ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಆಹಾರ ಪೋಲು ಸಮಸ್ಯೆ ಗಂಭೀರ: ನಿವಾರಣೆಗೆ ಬೇಕು ಸಮನ್ವಯದ ಯತ್ನ

Published 2 ಏಪ್ರಿಲ್ 2024, 0:16 IST
Last Updated 2 ಏಪ್ರಿಲ್ 2024, 0:16 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ‘ಆಹಾರ ಪೋಲು ಸೂಚ್ಯಂಕ’ ವರದಿಯು ಆಹಾರವನ್ನು ವ್ಯರ್ಥ ಮಾಡುತ್ತಿರುವುದಕ್ಕೆ ಸಂಬಂಧಿಸಿದ ಸಮಸ್ಯೆಯ ಕಡೆ ಮತ್ತೆ ಗಮನ ಸೆಳೆಯುವ ಕೆಲಸ ಮಾಡಿದೆ. ಈ ಸಮಸ್ಯೆಯು ಜಗತ್ತಿನ ಎಲ್ಲೆಡೆ ಗಂಭೀರ ಸ್ವರೂಪವನ್ನು ತಾಳುತ್ತಿದೆ. ವಿಶ್ವಸಂಸ್ಥೆಯ ಪರಿಸರ ಯೋಜನೆ (ಯುಎನ್‌ಇಪಿ) ಹಾಗೂ ಬ್ರಿಟನ್ ಮೂಲದ ಲಾಭದ ಉದ್ದೇಶವಿಲ್ಲದ ಸಂಸ್ಥೆಯೊಂದು ಸಿದ್ಧಪಡಿಸಿರುವ ವರದಿಯು 2022ರಲ್ಲಿ ಉತ್ಪಾದನೆಯಾದ ಆಹಾರ ಪದಾರ್ಥಗಳಲ್ಲಿ ಶೇಕಡ 19ರಷ್ಟು ವ್ಯರ್ಥವಾಗಿದೆ ಎಂದು ಹೇಳಿದೆ. ಅಂದರೆ, 10.50 ಸಾವಿರ ಕೋಟಿ ಟನ್‌ ಆಹಾರ ವ್ಯರ್ಥವಾಗಿದೆ. ಇದೇ ಅವಧಿಯಲ್ಲಿ ಜಗತ್ತಿನಾದ್ಯಂತ ಅಂದಾಜು 78.3 ಕೋಟಿ ಮಂದಿ ತೀವ್ರ ಹಸಿವಿನಿಂದ ನರಳಿದ್ದರು. ಆಹಾರವನ್ನು ಪೋಲು ಮಾಡುವುದು ಯಾವತ್ತಿನಿಂದಲೂ ಒಂದು ಗಂಭೀರ ಸಮಸ್ಯೆಯಾಗಿಯೇ ಉಳಿದಿದೆ. ವಿಶ್ವಸಂಸ್ಥೆಯು ಮಾರ್ಚ್‌ 30 ಅನ್ನು ‘ಅಂತರರಾಷ್ಟ್ರೀಯ ಶೂನ್ಯ ವ್ಯರ್ಥ ದಿನ’ ಎಂದು ಘೋಷಿಸಿದೆ. ವ್ಯರ್ಥವಾಗಿರುವ ಆಹಾರ ಪದಾರ್ಥಗಳ ಪ್ರಮಾಣವು ಪ್ರತಿ ವ್ಯಕ್ತಿಗೆ 132 ಕೆ.ಜಿ. ಆಗುತ್ತದೆ, ಇದು ಗ್ರಾಹಕರಿಗೆ ಲಭ್ಯವಿರುವ ಒಟ್ಟು ಆಹಾರ ಪದಾರ್ಥಗಳಲ್ಲಿ ಐದನೆಯ ಒಂದರಷ್ಟು ಎಂದು ವರದಿ ಹೇಳಿದೆ. ಆಹಾರ ಪೋಲು ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿರುವುದು ಮನೆಗಳ ಹಂತದಲ್ಲಿ.

ವ್ಯರ್ಥವಾದ ಆಹಾರದ ಒಟ್ಟು ಪ್ರಮಾಣವು ವಿಶ್ವದ ಹಸಿವನ್ನು ಇಂಗಿಸಲು ಅಗತ್ಯವಿರುವುದಕ್ಕಿಂತ ನಾಲ್ಕು ಪಟ್ಟು ಹೆಚ್ಚು ಎಂದು ಅಂದಾಜು ಮಾಡಲಾಗಿದೆ. ಆಹಾರದ ಪೋಲನ್ನು ತಡೆದರೆ ಹಸಿವಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂಬುದಷ್ಟೇ ಇಲ್ಲಿರುವ ಬಹುಮುಖ್ಯ ಅಂಶ ಅಲ್ಲ. ಏಕೆಂದರೆ, ಆಹಾರದ ಪೋಲು ಹಾಗೂ ಪರಿಸರದ ಮೇಲಿನ ದುಷ್ಪರಿಣಾಮದ ನಡುವೆ ನಂಟು ಇದೆ. ಆಹಾರ ಪೋಲಾಗುವುದು ಅಂದರೆ ಆಹಾರ ಉತ್ಪಾದನೆಗೆ ಬಳಸಿದ ನೀರು ಮತ್ತು ಜಮೀನು ಕೂಡ ವ್ಯರ್ಥವಾದಂತೆ. ಆಹಾರ ಪೋಲಾಗುವುದಕ್ಕೂ ಹಸಿರುಮನೆ ಪರಿಣಾಮವನ್ನು ಉಂಟುಮಾಡುವ ಅನಿಲಗಳ ಉತ್ಪಾದನೆಗೂ ನಂಟು ಇದೆ. ಆಹಾರ ಪೋಲಾಗುವ ಪ್ರಕ್ರಿಯೆಯು ಹಸಿರುಮನೆ ಪರಿಣಾಮ ಉಂಟುಮಾಡುವ ಅನಿಲಗಳ ಉತ್ಪಾದನೆಯಲ್ಲಿ ಶೇ 8ರಿಂದ ಶೇ 10ರಷ್ಟು ಪಾಲನ್ನು ಪಡೆದಿದೆ. ಜಾಗತಿಕ ಮಟ್ಟದಲ್ಲಿ ಸಾಗಾಟದ ಪ್ರಕ್ರಿಯೆಯು ಹೊರಸೂಸುವ ಅನಿಲಗಳ ಒಟ್ಟು ಪ್ರಮಾಣ ಕೂಡ ಇಷ್ಟೇ ಇರುತ್ತದೆ. ಹೀಗಾಗಿ, ಆಹಾರ ಪೋಲಾಗುವುದನ್ನು ತಡೆದಲ್ಲಿ ಆಹಾರ ಭದ್ರತೆಯನ್ನು ಖಾತರಿಪಡಿಸಲು ಸಾಧ್ಯ
ವಾಗುತ್ತದೆ, ಎಲ್ಲ ದೇಶಗಳ ಅರ್ಥ ವ್ಯವಸ್ಥೆಗೆ ಒಂದಿಷ್ಟು ಬಲ ಸಿಗುತ್ತದೆ, ಹವಾಮಾನ ಬದಲಾವಣೆಯ ಸಮಸ್ಯೆಯನ್ನು ಎದುರಿಸಲು ನೆರವಾಗುತ್ತದೆ. ಇದು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳ ಪೈಕಿ ಒಂದು.

ಹೆಚ್ಚಿನ ತಲಾವಾರು ಆದಾಯ ಇರುವ ದೇಶಗಳಲ್ಲಿನ ಆಹಾರದ ಪೂರೈಕೆ ಹಾಗೂ ಬಳಕೆಯ ಕ್ರಮವು ಆಹಾರ ವ್ಯರ್ಥವಾಗುವುದಕ್ಕೆ ಹೆಚ್ಚು ಕಾರಣವಾಗುವಂತೆ ಇದೆ. ಕಡಿಮೆ ತಲಾವಾರು ಆದಾಯ ಇರುವ ದೇಶಗಳಲ್ಲಿ ಆಹಾರ ವ್ಯರ್ಥ ಮಾಡುವ ತಲಾವಾರು ಪ್ರಮಾಣ ಹಾಗೂ ಅದರಿಂದ ಪರಿಸರದ ಮೇಲೆ ಆಗುವ ದುಷ್ಪರಿಣಾಮವು ಹೆಚ್ಚಿನ ತಲಾವಾರು ಆದಾಯ ಇರುವ ದೇಶಗಳಿಗೆ ಹೋಲಿಸಿದರೆ ಅರ್ಧದಷ್ಟು ಮಾತ್ರ ಇದೆ. ಹೀಗಿದ್ದರೂ, ತಲಾವಾರು ಆಹಾರ ಪೋಲು ಪ್ರಮಾಣದಲ್ಲಿ ಬೇರೆ ಬೇರೆ ಪ್ರಮಾಣದ ಆದಾಯ ಇರುವ ದೇಶಗಳ ನಡುವೆ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ. ಹೆಚ್ಚಿನ ತಾಪಮಾನ ಇರುವ ದೇಶಗಳಲ್ಲಿ ಆಹಾರ ಪೋಲಾಗುವ ಪ್ರಮಾಣವು ಹೆಚ್ಚಿದೆ. ಆಹಾರ ಪೋಲಾಗುವುದು ಬಹಳ ಸಂಕೀರ್ಣ ಸಮಸ್ಯೆಯಾದರೂ, ಬೇರೆ ಬೇರೆ ಹಂತಗಳಲ್ಲಿ ಸಮನ್ವಯದಿಂದ ಹಾಗೂ ವ್ಯವಸ್ಥಿತವಾಗಿ ಕೆಲಸ ಮಾಡಿದರೆ ಅದನ್ನು ನಿಯಂತ್ರಿಸಬಹುದು ಎಂದು ವರದಿಯಲ್ಲಿ ಹೇಳಲಾಗಿದೆ. ಸರ್ಕಾರಗಳು, ಬೇರೆ ಬೇರೆ ಹಂತಗಳಲ್ಲಿನ ಆಡಳಿತ ವ್ಯವಸ್ಥೆಗಳು, ಉದ್ಯಮ ಸಮೂಹಗಳು, ರೈತರ ಸಂಘಟನೆಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳು ಒಟ್ಟಾಗಿ ಹಾಗೂ ಪ್ರತ್ಯೇಕವಾಗಿ ಕೆಲಸ ಮಾಡಿ ಆಹಾರ, ಬೆಳೆ ಮತ್ತು ಆಹಾರ ಉತ್ಪನ್ನಗಳ ಪೋಲನ್ನು ತಡೆಯುವ ವ್ಯವಸ್ಥೆಯನ್ನು ಕಟ್ಟಬೇಕಾದ ಅಗತ್ಯ ಇದೆ ಎಂದು ಹೇಳಲಾಗಿದೆ. ಕೃಷಿ ಜಮೀನಿನಲ್ಲಿ ಬೆಳೆ ಬೆಳೆದ ನಂತರ ಅದು ಮನೆಗಳಿಗೆ ತಲುಪುವವರೆಗಿನ ಪ್ರತಿ ಹಂತದ ಮೇಲೆಯೂ ನಿಗಾ ಇರಿಸಬೇಕು. ಅದಕ್ಕಿಂತ ಹೆಚ್ಚಾಗಿ, ಆಹಾರ ಪೋಲು ಮಾಡುವುದನ್ನು ತಡೆಯುವ ಅಗತ್ಯ ಇದೆ ಎಂಬ ಅರಿವನ್ನು ಸಾರ್ವಜನಿಕರಲ್ಲಿ ಮೂಡಿಸಬೇಕು. ಜನಸಂಖ್ಯೆಯ ಹೆಚ್ಚಳವನ್ನು ಕಾಣುತ್ತಿರುವ ಭಾರತವು ಎಲ್ಲ ಹಂತಗಳಲ್ಲಿಯೂ ಆಹಾರ ಪೋಲು ಅತ್ಯಂತ ಕನಿಷ್ಠ ಮಟ್ಟವನ್ನು ತಲುಪುವಂತೆ ಆಗುವುದನ್ನು ಖಾತರಿಪಡಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT