ಸೋಮವಾರ, 4 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ– ಮಹಾರಾಷ್ಟ್ರದ ರಾಜಕೀಯ ಪ್ರಹಸನ: ಅನಿರೀಕ್ಷಿತ ತಿರುವು

Last Updated 1 ಜುಲೈ 2022, 19:15 IST
ಅಕ್ಷರ ಗಾತ್ರ

ಶಿವಸೇನಾವನ್ನು ಒಡೆಯುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಸೇನಾದ ನಾಯಕನಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟದ್ದು ಬಿಜೆಪಿಯ ಅತ್ಯಂತ ಚಾಣಾಕ್ಷ ನಡೆ

ಮಹಾರಾಷ್ಟ್ರ ಅಧಿಕಾರ ರಾಜಕಾರಣದ ಪ್ರಹಸನವು ಅನಿರೀಕ್ಷಿತ ತಿರುವಿನೊಂದಿಗೆ ಕೊನೆಗೊಂಡಿದೆ. ಶಿವಸೇನಾದ ಮುಖ್ಯಸ್ಥ, ಮುಖ್ಯಮಂತ್ರಿಯಾಗಿದ್ದ ಉದ್ಧವ್‌ ಠಾಕ್ರೆ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಉದ್ಧವ್‌ ವಿರುದ್ಧ ಬಂಡೆದ್ದ ಶಾಸಕರ ನಾಯಕ ಏಕನಾಥ ಶಿಂಧೆ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ‘ಅಧಿಕಾರಕ್ಕೆ ಜೋತುಬೀಳಲು ಬಯಸುವುದಿಲ್ಲ’ ಎಂದು ಹೇಳಿ ಉದ್ಧವ್‌ ರಾಜೀನಾಮೆ ಕೊಟ್ಟಿದ್ದಾರೆ.

ಆದರೆ, ರಾಜೀನಾಮೆ ಕೊಡುವುದು ಅಥವಾ ವಿಧಾನಸಭೆಯಲ್ಲಿ ವಿಶ್ವಾಸಮತ ಕಳೆದುಕೊಂಡು ಅಧಿಕಾರ ಬಿಟ್ಟುಕೊಡುವುದಲ್ಲದೆ ಬೇರೆ ಆಯ್ಕೆಗಳು ಅವರ ಮುಂದೆ ಇರಲಿಲ್ಲ. ಇದು ಹೀಗೆಯೇ ಆಗಬಹುದು ಎಂಬುದು ಶಿಂಧೆ ಬೆಂಬಲಿಗರು ಬಂಡಾಯದ ಕಹಳೆ ಊದಿದಾಗಲೇ ಗೊತ್ತಾಗಿತ್ತು. ಶಿವಸೇನಾದ ಮೂರನೇ ಎರಡರಷ್ಟು ಶಾಸಕರು ಶಿಂಧೆ ಬೆನ್ನಿಗೆ ನಿಂತಾಗ ಮಹಾ ವಿಕಾಸ ಆಘಾಡಿ (ಎಂವಿಎ) ಮೈತ್ರಿಕೂಟ ಸರ್ಕಾರವು ಉಳಿಯುವ ಸಾಧ್ಯತೆ ಅತ್ಯಂತ ಕ್ಷೀಣವಾಗಿತ್ತು.

ಬಂಡಾಯ ಎದ್ದ ಶಾಸಕರಲ್ಲಿ ಕೆಲವರು ಉದ್ಧವ್‌ ಬಳಿಗೆ ಮರಳಿದ್ದರೆ, ಉಳಿದವರನ್ನು ಅನರ್ಹಗೊಳಿಸುವ ಸಾಧ್ಯತೆ ಇತ್ತು. ಅಥವಾ ವಿಶ್ವಾಸಮತ ಕೋರಿಕೆಯನ್ನು ವಿಳಂಬ ಮಾಡಬಹುದಿತ್ತು. ಇದರಲ್ಲಿ ಯಾವುದೂ ಕಾರ್ಯರೂಪಕ್ಕೆ ಬರಲಿಲ್ಲ. ರಾಜೀನಾಮೆ ಕೊಡುವುದಲ್ಲದೆ ಉದ್ಧವ್‌ಗೆ ಬೇರೆ ವಿಧಿಯೇ ಇರಲಿಲ್ಲ ಎಂಬುದು ನಿಜ. ಆದರೆ, ವಿಶ್ವಾಸಮತ ಕೋರಿಕೆಗೆ ನಿಗದಿಯಾಗಿದ್ದ ಗುರುವಾರದ ಮುನ್ನಾದಿನವೇ ಅವರು ಏಕೆ ರಾಜೀನಾಮೆ ಕೊಟ್ಟರು ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಜಟಿಲ. ಸದನದಲ್ಲಿ ಭಾಷಣ ಮಾಡಿ, ಸರ್ಕಾರ ಏಕೆ ಉರುಳಿತು ಎಂಬುದನ್ನು ವಿವರಿಸಿ ರಾಜೀನಾಮೆ ಕೊಟ್ಟಿದ್ದರೆ ರಾಜಕೀಯವಾಗಿ ಇನ್ನೂ ಬಲವಾದ ಸಂದೇಶ ರವಾನೆ ಆಗುತ್ತಿತ್ತು.

ಪರಸ್ಪರ ಭಿನ್ನ ಸಿದ್ಧಾಂತಗಳನ್ನು ಪ್ರತಿಪಾದಿಸುವ ಶಿವಸೇನಾ ಮತ್ತು ಎನ್‌ಸಿಪಿ–ಕಾಂಗ್ರೆಸ್‌ ಮೈತ್ರಿಯು ಅಸಹಜ ಎಂದು 30 ತಿಂಗಳ ಅಧಿಕಾರದ ಅವಧಿಯಲ್ಲಿ ಎಂದೂ ತೋರಿರಲಿಲ್ಲ. ಹಲವು ಸವಾಲುಗಳ ನಡುವೆಯೂ ಸರ್ಕಾರ ಮತ್ತು ಮೈತ್ರಿಕೂಟ ಸುಲಲಿತವಾಗಿಯೇ ಸಾಗಿದ್ದವು. ಹಾಗಾಗಿ, ಸೈದ್ಧಾಂತಿಕ ಭಿನ್ನತೆಯ ವಿರೋಧಾಭಾಸಗಳಿಗೆ ಸರ್ಕಾರ ಉರುಳಿತು ಎನ್ನಲಾ
ಗದು.ಮಹಾರಾಷ್ಟ್ರ ರಾಜಕಾರಣದಲ್ಲಿ ಈಗ ನಡೆದಿರುವ ಪ್ರಹಸನವು ಭಾರತದ ರಾಜಕಾರಣದ ಅಧಃಪತನವನ್ನೂ ತೋರಿಸುತ್ತದೆ. ದೇಶದ ವಿವಿಧ ರಾಜ್ಯಗಳಲ್ಲಿ ‘ಆಪರೇಷನ್‌ ಕಮಲ’ ಎಂಬ ವಾಮಮಾರ್ಗದ ಮೂಲಕ ಬಿಜೆಪಿಯೇತರ ಸರ್ಕಾರಗಳನ್ನುಉರುಳಿಸಿ, ಅಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಸ್ಥಾಪಿಸಿದ ಅನೈತಿಕ ರಾಜಕಾರಣವನ್ನು ದೇಶದ ಜನರು ಪದೇ ಪದೇ ಕಾಣುತ್ತಿದ್ದಾರೆ. ಶಿವಸೇನಾದಲ್ಲಿ ನಡೆದ ಬಂಡಾಯದಲ್ಲಿ ತನ್ನ ಕೈವಾಡವೇ ಇಲ್ಲ ಎಂದು ಬಿಜೆಪಿ ಉದ್ದಕ್ಕೂ ಹೇಳಿಕೊಂಡು ಬಂದಿದೆ. ಬಂಡಾಯ ಶಾಸಕರು ಮೊದಲು ಗುಜರಾತ್‌ನ ಸೂರತ್‌ಗೆ ಬಳಿಕ ಅಸ್ಸಾಂನ ಗುವಾಹಟಿಗೆ ನಂತರ ಗೋವಾಕ್ಕೆ ಹೋಗಿ ಪಂಚತಾರಾ ಹೋಟೆಲು ಅಥವಾ ರೆಸಾರ್ಟ್‌ಗಳಲ್ಲಿ ತಂಗಿದ್ದರು. ಈ ಮೂರೂ ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದ ಸರ್ಕಾರವೇ ಇದೆ ಎಂಬುದು ಕಾಕತಾಳೀಯವೇ? ಉದ್ಧವ್‌ ರಾಜೀನಾಮೆ ಕೊಟ್ಟ ತಕ್ಷಣವೇ ಬಿಜೆಪಿ ಬೆಂಬಲದಲ್ಲಿ ಶಿಂಧೆ ಅವರು ಮುಖ್ಯಮಂತ್ರಿಯಾ
ದದ್ದು ಆ ಕ್ಷಣದ ನಿರ್ಧಾರವೇ? ತನ್ನ ಪಾತ್ರವೇ ಇಲ್ಲ ಎಂಬ ಬಿಜೆಪಿ ಹೇಳಿಕೆಯು ಅಸತ್ಯ ಎಂಬುದಕ್ಕೆ ಬೇರೆ ಪುರಾವೆಗಳನ್ನು ಹುಡುಕುವ ಅಗತ್ಯ ಇಲ್ಲ. ಬಂಡಾಯ ಎದ್ದವರಲ್ಲಿ ಹಲವು ಶಾಸಕರು ಜಾರಿ ನಿರ್ದೇಶನಾಲಯದ ಭಯದಿಂದಲೇ ಶಿಂಧೆ ಹಿಂದೆ ಹೋದರು ಎಂಬ ಆರೋಪದಲ್ಲಿಯೂ ಹುರುಳಿಲ್ಲದಿಲ್ಲ. ರಾಜ್ಯ ಸರ್ಕಾರಗಳನ್ನು ಉರುಳಿಸಲು ಅಥವಾ ರಾಜಕೀಯ ಪ್ರತಿಸ್ಪರ್ಧಿಗಳನ್ನು ದಮನಿಸಲು ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಬಿಜೆಪಿ ಬಳಸಿಕೊಳ್ಳುತ್ತಿದೆ ಎಂಬ ಬಿಜೆಪಿಯೇತರ ಪಕ್ಷಗಳ ಆಪಾದನೆಯನ್ನು ಈ ಹಿನ್ನೆಲೆಯಲ್ಲಿ ಗ್ರಹಿಸಬಹುದು.

ಮುಖ್ಯಮಂತ್ರಿಯಾಗಿ ಶಿಂಧೆ ಅಧಿಕಾರ ವಹಿಸಿಕೊಂಡಿದ್ದರೂ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ಗೆ ಉಪಮುಖ್ಯಮಂತ್ರಿಯಾಗಿ ಹಿಂಬಡ್ತಿಯಾಗಿದ್ದರೂ ನಿಜವಾದ ಗೆಲುವು ದಕ್ಕಿದ್ದು ಬಿಜೆಪಿಗೆ. ಬಿಜೆಪಿ ಮತ್ತು ಶಿವಸೇನಾ ಸುದೀರ್ಘ ಕಾಲ ಮಿತ್ರಪಕ್ಷಗಳಾಗಿದ್ದವು. ಎರಡೂ ಪಕ್ಷಗಳು ಹಿಂದುತ್ವವನ್ನು ಪ್ರತಿಪಾದಿಸುತ್ತವೆ. ಈ ವಿಚಾರದಲ್ಲಿ ಎರಡೂ ಪಕ್ಷಗಳ ನಡುವೆ ಸ್ಪರ್ಧೆ ಇತ್ತು. ಮಹಾರಾಷ್ಟ್ರದಲ್ಲಿ ಬಿಜೆಪಿ ಕಿರಿಯ ಪಾಲುದಾರನಾಗಿಯೇ ಇತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುತ್ತಿದೆ. ತನ್ನ ಅಸ್ತಿತ್ವಕ್ಕೇ ಕುತ್ತು ಬರುತ್ತಿದೆ ಎಂಬುದು ಉದ್ಧವ್‌ ಅವರು ಬಿಜೆಪಿ ಜೊತೆಗಿನ ಮೈತ್ರಿ ಮುರಿಯಲು ಇದ್ದ ಕಾರಣಗಳಲ್ಲಿ ಒಂದು. ಈಗ, ಶಿವಸೇನಾವನ್ನು ಒಡೆಯುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.

ಸೇನಾದ ನಾಯಕನಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟದ್ದು ಬಿಜೆಪಿಯ ಅತ್ಯಂತ ಚಾಣಾಕ್ಷ ನಡೆ. 39 ಶಾಸಕರ ಬೆಂಬಲ ಹೊಂದಿರುವ ಶಿಂಧೆ ಅವರು 106 ಶಾಸಕರನ್ನು ಹೊಂದಿರುವ ಬಿಜೆಪಿಯ ಆಣತಿಯಂತೆಯೇ ಆಳ್ವಿಕೆ ನಡೆಸುತ್ತಾರೆ. ನಿಜವಾದ ಅಧಿಕಾರ ಬಿಜೆಪಿಯ ಕೈಯಲ್ಲಿಯೇ ಇರುತ್ತದೆ. ಜೊತೆಗೆ, ಮಹಾರಾಷ್ಟ್ರದಲ್ಲಿ ದಟ್ಟವಾಗಿರುವ ಪ್ರಾದೇಶಿಕ ಪ್ರಜ್ಞೆ ಮತ್ತು ಮರಾಠ ಅಸ್ಮಿತೆಗೆ ತಾನು ಗೌರವ ಕೊಟ್ಟಿದ್ದೇನೆ ಎಂದು ಬಿಜೆಪಿ ಬಿಂಬಿಸಿಕೊಳ್ಳಲು ಶಿಂಧೆ ಮುಖ್ಯಮಂತ್ರಿ ಕುರ್ಚಿಯಲ್ಲಿ ಇರುವುದು ಮುಖ್ಯ. ಅದೇನೇ ಇದ್ದರೂ ರಾಜಕೀಯ ಲಾಭಕ್ಕಾಗಿ ಪ್ರಜಾಪ್ರಭುತ್ವವನ್ನು ಅಣಕಿಸುವಂತಹ ನಡೆಗಳು ದೀರ್ಘಾವಧಿಯಲ್ಲಿ ವ್ಯವಸ್ಥೆಯನ್ನು ಶಿಥಿಲಗೊಳಿಸುತ್ತವೆ ಎಂಬ ಪರಿವೆ ರಾಜಕಾರಣಿಗಳಲ್ಲಿ ಇರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT