ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ| ನಿಷ್ಪಕ್ಷಪಾತ ಧೋರಣೆಗೆ ಕುಂದು: ಹುದ್ದೆಯ ಘನತೆ ಮರೆಯಬೇಡಿ

Last Updated 31 ಮಾರ್ಚ್ 2022, 19:31 IST
ಅಕ್ಷರ ಗಾತ್ರ

ರಾಜ್ಯಪಾಲ ಮತ್ತು ಸ್ಪೀಕರ್‌ ತರಹದ ಸಾಂವಿಧಾನಿಕ ಹುದ್ದೆಗಳು ತಮ್ಮ ಬಹುಪಾಲು ಮೌಲ್ಯ ಹಾಗೂ ವಿಶ್ವಾಸಾರ್ಹತೆಯನ್ನು ಕಳೆದುಕೊಂಡು ವರ್ಷಗಳೇ ಉರುಳಿವೆ. ಇದಕ್ಕೆ ಮುಖ್ಯ, ಬಹುಶಃ ಏಕೈಕ ಕಾರಣವೆಂದರೆ ಆ ಹುದ್ದೆಯನ್ನು ಅಲಂಕರಿಸಿದವರು ನಡೆದುಕೊಳ್ಳುವ ರೀತಿಯೇ ಆಗಿದೆ. ಇಂತಹ ಹುದ್ದೆಗಳು ರಾಜಕೀಯ ಮೇಲಾಟಗಳಿಗೆ ಅತೀತವಾದವು ಎಂದೇ ಪರಿಗಣಿತ. ಆದ್ದರಿಂದಲೇ ಈ ಹುದ್ದೆಯಲ್ಲಿ ಇರುವವರ ಮಾತು, ನಡತೆ ಪಕ್ಷಪಾತದಿಂದ ಕೂಡಿರಬಾರದು, ಅಂದರೆ ರಾಜಕೀಯ ಪಕ್ಷವೊಂದರ ಪರವಾಗಿ ಇರಬಾರದು ಎನ್ನುವುದು ಅಪೇಕ್ಷಣೀಯ. ಹುದ್ದೆಯಲ್ಲಿ ಇರುವಷ್ಟು ಕಾಲ ಅವರು ಶಾಸಕಾಂಗಕ್ಕೆ ಬದ್ಧರಾಗಿ ನಡೆದುಕೊಳ್ಳಬೇಕೇ ಹೊರತು ಯಾವುದೇ ಸೈದ್ಧಾಂತಿಕ ಸಂಘಟನೆಗೆ ಅಲ್ಲ. ಸಾಂವಿಧಾನಿಕ ಹುದ್ದೆಯಲ್ಲಿ ಇರುವವರಿಂದ ಈಗೀಗ ಇಂತಹ ನಡತೆಯನ್ನು ಕಾಣುವುದೇ ಅಪರೂಪವಾಗಿಬಿಟ್ಟಿದೆ. ಪಕ್ಷಪಾತ ಧೋರಣೆ, ಹುದ್ದೆಯ ಘನತೆಗೆ ತಕ್ಕುದಲ್ಲದ ಭಾಷೆಯ ಬಳಕೆ ಮತ್ತು ದೋಷಪೂರಿತ ನಡೆ ಸಾಮಾನ್ಯ ಎನ್ನುವಂತಾಗಿಬಿಟ್ಟಿವೆ. ರಾಜ್ಯ ವಿಧಾನಸಭೆಯ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸದನದಲ್ಲಿ ಇತ್ತೀಚೆಗೆ ‘ನಮ್ಮ ಆರ್‌ಎಸ್‌ಎಸ್‌’ ಎಂದು ಹೇಳಿರುವುದು ಇದಕ್ಕೊಂದು ಜ್ವಲಂತ ನಿದರ್ಶನ. ಈ ರೀತಿ ಹೇಳಿಕೆ ನೀಡಿದ್ದಲ್ಲದೆ, ವಿರೋಧ ಪಕ್ಷದ ಸದಸ್ಯರು ಪ್ರಶ್ನೆ ಮಾಡಿದಾಗ ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು ಕೂಡ.

ಸ್ಪೀಕರ್‌ ಆಗಿ ಆಯ್ಕೆಯಾಗುವ ವ್ಯಕ್ತಿಯೂ ರಾಜಕೀಯ ಪಕ್ಷವೊಂದರ ಅಭ್ಯರ್ಥಿ
ಯಾಗಿಯೇ ಗೆದ್ದು ಬಂದಿರುತ್ತಾರಾದರೂ ಆ ಹುದ್ದೆಗೆ ಏರಿದ ಮೇಲೆ ಮತ್ತು ಆ ಹುದ್ದೆಯಲ್ಲಿ ಇರುವಷ್ಟು ಕಾಲ ಪಕ್ಷದೊಂದಿಗಿನ ಸಂಬಂಧವನ್ನು ಕಡಿದು
ಕೊಂಡಿರಬೇಕು. ಸದನದ ಅಧ್ಯಕ್ಷತೆ ವಹಿಸಿ, ಅದನ್ನು ನಿಯಂತ್ರಿಸುವ, ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಚರ್ಚೆಗಳು ನಡೆಯುವಂತೆ ನೋಡಿಕೊಳ್ಳುವ ಹೊಣೆಗಾರಿಕೆ ಅವರ ಮೇಲಿರುತ್ತದೆ. ಕಲಾಪದ
ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಯಾವುದೇ ಆದೇಶ ನೀಡುವ ಅಧಿಕಾರವೂ ಅವರಿಗಿರುತ್ತದೆ. ಹೀಗಾಗಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದಿಂದ ಸಮಾನ ಅಂತರವನ್ನು ಕಾಪಾಡಿಕೊಂಡು, ನಿಷ್ಪಕ್ಷಪಾತದಿಂದ ನಡೆದುಕೊಳ್ಳಬೇಕು ಎನ್ನುವುದು ಅವರ ಮೇಲೆ ಸಂವಿಧಾನ ವಿಧಿಸಿರುವ ಕಟ್ಟುಪಾಡು. ಆ ಹುದ್ದೆಯಲ್ಲಿ ಇರುವವರು ಹಾಗೆ ನಡೆದುಕೊಳ್ಳಬೇಕಾದುದು ನೈತಿಕ ಹೊಣೆ ಕೂಡ. ಆದರೆ, ಕಾಗೇರಿಯವರು ಸದನದಲ್ಲಿ ಸ್ಪೀಕರ್‌ ಆಸನದಲ್ಲಿ ಕುಳಿತುಕೊಂಡು, ತಾವು ಆರ್‌ಎಸ್‌ಎಸ್‌ಗೆ ಸೇರಿದವರು ಎಂದು ಹೇಳಿಕೊಂಡಿದ್ದರಿಂದ ಹುದ್ದೆ ಹೊಂದಿರಬೇಕಿದ್ದ ನಿಷ್ಪಕ್ಷಪಾತ ಧೋರಣೆಗೆ ಕುಂದುಂಟಾಗಿದೆ. ಆರ್‌ಎಸ್‌ಎಸ್‌ನಿಂದಲೇ ಬಿಜೆಪಿ ಮಾರ್ಗದರ್ಶನ ಪಡೆಯುತ್ತದೆ ಮತ್ತು ಅದೇ ಬಿಜೆಪಿ ಈಗ ಆಡಳಿತ ಪಕ್ಷವಾಗಿದೆ. ಆರ್‌ಎಸ್‌ಎಸ್‌ ಜತೆ ಗುರುತಿಸಿಕೊಳ್ಳುವುದೆಂದರೆ ಬಿಜೆಪಿ ನೇತೃತ್ವದ ಸರ್ಕಾರದೊಂದಿಗೆ ಗುರುತಿಸಿಕೊಂಡಂತೆಯೇ ಹೊರತು ಬೇರೇನಲ್ಲ. ಅದಕ್ಕಿಂತ ಹೆಚ್ಚಾಗಿ ಆರ್‌ಎಸ್‌ಎಸ್‌ನ ಹಿಂದುತ್ವ ಸಿದ್ಧಾಂತ ಮತ್ತು ಅದರ ಹಿಂದೂ ರಾಷ್ಟ್ರ ಪರಿಕಲ್ಪನೆಯು ಸಂವಿಧಾನದ ಆಶಯಗಳಿಗೆ ಸಂಪೂರ್ಣ ವಿರುದ್ಧವಾದವು. ಸಂವಿಧಾನದ ಮೇಲೆ ಪ್ರಮಾಣವಚನ ಸ್ವೀಕರಿಸಿರುವ ಸ್ಪೀಕರ್‌ ಇದನ್ನೆಲ್ಲ ಮರೆಯಬಾರದಿತ್ತು.

ಪಕ್ಷಾಂತರ ವಿರೋಧಿ ಕಾಯ್ದೆಗೆ ಸಂಬಂಧಿಸಿದ ಪ್ರಕರಣಗಳು ಬಂದಾಗ ಹಲವು ಸ್ಪೀಕರ್‌ಗಳು ಆಡಳಿತ ಪಕ್ಷಕ್ಕೆ ಅನುಕೂಲಕರವಾಗಿ ನಡೆದುಕೊಂಡ ಉದಾಹರಣೆಗಳು ದೇಶದ ಬಹುತೇಕ ರಾಜ್ಯಗಳಲ್ಲಿ ಸಿಗುತ್ತವೆ. ತಮ್ಮ ದೋಷಪೂರಿತ ನಡತೆಯಿಂದ ಹುದ್ದೆಗೆ ಕೆಟ್ಟ ಹೆಸರು ತಂದ ಸ್ಪೀಕರ್‌ಗಳು ಸಹ ಹಲವರಿದ್ದಾರೆ. ನಿಯಮಾವಳಿಯನ್ನು ವ್ಯಾಖ್ಯಾನಿಸುವಾಗ, ಪ್ರಕ್ರಿಯೆಗಳನ್ನು ಪೂರೈಸುವಾಗ, ಕಲಾಪ ನಡೆಸುವಾಗ ಸ್ಪೀಕರ್‌ಗಳು ಆಡಳಿತ ಪಕ್ಷದ ಪರವಾಗಿ ನಡೆದುಕೊಂಡ ಉದಾಹರಣೆಗಳೂ ಬೇಕಾದಷ್ಟು ಸಿಗುತ್ತವೆ. ರಾಜ್ಯಗಳ ವಿಧಾನಸಭೆಗಳಲ್ಲಿ ಮಾತ್ರವಲ್ಲದೆ ಲೋಕಸಭೆಯಲ್ಲೂ ಸ್ಪೀಕರ್‌ಗಳು ಹೀಗೆ ಪಕ್ಷಪಾತಿಯಾಗಿ ನಡೆದುಕೊಂಡದ್ದಿದೆ. ಪ್ರತೀ ಸಲ ಸ್ಪೀಕರ್‌, ತಮ್ಮ ಹುದ್ದೆಗೆ ತಕ್ಕುದಲ್ಲದ ವರ್ತನೆ ತೋರಿದಾಗಲೂ ಸಂಸದೀಯ ಪ್ರಜಾಪ್ರಭುತ್ವ ಅಷ್ಟಷ್ಟೇ ಕುಸಿತ ಕಾಣುತ್ತದೆ. ಕಾಗೇರಿಯವರು ನೀಡಿದಂತಹ ಹೇಳಿಕೆಯು ಸಾಂವಿಧಾನಿಕ ಪ್ರಜಾಪ್ರಭುತ್ವವನ್ನು ಅಪಮೌಲ್ಯಗೊಳಿಸುತ್ತದೆ ಮತ್ತು ಅವಮಾನಿಸುತ್ತದೆ. ಸ್ಪೀಕರ್‌ ಸ್ಥಾನದಲ್ಲಿದ್ದರೂ ಅವರು ರಾಜಕೀಯ ವ್ಯಕ್ತಿಯಾಗಿಯೇ ಉಳಿದಿರುವುದನ್ನು ಮತ್ತು ಅದನ್ನು ಘೋಷಿಸಲು ಹಿಂದೇಟು ಹಾಕದಿರುವುದನ್ನು ಇಂತಹ ಪ್ರಸಂಗಗಳು ಎತ್ತಿ ತೋರುತ್ತವೆ. ನೈಜವಾದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ಪೀಕರ್‌ ಹೇಳಿಕೆ ಯಾವ ಕಾರಣಕ್ಕೂ ಸ್ವೀಕಾರಾರ್ಹವಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT