ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಪಠ್ಯ ಪರಿಷ್ಕರಣೆ: ರಾಜಕೀಯ ನುಸುಳದಿರಲಿ– ಮಕ್ಕಳ ಬಗೆಗಿನ ಕಾಳಜಿ ಮುಖ್ಯವಾಗಲಿ

Published 5 ಜೂನ್ 2023, 0:37 IST
Last Updated 5 ಜೂನ್ 2023, 0:37 IST
ಅಕ್ಷರ ಗಾತ್ರ

ಹೊಸದಾಗಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ನೇತೃತ್ವದ ಸರ್ಕಾರವು ಶಾಲಾ ಪಠ್ಯಪುಸ್ತಕವನ್ನು ಪರಿಶೀಲನೆಗೆ ಒಳಪಡಿಸುವ ಕುರಿತು ಚಿಂತನೆ ನಡೆಸಿದೆ. ಈ ಹಿಂದೆ ಇದ್ದ ಬಿಜೆಪಿ ನೇತೃತ್ವದ ಸರ್ಕಾರವು ಪಠ್ಯಪುಸ್ತಕಗಳನ್ನು ಪರಿಷ್ಕರಿಸಿ, ತನಗೆ ಬೇಕಿದ್ದ ಕೆಲವು ಪಾಠಗಳನ್ನು ಸೇರಿಸಿತ್ತು ಹಾಗೂ ತನ್ನ ಸಿದ್ಧಾಂತಕ್ಕೆ ಒಗ್ಗದ ಕೆಲವು ಪಾಠಗಳನ್ನು ಕೈಬಿಟ್ಟಿತ್ತು. 2013ರಿಂದ 2018ರ ಅವಧಿಯಲ್ಲಿ ಅಧಿಕಾರದಲ್ಲಿ ಇದ್ದ ಕಾಂಗ್ರೆಸ್‌ ನೇತೃತ್ವದ ಸರ್ಕಾರವು ಪಠ್ಯಪುಸ್ತಕಗಳ ಪರಿಷ್ಕರಣೆಗಾಗಿ ಲೇಖಕ ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿತ್ತು. ಈ ಸಮಿತಿಯು ವಿಷಯ ತಜ್ಞರ 27 ಸಮಿತಿಗಳನ್ನು ರಚಿಸಿ ಪಠ್ಯ ‍ಪರಿಷ್ಕರಣೆ ನಡೆಸಿತ್ತು. ಈ 27 ಸಮಿತಿಗಳಲ್ಲಿ 130ಕ್ಕೂ ಹೆಚ್ಚು ಸದಸ್ಯರಿದ್ದರು. ತರುವಾಯ 2019ರಲ್ಲಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಬಳಿಕ, ಬಲಪಂಥೀಯ ಸಿದ್ಧಾಂತದ ಬಲವಾದ ಪ್ರತಿಪಾದಕ ರೋಹಿತ್‌ ಚಕ್ರತೀರ್ಥ ಅವರ ನೇತೃತ್ವದಲ್ಲಿ ಪಠ್ಯ ಪರಿಶೀಲನೆಗೆ ಸಮಿತಿಯೊಂದನ್ನು ರಚಿಸಿದ್ದರು. ರೋಹಿತ್‌ ಚಕ್ರತೀರ್ಥ ಅವರ ನೇಮಕಕ್ಕೆ ಆಕ್ಷೇಪ ವ್ಯಕ್ತವಾಗಿತ್ತು. ಪಠ್ಯ ಪರಿಷ್ಕರಣೆ ಸಮಿತಿಯ ಅಧ್ಯಕ್ಷತೆ ವಹಿಸಲು ಅವರಿಗೆ ಇರುವ ಅರ್ಹತೆಯಾದರೂ ಏನು ಎಂಬ ಪ್ರಶ್ನೆ ಜೋರಾಗಿಯೇ ಕೇಳಿಬಂದಿತ್ತು. ಆಗ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿದ್ದ ಬಿ.ಸಿ.ನಾಗೇಶ್‌ ಅವರು ಸಮಜಾಯಿಷಿ ನೀಡಿ, ಪಠ್ಯದಲ್ಲಿ ಸೇರಿಕೊಂಡಿರುವ ಕೆಲವು ತಪ್ಪುಗಳನ್ನು ಸರಿಪಡಿಸುವ ಕೆಲಸವನ್ನು ಮಾತ್ರ ಈ ಸಮಿತಿ ಮಾಡಲಿದೆ, ಪಠ್ಯ ಪರಿಷ್ಕರಣೆ ಅಲ್ಲ ಎಂದಿದ್ದರು. ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಇದ್ದ ಕೆಲವು ಅಂಶಗಳು ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿವೆ ಎಂದು ಬ್ರಾಹ್ಮಣ ಸಮುದಾಯವು ದೂರು ಕೊಟ್ಟದ್ದು, ಪಠ್ಯ ಪರಿಷ್ಕರಣೆಗಾಗಿ ಸಮಿತಿ ರಚನೆಗೆ ತಕ್ಷಣದ ಕಾರಣವಾಗಿತ್ತು. ಚಕ್ರತೀರ್ಥ ನೇತೃತ್ವದ ಸಮಿತಿಯು ತನ್ನ ವ್ಯಾಪ್ತಿಯನ್ನು ಮೀರಿ ಪಠ್ಯದಲ್ಲಿ ಹಲವು ಪ್ರಮುಖ ಬದಲಾವಣೆಗಳನ್ನು ಮಾಡಿತ್ತು. ಕೆಲವು ಪಾಠಗಳನ್ನು ಕೈಬಿಟ್ಟಿತ್ತು. ಆರ್‌ಎಸ್‌ಎಸ್‌ ಸ್ಥಾಪಕ ಕೆ.ಬಿ.ಹೆಡಗೇವಾರ್‌ ಅವರ ಕುರಿತು ಪಾಠವೊಂದನ್ನು ಸೇರಿಸಲಾಯಿತು. ಸಮಾಜ ಸುಧಾರಕ ನಾರಾಯಣ ಗುರು ಮತ್ತು ಸ್ವಾತಂತ್ರ್ಯ ಹೋರಾಟಗಾರ ಭಗತ್‌ ಸಿಂಗ್‌ ಅವರ ಕುರಿತ ಪಾಠಗಳನ್ನು ಕೈಬಿಡಲಾಯಿತು. ಪ್ರಗತಿಪರ ಲೇಖಕರು ಬರೆದಿದ್ದ ಪಾಠಗಳನ್ನೂ ತೆಗೆದುಹಾಕಲಾಗಿತ್ತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇತ್ತೀಚೆಗೆ ಭೇಟಿಯಾಗಿದ್ದ ಲೇಖಕರು ಮತ್ತು ಶಿಕ್ಷಣ ತಜ್ಞರ ನಿಯೋಗವೊಂದು ಪಠ್ಯ ಪರಿಷ್ಕರಣೆಯ ಅಗತ್ಯ ಇದೆ ಎಂದು ಪ್ರತಿಪಾದಿಸಿದೆ. ಈಗ ಇರುವ ಪಠ್ಯವು ಸಂವಿಧಾನ ವಿರೋಧಿ ಮತ್ತು ಕೋಮುವಾದಿಯಾಗಿದ್ದು, ಇತಿಹಾಸವನ್ನು ತಿರುಚಲಾಗಿದೆ ಎಂದು ಈ ನಿಯೋಗವು ಹೇಳಿದೆ. ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂಬ ಭರವಸೆಯನ್ನು ಮುಖ್ಯಮಂತ್ರಿ ಈ ನಿಯೋಗಕ್ಕೆ ನೀಡಿದ್ದಾರೆ. ಮಕ್ಕಳ ಮನಸ್ಸನ್ನು ಹಾಳುಮಾಡುವ ಪಠ್ಯಪುಸ್ತಕಗಳು ಮತ್ತು ಪಾಠಗಳನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಅವರು ಹೇಳಿದ್ದಾರೆ. ಪಠ್ಯವನ್ನು ತಿರುಚಲಾಗಿದ್ದರೆ ಅದನ್ನು ಸರಿಪಡಿಸಬೇಕು ಎಂಬುದರಲ್ಲಿ ಯಾವುದೇ ಸಂದೇಹ ಇಲ್ಲ. ಪಠ್ಯದಲ್ಲಿ ಸಂವಿಧಾನ ವಿರೋಧಿ, ಕೋಮು ಭಾವನೆ ಕೆರಳಿಸುವ ಅಂಶಗಳಿದ್ದರೆ ಅವುಗಳನ್ನು ಸರಿಪಡಿಸಲೇಬೇಕು. ಮಕ್ಕಳ ಮನಸ್ಸಿನಲ್ಲಿ ವಿಷ ಬೀಜ ಬಿತ್ತುವುದಕ್ಕೆ ಪಠ್ಯಪುಸ್ತಕಗಳು ಬಳಕೆ ಆಗಬಾರದು. ನಿಗದಿತ ಅವಧಿಯಲ್ಲಿ ಪಠ್ಯ ಪರಿಷ್ಕರಣೆ ಆಗಬೇಕಾದುದು ಅಗತ್ಯ. ಆದರೆ, ಪಠ್ಯ‍ಪುಸ್ತಕವನ್ನು ಆಗಾಗ ಬದಲಾಯಿಸಿದರೆ ಅದು ವಿದ್ಯಾರ್ಥಿಗಳ ಕಲಿಕೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂಬ ಎಚ್ಚರ ಆಡಳಿತಾರೂಢರಿಗೆ ಇರಬೇಕು. ಜೊತೆಗೆ, ಆಡಳಿತಾರೂಢ ಪಕ್ಷದ ಸಿದ್ಧಾಂತವನ್ನು ವಿದ್ಯಾರ್ಥಿಗಳ ಮೇಲೆ ಹೇರುವುದಕ್ಕಾಗಿ ಪಠ್ಯ ಪರಿಷ್ಕರಣೆ ಮಾಡುವುದು ಅಕ್ಷಮ್ಯ. ಪಠ್ಯಗಳನ್ನು ಇನ್ನಷ್ಟು ಪರಿಣಾಮಕಾರಿ ಆಗಿಸುವುದು ಮತ್ತು ವಿದ್ಯಾರ್ಥಿಗಳ ಕೌಶಲವನ್ನು ಮೇಲ್ದರ್ಜೆಗೆ ಏರಿಸುವುದು ಮಾತ್ರ ಪಠ್ಯ ಪರಿಷ್ಕರಣೆಯ ಗುರಿಯಾಗಿರಬೇಕು. ಪಠ್ಯ ಪರಿಷ್ಕರಣೆಯಲ್ಲಿನ ಸ್ವೇಚ್ಛಾಚಾರಕ್ಕೆ ತಡೆ ಒಡ್ಡುವುದು ಜರೂರಾಗಿ ಆಗಬೇಕಿದೆ. ಶೈಕ್ಷಣಿಕ ವರ್ಷ ಈಗಾಗಲೇ ಆರಂಭವಾಗಿದೆ. ವರ್ಷದ ಮಧ್ಯದಲ್ಲಿ ಪಠ್ಯ ಪರಿಷ್ಕರಣೆಯು ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಗೊಂದಲಕ್ಕೆ ತಳ್ಳಬಹುದು ಎಂಬುದನ್ನು ಸರ್ಕಾರ ಗಮನದಲ್ಲಿ ಇರಿಸಿಕೊಳ್ಳಬೇಕು. ರಾಜಕೀಯ ಪಕ್ಷಗಳ ನಡುವಣ ಸಿದ್ಧಾಂತದ ಜಟಾಪಟಿಯು ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಬೇಕು. ವಿದ್ಯಾರ್ಥಿಗಳು ಏನನ್ನು ಕಲಿಯಬೇಕು ಮತ್ತು ಏನನ್ನು ಕಲಿಯಬಾರದು ಎಂಬುದನ್ನು ವಿಷಯ ತಜ್ಞರು ನಿರ್ಧರಿಸಬೇಕು. ಈ ಪ್ರಕ್ರಿಯೆಯಲ್ಲಿ ರಾಜಕಾರಣಿಗಳಿಗೆ ಪ್ರವೇಶ ಇಲ್ಲದಂತೆ ನೋಡಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT