ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಮಹಿಳೆಯರ ಬಗ್ಗೆ ಹಗುರ ಮಾತು; ಪಾಠ ಕಲಿಸುವ ಕೆಲಸ ಆಗಬೇಕು

Published 1 ಏಪ್ರಿಲ್ 2024, 0:26 IST
Last Updated 1 ಏಪ್ರಿಲ್ 2024, 0:26 IST
ಅಕ್ಷರ ಗಾತ್ರ

ಲೋಕಸಭಾ ಚುನಾವಣೆಯ ಪ್ರಚಾರ ಕಾರ್ಯಗಳು ಶುರುವಾಗಿವೆ. ಮಾತಿನ ಅಬ್ಬರ ಹೆಚ್ಚಾಗಿದೆ. ಅದರ ಜೊತೆಯಲ್ಲೇ ಮಾತು ಹೆಚ್ಚೆಚ್ಚು ಹೃದಯಹೀನವಾಗುತ್ತಿದೆ. ಎರಡು ರಾಷ್ಟ್ರೀಯ ಪಕ್ಷಗಳ ಪ್ರತಿನಿಧಿಗಳು ಮಹಿಳೆಯರ ಬಗ್ಗೆ ಆಡಿದ ನಿಂದನಾತ್ಮಕ ಮಾತುಗಳು ರಾಷ್ಟ್ರದ ಗಮನ ಸೆಳೆದಿವೆ. ಅಲ್ಲದೆ, ಈ ಮಾತುಗಳ ಬಗ್ಗೆ ಕೇಂದ್ರ ಚುನಾವಣಾ ಆಯೋಗವು ತನ್ನ ಅಸಮಾಧಾನವನ್ನು ಸೂಚಿಸಿದೆ. ಎರಡೂ ಹೇಳಿಕೆಗಳು ತೀರಾ ಕೆಳಮಟ್ಟದವು. ನಟಿ ಹಾಗೂ ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಂಗನಾ ರನೌತ್ ಅವರನ್ನು ಉದ್ದೇಶಿಸಿ ಆಡಿದ ಒರಟು ಮಾತೊಂದು ಕಾಂಗ್ರೆಸ್ಸಿನ ರಾಷ್ಟ್ರೀಯ ವಕ್ತಾರೆ ಹಾಗೂ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ಸುಪ್ರಿಯಾ ಶ್ರೀನೇತ್ ಅವರ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಕಾಣಿಸಿಕೊಂಡಿತ್ತು. ಬಿಜೆಪಿಯ ಮುಖಂಡ ದಿಲೀಪ್ ಘೋಷ್ ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಉದ್ದೇಶಿಸಿ ತೀರಾ ಆಕ್ಷೇಪಾರ್ಹವಾದ ಮಾತುಗಳನ್ನು ಆಡಿದರು. ಇಬ್ಬರೂ ಮುಖಂಡರು ಆಡಿದ ಮಾತುಗಳು ‘ಘನತೆ ಇಲ್ಲದವು ಹಾಗೂ ಕೆಟ್ಟ ಅಭಿರುಚಿಯವು’ ಎಂದು ಚುನಾವಣಾ ಆಯೋಗವು ಹೇಳಿದೆ. ಅವರಿಗೆ ನೋಟಿಸ್‌ ಜಾರಿಗೊಳಿಸಿದೆ. ಈ ಮಾತುಗಳು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಮಾತ್ರವೇ ಅಲ್ಲ; ಖಾಸಗಿಯಾಗಿ ಮಾತನಾಡುವಾಗ ಕೂಡ ಎದುರಿಗೆ ಇರುವ ವ್ಯಕ್ತಿಗೆ ಕೊಡಬೇಕಾದ ಗೌರವ, ಸೌಜನ್ಯವು ಆ ಮಾತುಗಳಲ್ಲಿ ಇರಲಿಲ್ಲ.

ದೇಶದಲ್ಲಿ ಈಚಿನ ವರ್ಷಗಳಲ್ಲಿ ಸಾರ್ವಜನಿಕ ಚರ್ಚೆಯ ಮಟ್ಟವು ಕುಗ್ಗುತ್ತಾ ಬಂದಿದೆ. ರಾಜಕಾರಣಿಗಳು, ಅವರ ಹಿಂಬಾಲಕರು ಹಾಗೂ ಇತರರು ವೈಯಕ್ತಿಕ ಮಟ್ಟದ ನಿಂದನೆಯ ಮಾತುಗಳನ್ನು ಯಾವ ಹಿಂಜರಿಕೆಯೂ ಇಲ್ಲದೆ ಆಡುತ್ತಿದ್ದಾರೆ. ಇಂತಹ ವಾಗ್ದಾಳಿಗಳಿಗೆ ಮಹಿಳೆಯರು ಬಹಳ ಸುಲಭದ ತುತ್ತಾಗುತ್ತಿದ್ದಾರೆ. ಮಾತುಗಳು ವಿವಾದಕ್ಕೆ ತಿರುಗಿದಾಗ ಅಥವಾ ಅವುಗಳಿಗೆ ಪ್ರತಿರೋಧ ಎದುರಾದಾಗ ಹೊಣೆಯಿಂದ ನುಣುಚಿಕೊಳ್ಳಲು ಯತ್ನಿಸುವುದು, ತಪ್ಪಿಸಿಕೊಳ್ಳಲಿಕ್ಕೆ ನೆಪಗಳನ್ನು ಹುಡುಕುವುದು ಅಥವಾ ವಿಷಯಾಂತರ ತಂತ್ರದ ಮೊರೆ ಹೋಗುವುದಿದೆ. ತಮ್ಮ ಖಾತೆಯನ್ನು ಬಳಸುವ ಬೇರೊಬ್ಬರು ನಿಂದನಾತ್ಮಕ ಮಾತುಗಳನ್ನು ಆಡಿದ್ದಾರೆ ಎಂದು ಸುಪ್ರಿಯಾ ಅವರು ಹೇಳಿದ್ದಾರೆ. ಒಬ್ಬರು ಆಡಿದಂತಹ ನಿಂದನೆಯ ಮಾತುಗಳನ್ನು ಇನ್ನೊಬ್ಬರು ಕೂಡ ಆಡಿದ್ದಾರೆ ಎನ್ನುವುದು ಅಥವಾ ಅದಕ್ಕಿಂತ ಹೆಚ್ಚು ನಿಂದನೆಯ ಮಾತನ್ನು ಬೇರೊಬ್ಬರು ಆಡಿದ್ದಾರೆ ಎನ್ನುವುದು ಸಮರ್ಥನೆ ಆಗಲಾರದು. ಕೆಟ್ಟ ಪೂರ್ವನಿದರ್ಶನಗಳು ಮುಂದೆ ಅಂಥವು ಮರುಕಳಿಸದಂತೆ ನೋಡಿಕೊಳ್ಳುವುದಕ್ಕೆ ಎಲ್ಲರಿಗೂ ಪ್ರಚೋದನೆಯಾಗಬೇಕು. ಅಸಭ್ಯವಾಗಿ ಮಾತನಾಡಿದ ನಿದರ್ಶನಗಳನ್ನು ರಾಜಕೀಯ ಪಕ್ಷಗಳು ಗಂಭೀರವಾಗಿ ಪರಿಗಣಿಸಿ, ಅಂತಹ ಮಾತುಗಳಿಂದ ಅಂತರ ಕಾಯ್ದುಕೊಳ್ಳಬೇಕು ಹಾಗೂ ಅಂತಹ ಮಾತು ಆಡಿದವರ ವಿರುದ್ಧ ಕ್ರಮ ಜರುಗಿಸಬೇಕು. ಸುಪ್ರಿಯಾ ಅವರಿಗೆ ಕಾಂಗ್ರೆಸ್ ಚುನಾವಣೆಯಲ್ಲಿ ಸೀಟು ನಿರಾಕರಿಸಿದೆ ಎಂದು ವರದಿಗಳು ಹೇಳುತ್ತವೆ. ಇದು ನಿಜವಾಗಿದ್ದಲ್ಲಿ ಪಕ್ಷದ ಕ್ರಮ ಸ್ವಾಗತಾರ್ಹ. ಮಮತಾ ಅಥವಾ ಕಂಗನಾ ಅವರಂತಹ ಸೆಲೆಬ್ರಿಟಿಗಳನ್ನು ಗುರಿಯಾಗಿಸಿ ಆಡಿದ ಮಾತುಗಳು ಹಲವು ಸಂದರ್ಭಗಳಲ್ಲಿ ಜನರ ಗಮನ ಸೆಳೆಯುತ್ತವೆ. ಹಾಗೆಯೇ, ಮಹಿಳೆಯರನ್ನು ಗುರಿಯಾಗಿಸಿಕೊಂಡು ಎಷ್ಟೇ ನಿಂದನಾತ್ಮಕ ಮಾತುಗಳನ್ನು ಆಡಿದ್ದರೂ ಕೆಲವರು ಉತ್ತರದಾಯಿತ್ವದಿಂದ ತಪ್ಪಿಸಿಕೊಳ್ಳುತ್ತಾರೆ.

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ನಾಯಕರು ಹಿಂದೆ ಇಂತಹ ಮಾತುಗಳನ್ನು ಆಡಿದ್ದಿದೆ. ಸಮಾಜದಲ್ಲಿ ಇರುವ ಪುರುಷಪ್ರಧಾನ ಮನಃಸ್ಥಿತಿ ಇಂತಹ ಮಾತುಗಳಿಗೆ ಕಾರಣ. 2019ರ ಚುನಾವಣೆಯಲ್ಲಿ ಆಡಿದ ಸ್ತ್ರೀದ್ವೇಷದ ಮಾತುಗಳ ಕುರಿತ ಒಂದು ಅಧ್ಯಯನವು, ಇಂತಹ ಮಾತುಗಳು ಜಗತ್ತಿನಾದ್ಯಂತ ಇರುವ ಸ್ತ್ರೀದ್ವೇಷದ ಮಾದರಿಗೆ ಅನುಗುಣವಾಗಿ ಇವೆ, ಮಹಿಳಾ ರಾಜಕಾರಣಿಗಳನ್ನು ಉದ್ದೇಶಿಸಿ ಹಿಂದಿನಿಂದಲೂ ಆಡಿಕೊಂಡು ಬಂದಿರುವ ವ್ಯಂಗ್ಯದ ಮಾತುಗಳಲ್ಲಿ ಇವುಗಳ ಮೂಲ ಇದೆ ಎಂಬುದನ್ನು ಕಂಡುಕೊಂಡಿದೆ. ಇಂತಹ ಮಾತುಗಳು ರಾಜಕಾರಣದಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ಅಗೌರವದಿಂದ ಕಾಣಲು ಯತ್ನಿಸುತ್ತವೆ. ಮಹಿಳಾ ಮತದಾರರ ಸಂಖ್ಯೆಯು ಹೆಚ್ಚಾಗುತ್ತಿರುವ ಹೊತ್ತಿನಲ್ಲಿ ಈ ರೀತಿ ಆಗುತ್ತಿದೆ. ಮಹಿಳಾ ಮತದಾರರ ಸಂಖ್ಯೆಯು ಪುರುಷ ಮತದಾರರ ಸಂಖ್ಯೆಗಿಂತ ಹೆಚ್ಚಿರುವ 100ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳಿವೆ. ಮಹಿಳೆಯರ ಘನತೆಗೆ ಕುಂದು ಬಾರದಂತೆ ನೋಡಿಕೊಳ್ಳುವ ಕೆಲಸವು ರಾಜಕಾರಣದಲ್ಲಿ ಆಗಬೇಕು. ಮರ್ಯಾದೆ ಕೊಡದವರ ವಿರುದ್ಧ ಕ್ರಮ ಕೈಗೊಳ್ಳಲು ಪಕ್ಷಗಳು ವಿಫಲವಾದರೆ, ಅಂಥವರಿಗೆ ಪಾಠ ಕಲಿಸುವ ಕೆಲಸವನ್ನು ಮತದಾರರು ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT