ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಿ ಕಾಶ್ಮೀರ್ ಫೈಲ್ಸ್’ ಸುತ್ತ ವಿವಾದ: ಅನಗತ್ಯ ಚರ್ಚೆ, ರಾಜಕೀಯಕ್ಕೆ ಬಳಕೆ

Last Updated 30 ನವೆಂಬರ್ 2022, 19:31 IST
ಅಕ್ಷರ ಗಾತ್ರ

ವಾಣಿಜ್ಯ ವಹಿವಾಟಿನ ದೃಷ್ಟಿಯಿಂದ ದೇಶದಲ್ಲಿ ದೊಡ್ಡ ಯಶಸ್ಸು ಕಂಡಿರುವ ವಿವಾದಿತ ‘ದಿ ಕಾಶ್ಮೀರ್ ಫೈಲ್ಸ್’ ಚಲನಚಿತ್ರವು ಈಗ ಮತ್ತೆ ವಿವಾದದಲ್ಲಿ ಸಿಲುಕಿದೆ. ಗೋವಾದಲ್ಲಿ ನಡೆಯುವ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ತೀರ್ಪುಗಾರರ ಮಂಡಳಿಯ ಅಧ್ಯಕ್ಷ, ಇಸ್ರೇಲಿನ ನೆದಾವ್ ಲಪಿಡ್ ಅವರು ಈ ಸಿನಿಮಾ ಕುರಿತು ಕಟುವಾಗಿ, ವಿಮರ್ಶಾತ್ಮಕವಾಗಿ ಮಾತನಾಡಿದ್ದಾರೆ. ಅವರ ಮಾತಿಗೆ ಪ್ರತಿಯಾಗಿ, ಭಾರತದಲ್ಲಿ ಇಸ್ರೇಲಿನ ರಾಯಭಾರಿ ಆಗಿರುವ ನಾವೊರ್ ಗಿಲಾನ್ ಅವರು ತಮ್ಮ ದೇಶದ ಪರವಾಗಿ ಕ್ಷಮೆ ಯಾಚಿಸಿದ್ದಾರೆ. ಗೋವಾದಲ್ಲಿ ನಡೆಯುವ ಚಲನಚಿತ್ರೋತ್ಸವವು ಬಹಳ ಪ್ರತಿಷ್ಠಿತವಾದುದು. ಅದಕ್ಕೆ ಒಂದು ಕಾರಣ, ಅಲ್ಲಿ ಪ್ರದರ್ಶನಕ್ಕೆ ಪರಿಗಣಿತವಾಗುವ ಸಿನಿಮಾಗಳೂ ಬಹಳ ಒಳ್ಳೆಯ ಗುಣಮಟ್ಟದ್ದಾಗಿರುತ್ತವೆ ಎಂಬುದು. ಗುಣಮಟ್ಟವನ್ನು ಕಾಯ್ದುಕೊಂಡ ಕಾರಣಕ್ಕಾಗಿಯೇ ಗೋವಾ ಚಲನಚಿತ್ರೋತ್ಸವಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಸಿಕ್ಕಿದೆ. ಲಪಿಡ್ ಅವರು ದಿ ಕಾಶ್ಮೀರ್ ಫೈಲ್ಸ್ ಚಿತ್ರವನ್ನು ಕಠಿಣ ಪದಗಳಲ್ಲಿ ಟೀಕಿಸಿದ್ದಾರೆ. ಈ ಸಿನಿಮಾ ‘ಅಸಭ್ಯವಾದ, ನಿರ್ದಿಷ್ಟ ವಿಚಾರದ ಪ್ರಚಾರಕ್ಕೆ ರೂಪಿಸಿದ್ದು’ ಎಂದು ಅವರು ಹೇಳಿದ್ದಾರೆ. ಸ್ಪರ್ಧಾತ್ಮಕ ವಿಭಾಗಕ್ಕೆ ಆಯ್ಕೆಯಾದ 15 ಸಿನಿಮಾಗಳ ಪೈಕಿ 14 ಸಿನಿಮಾಗಳು ಆಯ್ಕೆ ಸಮಿತಿ ಸದಸ್ಯರ ನಡುವೆ ಒಳ್ಳೆಯ ಚರ್ಚೆಗೆ ಕಾರಣವಾದವು. ಆದರೆ ಹದಿನೈದನೆಯ ಸಿನಿಮಾ ಆಗಿರುವ ದಿ ಕಾಶ್ಮೀರ್ ಫೈಲ್ಸ್, ‘ನಿರ್ದಿಷ್ಟ ವಿಚಾರವೊಂದರ ಪ್ರಚಾರಕ್ಕೆ ರೂಪಿಸಿದಂತಿದೆ, ಅಸಭ್ಯ ಸಿನಿಮಾ ಇದು, ಕಲಾತ್ಮಕ ಸ್ಪರ್ಧಾ ವಿಭಾಗಕ್ಕೆ ಈ ಸಿನಿಮಾ ಸರಿಹೊಂದುವಂಥದ್ದಲ್ಲ’ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಲಪಿಡ್ ಅವರ ಹೇಳಿಕೆ ಸುತ್ತ ವಿವಾದ ಮತ್ತು ಅವರ ಹೇಳಿಕೆಗೆ ಪ್ರತಿಯಾಗಿ ಬಂದ ವಿರೋಧ ಅನಗತ್ಯವಾಗಿತ್ತು. ತೀರ್ಪುಗಾರರ ಸಮಿತಿಯ ಅಧ್ಯಕ್ಷರಾಗಿ ಅವರಿಗೆ ಸಿನಿಮಾ ಬಗ್ಗೆ ಅಭಿಪ್ರಾಯ
ವ್ಯಕ್ತಪಡಿಸುವ ಅಧಿಕಾರ ಇದೆ. ಬಿಜೆಪಿಯ ಐ.ಟಿ. ವಿಭಾಗ ಕೂಡ ಅವರ ಹೇಳಿಕೆಗೆ ಪ್ರತಿಭಟನೆ ದಾಖಲಿಸಿದೆ. ಈ ವಿಭಾಗವು ಹಿಂದೆ ಈ ಸಿನಿಮಾ ಮೂಲಕ ರಾಜಕೀಯ ಲಾಭ ಪಡೆಯಲು ಯತ್ನಿಸಿತ್ತು. ಬಿಜೆಪಿ ಐ.ಟಿ. ವಿಭಾಗವು ಯಹೂದಿಯರ ನರಮೇಧಕ್ಕೆ ಸಂಬಂಧಿಸಿದ ‘ಶಿಂಡ್ಲರ್ಸ್‌ ಲಿಸ್ಟ್‌’ ಸಿನಿಮಾವನ್ನು ಕೂಡ, ನಿರ್ದಿಷ್ಟ ವಿಚಾರದ ಪ್ರಚಾರಕ್ಕೆ ತಯಾರಾದ ಸಿನಿಮಾ ಎಂದು ಹೇಳಿದೆ. ಕಾಶ್ಮೀರಿ ಪಂಡಿತ ಸಮುದಾಯಕ್ಕೆ ಸೇರಿದವರು 1990ರ ದಶಕದಲ್ಲಿ ಕಾಶ್ಮೀರ ಕಣಿವೆಯಿಂದ ಹೊರನಡೆದವಿದ್ಯಮಾನವನ್ನು ದಿ ಕಾಶ್ಮೀರ್ ಫೈಲ್ಸ್‌ ತೋರಿಸಿದೆ. ಆದರೆ ಈ ಚಿತ್ರದಲ್ಲಿನ ವಿವರಣೆಗಳು ಪಕ್ಷಪಾತಿಯಾಗಿವೆ ಎಂಬ ಮಾತುಗಳು ಇವೆ. ಈ ಚಿತ್ರದಲ್ಲಿ ಕಲಾತ್ಮಕ ಅಂಶಗಳ ಕೊರತೆ ಇದೆ ಎಂಬುದನ್ನು ಈ ಹಿಂದೆಯೂ ಹೇಳಲಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದಿರುವ ಸಿನಿಮಾ ನಿರ್ದೇಶಕ ಲಪಿಡ್ ಅವರು ಈ ಚಿತ್ರದಲ್ಲಿ ಇರುವ ಕಲಾತ್ಮಕತೆಯ ಕೊರತೆಯನ್ನು ಹೇಳಿದ್ದಾರೆ. ಈ ಅಭಿಪ್ರಾಯ ವ್ಯಕ್ತಪಡಿಸಿ ಅವರಿಗೆ ವೈಯಕ್ತಿಕವಾಗಿ ಆಗಬೇಕಿರುವುದು ಏನೂ ಇಲ್ಲ. ಅವರ ಮಾತುಗಳು, ಸೂಕ್ಷ್ಮಗ್ರಾಹಿ ವ್ಯಕ್ತಿಯೊಬ್ಬನಿಗೆ ಈ ಸಿನಿಮಾ ಒಂದು ಪ್ರಚಾರ ವಸ್ತುವಿನಂತೆ ಕಂಡಿದೆಯೇ ವಿನಾ ನೈಜ ಸಂಗತಿಯನ್ನು ಬಿಂಬಿಸುತ್ತಿರುವಂತೆ ಕಂಡಿಲ್ಲ ಎಂಬುದನ್ನು ತೋರಿಸುತ್ತಿವೆ. ಲಪಿಡ್ ಅವರು ತಮ್ಮ ಅಭಿಪ್ರಾಯಕ್ಕೆ ಬದ್ಧರಾಗಿ ನಿಂತಿದ್ದಾರೆ, ಮಾತುಗಳನ್ನು ಪುನರುಚ್ಚರಿಸಿದ್ದಾರೆ.

ದೇಶದಲ್ಲಿ ಭಿನ್ನ ನಿಲುವುಗಳನ್ನು ವ್ಯಕ್ತಪಡಿಸುವವರ ಬಗ್ಗೆ ಅಸಹಿಷ್ಣುತೆ ಪ್ರದರ್ಶಿಸುವುದು ಸಹಜ
ವಾಗುತ್ತಿದೆ. ಲಪಿಡ್ ಅವರ ಮಾತಿಗೆ ಬಂದಿರುವ ಟೀಕೆಗಳು, ವಾಗ್ದಾಳಿಗಳು ಕೂಡ ಇದೇ ಧೋರಣೆಯನ್ನು ಮತ್ತೊಮ್ಮೆ ತೋರಿಸಿವೆ. ಭಾರತದಲ್ಲಿನ ಇಸ್ರೇಲ್ ರಾಯಭಾರಿ ಕ್ಷಮೆ ಯಾಚಿಸುವ ಅಗತ್ಯವೇ ಇಲ್ಲವಾಗಿತ್ತು. ಏಕೆಂದರೆ, ರಾಜತಾಂತ್ರಿಕವಾಗಿ ಯಾವ ಸಮಸ್ಯೆಯೂ ಸೃಷ್ಟಿಯಾಗಿರಲಿಲ್ಲ. ಅವರ ಅಭಿಪ್ರಾಯವು ಭಾರತ ಮತ್ತು ಇಸ್ರೇಲ್ ನಡುವಿನ ಸಂಬಂಧವನ್ನು ಹಾಳುಮಾಡುವಂಥದ್ದೂ ಆಗಿರಲಿಲ್ಲ. ಲಪಿಡ್ ಅವರು ಒಬ್ಬ ಸಿನಿಮಾ ನಿರ್ದೇಶಕನಾಗಿ ಮಾತನಾಡಿದ್ದಾರೆ. ಅವರ ಮಾತುಗಳಿಗೆ ಪ್ರತಿಯಾಗಿ ಒಂದು ದೇಶದ ‍ಪರವಾಗಿ ಕ್ಷಮೆ ಯಾಚಿಸುವ ಅಗತ್ಯ ಸ್ವಲ್ಪವೂ ಇರಲಿಲ್ಲ. ಲಪಿಡ್ ಅವರ ಮಾತುಗಳು ಇರುವುದು ಕಲೆಗೆ ಸಂಬಂಧಿಸಿದಂತೆ, ಅವರ ಮಾತುಗಳನ್ನು ಕಲೆಗೆ ಮಾತ್ರ ಸೀಮಿತವಾಗಿಸಬೇಕು. ಅವರ ಮಾತನ್ನು ಅನಗತ್ಯವಾಗಿ ರಾಜಕೀಯಕ್ಕೆ ಬಳಸಿಕೊಳ್ಳಲಾಯಿತು, ಅನಗತ್ಯವಾಗಿ ಅದನ್ನು ಒಂದು ರಾಜತಾಂತ್ರಿಕ ವಿಚಾರವನ್ನಾಗಿ ಬೆಳೆಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT