ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಉಪಚುನಾವಣೆ ಫಲಿತಾಂಶ-ಬಿಜೆಪಿಗೆ ಎಚ್ಚರಿಕೆ ಗಂಟೆ

Last Updated 2 ನವೆಂಬರ್ 2021, 22:00 IST
ಅಕ್ಷರ ಗಾತ್ರ

ರಾಜ್ಯ ವಿಧಾನಸಭೆಯ ಎರಡು ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಗೆದ್ದಿದ್ದಾರೆ. ಹಾನಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಜಯ ಸಾಧಿಸಿದ್ದಾರೆ. ಅಲ್ಲಿಗೆ ಆಡಳಿತ ಪಕ್ಷವಾದ ಬಿಜೆಪಿ ಮತ್ತು ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ತಲಾ ಒಂದು ಸ್ಥಾನ ಗೆದ್ದುಕೊಂಡಿವೆ. ಇದು ಮೇಲ್ನೋಟಕ್ಕೆ ಗೋಚರವಾಗುವ ಸಂಗತಿ. ಆದರೆ, ಇದು ಆಡಳಿತ ಪಕ್ಷಕ್ಕೆ ನಿಶ್ಚಿತವಾಗಿಯೂ ಎಚ್ಚರಿಕೆಯ ಗಂಟೆ.

ಅದರಲ್ಲೂ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆಯಲ್ಲಿ ಬಿಜೆಪಿಗೆ ಸೋಲುಂಟಾಗಿದೆ. ಇದು ವೈಯಕ್ತಿಕವಾಗಿ ಬೊಮ್ಮಾಯಿ ಅವರಿಗೆ ಹಿನ್ನಡೆ. ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ನಡೆದ ಮೊದಲ ಚುನಾವಣೆ ಇದು. ಮುಖ್ಯಮಂತ್ರಿ ಜೊತೆಗೆ ಒಂದು ಡಜನ್ ಮಂತ್ರಿಗಳೂ ಹಾನಗಲ್ ಕ್ಷೇತ್ರದಲ್ಲಿ ಬೀಡುಬಿಟ್ಟಿದ್ದರು. ಈ ಕ್ಷೇತ್ರ ಉಳಿಸಿಕೊಳ್ಳಲು ಬಿಜೆಪಿ ತೀವ್ರ ಪ್ರಯತ್ನ ಮಾಡಿತ್ತು. ಆದರೂ ಮತದಾರರು ಅಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಕೈ ಹಿಡಿದಿದ್ದಾರೆ.

ಇದಕ್ಕೆ ಜನರೊಂದಿಗೆ ಅವರು ಹೊಂದಿರುವ ಸಂಪರ್ಕವೂ ಒಂದು ಕಾರಣ. ಉಪಚುನಾವಣೆಗಳಲ್ಲಿ ಆಡಳಿತ ಪಕ್ಷಕ್ಕೆ ಅನುಕೂಲಕರವಾದ ವಾತಾವರಣ ಇರುವುದು ಸಹಜ. ಅದು ಗೆಲುವಿಗೆ ನೆರವಾಗುತ್ತದೆ. ಆದರೆ ಈ ಬಾರಿ ಹಾನಗಲ್‌ ಕ್ಷೇತ್ರದ ಮಟ್ಟಿಗೆ ಆ ಮಾತು ಸುಳ್ಳಾಗಿದೆ. ಎರಡು ಕ್ಷೇತ್ರಗಳ ಚುನಾವಣಾ ಫಲಿತಾಂಶವನ್ನು ಇಟ್ಟುಕೊಂಡು ಇದು ಆಡಳಿತ ಪಕ್ಷಕ್ಕೆ ಆದ ಹಿನ್ನಡೆ ಎಂದು ಸಾರಾಸಗಟಾಗಿ ಹೇಳಲು ಸಾಧ್ಯವಿಲ್ಲವಾದರೂ ಬಿಜೆಪಿಗೆ ಒಂದು ಪೆಟ್ಟು ಎಂಬುದಂತೂ ಸತ್ಯ. ಹಾನಗಲ್ ಕ್ಷೇತ್ರವನ್ನು ಈ ಮೊದಲು ಬಿಜೆಪಿ ಶಾಸಕರೇ ಪ್ರತಿನಿಧಿಸಿದ್ದರು. ಈ ಕ್ಷೇತ್ರವನ್ನು ಬಿಜೆಪಿಯಿಂದ ಕಾಂಗ್ರೆಸ್ ಕಸಿದುಕೊಂಡಿದೆ.

ಉಪಚುನಾವಣೆ ಫಲಿತಾಂಶದಿಂದ ಕಾಂಗ್ರೆಸ್ ಚೇತರಿಸಿಕೊಂಡಿದೆ. ಹಾನಗಲ್‌ನಲ್ಲಿ ಗೆಲುವು ಸಾಧಿಸಿದೆ. ಸಿಂದಗಿಯಲ್ಲಿ ಎರಡನೇ ಸ್ಥಾನ ಗಳಿಸಿದೆ. ಸಿಂದಗಿಯಲ್ಲಿ ಈ ಹಿಂದೆ ಜೆಡಿಎಸ್–ಬಿಜೆಪಿ ನಡುವೆ ಪೈಪೋಟಿ ಇತ್ತು. ಉಪಚುನಾವಣೆ ಫಲಿತಾಂಶದಿಂದ ಭಾರಿ ಪೆಟ್ಟು ಬಿದ್ದಿರುವುದು ಜೆಡಿಎಸ್‌ ಪಕ್ಷಕ್ಕೆ. ಸಿಂದಗಿಯಲ್ಲಿ ಜೆಡಿಎಸ್ ಶಾಸಕರೇ ಇದ್ದರು. ಎಂ.ಸಿ.ಮನಗೂಳಿ ಅವರ ನಿಧನದಿಂದ ಅಲ್ಲಿ ಉಪಚುನಾವಣೆಯ ಅಗತ್ಯ ಉಂಟಾಯಿತು. ಅವರ ಪುತ್ರ ಅಶೋಕ ಮನಗೂಳಿ ಅವರುಕಾಂಗ್ರೆಸ್ ಸೇರಿದರು. ಪಕ್ಷ ಅವರಿಗೇ ಟಿಕೆಟ್ ನೀಡಿತು.

ಅನುಕಂಪದ ಮತಗಳು ಬರಬಹುದು ಎನ್ನುವ ನಿರೀಕ್ಷೆ ಕಾಂಗ್ರೆಸ್ ಪಕ್ಷಕ್ಕೆ ಇತ್ತು. ಆದರೆ ಇಲ್ಲಿ ಬಿಜೆಪಿ ಜಯ ಗಳಿಸುವ ಮೂಲಕ ಈ ನಿರೀಕ್ಷೆ ಸುಳ್ಳಾಗಿದೆ. ಜೆಡಿಎಸ್ ಪಕ್ಷಕ್ಕೆ ಠೇವಣಿ ಕೂಡ ಸಿಕ್ಕಿಲ್ಲ. ಇದರಿಂದಾಗಿ ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ನೆಲೆ ಕುಸಿಯುತ್ತಿದೆ ಎನ್ನುವುದು ಸ್ಪಷ್ಟವಾಗಿದೆ. ಉತ್ತರ ಕರ್ನಾಟಕದ ಜೆಡಿಎಸ್ ಪ್ರಬಲ ಕ್ಷೇತ್ರಗಳಲ್ಲಿ ಸಿಂದಗಿ ಕೂಡ ಒಂದಾಗಿತ್ತು. ಈಗ ಅದು ಕೈತಪ್ಪಿದೆ. ಎಂ.ಸಿ.ಮನಗೂಳಿ ಅವರ ವೈಯಕ್ತಿಕ ವರ್ಚಸ್ಸು ಈ ಹಿಂದೆ ಜೆಡಿಎಸ್‌ಗೆ ನೆರವಾಗಿತ್ತು. ಈ ಬಾರಿ ಅದರ ಲಾಭವನ್ನು ಪಡೆಯಲು ಕಾಂಗ್ರೆಸ್ ಪ್ರಯತ್ನಪಟ್ಟಿತ್ತಾದರೂ ಅದು ಸಾಧ್ಯವಾಗಿಲ್ಲ.

ಅಧಿಕಾರ, ಹಣ, ಜಾತಿ ಯಾವುದೇ ಆಮಿಷಗಳನ್ನು ಒಡ್ಡಿದರೂ ಮತದಾರರು ತಮಗೆ ಬೇಕಾದವರನ್ನೇ ಆಯ್ಕೆ ಮಾಡುತ್ತಾರೆ ಎನ್ನುವುದಕ್ಕೆ ಈ ಫಲಿತಾಂಶ ನಿದರ್ಶನ. ಉಪ ಚುನಾವಣೆ ಸಂದರ್ಭದಲ್ಲಿ ಮೂರೂ ಪ್ರಮುಖ ಪಕ್ಷಗಳ ನಾಯಕರು ಲಂಗು ಲಗಾಮಿಲ್ಲದೆ ಅತ್ಯಂತ ಕೆಟ್ಟ ರೀತಿಯಲ್ಲಿ ಬೈದಾಡಿಕೊಂಡಿದ್ದರು. ಜಾತಿಯನ್ನು ಪ್ರಸ್ತಾಪಿಸಿದ್ದರು. ಹಣದ ಹೊಳೆಯೂ ಹರಿದಿತ್ತು ಎಂಬ ವರದಿಗಳಿವೆ. ಶತಾಯಗತಾಯ ಗೆಲ್ಲಲೇಬೇಕು ಎಂದು ಸಚಿವ ಸಂಪುಟದ ಬಹುತೇಕ ಸಚಿವರು ಈ ಕ್ಷೇತ್ರಗಳಲ್ಲಿ ಬೀಡುಬಿಟ್ಟಿದ್ದರು. ಸ್ಥಳೀಯ ಸಮಸ್ಯೆಗಳು, ಅಭಿವೃದ್ಧಿಯ ವಿಷಯ ಹೆಚ್ಚು ಪ್ರಸ್ತಾಪವಾಗಲೇ ಇಲ್ಲ. ಆರೋಪ ಪ್ರತ್ಯಾರೋಪಗಳೇ ಮತದಾರರನ್ನು ರಂಜಿಸಿದವು. ಸ್ಥಳೀಯ ಅಗತ್ಯ ಮತ್ತು ಆದ್ಯತೆಗಳ ನೆಲೆಯಲ್ಲಿ ಚುನಾವಣೆ ನಡೆಸಲು ರಾಜಕೀಯ ಪಕ್ಷಗಳ ಮುಖಂಡರು ಪ್ರಯತ್ನ ಪಡದೇ ಇದ್ದರೂ ಮತದಾರರು ಮಾತ್ರ ಅವುಗಳನ್ನು ಅರಿತೇ ಮತ ಚಲಾಯಿಸಿದ್ದಾರೆ.

ಹಾನಗಲ್ ಕ್ಷೇತ್ರದಲ್ಲಿ ಸಿ.ಎಂ.ಉದಾಸಿ ಅವರ ಕುಟುಂಬದವರಿಗೇ ಟಿಕೆಟ್ ನೀಡಬೇಕು ಎಂಬ ಒತ್ತಡ ಇತ್ತು. ಆದರೆ, ಆ ಒತ್ತಡಕ್ಕೆ ಪಕ್ಷ ಮಣೆ ಹಾಕಲಿಲ್ಲ. ಇದರಿಂದ ಬಿಜೆಪಿ ಸ್ಥಳೀಯ ಮುಖಂಡರಿಗೆ, ಕಾರ್ಯಕರ್ತರಿಗೆ ಅಸಮಾಧಾನವಾಗಿತ್ತು ಎಂಬ ವರದಿಯೂ ಇತ್ತು. ಬಿಜೆಪಿ ಸೋಲುವುದಕ್ಕೆ ಅದೂ ಒಂದು ಕಾರಣವಾಗಿರಬಹುದು ಎಂಬ ಮಾತು ಇದೆ.ಸಿಂದಗಿ ಕ್ಷೇತ್ರದಲ್ಲಿ ಅನುಕಂಪದ ಮತಗಳ ಮೇಲೆ ಕಣ್ಣಿಟ್ಟೇ ಎಂ.ಸಿ.ಮನಗೂಳಿ ಅವರ ಪುತ್ರ ಅಶೋಕ ಮನಗೂಳಿ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು. ಸಿಂದಗಿಯಲ್ಲಿ ಕಾಂಗ್ರೆಸ್ ತಂತ್ರ ಫಲ ನೀಡಿಲ್ಲ. ಪಕ್ಷದ ಮೇಲ್ಮಟ್ಟದ ನಾಯಕರಿಂದ ಮತಗಳು ಬರುತ್ತವೆ ಎನ್ನುವುದನ್ನು ಈ ಫಲಿತಾಂಶ ಸುಳ್ಳುಮಾಡಿದೆ. ರಾಜಕೀಯ ಪಕ್ಷಗಳ ಮುಖಂಡರು ಸ್ಥಳೀಯ ಅಗತ್ಯಗಳ ಬಗ್ಗೆ ಇನ್ನಾದರೂ ಆಲೋಚಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT