ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ| ಕಿರು ಕೈಗಾರಿಕಾ ಘಟಕಗಳಿಗೆ ಸರ್ಕಾರ ಚೈತನ್ಯ ತುಂಬಲಿ

Last Updated 11 ಮೇ 2020, 19:45 IST
ಅಕ್ಷರ ಗಾತ್ರ

ಕೋವಿಡ್‌–19 ಪಿಡುಗು ಜಾಗತಿಕ ಆರ್ಥಿಕತೆಯ ಎಲ್ಲ ವಲಯಗಳನ್ನು ಸಂಕಷ್ಟಕ್ಕೆ ದೂಡಿದೆ. ದೇಶಿ ಅರ್ಥ ವ್ಯವಸ್ಥೆಯ ಬೆನ್ನೆಲುಬು ಆಗಿರುವ, ಕೋಟ್ಯಂತರ ಜನರಿಗೆ ಉದ್ಯೋಗ ಕಲ್ಪಿಸಿರುವ ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (ಎಂಎಸ್‌ಎಂಇ) ಮೇಲಿನ ಹೊಡೆತವು ಊಹಾತೀತವಾಗಿದೆ. ಹಣಕಾಸಿನ ತೀವ್ರ ಮುಗ್ಗಟ್ಟಿನ ಕಾರಣಕ್ಕೆ ಅವು ಬಾಗಿಲು ಹಾಕುವಂತಹ ಸ್ಥಿತಿಗೆ ತಲುಪಿವೆ. ಜೀವನೋಪಾಯಕ್ಕೆ ಇವುಗಳನ್ನೇ ನೆಚ್ಚಿಕೊಂಡಿರುವ ಕೋಟ್ಯಂತರ ಕಾರ್ಮಿಕರು ಕೆಲಸ ಮತ್ತು ವೇತನ ಇಲ್ಲದೆ ಕಂಗಾಲಾಗಿದ್ದಾರೆ. ಸಣ್ಣ ಕೈಗಾರಿಕಾ ಘಟಕಗಳ ಕಾಯಕಲ್ಪಕ್ಕೆ ಮತ್ತು ಕಾರ್ಮಿಕರ ಹಿತರಕ್ಷಣೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತುರ್ತಾಗಿ ಸ್ಪಂದಿಸಬೇಕಾಗಿದೆ.

ದೇಶದಲ್ಲಿ ಒಟ್ಟು 6.30 ಕೋಟಿ ಎಂಎಸ್‌ಎಂಇ ಘಟಕಗಳಿವೆ. ಇವುಗಳಲ್ಲಿ ಅರ್ಧದಷ್ಟು ಕೈಗಾರಿಕೆಗಳು ಕರ್ನಾಟಕ ಸೇರಿದಂತೆ ಏಳು ರಾಜ್ಯಗಳಲ್ಲಿ ಹರಡಿಕೊಂಡಿವೆ. ಈ ಕೈಗಾರಿಕೆಗಳ ಮೇಲೆ ಆಗುವ ಪ್ರತಿಕೂಲ ಪರಿಣಾಮವು ಈ ರಾಜ್ಯಗಳ ಆರ್ಥಿಕತೆ ಮತ್ತು ಜನಜೀವನಕ್ಕೂ ತಟ್ಟಲಿದೆ. ಚೀನಾದಿಂದ ಆಮದು ಮಾಡಿಕೊಳ್ಳುವ ವಾಹನ ಬಿಡಿಭಾಗಗಳು ಮತ್ತು ಕಚ್ಚಾ ಸರಕಿನ ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ದೇಶಿ ತಯಾರಿಕಾ ವಲಯಕ್ಕೆ ಜನವರಿಯಿಂದಲೇ ಸಂಕಷ್ಟದ ದಿನಗಳು ಎದುರಾಗಿದ್ದವು. ದೊಡ್ಡ ಉದ್ದಿಮೆಗಳನ್ನೇ ನೆಚ್ಚಿಕೊಂಡಿರುವ ಎಂಎಸ್‌ಎಂಇ ವಲಯ ಆಗಿನಿಂದಲೇ ಏದುಸಿರು ಬಿಡಲು ಆರಂಭಿಸಿತ್ತು. ಲಾಕ್‌ಡೌನ್‌ನಿಂದಾಗಿ ಅವುಗಳ ಸ್ಥಿತಿ ಮತ್ತಷ್ಟು ವಿಷಮಿಸಿದೆ.

ರಾಜ್ಯದಲ್ಲಿ ಇರುವ 6.5 ಲಕ್ಷಕ್ಕೂ ಹೆಚ್ಚು ಎಂಎಸ್‌ಎಂಇಗಳು, 70 ಲಕ್ಷಕ್ಕೂ ಹೆಚ್ಚು ಕಾರ್ಮಿಕರ ಕುಟುಂಬಗಳಿಗೆ ಜೀವನಾಧಾರವಾಗಿವೆ. ಅವುಗಳ ಪೈಕಿ 1.5 ಲಕ್ಷದಷ್ಟು ಉದ್ಯಮಗಳು ಹಣಕಾಸು ಬಿಕ್ಕಟ್ಟಿನ ಸುಳಿಗೆ ಸಿಲುಕಿವೆ. 20 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಆತಂಕದ ಸ್ಥಿತಿ ಇದೆ. ಕಾರ್ಮಿಕರಿಗೆ ಸಂಬಳ ಪಾವತಿಸಿ, ಅವರನ್ನು ಹಿಡಿದಿಟ್ಟುಕೊಳ್ಳಲೂ ಉದ್ಯಮಿಗಳಿಗೆ ಸಾಧ್ಯವಾಗುತ್ತಿಲ್ಲ.

ಬಹುತೇಕ ಕೈಗಾರಿಕೆಗಳು ಸರ್ಕಾರದ ನೆರವಿಗಾಗಿ ಎದುರು ನೋಡುತ್ತಿವೆ. ವಿದ್ಯುತ್ ಬಿಲ್‌ನ ಎರಡು ತಿಂಗಳ ಮಾಸಿಕ ನಿಗದಿತ ಶುಲ್ಕ ಮನ್ನಾ, ವಿಳಂಬ ಪಾವತಿ ಮೊತ್ತದ ಮೇಲಿನ ಬಡ್ಡಿ ಕಡಿತ, ಬಾಕಿ ಮೊತ್ತವನ್ನು ಕಂತುಗಳಲ್ಲಿ ಪಾವತಿಸಲು ಅವಕಾಶ ನೀಡಿರುವಂತಹ ಉಪಕ್ರಮಗಳು ಕೈಗಾರಿಕೆಗಳ ಮೇಲಿನ ಹೊರೆಯನ್ನು ತುಸು ತಗ್ಗಿಸಿವೆ. ಆದರೆ, ಇವುಗಳಿಂದಷ್ಟೇ ಆರ್ಥಿಕ ಸಂಕಷ್ಟದಿಂದ ಪೂರ್ತಿ ಹೊರಬರಲಾಗದು.

ರಾಜ್ಯ ನೌಕರರ ವಿಮಾ ನಿಗಮದ ಇಎಸ್‌ಐಸಿ ನಿಧಿ ಮತ್ತು ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ (ಇಪಿಎಫ್‌ಒ) ಬಳಿ ಇರುವ ವಾರಸುದಾರರೇ ಇಲ್ಲದ ₹ 55 ಸಾವಿರ ಕೋಟಿ ಮೊತ್ತವನ್ನು ಎಂಎಸ್ಎಂಇಗಳ ಪುನಶ್ಚೇತನಕ್ಕೆ ಬಳಸಬಹುದು ಎಂದು ಕೈಗಾರಿಕಾ ಸಂಘಟನೆಗಳು ಸಲಹೆ ನೀಡಿವೆ. ಈ ಸಲಹೆಯ ಕಾರ್ಯಸಾಧ್ಯತೆಯ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತಿಸಬೇಕು. ಈ ವಲಯಕ್ಕೆ ಸಾಲ ಸೌಲಭ್ಯ ಹೆಚ್ಚಿಸುವ ಆರ್‌ಬಿಐನ ಕ್ರಮಗಳು ಸದ್ಬಳಕೆಯಾಗಲು ಬ್ಯಾಂಕ್‌ಗಳೂ ಮುತುವರ್ಜಿ ತೋರಬೇಕು. ನೌಕರರ ಸಂಬಳ ಪಾವತಿಗೆ ತುರ್ತು ನೆರವು, ಸಾಲದ ಮೇಲಿನ ಮೂರು ತಿಂಗಳ ಬಡ್ಡಿ ಮನ್ನಾ, ವಸೂಲಾಗದ ಸಾಲಕ್ಕೆ (ಎನ್‌ಪಿಎ) ಸಂಬಂಧಿಸಿದ ನಿಯಮ ಸಡಿಲಿಕೆ, ಸಾಲದ ಕಂತು ಪಾವತಿಯನ್ನು ಈಗಾಗಲೇ ಮೂರು ತಿಂಗಳ ಮಟ್ಟಿಗೆ ಮುಂದೂಡಲಾಗಿದೆ. ಅದನ್ನು ಇನ್ನಷ್ಟು ವಿಸ್ತರಿಸಬೇಕು, ಮೇ 31ರ ಗಡುವಿನ ಒಳಗೆ ಜಿಎಸ್‌ಟಿ ವಿವರ ಸಲ್ಲಿಸದವರ ಜಿಎಸ್‌ಟಿ ಮೊತ್ತದ ಮೇಲಿನ ಬಡ್ಡಿ ಕೈಬಿಡುವುದೂ ಸೇರಿದಂತೆ ಉದ್ಯಮ ವಲಯದ ಹಲವು ಬೇಡಿಕೆಗಳನ್ನು ಸರ್ಕಾರಗಳು ಸಹಾನುಭೂತಿಯಿಂದ ಪರಿಗಣಿಸಬೇಕು. ತಪಾಸಣೆ ನೆಪದಲ್ಲಿ ಅಧಿಕಾರಿಗಳು ನೀಡುವ ಕಿರುಕುಳ ತಪ್ಪಬೇಕು.

ಲಾಕ್‌ಡೌನ್‌ ನಂತರದ ಸವಾಲುಗಳನ್ನು ಎದುರಿಸಲು ಉದ್ಯಮವನ್ನು ಸಜ್ಜುಗೊಳಿಸಬೇಕಾಗಿದೆ.ಉದ್ಯಮಿಗಳಲ್ಲಿ ವಿಶ್ವಾಸ ತುಂಬುವ ರಚನಾತ್ಮಕ ಯೋಜನೆಗಳನ್ನು ತ್ವರಿತಗತಿಯಲ್ಲಿ ರೂಪಿಸಬೇಕು. ಸುಲಭ ಸಾಲ ಒದಗಿಸಲು ಸಾಲ ಮೇಳ, ಸಾಲ ಖಾತರಿ ನಿಧಿ ಸ್ಥಾಪನೆ, ನಿಯಮಗಳ ಸಡಿಲಿಕೆಗೆ ಒತ್ತು ನೀಡುವುದೂ ಸೇರಿದಂತೆ ಸಮಗ್ರ ಕ್ರಿಯಾ ಯೋಜನೆ ಕಾರ್ಯಗತಗೊಳಿಸಲು ಸರ್ಕಾರಗಳು ಕಾಳಜಿ ತೋರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT