತಿ ನೀಡಬಾರದು’ ಎಂದು ಸ್ಪಷ್ಟವಾಗಿ ಹೇಳಿದೆ. ಪ್ರಕರಣವು ಸರ್ಕಾರಿ ಸಾರಿಗೆ ನಿಗಮಕ್ಕೆ ಸಂಬಂಧಿಸಿದ್ದಾದ್ದರಿಂದ ಸರ್ಕಾರ ಮತ್ತು ನಿಗಮಗಳಿಗಷ್ಟೇ ಹೈಕೋರ್ಟ್ ತಾಕೀತು ಮಾಡಿದೆ. ಸಮಸ್ಯೆ ಇದರಾಚೆಗೂ ಇರುವುದನ್ನು ಸರ್ಕಾರ ಗಮನಿಸಬೇಕಾದ ಅಗತ್ಯ ಇದೆ. ಸರ್ಕಾರಿ ಬಸ್‌ಗಳಷ್ಟೇ ಪ್ರಮಾಣದಲ್ಲಿ ಖಾಸಗಿ ಕಂಪನಿಗಳ ಬಸ್‌ಗಳೂ ರಾಜ್ಯದಲ್ಲಿ ಓಡಾಡುತ್ತಿವೆ. ಸರ್ಕಾರಿ ಬಸ್‌ಗಳಿಗೆ ಮೀಸಲಾದ ಮಾರ್ಗಗಳಲ್ಲಿ ‘ಪ್ರವಾಸಿ’ ಮಾದರಿಯ ಪರವಾನಗಿ ಪಡೆದ ಕೆಲವು ಖಾಸಗಿ ಸಂಸ್ಥೆಗಳು ಬಸ್‌ಗಳನ್ನು ಕಾರ್ಯಾಚರಣೆಗೆ ಇಳಿಸುತ್ತವೆ. ಕೆಲವು ಜಿಲ್ಲೆಗಳಲ್ಲಿ ಸರ್ಕಾರಿ ಬಸ್‌ಗಳಿಗಿಂತ ಹೆಚ್ಚಿನ ಸಂಖ್ಯೆಯ ಬಸ್‌ಗಳನ್ನು ಖಾಸಗಿಯವರೇ ನಿರ್ವಹಿಸು ತ್ತಿದ್ದಾರೆ. ಈ ಬಸ್‌ಗಳ ಮೇಲೆ ನಿಗಾ ಇಡುವ ಕೆಲಸವನ್ನೂ ಸರ್ಕಾರ ಮಾಡಬೇಕಾಗಿದೆ. 

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾಮಚಂದ್ರ ಡಿ. ಹುದ್ದಾರ ಅವರಿದ್ದ ಏಕಸದಸ್ಯ ಪೀಠವು ‘ಬಸ್‌ಗಳು ಸಂಚಾರಕ್ಕೆ ಅರ್ಹವಾಗಿರುವ ಬಗ್ಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಯಿಂದ (ಆರ್‌ಟಿಒ) ಪ್ರತಿವರ್ಷವೂ ಸುಸ್ಥಿತಿ ದೃಢೀಕರಣ ಪತ್ರ (ಎಫ್‌ಸಿ) ಪಡೆಯಬೇಕು. ಅಂತಹ ಬಸ್‌ಗಳಿಗೆ ಮಾತ್ರವೇ ರಸ್ತೆಯಲ್ಲಿ ಸಂಚರಿಸಲು ಅನುಮತಿ ನೀಡಬೇಕು’ ಎಂದು ಸರ್ಕಾರಕ್ಕೆ ನಿರ್ದೇಶಿಸಿದೆ.
ದುಃಸ್ಥಿತಿಯಲ್ಲಿರುವ ಅಥವಾ ಬಳಕೆಗೆ ಯೋಗ್ಯವಲ್ಲದ ಬಸ್‌ಗಳನ್ನು ಓಡಿಸಲು ಅವಕಾಶ ನೀಡುವ ಹಲವು ದಾರಿಗಳನ್ನು ಅಧಿಕಾರಿಗಳು ಕಂಡುಕೊಂಡಿದ್ದಾರೆ. ಸರ್ಕಾರಿ ಬಸ್‌ಗಳ ಎಫ್‌ಸಿ ಪಡೆಯಲು ಲಂಚ ನೀಡುವ ಪರಿಪಾಟ ಇಲ್ಲ. ಹೀಗಾಗಿ, ತೀರಾ ಕಳಪೆಯಲ್ಲದ ಬಸ್‌ಗಳ ಸಂಚಾರಕ್ಕೆ ಸಾರಿಗೆ ನಿಗಮಗಳು ಒಂದಷ್ಟು ಮಟ್ಟಿಗೆ ಅವಕಾಶ ಮಾಡಿಕೊಟ್ಟಿವೆ. ಆದರೆ, ಖಾಸಗಿಯವರು ಪ್ರತಿವರ್ಷ ಎಫ್‌ಸಿ ಪಡೆಯಲು ನಿರ್ದಿಷ್ಟ ಮೊತ್ತದ ಲಂಚ ನೀಡಲೇಬೇಕು ಎಂದು ಬಸ್‌ ಮಾಲೀಕರು ದೂರುತ್ತಾರೆ. ಬಸ್‌ಗಳು ಸುಸ್ಥಿತಿಯಲ್ಲಿವೆಯೇ ಹಾಗೂ ಸುಸಜ್ಜಿತವಾಗಿವೆಯೇ ಎಂಬುದನ್ನು ಆಮೂಲಾಗ್ರವಾಗಿ ಪರಿಶೀಲಿಸಿದ ಬಳಿಕವೇ ಬ್ರೇಕ್ ಇನ್‌ಸ್ಪೆಕ್ಟರ್‌ಗಳು ತಾಂತ್ರಿಕ ವರದಿಯನ್ನು ಮೇಲಧಿಕಾರಿಗಳಿಗೆ ನೀಡಬೇಕು. ಅದಾದ ಬಳಿಕವೇ ಎಫ್‌ಸಿ ನೀಡಲಾಗುತ್ತದೆ. ಬಣ್ಣ ಸವರಿದ ಬಸ್ಸಿನ ಕವಚ, ಪಾಲಿಷ್‌ ಬಳಿದ ಟಯರ್‌ಗಳನ್ನಷ್ಟೇ ನೋಡಿ ಎಫ್‌ಸಿ ನೀಡುವ ಪರಿಪಾಟ ಇದೆ. ಲಂಚದ ಕೇಂದ್ರಗಳಾಗಿರುವ ಆರ್‌ಟಿಒ ಕಚೇರಿಗಳನ್ನು ಶುದ್ಧೀಕರಿಸುವ ಕೆಲಸವನ್ನು ಸರ್ಕಾರ ಆದ್ಯತೆ ಮೇರೆಗೆ ಮಾಡಬೇಕಾಗಿದೆ. ನಿರ್ದಿಷ್ಟ ಆರ್‌ಟಿಒ ಹುದ್ದೆಯಲ್ಲಿ ಇಷ್ಟೇ ವರ್ಷ ಇರಬೇಕು, ಈ ಅವಧಿಯಲ್ಲಿ ಕಾರ್ಯನಿರ್ವಹಿಸಲು ಇಂತಿಷ್ಟು ಕಪ್ಪವನ್ನು ಆಳುವವರಿಗೆ ನೀಡಬೇಕು ಎಂಬ ಅಲಿಖಿತ ನಿಯಮ ಚಾಲ್ತಿಯಲ್ಲಿದೆ. ಇದನ್ನು ಬದಲಾಯಿಸದೇ ಇದ್ದರೆ, ಪ್ರಯಾಣಿಕರ ಸುರಕ್ಷತೆಯು ಮರೀಚಿಕೆಯಾದೀತು. ಸರ್ಕಾರಿ ಬಸ್‌ಗಳ ಕುರಿತು ಹೈಕೋರ್ಟ್‌ ನೀಡಿರುವ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವ ಜವಾಬ್ದಾರಿಯನ್ನು ಸರ್ಕಾರ ಹೊರಬೇಕು. ದಲ್ಲಾಳಿಗಳು ಅಥವಾ ಮಧ್ಯವರ್ತಿಗಳಿಲ್ಲದೆ ಆರ್‌ಟಿಒ ಕಚೇರಿಗಳಲ್ಲಿ ಕೆಲಸವೇ ಆಗದು ಎನ್ನುವಂಥ ಸ್ಥಿತಿ ಇದೆ. ತಳಹಂತದಿಂದ ಕುಲಗೆಟ್ಟು ಹೋಗಿರುವ ಸಾರಿಗೆ ಇಲಾಖೆಯ ವಿವಿಧ ಸ್ತರಗಳಲ್ಲಿನ ಅವ್ಯವಸ್ಥೆಗೆ ಶಸ್ತ್ರಚಿಕಿತ್ಸೆ ಆಗಬೇಕಿದೆ. ಅದರ ಜತೆಗೆ ಪ್ರಯಾಣಿಕರಿಗೆ ಸೌಲಭ್ಯ ಕಲ್ಪಿಸುವುದು, ನೆಮ್ಮದಿಯ ಪ್ರಯಾಣಕ್ಕೆ ಅನುವಾಗುವಂತೆ ಬಸ್‌ಗಳು
ಸುಸ್ಥಿತಿಯಲ್ಲಿರುವ ಹಾಗೆ ನೋಡಿಕೊಳ್ಳುವುದೂ ಆದ್ಯತೆಯಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT