ಸೋಮವಾರ, ಆಗಸ್ಟ್ 8, 2022
23 °C

ಸಂಪಾದಕೀಯ| ಬಿಬಿಎಂಪಿ ವಾರ್ಡ್‌ ಮರುವಿಂಗಡಣೆ ಕ್ರಮಬದ್ಧವಾಗಿ ಪೂರ್ಣಗೊಳ್ಳಲಿ

ಸಂಪಾದಕೀಯ Updated:

ಅಕ್ಷರ ಗಾತ್ರ : | |

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಾರ್ಡ್‌ಗಳ ಮರುವಿಂಗಡಣೆ ಸಲುವಾಗಿ ಸಮಿತಿ ರಚಿಸಿದ 20 ತಿಂಗಳ ಬಳಿಕ ಸರ್ಕಾರವು ಪರಿಷ್ಕೃತ ವಾರ್ಡ್‌ಗಳ ವ್ಯಾಪ್ತಿಯ ಮಾಹಿತಿಯುಳ್ಳ ಕರಡನ್ನು ರಾಜ್ಯಪತ್ರದಲ್ಲಿ ಪ್ರಕಟಿಸಿದೆ. ಬೆಂಗಳೂರಿನ ಗಡಿಯಿಂದ ಒಂದು ಕಿಲೊಮೀಟರ್‌ವರೆಗಿನ ಗ್ರಾಮಗಳನ್ನು ಸೇರಿಸಿಕೊಂಡು ಬಿಬಿಎಂಪಿಯ ವ್ಯಾಪ್ತಿಯನ್ನು ವಿಸ್ತರಿಸಲು ಹಾಗೂ ವಾರ್ಡ್‌ಗಳ ಸಂಖ್ಯೆಯನ್ನು 198ರಿಂದ 243ಕ್ಕೆ ಹೆಚ್ಚಿಸಲು ನಗರಾಭಿವೃದ್ಧಿ ಇಲಾಖೆಯು 2020ರ ಅಕ್ಟೋಬರ್‌ನಲ್ಲಿ ಅಧಿಸೂಚನೆ ಹೊರಡಿಸಿತ್ತು. ವಾರ್ಡ್‌ ಮರುವಿಂಗಡಣೆ ವೇಳೆ ಹೊಸತಾಗಿ ಸೇರಿಸಿಕೊಳ್ಳುವ ಪ್ರದೇಶಗಳ ಬಗ್ಗೆ ಶಿಫಾರಸು ಮಾಡಲು ಬಿಬಿಎಂಪಿ ಮುಖ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿಯನ್ನೂ ರಚಿಸಿತ್ತು. ಬಿಬಿಎಂಪಿ ಗಡಿಗೆತಾಗಿಕೊಂಡಿದ್ದ ಕೆಲವು ಗ್ರಾಮಗಳಿಂದ ಈ ಕುರಿತು ಅರ್ಜಿಗಳನ್ನೂ ಸ್ವೀಕರಿಸಲಾಗಿತ್ತು. ಆದರೆ, ಈಗ ಪ್ರಕಟಿಸಿರುವ ಕರಡುವಿನಲ್ಲಿ ಬಿಬಿಎಂಪಿ ವ್ಯಾಪ್ತಿಯನ್ನು ಈಗಿರುವಷ್ಟೇ ಉಳಿಸಿಕೊಳ್ಳ ಲಾಗಿದೆ. 2011ರ ಜನಗಣತಿ ಪ್ರಕಾರ, ಬಿಬಿಎಂಪಿ ವ್ಯಾಪ್ತಿಯ ಜನಸಂಖ್ಯೆ 84,43,675 ಇತ್ತು. ಈ ಜನಸಂಖ್ಯೆಯನ್ನೇ ಆಧರಿಸಿ ವಾರ್ಡ್‌ಗಳ ಮರುವಿಂಗಡಣೆ ಮಾಡಲಾಗಿದೆ. ವಾರ್ಡ್‌ಗಳ ಜನಸಂಖ್ಯೆ ಒಂದೇ ರೀತಿ ಇರಲಿಲ್ಲ. ಆ ಅಸಮಾನತೆಯನ್ನು ಈಗ ಸರಿಪಡಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ. ಅಚ್ಚರಿಯೆಂದರೆ, 2011ರ ಜನಗಣತಿ ಆಧಾರದಲ್ಲಿ ಬಿಬಿಎಂಪಿಯ 198 ವಾರ್ಡ್‌ಗಳ ಮರುವಿಂಗಡಣೆ ಯನ್ನು 2020ರಲ್ಲೂ ಮಾಡಲಾಗಿತ್ತು. 2020ರ ಮಾರ್ಚ್‌ನಲ್ಲಿ ಈ ಬಗ್ಗೆ ಕರಡು ಅಧಿಸೂಚನೆ ಪ್ರಕಟಿಸಿದ್ದ ಸರ್ಕಾರ, ಸಾರ್ವಜನಿಕರಿಂದ ಆಕ್ಷೇಪ ಹಾಗೂ ಸಲಹೆಗಳನ್ನು ಆಹ್ವಾನಿಸಿ 2020ರ ಜೂನ್‌ನಲ್ಲಿ ರಾಜ್ಯಪತ್ರದಲ್ಲಿ ಅಂತಿಮ ಅಧಿಸೂಚನೆ
ಯನ್ನೂ ಪ್ರಕಟಿಸಿತ್ತು. ‘ವಾರ್ಡ್‌ಗಳ ನಡುವೆ ಇದ್ದ ಅಸಮಾನತೆಯನ್ನು ನಿವಾರಿಸಿದ್ದೇವೆ’ ಎಂದು ಸರ್ಕಾರ ಆಗಲೂ ಹೇಳಿಕೊಂಡಿತ್ತು. ಆದರೆ, ಆ ನಿರ್ಧಾರ ಜಾರಿ ಆಗದ ಕಾರಣ ವಾರ್ಡ್‌ಗಳ ಮರುವಿಂಗಡಣೆ ಸಲುವಾಗಿ 2020ರಲ್ಲಿ ನಡೆಸಲಾಗಿದ್ದ ಅಷ್ಟೂ ಕಸರತ್ತು ವ್ಯರ್ಥವಾಗಿತ್ತು. ಅದಾಗಿ ಎರಡು ವರ್ಷಗಳಲ್ಲಿ ವಾರ್ಡ್‌ಗಳ ಮರುವಿಂಗಡಣೆಯ ಮತ್ತೊಂದು ಕರಡು ಪ್ರಕಟವಾಗಿದೆ. ವಾರ್ಡ್‌ಗಳ ಒಟ್ಟು ಸಂಖ್ಯೆ 198ರಿಂದ 243ಕ್ಕೆ ಹೆಚ್ಚಳವಾಗಿರುವುದರಿಂದ ಬಹುತೇಕ ವಾರ್ಡ್‌ಗಳ ಗಡಿಗಳು ಮತ್ತೆ ಬದಲಾಗಿವೆ. ಕೆಲವು ವಾರ್ಡ್‌ಗಳ ಹೆಸರುಗಳು ಬದಲಾಗಿವೆ. ಅಷ್ಟನ್ನು ಹೊರತುಪಡಿಸಿದರೆ ಆಡಳಿತಾತ್ಮಕ ದೃಷ್ಟಿಯಿಂದ ಮಹತ್ತರ ಬದಲಾವಣೆಗಳೇನೂ ಕಾಣಿಸುತ್ತಿಲ್ಲ. ವಾರ್ಡ್‌ ಮರುವಿಂಗಡಣೆಯ ಕಸರತ್ತು ನಡೆಸಿದ್ದೇ ಬಿಬಿಎಂಪಿ ಚುನಾವಣೆ ಮುಂದೂಡುವುದಕ್ಕೆ ಎಂಬುದು ಇದರಿಂದ ಸ್ಪಷ್ಟ. 

ಬಿಬಿಎಂಪಿ ಚುನಾವಣೆ ನಡೆಸಲು ಎಂಟು ವಾರಗಳೊಳಗೆ ಅಧಿಸೂಚನೆ ಹೊರಡಿಸಬೇಕು ಎಂದು ಸುಪ್ರೀಂ ಕೋರ್ಟ್‌ ಕಳೆದ ತಿಂಗಳು ನಿರ್ದೇಶನ ನೀಡಿದ್ದರಿಂದ ಸರ್ಕಾರ ಬೇರೆ ದಾರಿ ಇಲ್ಲದೆ ವಾರ್ಡ್‌ಗಳ ಮರುವಿಂಗಡಣೆ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸುತ್ತಿರುವಂತೆ ತೋರುತ್ತಿದೆ. ಬಿಬಿಎಂಪಿ ಆಡಳಿತದಲ್ಲಿ ಸುಧಾರಣೆ ತರುವ ಬಗ್ಗೆ ಸರ್ಕಾರಕ್ಕೆ ನೈಜ ಕಾಳಜಿ ಇದ್ದಿದ್ದರೆ ಈ ಸಲುವಾಗಿ ರಚಿಸಿದ್ದ ಸಮಿತಿ 20 ತಿಂಗಳು ವೃಥಾ ಕಾಲಹರಣ ಮಾಡಲು ಅವಕಾಶವನ್ನೇ ನೀಡುತ್ತಿರಲಿಲ್ಲ. ವಾರ್ಡ್‌ ಮರುವಿಂಗಡಣೆ ಪ್ರಕ್ರಿಯೆಯು ನಗರದ ಆಡಳಿತ ದೃಷ್ಟಿಯಿಂದ ಮಹತ್ತರವಾದ ಪ್ರಕ್ರಿಯೆ. ಸ್ಥಳೀಯ ಆಡಳಿತ ಸಂಸ್ಥೆಗಳ ಚುನಾವಣೆ ಮುಂದೂಡುವ ಅಸ್ತ್ರವಾಗಿ ಅದು ಬಳಕೆಯಾಗುತ್ತಿರುವುದು ಅಕ್ಷಮ್ಯ. ಬಿಬಿಎಂಪಿಯ ಪರಿಷ್ಕೃತ ವಾರ್ಡ್‌ಗಳಿಗೆ ಸಂಬಂಧಿಸಿದ ಕರಡುವಿಗೆ ಸಲಹೆ ಅಥವಾ ಆಕ್ಷೇಪ ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಲಾಗಿದೆ. ಬೆಂಗಳೂರಿನಂತಹ ಮಹಾನಗರದ ವಾರ್ಡ್‌ಗಳ ಮರುವಿಂಗಡಣೆ ನಡೆಸುವಾಗ ಸಾರ್ವಜನಿಕರ ಪ್ರತಿಕ್ರಿಯೆ ಪಡೆಯಲು ಇಷ್ಟು ಕಡಿಮೆ ಕಾಲಾವಕಾಶ ನೀಡಿರುವುದನ್ನು ಒಪ್ಪಲಾಗದು.  ವಾರ್ಡ್‌ ವ್ಯಾಪ್ತಿಯಲ್ಲಿ ಏನೆಲ್ಲ ಬದಲಾವಣೆಗಳಾಗಿವೆ ಎಂಬುದನ್ನು ಅರ್ಥೈಸಿಕೊಂಡು, ಅದರಿಂದ ಆಗಬಹುದಾದ ಪರಿಣಾಮಗಳನ್ನು ಪರಾಮರ್ಶಿಸಲು 15 ದಿನಗಳು ಸಾಲುವುದಿಲ್ಲ. ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನಿರ್ದೇಶನ ಪಾಲಿಸಲೇಬೇಕಾದ ಅನಿವಾರ್ಯ ಇರುವುದರಿಂದ, ಸಲಹೆ ಹಾಗೂ ಆಕ್ಷೇಪ ಸಲ್ಲಿಕೆಗೆ ಹೆಚ್ಚಿನ ಕಾಲಾವಕಾಶ ನೀಡುವ ಸ್ಥಿತಿಯಲ್ಲಿ ಸರ್ಕಾರ ಇಲ್ಲ. 2011ರ ಜನಗಣತಿಯ ಅಂಕಿ–ಅಂಶಗಳು ಕೈ ಸೇರಿದಾಗಲೇ ಬಿಬಿಎಂಪಿ ವಾರ್ಡ್‌ಗಳ ಮರುವಿಂಗಡಣೆಗೆ ಸರ್ಕಾರ ಕ್ರಮ ಕೈಗೊಂಡಿದ್ದಿದ್ದರೆ ಇಂತಹ ಪರಿಸ್ಥಿತಿ ಉದ್ಭವವಾಗುತ್ತಿರಲಿಲ್ಲ.
ಆಗ ಸರ್ಕಾರ ನಿದ್ದೆಗೆ ಜಾರಿತ್ತು. ಹಾಗಾಗಿಯೇ ಈ ಮಹತ್ವದ ಪ್ರಕ್ರಿಯೆಯನ್ನು ಕಾಟಾಚಾರಕ್ಕೆ ನಡೆಸುವ ದುಃಸ್ಥಿತಿ ಎದುರಾಗಿದೆ. ಸರ್ಕಾರದ ಅಸಡ್ಡೆ ಧೋರಣೆಯಿಂದಾಗಿ ಆಡಳಿತಾತ್ಮಕ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. 2001ರ ಜನಗಣತಿಗೆ ಹೋಲಿಸಿದಾಗ 2011ರಲ್ಲಿ ಬೆಂಗಳೂರಿನ ಜನಸಂಖ್ಯೆಯಲ್ಲಿ ಶೇ 46.68ರಷ್ಟು ಹೆಚ್ಚಳ ಕಂಡಿತ್ತು. ನಗರದ ಈಗಿನ ಜನಸಂಖ್ಯೆ 1.39 ಕೋಟಿಯಷ್ಟಿದೆ ಎಂಬುದು ಸರ್ಕಾರದ ಅಂದಾಜು. 2021ರಲ್ಲಿ ಜನಗಣತಿ ಕಾರ್ಯ ನಡೆಯಬೇಕಿತ್ತು. ಕೋವಿಡ್‌ ಕಾರಣದಿಂದಾಗಿ ಜನಗಣತಿ ಪ್ರಕ್ರಿಯೆ ವಿಳಂಬವಾಗಿದೆ. ಮತ್ತೆ ಜನಗಣತಿ ನಡೆದು, ಇನ್ನೇನು ಒಂದೆರಡು ವರ್ಷಗಳಲ್ಲಿ ನಗರದ ಜನಸಂಖ್ಯೆಗೆ ಸಂಬಂಧಿಸಿದ ಹೊಸ ಅಂಕಿ–ಅಂಶಗಳು ಬಿಡುಗಡೆಯಾಗುವ ನಿರೀಕ್ಷೆ ಇದೆ. ಆಗ ಬಿಬಿಎಂಪಿ ವಾರ್ಡ್‌ಗಳ ಮರುವಿಂಗಡಣೆಯನ್ನು ಮತ್ತೊಮ್ಮೆ ನಡೆಸಬೇಕಾಗುತ್ತದೆ.

ರಾಜಕೀಯ ಪಕ್ಷವೊಂದರ ಪ್ರಾಬಲ್ಯವನ್ನು ಕುಗ್ಗಿಸಲು ನಿರ್ದಿಷ್ಟ ವಿಧಾನಸಭಾ ಕ್ಷೇತ್ರಗಳಲ್ಲಿ ವಾರ್ಡ್‌ಗಳ ಸಂಖ್ಯೆಯನ್ನು ಕಡಿಮೆಗೊಳಿಸಲಾಗಿದೆ ಎಂಬ ಟೀಕೆ ವ್ಯಕ್ತವಾಗಿದೆ. ಪಕ್ಷಪಾತಕ್ಕೆ ಸಂಬಂಧಿಸಿದ ಇಂತಹ ಟೀಕೆಗಳು ಪ್ರತೀ ಸಲ ವಾರ್ಡ್‌ಗಳ ಮರುವಿಂಗಡಣೆ ನಡೆದಾಗಲೂ ಕೇಳಿಬರುತ್ತಿವೆ. ಆಡಳಿತ ಸುಧಾರಣೆಯ ಉದ್ದೇಶದಿಂದ ಕೈಗೊಳ್ಳುವ ಇಂತಹ ಮಹತ್ವದ ಕಾರ್ಯಗಳು ವೈಜ್ಞಾನಿಕವಾಗಿ ಇರುವಂತೆ ನೋಡಿಕೊಳ್ಳಬೇಕಾದುದು ಸರ್ಕಾರದ ಕರ್ತವ್ಯ. ಬಿಬಿಎಂಪಿಯಲ್ಲಿ ಚುನಾಯಿತ ಕೌನ್ಸಿಲ್‌ ಆಡಳಿತವು 2020ರ ಸೆಪ್ಟೆಂಬರ್‌ 10ರಂದೇ ಕೊನೆಗೊಂಡಿದೆ. ಚುನಾವಣೆ ನಡೆಸಿ ಹೊಸ ಕೌನ್ಸಿಲ್‌ ರಚಿಸುವುದಕ್ಕೆ ಇನ್ನೂ ಸಾಧ್ಯವಾಗಿಲ್ಲ. ಬಿಬಿಎಂಪಿ ವಾರ್ಡ್‌ಗಳ ಮರು ವಿಂಗಡಣೆ ಪ್ರಕ್ರಿಯೆಯನ್ನು
ಕ್ರಮಬದ್ಧವಾಗಿ ಪೂರ್ಣಗೊಳಿಸಿ ಆದಷ್ಟು ಬೇಗ ಚುನಾವಣೆ ನಡೆಸಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು