ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಭೂಕಂಪ– ಟರ್ಕಿ, ಸಿರಿಯಾಕ್ಕೆ ಎಲ್ಲ ದೇಶಗಳು ನೆರವಾಗಬೇಕು

Last Updated 10 ಫೆಬ್ರುವರಿ 2023, 19:16 IST
ಅಕ್ಷರ ಗಾತ್ರ

ಟರ್ಕಿ ಮತ್ತು ಸಿರಿಯಾವನ್ನು ನಡುಗಿಸಿದ ಎರಡು ಭೂಕಂಪಗಳ ಪೂರ್ಣ ಪರಿಣಾಮ ಏನು ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಭೂಕಂಪದ ತೀವ್ರತೆಯು ರಿಕ್ಟರ್‌ ಮಾಪಕದಲ್ಲಿ 7.8ರಷ್ಟು ದಾಖಲಾಗಿದೆ. ಹಲವು ದಶಕಗಳಲ್ಲಿಯೇ ಈ ಪ್ರದೇಶದಲ್ಲಿ ನಡೆದ ಅತ್ಯಂತ ಘೋರವಾದ ದುರಂತ ಇದು. ಟರ್ಕಿಯಲ್ಲಿ 19 ಸಾವಿರಕ್ಕೂ ಹೆಚ್ಚು ಮತ್ತು ಸಿರಿಯಾದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತರ ಸಂಖ್ಯೆಯು ಇನ್ನೂ ಹೆಚ್ಚಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿಸಿದೆ. ಭೂಕಂಪದಲ್ಲಿ ಬಲಿಯಾದವರು ಇತರ ದುರಂತಗಳಿಂದ ಈಗಾಗಲೇ ಜರ್ಜರಿತರಾಗಿದ್ದವರು ಎಂಬುದು ಈಗಿನ ದುರಂತವನ್ನು ಇನ್ನಷ್ಟು ಹೃದಯವಿದ್ರಾವಕವಾಗಿಸಿದೆ. ಭೂಕಂಪದ ಕಂಪನ ಕೇಂದ್ರವು ದಕ್ಷಿಣ ಟರ್ಕಿಯ ಗಾಜಿಯಾಂಟೆಪ್‌ ಆಗಿತ್ತು. ಸಿರಿಯಾದಲ್ಲಿನ ಆಂತರಿಕ ಯುದ್ಧದ ಕಾರಣದಿಂದ ನಿರಾಶ್ರಿತರಾಗಿದ್ದ ಐದು ಲಕ್ಷಕ್ಕೂ ಹೆಚ್ಚು ಮಂದಿ ಈ ಊರಿನಲ್ಲಿ ಆಶ್ರಯ ಪಡೆದಿದ್ದರು. ಅವರು ದಕ್ಷಿಣ ಟರ್ಕಿಯಲ್ಲಿ ಕಂಡುಕೊಂಡಿದ್ದ ನೆಲೆ ಕೂಡ ಈಗ ನಾಶವಾಗಿದೆ. ಹೊಸದಾಗಿ ಬದುಕು ಕಟ್ಟಿಕೊಳ್ಳಲು ಅವರಲ್ಲಿ ಈಗ ಏನೂ ಇಲ್ಲ. ಹಾಗಿದ್ದರೂ ಅವರು ಹೊಸ ಬದುಕನ್ನು ಮತ್ತೆ ಆರಂಭದಿಂದಲೇ ಕಟ್ಟಿಕೊಳ್ಳಬೇಕಿದೆ. ಭೂಕಂಪದ ಪರಿಣಾಮವು ಹಲವು ಕಾರಣಗಳಿಂದಾಗಿ ವಿಧ್ವಂಸಕಾರಿ ಎನಿಸಿಕೊಂಡಿದೆ. ಎರಡು ಪ್ರಬಲ ಭೂಕಂಪಗಳು ಒಂದರ ಬೆನ್ನಿಗೆ ಒಂದರಂತೆ ಘಟಿಸಿದವು. ಬಹುಮಹಡಿ ಕಟ್ಟಡಗಳು ಕುಸಿದು ಇಟ್ಟಿಗೆ ಮತ್ತು ಕಬ್ಬಿಣದ ರಾಶಿಗಳಾದವು. ಟರ್ಕಿ ಮತ್ತು ಸಿರಿಯಾದ ವಿಸ್ತಾರ ಪ್ರದೇಶಗಳಲ್ಲಿದ್ದ ಸಾವಿರಾರು ಮನೆಗಳು ನಾಶವಾದವು. ರಕ್ಷಣಾ ಕಾರ್ಯಾಚರಣೆ ಇನ್ನೂ ನಡೆಯುತ್ತಲೇ ಇದೆ. ಆದರೆ, ಅವಶೇಷ
ಗಳಡಿಯಲ್ಲಿ ಸಿಲುಕಿರುವವರು ಬದುಕುಳಿದಿರುವ ಸಾಧ್ಯತೆ ಒಂದೊಂದು ತಾಸು ಕಳೆದಂತೆ ಕ್ಷೀಣ
ವಾಗುತ್ತಿದೆ. ಈಗ, ಪುನರ್ವಸತಿ ಮತ್ತು ಪರಿಹಾರದತ್ತ ಗಮನ ಕೇಂದ್ರೀಕರಿಸಬೇಕಿದೆ.

ನೆರವಿನ ಕರೆಗೆ ಹಲವು ದೇಶಗಳು ತಕ್ಷಣ ಸ್ಪಂದಿಸಿವೆ. ಉದಾಹರಣೆಗೆ, ಭಾರತವು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಲು ಸಿಬ್ಬಂದಿಯನ್ನು ಕಳುಹಿಸಿಕೊಟ್ಟಿದೆ. ಆಹಾರ ಪದಾರ್ಥಗಳು, ಔಷಧ, ಹೊದಿಕೆ ಮತ್ತು ಡೇರೆಗಳನ್ನು ಪೂರೈಸಿದೆ. ಕೊರೆಯುವ ಚಳಿಯಲ್ಲಿ ಜನರು ಬಯಲಿನಲ್ಲಿಯೇ ಕಳೆಯಬೇಕಾದ ದಯನೀಯ ಸ್ಥಿತಿ ಇದೆ. ಜನರಿಗೆ ಬೆಚ್ಚನೆಯ ಹೊದಿಕೆಯ ಅಗತ್ಯ ಇದೆ. ಆಹಾರ, ಔಷಧದ ತೀವ್ರ ಕೊರತೆಯೂ ಇದೆ. ಭೂಕಂಪದಲ್ಲಿ ಮೃತಪಟ್ಟ ಎಲ್ಲರಿಗೂ ಸರಿಯಾದ ರೀತಿಯಲ್ಲಿ ಅಂತ್ಯಸಂಸ್ಕಾರ ನಡೆಸಲು ಸಾಧ್ಯವಾಗಿಲ್ಲ. ಹೀಗಾಗಿ ಸಾಂಕ್ರಾಮಿಕದ ಅಪಾಯವೂ ಇದೆ. ಹಾಗಾಗಿ, ದೇಶಗಳು ಕೈಬಿಚ್ಚಿ ನೆರವು ನೀಡಿ ಸಂತ್ರಸ್ತರ ಬೆನ್ನಿಗೆ ನಿಲ್ಲಬೇಕಿದೆ.

ಇಂತಹ ಸಂಕಷ್ಟದ ಸಂದರ್ಭದಲ್ಲಿ ಬಂಡುಕೋರರು ಮತ್ತು ತೀವ್ರವಾದಿಗಳು ಸಂತ್ರಸ್ತರ ನೆರವಿಗೆ ಚುರುಕಾಗಿ ಧಾವಿಸುತ್ತಾರೆ ಎಂಬುದು ಸಂಘರ್ಷಭರಿತವಾದ ಈ ಪ್ರದೇಶ ಮತ್ತು ಇತರ ಪ್ರದೇಶಗಳ ಅನುಭವದಿಂದ ತಿಳಿದುಬಂದಿದೆ. ಬಂಡುಕೋರರು ಮತ್ತು ತೀವ್ರವಾದಿಗಳು ತಮ್ಮ ಸ್ಥಳೀಯ ಮತ್ತು ವ್ಯವಸ್ಥಿತ ಜಾಲವನ್ನು ಬಳಸಿಕೊಂಡು ಪರಿಹಾರ ಕಾರ್ಯ ನಡೆಸುತ್ತಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ 2005ರಲ್ಲಿ ಭೂಕಂಪ ಸಂಭವಿಸಿದಾಗ ಲಷ್ಕರ್ ಎ ತಯಬಾದಂತಹ ಉಗ್ರಗಾಮಿ ಸಂಘಟನೆಯ ಸದಸ್ಯರು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪರಿಹಾರ ಕಾರ್ಯಾಚರಣೆ ನಡೆಸಿದ್ದರು. ಇದಾದ ಬಳಿಕ ಲಷ್ಕರ್ ಎ ತಯಬಾ ಸಂಘಟನೆ ಸೇರಿದ ಯುವಕರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆ ಆಗಿತ್ತು. ಟರ್ಕಿ ಮತ್ತು ಸಿರಿಯಾದಲ್ಲಿ ಭೂಕಂಪ ಸಂಭವಿಸಿದ ಪ್ರದೇಶವೂ ತೀವ್ರವಾದಿ ಸಿದ್ಧಾಂತಗಳ ಸಂಘಟನೆಗಳು, ಸಶಸ್ತ್ರ ಸಂಘರ್ಷ ಮತ್ತು ಆಂತರಿಕ ಯುದ್ಧ ಎಲ್ಲವೂ ಇರುವ ಪ್ರದೇಶವಾಗಿದೆ. ಇಸ್ಲಾಮಿಕ್ ಸ್ಟೇಟ್‌, ಅಲ್‌ ಕೈದಾ ಮತ್ತು ಇವುಗಳ ಅಂಗಸಂಸ್ಥೆಗಳು ಇಲ್ಲಿ ಸಕ್ರಿಯವಾಗಿವೆ. ಅಂತರರಾಷ್ಟ್ರೀಯ ಸಮುದಾಯವು ತಕ್ಷಣವೇ ನೆರವಿಗೆ ಧಾವಿಸದಿದ್ದರೆ ಭೂಕಂಪ ಸಂತ್ರಸ್ತರು ತೀವ್ರವಾದಿ ಸಂಘಟನೆಗಳ ಮೊರೆ ಹೋಗುವ ಸಾಧ್ಯತೆ ಇದೆ. ಹಾಗೆ ಆಗುವುದಕ್ಕೆ ಅವಕಾಶ ಕೊಟ್ಟರೆ, ಉಗ್ರಗಾಮಿ ಸಂಘಟನೆಗಳು ಇನ್ನಷ್ಟು ಬಲ ಪಡೆದುಕೊಂಡು, ಆಂತರಿಕ ಯುದ್ಧವು ಬಿರುಸು ಪಡೆಯಬಹುದು. ಪಶ್ಚಿಮದ ದೇಶಗಳನ್ನೂ ಒಳಗೊಂಡಂತೆ ಹಲವು ದೇಶಗಳು ಟರ್ಕಿಗೆ ನೆರವು ನೀಡಿವೆ. ಆದರೆ, ಸಿರಿಯಾದ ಅಗತ್ಯಗಳನ್ನು ನಿರ್ಲಕ್ಷಿಸಿವೆ. ಅದು ಸರಿಯಾದ ನಿಲುವು ಅಲ್ಲ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ತಮ್ಮ ಭೌಗೋಳಿಕ ರಾಜಕಾರಣ ಮತ್ತು ಪೈಪೋಟಿಯನ್ನು ಬದಿಗಿಡಬೇಕು. ಮಾನವೀಯತೆ ತೋರಬೇಕು ಮತ್ತು ನಲುಗಿ ಹೋಗಿರುವ ನಾಡನ್ನು ಮರಳಿ ಕಟ್ಟಲು ಟರ್ಕಿಯೊಂದಿಗೆ ಸಿರಿಯಾಕ್ಕೂ ನೆರವಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT