ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಕೆರೆಹಳ್ಳಿ ಕೆರೆಯಲ್ಲೇ ರಸ್ತೆ: ಉನ್ನತ ಅಧಿಕಾರಿಗಳ ವಿರುದ್ಧವೂ ತನಿಖೆ ಆಗಲಿ

Published 10 ಜೂನ್ 2023, 1:30 IST
Last Updated 10 ಜೂನ್ 2023, 1:30 IST
ಅಕ್ಷರ ಗಾತ್ರ

ಬೆಂಗಳೂರಿನ ಹೊಸಕೆರೆಹಳ್ಳಿ ಕೆರೆಯ ಒಡಲಿಗೆ ಲೋಡ್‌ಗಟ್ಟಲೆ ಮಣ್ಣು ಸುರಿದು, ರಸ್ತೆ ನಿರ್ಮಿಸಲು ಅವಕಾಶ ಕಲ್ಪಿಸಿದ್ದಕ್ಕಾಗಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಇಬ್ಬರು ಎಂಜಿನಿಯರ್‌ಗಳನ್ನು ಅಮಾನತು ಮಾಡಿದೆ. ಬೆಂಗಳೂರು ಉಸ್ತುವಾರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ನಿರ್ದೇಶನದ ಮೇರೆಗೆ ಬಿಬಿಎಂಪಿ ಕಸ ನಿರ್ವಹಣೆ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಎಚ್.ಎಸ್‌.ಮೇಘಾ ಹಾಗೂ ಕೆರೆ ವಿಭಾಗದ ಸಹಾಯಕ ಎಂಜಿನಿಯರ್‌ ಶಿಲ್ಪಾ ಅವರನ್ನು ಅಮಾನತುಗೊಳಿಸಲಾಗಿದೆ. ಅಪಾರ್ಟ್‌ಮೆಂಟ್‌ ಸಮುಚ್ಚಯವೊಂದಕ್ಕೆ ಅನುಕೂಲ ಕಲ್ಪಿಸಲು ಕೆರೆಯ ಮಧ್ಯೆಯೇ ರಸ್ತೆ ನಿರ್ಮಿಸುತ್ತಿರುವುದನ್ನು ಪತ್ರಿಕಾ ವರದಿಗಳು ಇದೇ ಮಾರ್ಚ್‌ನಲ್ಲಿ ಬಯಲಿಗೆಳೆದಿದ್ದವು.

ಈ ಕುರಿತು ಸಾರ್ವಜನಿಕರಿಂದಲೂ ವಿರೋಧ ವ್ಯಕ್ತವಾಗಿತ್ತು. ಆದರೂ, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು ಈ ಬಗ್ಗೆ ತಮಗೆ ಮಾಹಿತಿಯೇ ಇಲ್ಲ ಎಂದು ಹೇಳಿದ್ದರು. ಇನ್ನೊಂದೆಡೆ, ಈ ಹಿಂದಿನ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ತೋಟಗಾರಿಕಾ ಸಚಿವರಾಗಿದ್ದ ಮುನಿರತ್ನ ಅವರು, ಮುಖ್ಯಮಂತ್ರಿಯವರ ವಿಶೇಷ ಅನುದಾನದಲ್ಲಿ ಈ ಕೆರೆಯ ಅಭಿವೃದ್ಧಿ ಕಾಮಗಾರಿ ನಡೆಸಲಾಗುತ್ತಿದೆ ಎಂದು ಹೇಳಿದ್ದರು. ನೂರಾರು ವರ್ಷಗಳಿಂದ ತುಂಬಿರುವ ಹೂಳನ್ನು ತೆರವುಗೊಳಿಸಿ ಈ ಜಲಮೂಲವನ್ನು ಪುನರುಜ್ಜೀವನಗೊಳಿಸಲಾಗುತ್ತಿದೆ ಹಾಗೂ ಕೆರೆಯನ್ನು ಸುಂದರಗೊಳಿಸಲಾಗುತ್ತಿದೆ ಎಂದೂ ಅವರು ಪ್ರತಿಪಾದಿಸಿದ್ದರು. ಕಾಮಗಾರಿಯ ನೈಜ ಉದ್ದೇಶವು ಇದೇ ಆಗಿದ್ದಿದ್ದರೆ, ಕೆರೆಗೆ ಟನ್‌ಗಟ್ಟಲೆ ಮಣ್ಣು ಸುರಿದದ್ದು ಏಕೆ ಮತ್ತು ಕೆರೆಯ ನಡುವೆಯೇ ರಸ್ತೆ ನಿರ್ಮಿಸುತ್ತಿದ್ದುದು ಏಕೆ ಎಂಬ ಪ್ರಶ್ನೆಗಳಿಗೆ ಉತ್ತರ ಸಿಕ್ಕಿರಲಿಲ್ಲ. ಮೇಲಧಿಕಾರಿಯ ಗಮನಕ್ಕೆ ತಾರದೆಯೇ ಬಿಬಿಎಂಪಿಯ ಕಾರ್ಯಪಾಲಕ ಎಂಜಿನಿಯರ್‌ ದರ್ಜೆಯ ಅಧಿಕಾರಿ ಈ ರೀತಿಯ ಕಾಮಗಾರಿ ಕೈಗೆತ್ತಿಕೊಳ್ಳಲು ಹೇಗೆ ಸಾಧ್ಯವಾಗಿತ್ತು ಎಂಬುದು ಚೋದ್ಯದ ವಿಷಯ. ಅಥವಾ ರಾಜಕೀಯ ಆದೇಶಗಳಿಗೆ ತಲೆಬಾಗಿ ಮೇಲಧಿಕಾರಿಗಳು ಜಾಣಕುರುಡು ಪ್ರದರ್ಶಿಸಿದ್ದರೇ ಎಂಬುದು ಯಕ್ಷಪ್ರಶ್ನೆ.

ಹೊಸಕೆರೆಹಳ್ಳಿ ಕೆರೆಯನ್ನು ಪುನರುಜ್ಜೀವನಗೊಳಿಸಲಾಗುತ್ತಿತ್ತು ಎಂಬ ವಾದದಲ್ಲಿ ಹುರುಳೇ ಇಲ್ಲ ಎಂಬಂತೆ ತೋರುತ್ತದೆ. ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಪ್ರಕಾರ, ಅದರ ಅನುಮತಿ ಇಲ್ಲದೇ ಕಳೆ ತೆಗೆಯುವುದು, ಹೂಳೆತ್ತುವುದೂ ಸೇರಿದಂತೆ ಕೆರೆಗೆ ಸಂಬಂಧಿಸಿದ ಯಾವುದೇ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವಂತಿಲ್ಲ. ಹೊಸಕೆರೆಹಳ್ಳಿ ಕೆರೆ ಅಭಿವೃದ್ಧಿಗೆ ಬಿಬಿಎಂಪಿಯು ಈ ಪ್ರಾಧಿಕಾರದಿಂದ ಯಾವುದೇ ಅನುಮತಿಯನ್ನು ಪಡೆದಿರಲಿಲ್ಲ. ಹಿಂದಿನಿಂದಲೂ ಈ ಕೆರೆಗೆ ಕಸವನ್ನು ಮತ್ತು ಕಟ್ಟಡಗಳ ಅವಶೇಷಗಳನ್ನು ಸುರಿಯುವ ಮೂಲಕ ಒತ್ತುವರಿ ಮಾಡಲಾಗುತ್ತಿತ್ತು. ಕೊಳಚೆ ನೀರನ್ನು ಶುದ್ಧೀಕರಿಸದೆಯೇ ರಾಜಕಾಲುವೆ ಮೂಲಕ ಈ ಕೆರೆಯ ಒಡಲಿಗೆ ಹರಿಸಲಾಗುತ್ತಿತ್ತು ಎಂಬುದು ಗುಟ್ಟಿನ ವಿಷಯವೇನಲ್ಲ. ಈ ಕೆರೆಗೆ ಕೊಳಚೆ ನೀರನ್ನು ಹರಿಸುವ ಉದ್ದೇಶದಿಂದಲೇ ರಾಜಕಾಲುವೆಯ ವಿನ್ಯಾಸ ಬದಲಿಸಿದ್ದ ಬಗ್ಗೆ 2021ರ ಮಹಾಲೇಖಪಾಲರ ವರದಿಯಲ್ಲೂ ಉಲ್ಲೇಖಿಸಲಾಗಿತ್ತು. ಒಟ್ಟು 57 ಎಕರೆ ವಿಸ್ತೀರ್ಣವನ್ನು ಹೊಂದಿರುವ ಈ ಕೆರೆಯಲ್ಲಿ ಸುಮಾರು 7 ಎಕರೆಗಳಷ್ಟು ಪ್ರದೇಶ ಈಗಾಗಲೇ ಒತ್ತುವರಿಯಾಗಿದೆ ಎಂದು ವರದಿಯಾಗಿದೆ.

ನಗರದ ಅನೇಕ ಕೆರೆಗಳು ರಿಯಲ್‌ ಎಸ್ಟೇಟ್‌ ಮಾಫಿಯಾದ ಕೈಗೆ ಸಿಲುಕಿ ಅವಸಾನದ ಅಂಚನ್ನು ತಲುಪಿವೆ. ಹೊಸಕೆರೆಹಳ್ಳಿ ಕೆರೆಯೂ ಇದೇ ರೀತಿ ಆಗಬಾರದು. ಈ ಜಲಮೂಲವನ್ನು ಕಾಪಾಡಬೇಕಿದೆ. ಬಿಬಿಎಂಪಿಯ ಮಧ್ಯಮ ಹಂತದ ಇಬ್ಬರು ಅಧಿಕಾರಿಗಳ ಮೇಲೆ ಹೊಣೆ ಹೊರಿಸಿದ ಮಾತ್ರಕ್ಕೆ ಬೇರೆಯವರ ಪಾತ್ರ ಇದರಲ್ಲಿ ಇಲ್ಲ ಎಂದು ಹೇಳಲಾಗದು. ಯಾರ ಆದೇಶದ ಮೇರೆಗೆ ಈ ಕೆರೆಗೆ ಮಣ್ಣು ಸುರಿದು ರಸ್ತೆ ನಿರ್ಮಿಸಲಾಯಿತು, ಯಾವೆಲ್ಲ ಉನ್ನತ ಅಧಿಕಾರಿಗಳ ಗಮನಕ್ಕೆ ತಂದು ಕಾಮಗಾರಿ ನಡೆಸಲಾಗಿತ್ತು ಎಂಬುದನ್ನು ಪತ್ತೆ ಹಚ್ಚಲು ಸರ್ಕಾರ ತನಿಖೆ ನಡೆಸಬೇಕು. ಅವರೆಲ್ಲರನ್ನೂ ಈ ಲೋಪಕ್ಕೆ ಹೊಣೆಗಾರರನ್ನಾಗಿಸಬೇಕು. ಮುಂದೆ ಯಾವ ಅಧಿಕಾರಿಯೂ ಎಷ್ಟೇ ಒತ್ತಡಗಳಿದ್ದರೂ ನಿಯಮಗಳನ್ನು ಗಾಳಿಗೆ ತೂರಿ ಕೆರೆಯ ಅವನತಿಗೆ ಕಾರಣವಾಗುವಂತಹ ಪ್ರಯತ್ನಗಳಿಗೆ ಕೈಹಾಕಬಾರದು. ಅಂತಹ ಸಂದೇಶವನ್ನು ಸಮಾಜಕ್ಕೆ ಸರ್ಕಾರ ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT