ಗುರುವಾರ , ಆಗಸ್ಟ್ 18, 2022
25 °C

ಸಂಪಾದಕೀಯ: ಸುಗಮ ಸಂಚಾರಕ್ಕೆ ಸಂಚಕಾರ–ಪೊಲೀಸರ ಕಿರಿಕಿರಿಗೆ ಬೀಳಲಿ ಕಡಿವಾಣ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

‘ದಾಖಲೆಗಳ ಪರಿಶೀಲನೆ ನೆಪದಲ್ಲಿ ಎಲ್ಲೆಂದರಲ್ಲಿ ವಾಹನ ತಡೆಯಬಾರದು’ ಎಂದು ರಾಜ್ಯ ಪೊಲೀಸ್‌ ಮಹಾನಿರ್ದೇಶಕ (ಡಿಜಿ–ಐಜಿಪಿ) ಪ್ರವೀಣ್‌ ಸೂದ್‌ ಅವರು ಪೊಲೀಸರಿಗೆ ನೀಡಿರುವ ಸೂಚನೆ ಕಟ್ಟುನಿಟ್ಟಾಗಿ ಪಾಲನೆಯಾಗಬೇಕಾದ ಅಗತ್ಯವಿದೆ.

ರಾಜಧಾನಿ ಬೆಂಗಳೂರು ತೀವ್ರ ಸಂಚಾರ ದಟ್ಟಣೆ ಸಮಸ್ಯೆ ಎದುರಿಸುತ್ತಿದೆ. ಇಂಥ ಸಂದರ್ಭದಲ್ಲಿ ಪೊಲೀಸರು ಮುಖ್ಯರಸ್ತೆಗಳಲ್ಲಿ ನಿಂತು ವಾಹನಗಳನ್ನು ಅಡ್ಡಗಟ್ಟುವುದು ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತಿದೆ. ಸುಗಮ ಸಂಚಾರಕ್ಕೆ ಕಿರಿಕಿರಿ ಉಂಟು ಮಾಡುತ್ತಿದೆ.

ಎಲ್ಲೆಂದರಲ್ಲಿ ವಾಹನ ಅಡ್ಡಗಟ್ಟುವ ಪೊಲೀಸರ ವರ್ತನೆಯನ್ನು ಪ್ರಶ್ನಿಸಿ ಸಾರ್ವಜನಿಕರೊಬ್ಬರು ಟ್ವೀಟ್‌ ಮಾಡಿದ್ದರು. ಟ್ವೀಟ್‌ಗೆ ಸ್ಪಂದಿಸಿರುವ ಪ್ರವೀಣ್ ಸೂದ್, ‘ಕಣ್ಣಿಗೆ ಕಾಣುವಂತೆ ನಿಯಮ ಉಲ್ಲಂಘನೆಯಾದರೆ ಹಾಗೂ ಮದ್ಯಪಾನ ಮಾಡಿ ವಾಹನ ಚಲಾಯಿಸಿದ್ದಾರೆಯೇ ಎಂಬುದರ ತಪಾಸಣೆಗೆ ಅಗತ್ಯವಿದ್ದರೆ ಮಾತ್ರ ವಾಹನ ತಡೆದು ನಿಲ್ಲಿಸಬೇಕು. ದಾಖಲೆ ಕೇಳುವ ನೆಪದಲ್ಲಿ ವಾಹನ ಅಡ್ಡಗಟ್ಟಬಾರದು’ ಎಂಬುದಾಗಿ ಪೊಲೀಸರಿಗೆ ಸೂಚನೆ ನೀಡುವುದಾಗಿ ತಿಳಿಸಿದ್ದಾರೆ. ಡಿಜಿ–ಐಜಿಪಿ ಅವರಿಂದ ಸೂಚನೆ ಹೊರಬಿದ್ದ ಸಂದರ್ಭದಲ್ಲೇ, ದಾಖಲೆಗಳ ಪರಿಶೀಲನೆ ನೆಪದಲ್ಲಿ ಕೇರಳದ ಕಾರೊಂದನ್ನು ಅಡ್ಡಗಟ್ಟಿ ಅಕ್ರಮವಾಗಿ ಹಣ ವಸೂಲಿ ಮಾಡಿದ ಆರೋಪದಡಿ ಎಎಸ್‌ಐ ಮತ್ತು ಹೆಡ್‌ ಕಾನ್‌ಸ್ಟೆಬಲ್‌ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಎಲ್ಲೆಂದರಲ್ಲಿ ವಾಹನ ಅಡ್ಡಗಟ್ಟುವ ಸಂಚಾರ ಪೊಲೀಸರು, ವಾಹನಗಳ ಮಾಲೀಕರು ಹಾಗೂ ಚಾಲಕರಿಂದ ಅಕ್ರಮವಾಗಿ ಹಣ ವಸೂಲಿ ಮಾಡುವ ಬಗ್ಗೆ ಸಾರ್ವಜನಿಕರು ಅನೇಕ ಸಲ ದೂರಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲೂ ಪುರಾವೆಸಮೇತ ವಿಡಿಯೊಗಳನ್ನು ಹರಿಯಬಿಟ್ಟಿದ್ದಾರೆ. ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕಾದ ಪೊಲೀಸರಲ್ಲಿ ಕೆಲವರು, ರಸ್ತೆಗಳಲ್ಲಿ ವಾಹನಗಳನ್ನು ಯರ‍್ರಾಬಿರ‍್ರಿ ಅಡ್ಡಗಟ್ಟಿ ದಂಡ ವಸೂಲಿ ಮಾಡುವುದನ್ನೇ ಅಭ್ಯಾಸ ಮಾಡಿಕೊಂಡಿದ್ದಾರೆ. ದಂಡ ಸಂಗ್ರಹ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಮಾಡಲು ಸಂಚಾರ ಪೊಲೀಸರಿಗೆ ಬಾಡಿವೋರ್ನ್‌ ಕ್ಯಾಮೆರಾ ನೀಡಲಾಗಿದೆ. ಆದರೆ, ಇವುಗಳನ್ನು ಆಫ್ ಮಾಡಿ, ಕೆಲ ಸಿಬ್ಬಂದಿ ಹಣ ವಸೂಲಿ ಮಾಡುತ್ತಿದ್ದಾರೆ. ಡಿಜಿ–ಐಜಿಪಿ ಸೂಚನೆ ಅನ್ವಯ ಇನ್ನಾದರೂ ಪೊಲೀಸರ ವರ್ತನೆ ಬದಲಾಗಬೇಕಿದೆ.

ರಸ್ತೆಗಳಲ್ಲಿ ಗುಂಡಿ ಹಾಗೂ ಉಬ್ಬುಗಳನ್ನು ನಿಭಾಯಿಸಿಕೊಂಡು ವಾಹನ ಚಲಾಯಿಸುವಾಗ ಏಕಾಏಕಿ ಪೊಲೀಸರು ಅಡ್ಡಗಟ್ಟಿದ ವೇಳೆ ಅಪಘಾತಗಳು ಸಂಭವಿಸಿರುವ ಉದಾಹರಣೆಗಳು ಬಹಳಷ್ಟಿವೆ. ಹೆಲ್ಮೆಟ್ ಧರಿಸದೆ ಬೈಕ್ ಓಡಿಸುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿದ ಸಂದರ್ಭದಲ್ಲಿ ಉಂಟಾದ ಅಪಘಾತದಲ್ಲಿ ಸವಾರ ದುರ್ಮರಣಕ್ಕೀಡಾದ ಘಟನೆ ಕಳೆದ ವರ್ಷ ಮೈಸೂರಿನಲ್ಲಿ ನಡೆದಿತ್ತು. ಮರೆಯಲ್ಲಿ ನಿಂತು ಕಳ್ಳರನ್ನು ಹಿಡಿಯುವಂತೆ, ವಾಹನ ಸವಾರರನ್ನು ರಸ್ತೆಯಲ್ಲಿ ಇದ್ದಕ್ಕಿದ್ದಂತೆ ತಡೆದು ನಿಲ್ಲಿಸುವುದು ಹಾಗೂ ಬೆನ್ನಟ್ಟಿ ಹೋಗುವ ಸಿನಿಮೀಯ ಸಾಹಸಗಳಿಂದ ಸಂಚಾರ ಪೊಲೀಸರು ಹೊರಬರಬೇಕಿದೆ. ಸಿ.ಸಿ.ಟಿ.ವಿ ಕ್ಯಾಮೆರಾ ಕಣ್ಗಾವಲು ಇರುವಾಗ ಹಾಗೂ ಪೊಲೀಸರ ಬಳಿಯಲ್ಲಿ ಕ್ಯಾಮೆರಾ ಹೊಂದಿರುವ ಫೋನ್‌ಗಳು ಇರುವಾಗ ನಿಯಮಗಳನ್ನು ಉಲ್ಲಂಘಿಸಿದ ವಾಹನ ಸವಾರರನ್ನು ಕಾನೂನು ಪ್ರಕ್ರಿಯೆಗೆ ಒಳಪಡಿಸುವುದು ಸುಲಭವಾಗಿದೆ. ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡರೆ ವಾಹನ ಸವಾರರನ್ನು ಅನಗತ್ಯವಾಗಿ ಬೆನ್ನುಹತ್ತಿ ಹೋಗುವುದು ತಪ್ಪುತ್ತದೆ ಹಾಗೂ ನಿಯಮ ಉಲ್ಲಂಘಿಸಿದವರನ್ನು ಕಾನೂನು ಪ್ರಕ್ರಿಯೆಗೆ ಒಳಪಡಿಸಲು ಸಾಧ್ಯವಿದೆ. ನಿಯಮ ಉಲ್ಲಂಘಿಸಿದ ವಾಹನಗಳ ಮಾಲೀಕರ ಮನೆಗಳಿಗೆ ನೋಟಿಸ್‌ ಕಳಿಸುವ ವ್ಯವಸ್ಥೆ ಈಗಾಗಲೇ ಜಾರಿಯಲ್ಲಿದೆ. ಆ ವ್ಯವಸ್ಥೆಯನ್ನು ಮತ್ತಷ್ಟು ವ್ಯಾಪಕವಾಗಿ ಜಾರಿಗೊಳಿಸುವುದರಿಂದ ಸಂಚಾರ ಪೊಲೀಸರು ಮತ್ತು ಸಾರ್ವಜನಿಕರ ನಡುವಿನ ತಿಕ್ಕಾಟ ಬಹುಮಟ್ಟಿಗೆ ಕಡಿಮೆಯಾಗುತ್ತದೆ.

ಸಂಚಾರ ನಿಯಮಗಳನ್ನು ಪಾಲಿಸುವುದು ವಾಹನ ಸವಾರರ ಕರ್ತವ್ಯ. ನಿಯಮಗಳನ್ನು ಮೀರಿದಾಗ ಕಾನೂನುಕ್ರಮ ಜರುಗಿಸುವುದೂ ಅಗತ್ಯ. ಆದರೆ, ಸರಿಯಾದ ದಾಖಲೆಗಳನ್ನುಹೊಂದಿಲ್ಲದವರನ್ನು ಅಥವಾ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರನ್ನು ಪೊಲೀಸರು ಅವಮಾನಿಸುವುದಕ್ಕೆ ಅಥವಾ ಅವರಿಂದ ಅಕ್ರಮವಾಗಿ ಹಣ ವಸೂಲಿ ಮಾಡುವುದಕ್ಕೆ ಯಾವ ಸಮರ್ಥನೆಯೂ ಇಲ್ಲ. ನಿಯಮ ಪಾಲನೆ ತಪ್ಪಿದವರೊಂದಿಗೆ ಒರಟು ವರ್ತನೆಯೂ ಸರಿಯಲ್ಲ. ಸಂಚಾರ ನಿಯಮಗಳ ಪಾಲನೆಯ ಹಿನ್ನೆಲೆಯಲ್ಲಿ ಸಾರ್ವಜನಿಕರು ತಮ್ಮ ನಾಗರಿಕಪ್ರಜ್ಞೆ ಪ್ರದರ್ಶಿಸಬೇಕೆಂದು ನಿರೀಕ್ಷಿಸುವಂತೆಯೇ, ಸಂಚಾರ ಪೊಲೀಸರು ಕೂಡ ತಮ್ಮ ಸಾರ್ವಜನಿಕ ನಡವಳಿಕೆಯನ್ನು ಸುಧಾರಿಸಿಕೊಳ್ಳಬೇಕಾಗಿದೆ. ರಾಜ್ಯದಲ್ಲಿ ಅನೇಕ ರಸ್ತೆಗಳ ನಿರ್ವಹಣೆ ಉತ್ತಮ ಸ್ಥಿತಿಯಲ್ಲಿಲ್ಲ.

ಬೆಂಗಳೂರಿನಲ್ಲಂತೂ ಗುಂಡಿಯಿಲ್ಲದ ರಸ್ತೆಯೇ ಇಲ್ಲ ಎನ್ನುವ ಪರಿಸ್ಥಿತಿಯಿದೆ. ರಸ್ತೆಯಲ್ಲಿನ ಗುಂಡಿಗಳ ಬಗ್ಗೆ ಹೈಕೋರ್ಟ್‌ ನಿರಂತರವಾಗಿ ಎಚ್ಚರಿಸುತ್ತಿದ್ದರೂ ಪರಿಸ್ಥಿತಿಯಲ್ಲೇನೂ ಗಮನಾರ್ಹ ಬದಲಾವಣೆ ಕಂಡುಬಂದಿಲ್ಲ. ಪ್ರಮುಖ ರಸ್ತೆಗಳಲ್ಲಿ ವಾಹನಗಳ ನಿಲುಗಡೆಗೆ ಸಾಕಷ್ಟು ಸ್ಥಳಾವಕಾಶವನ್ನು ಕಲ್ಪಿಸಲಾಗಿಲ್ಲ. ಮತ್ತೂ ಕೆಲವೆಡೆ ದುಬಾರಿ ಪಾರ್ಕಿಂಗ್‌ ಶುಲ್ಕದ ಹೊರೆಯಿದೆ. ತೆರಿಗೆಯನ್ನು ಏರಿಸುವ ವಿಚಾರದಲ್ಲಿ ಸರ್ಕಾರಕ್ಕೆ ಇರುವ ಉತ್ಸಾಹವು ಮೂಲ ಸೌಕರ್ಯ ಕಲ್ಪಿಸುವುದರಲ್ಲಿ ಇಲ್ಲ. ಇಡೀ ವ್ಯವಸ್ಥೆಯು ವಾಹನ ಸವಾರರನ್ನು ಒತ್ತಡಕ್ಕೆ ಗುರಿಮಾಡುವಂತಿದೆ. ಇಂಥ ಪ್ರತಿಕೂಲ ಸಂದರ್ಭದಲ್ಲಿ ವಾಹನಗಳ ಸಂಚಾರಕ್ಕೆ ಮತ್ತೊಂದು ಅಡೆತಡೆಯ ರೂಪದಲ್ಲಿ ಪೊಲೀಸರು ವರ್ತಿಸಬಾರದು. ಪ್ರವೀಣ್‌ ಸೂದ್‌ ಅವರು ಬೆಂಗಳೂರು ಪೊಲೀಸ್‌ ಕಮಿಷನರ್‌ ಆಗಿದ್ದ ಅವಧಿಯಲ್ಲೂ ಸಾರ್ವಜನಿಕರೊಂದಿಗೆ ಸೌಹಾರ್ದದಿಂದ ವರ್ತಿಸುವಂತೆ ಸಂಚಾರ ಪೊಲೀಸರಿಗೆ ಲಿಖಿತ ಸೂಚನೆ ನೀಡಿದ್ದರು. ಆ ಸೂಚನೆಯ ನಂತರವೂ ಪೊಲೀಸರ ವರ್ತನೆ ಬದಲಾಗಿಲ್ಲ. ವಾಹನಗಳನ್ನು ಅಡ್ಡಗಟ್ಟಿ ನಿಲ್ಲಿಸುವ ಚಾಳಿಗೆ ಕಡಿವಾಣ ಬಿದ್ದಿಲ್ಲ. ಪೊಲೀಸ್‌ ಮಹಾನಿರ್ದೇಶಕರ ಸೂಚನೆ ಇನ್ನು ಮುಂದಾದರೂ ಕಟ್ಟುನಿಟ್ಟಾಗಿ ಜಾರಿಗೆ ಬರಲಿ. ಹಿರಿಯ ಅಧಿಕಾರಿಗಳು ಆಗಾಗ್ಗೆ ರಸ್ತೆಗಿಳಿದು ಪರಿಶೀಲನೆ ನಡೆಸಲಿ. ನಾಗರಿಕರು ಹಾಗೂ ಸಂಚಾರ ಪೊಲೀಸರ ನಡುವೆ ಸೌಹಾರ್ದದ ನಡವಳಿಕೆ ಕಾರ್ಯರೂಪಕ್ಕೆ ಬಂದಾಗಷ್ಟೇ ಸುಗಮ ಸಂಚಾರ
ಸಾಧ್ಯವಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು