ಗುರುವಾರ , ಮಾರ್ಚ್ 23, 2023
20 °C

ಸಂಪಾದಕೀಯ: ಸೌಹಾರ್ದ, ಸ್ನೇಹದ ಬೆಳಕು ಚೆಲ್ಲುವ ಹಣತೆಯಾಗಲಿ ಕ್ರಿಕೆಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೋಲು ಮತ್ತು ಗೆಲುವು ಕ್ರೀಡೆಯ ಅವಿಭಾಜ್ಯ ಅಂಗ. ಕ್ರೀಡೆಯು ಮನುಷ್ಯ ಸಂಬಂಧಗಳನ್ನು ಮತ್ತು ರಾಷ್ಟ್ರಗಳನ್ನು ಬೆಸೆಯುವ ಸೇತುವೆಯೂ ಹೌದು. ಆದರೆ, ಅದನ್ನು ವಿಭಜನೆಗೆ ಮತ್ತು ಘರ್ಷಣೆಗೆ ಬಳಸಿಕೊಳ್ಳುವಂತಹ ಕೆಟ್ಟ ಪ್ರವೃತ್ತಿ ಹೆಚ್ಚತೊಡಗಿದೆ. ತಮ್ಮ ನೆಚ್ಚಿನ ತಂಡದ ಸೋಲನ್ನು ಅರಗಿಸಿಕೊಳ್ಳಲಾಗದ ಸಂಕುಚಿತ ಮನೋಭಾವದ ಕೆಲವರಿಂದ ಅತಿರೇಕದ ಮತ್ತು ವಿಕೃತವಾದ ಚೇಷ್ಟೆಗಳು ನಡೆಯುತ್ತವೆ.

ಟ್ವಿಂಟಿ–20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು ಪಾಕಿಸ್ತಾನದ ಎದುರು ಸೋತ ನಂತರ ಇಂತಹ ಹಲವು ಕೃತ್ಯಗಳು ವರದಿಯಾಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ವಿಷಪೂರಿತ ಸಂದೇಶಗಳು ಪ್ರವಹಿಸುತ್ತಿವೆ. ಎರಡೂ ದೇಶಗಳ ಕೆಲವರು ಇಂತಹ ಕೆಟ್ಟ ಸಂದೇಶಗಳನ್ನು ರವಾನಿಸಿರುವುದು ವಿಪರ್ಯಾಸ. ಕ್ರೀಡೆಯಲ್ಲಿಯೂ ರಾಜಕೀಯ ಮತ್ತು ಧಾರ್ಮಿಕ ತಾರತಮ್ಯಗಳನ್ನು ಕಾಣುವ ದ್ವೇಷಪೂರಿತ ಮನಸ್ಸಿನ ಕೆಲವರು ವಿವಾದಾತ್ಮಕ ಸಂದೇಶಗಳನ್ನು ಹರಿಬಿಟ್ಟರು. ಇದು, ಜನಸಾಮಾನ್ಯರ ನೆಲೆಯಲ್ಲಿ ನಡೆದ ಕುಕೃತ್ಯಗಳಾದರೆ ಕೆಲವು ಮುಖಂಡರು ಕೂಡ ಇಂಥದ್ದೇ ಕೆಲಸ ಮಾಡಿದರು. ಪಾಕಿಸ್ತಾನದ ಸಚಿವ ಶೇಖ್ ರಶೀದ್ ಅವರು ಪಾಕ್‌ ತಂಡವು ಭಾರತದ ವಿರುದ್ಧ ಗೆಲುವು ಸಾಧಿಸಿದ್ದನ್ನು ‘ಇಸ್ಲಾಮಿನ ವಿಜಯ’ ಎಂದು ಕರೆದರು.

ಅಲ್ಲಿನ ಪ್ರಧಾನಿ ಇಮ್ರಾನ್ ಖಾನ್ ಅವರು, ಭಾರತದೊಂದಿಗೆ ಮಾತುಕತೆ ನಡೆಸಲು ‘ಇದು ಸುಸಮಯ ಅಲ್ಲ’ ಎಂದರು. ಪಂದ್ಯದಲ್ಲಿನ ಸೋಲು–ಗೆಲುವುಗಳಿಗೂ ರಾಷ್ಟ್ರಗಳ ನಡುವಣ ಮಾತುಕತೆಗೂ ನೇರ ಸಂಬಂಧ ಇದೆ ಎಂಬ ಅರ್ಥದಲ್ಲಿ ಅವರು ಮಾತನಾಡಿದ್ದು ಅತ್ಯಂತ ಬಾಲಿಶವಾದುದು. ಪಾಕ್ ತಂಡ ದಶಕಗಳ ಹಿಂದೆ ವಿಶ್ವಕಪ್ ಗೆದ್ದಾಗ ಇಮ್ರಾನ್‌ ನಾಯಕರಾಗಿದ್ದರು. ಅಂತಹವರಿಂದ ಇಂತಹ ಹೇಳಿಕೆ ಅಕ್ಷಮ್ಯವೇ ಸರಿ. ಪಂದ್ಯದ ಸಂದರ್ಭದಲ್ಲಿ ಆಟಗಾರ ಮೊಹಮ್ಮದ್ ರಿಜ್ವಾನ್ ಅವರು ಪ್ರಾರ್ಥನೆ ಮಾಡಿ ದೇವರಿಗೆ ಕೃತಜ್ಞತೆ ಸಲ್ಲಿಸಿದ್ದನ್ನು ‘ಹಿಂದೂಗಳ ನಡುವೆ ನಮಾಜ್ ಮಾಡಿದ್ದನ್ನು ನೋಡಿ ಖುಷಿಯಾಯಿತು’ ಎಂದು ಮಾಜಿ ಕ್ರಿಕೆಟಿಗ ವಕಾರ್ ಯೂನಿಸ್ ನೀಡಿದ್ದ ಹೇಳಿಕೆಯು ವ್ಯಾಪಕ ಟೀಕೆಗೊಳಗಾಯಿತು. ನಂತರ ವಕಾರ್ ಕ್ಷಮೆ ಯಾಚಿಸಿದರು.

ಉಭಯ ದೇಶಗಳ ನಡುವಣ ರಾಜತಾಂತ್ರಿಕ ಸಂಬಂಧಗಳು ಏನಾದರೂ ಇರಲಿ, ಅವುಗಳ ಕುರಿತು ಚರ್ಚೆಗೆ ಬೇರೆ ವೇದಿಕೆಗಳು ಇವೆ. ಆದರೆ ಕ್ರಿಕೆಟ್ ಆಟವನ್ನು ಎರಡು ರಾಷ್ಟ್ರಗಳ ನಡುವಣ ಸಂಬಂಧಕ್ಕೆ ಅಥವಾ ಧರ್ಮದ ಜೊತೆ ತಳುಕು ಹಾಕುವುದು ಸ್ವಸ್ಥ ಮನಸ್ಸಿನ ಲಕ್ಷಣವಲ್ಲ. ಪಾಕಿಸ್ತಾನ ತಂಡ ಗೆಲುವು ಸಾಧಿಸಿದ್ದಕ್ಕೆ ಭಾರತದಲ್ಲಿ ಕೆಲವರು ಸಂಭ್ರಮಾಚರಣೆ ಮಾಡಿರುವುದು ವರದಿಯಾಗಿದೆ. ಪಾಕ್‌ ಪರ ಜಯಘೋಷ ಮಾಡಿದ್ದಾರೆ ಎಂದು ಕಾಶ್ಮೀರದ ಶ್ರೀನಗರದಲ್ಲಿರುವ ವೈದ್ಯಕೀಯ ಕಾಲೇಜಿನ ಕೆಲವು ವಿದ್ಯಾರ್ಥಿಗಳ ಮೇಲೆ ಅಕ್ರಮ ಚಟುವಟಿಕೆ ತಡೆ ಕಾಯ್ದೆಯ ಅಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ರಾಜಸ್ಥಾನದಲ್ಲಿ  ಶಿಕ್ಷಕಿಯೊಬ್ಬರು ಪಂದ್ಯ ಮುಗಿದ ಬಳಿಕ ‘ನಾವು ಗೆದ್ದೆವು’ ಎಂದು ಟ್ವೀಟ್‌ ಮಾಡಿದ್ದಕ್ಕೆ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಉತ್ತರಪ್ರದೇಶದಲ್ಲಿ ‍ಪೊಲೀಸರು ಮೂವರು ಕಾಶ್ಮೀರಿ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ಇತರ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಭಾರತದಲ್ಲಿ ಪಾಕ್‌ ಪರ ಜಯಘೋಷ ಕೂಗುವುದನ್ನು ಯಾರೂ ಬೆಂಬಲಿಸುವುದಿಲ್ಲ ಎಂಬುದು ನಿಜ. ಅದಕ್ಕೆ ಕಾರಣಗಳೂ ಇವೆ. ಆದರೆ, ಕ್ರೀಡೆಯನ್ನು ಕ್ರೀಡಾಮನೋಭಾವದಿಂದ ನೋಡಿ ಯಾರಾದರೂ ಸಂಭ್ರಮಿಸಿದ್ದರೆ ಅಂತಹವರ ವಿರುದ್ಧ ತೀರಾ ಕಠಿಣ ಕಾನೂನುಗಳ ಅಡಿ ಪ್ರಕರಣ ದಾಖಲಿಸುವ ಅಗತ್ಯ ಇಲ್ಲ. 

ಭಾರತದ ಸೋಲಿಗೆ ವ್ಯಕ್ತವಾದ ಪ್ರತಿಕ್ರಿಯೆಯು ಜಾತಿ, ಧರ್ಮನಿಂದನೆಯ ಹಂತಕ್ಕೂ ಇಳಿಯಿತು. ಸೋಲಿಗೆ ಬೌಲರ್ ಮೊಹಮ್ಮದ್ ಶಮಿ ಅವರನ್ನು ಗುರಿ ಮಾಡಲಾಯಿತು. ಅವರನ್ನು ದೂಷಿಸಿದ್ದು ಅವರು ಮುಸ್ಲಿಂ ಎಂಬ ಕಾರಣಕ್ಕೆ ವಿನಾ ಅವರ ವೈಫಲ್ಯವೊಂದನ್ನೇ ಗಮನಿಸಿ ಅಲ್ಲ. ಶಮಿ ಬೆಂಬಲಕ್ಕೆ ನಿಂತ ನಾಯಕ ವಿರಾಟ್ ಕೊಹ್ಲಿ ಅವರನ್ನೂ ಟ್ರೋಲಿಗರು ಬಿಡಲಿಲ್ಲ. ಇವೆಲ್ಲವೂ ಕ್ರೀಡಾ ಫಲಿತಾಂಶವೊಂದಕ್ಕೆ ನೀಡಬಹುದಾದ ಅತ್ಯಂತ ಕೆಟ್ಟ ಪ್ರತಿಕ್ರಿಯೆಗಳು. ಇಲ್ಲಿ ಒಂದಿಷ್ಟು ಒಳ್ಳೆಯ ಸ್ಪಂದನಗಳೂ ವ್ಯಕ್ತವಾಗಿವೆ. ಕೊಹ್ಲಿ ಅವರು ಶಮಿ ಪರವಾಗಿ ಗಟ್ಟಿ ಧ್ವನಿಯಲ್ಲಿ ಮಾತನಾಡಿದರು.

‘ವ್ಯಕ್ತಿಯೊಬ್ಬನನ್ನು ಧರ್ಮದ ಕಾರಣಕ್ಕೆ ನಿಂದಿಸುವುದು ಅತ್ಯಂತ ಅಸಹ್ಯ ಮೂಡಿಸುವ ಕೆಲಸ’ ಎಂದು ಕೊಹ್ಲಿ ಸ್ಪಷ್ಟ ಮಾತುಗಳಲ್ಲಿ ಹೇಳಿದರು. ಅವರು ತಮ್ಮ ತಂಡದ ಪರವಾಗಿಯೂ ಮಾತನಾಡಿದರು. ಅವರ ಹೇಳಿಕೆ ತುಸು ತಡವಾಗಿ ಬಂದಿತಾದರೂ ಅದು ಅತ್ಯಂತ ಯುಕ್ತವಾಗಿತ್ತು. ಪಂದ್ಯದ ನಂತರ ಪಾಕ್‌ ಬ್ಯಾಟ್ಸ್‌ಮನ್‌ ಮೊಹಮ್ಮದ್‌ ರಿಜ್ವಾನ್‌ ಅವರನ್ನು ಆಲಿಂಗಿಸುವ ಮೂಲಕ ಕೊಹ್ಲಿ ಉತ್ತಮ ಸಂದೇಶ ರವಾನಿಸಿದರು. ಕ್ರೀಡೆಯು ರವಾನಿಸಬೇಕಾದ ಸಂದೇಶ ಇದುವೆ; ವಿಭಜನೆಯ ಅಥವಾ ದ್ವೇಷದ ಸಂದೇಶವನ್ನಲ್ಲ. ಪಂದ್ಯಗಳು ಎರಡು ತಂಡಗಳ ನಡುವೆ ನಡೆಯುತ್ತವೆಯೇ ವಿನಾ ಎರಡು ದೇಶಗಳ ನಡುವೆ ಅಥವಾ ಅಲ್ಲಿನ ಪ್ರಜೆಗಳ ನಡುವೆ ಅಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು