ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ| ಮತ್ಸರ ನೀಗಲಿ ಹೊಸ ಸಂವತ್ಸರ: ಸೌಹಾರ್ದದ ಸೇತುವಾಗಲಿ ಯುಗಾದಿ

Last Updated 1 ಏಪ್ರಿಲ್ 2022, 19:12 IST
ಅಕ್ಷರ ಗಾತ್ರ

ಕಲೆ, ಬುದ್ಧಿಮತ್ತೆ, ಸಾಮಾಜಿಕ ಸೌಹಾರ್ದದಂಥ ಮೌಲ್ಯಗಳ ಮೂಲಕ ದೇಶ ಮತ್ತು ವಿಶ್ವದ ಗಮನ ಸೆಳೆಯುತ್ತಿದ್ದ ಕರ್ನಾಟಕ, ಇತ್ತೀಚೆಗೆ ಅನಪೇಕ್ಷಿತ ಘಟನೆಗಳ ಕಾರಣದಿಂದಾಗಿ ಹೆಚ್ಚು ಸುದ್ದಿಯಾಗುತ್ತಿದೆ.
ಮನಸ್ಸುಗಳನ್ನು ಗಾಸಿಗೊಳಿಸುವ ಹಾಗೂ ಸಮಾಜವನ್ನು ವಿಭಜಿಸುವ ಕೋಮುಶಕ್ತಿಗಳಿಗೆ ಪ್ರಯೋಗ
ಶಾಲೆಯಾಗುತ್ತಿದೆ. ‘ಸರ್ವ ಜನಾಂಗದ ಶಾಂತಿಯ ತೋಟ’ ಎನ್ನುವ ನಾಡಗೀತೆಯ ಆಶಯವನ್ನು ಸದ್ಯದ ವಿದ್ಯಮಾನಗಳು ಅಣಕಿಸುವಂತಿವೆ. ಹಿಜಾಬ್‌, ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ, ಹಲಾಲ್‌ ಕಟ್‌ ವಿವಾದಗಳು ಸಮಾಜವನ್ನು ಕೋಮು ಆಧಾರಿತವಾಗಿ ವಿಭಜಿಸುವ ಪ್ರಯತ್ನಗಳಾಗಿವೆ. ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು, ಮಹಿಳೆಯರು ಹಾಗೂ ಬಡ ವ್ಯಾಪಾರಿಗಳ ವಿರುದ್ಧ ವ್ಯವಸ್ಥಿತ ಅಪಪ್ರಚಾರ ನಡೆಯುತ್ತಿದೆ. ಇಂಥ ಘಟನೆಗಳನ್ನು ತಡೆಗಟ್ಟಬೇಕಾದ ಸರ್ಕಾರವೇ ಕುಂಟು ನೆಪಗಳನ್ನು ಹೇಳುತ್ತಾ, ತನ್ನ ಸಾಂವಿಧಾನಿಕ ಕರ್ತವ್ಯಕ್ಕೆ ವಿಮುಖವಾಗಿರುವುದು ವಿಷಾದಕರ. ಸಮಾಜದ ನೈತಿಕ ಸ್ವಾಸ್ಥ್ಯ ಕಾಪಾಡಬೇಕಾದ ಮಠಾಧೀಶರು ಕೂಡ ಅಲ್ಪಸಂಖ್ಯಾತರ ನೆರವಿಗೆ ಧಾವಿಸುತ್ತಿಲ್ಲ. ಇಂಥ ಸಂಕೀರ್ಣ ಸನ್ನಿವೇಶದಲ್ಲಿ, ಕೂಗುಮಾರಿಗಳ ಮಾತಿಗೆ ಮರುಳಾಗದೆ ಸಂಯಮವನ್ನು ಉಳಿಸಿಕೊಳ್ಳುವ ಸವಾಲನ್ನು ನಾಡಿನ ಜನಸಮೂಹ ಎದುರಿಸಬೇಕಾಗಿದೆ ಹಾಗೂ ಧಾರ್ಮಿಕ ಸಾಮರಸ್ಯವನ್ನು ಎತ್ತಿಹಿಡಿಯುವ ವಿವೇಕವನ್ನು ಪ್ರದರ್ಶಿಸಬೇಕಾಗಿದೆ.

ಸರ್ವಧರ್ಮ ಸಮನ್ವಯ ಹಾಗೂ ಜಾತ್ಯತೀತ ತತ್ವಗಳ ಅನುಸಂಧಾನದ ಪ್ರಯತ್ನಗಳು ಕರ್ನಾಟಕದ ಇತಿಹಾಸದುದ್ದಕ್ಕೂ ನಡೆದಿವೆ. ಪರಧರ್ಮವನ್ನೂ ಪರ ವಿಚಾರವನ್ನೂ ಸೈರಣೆಯಿಂದ ಕಾಣುವ ‘ಕನ್ನಡ ವಿವೇಕ’ವನ್ನು ಪ್ರತಿಪಾದಿಸಿದ ಕವಿರಾಜಮಾರ್ಗಕಾರನಿಂದ ಹಿಡಿದು ವಿಶ್ವಮಾನವ ಸಂದೇಶವನ್ನು ಸಾರಿದ ಕುವೆಂಪುವರೆಗಿನ ಕನ್ನಡ ಪರಂಪರೆ ಕರ್ನಾಟಕದಲ್ಲಿನ‌ ಬಹುತ್ವವನ್ನು ಎತ್ತಿಹಿಡಿದಿದೆ. ಸಮಾಜದ ರಾಡಿಯನ್ನು ತಿಳಿಗೊಳಿಸಲು ಶ್ರಮಿಸಿದ ಶರಣರು ಹಾಗೂ ದಾಸರ ಪಥವಂತೂ ಕರ್ನಾಟಕಕ್ಕೆ ಮಾತ್ರವಲ್ಲ, ಭಾರತೀಯ ಚರಿತ್ರೆಯಲ್ಲೇ ವಿಶಿಷ್ಟವಾದುದು. ಈ ಸಮರಸ ಚರಿತ್ರೆಯನ್ನು ಮಸುಕಾಗಿಸುವ ವಿದ್ಯಮಾನಗಳು ಇತ್ತೀಚೆಗೆ ನಡೆಯುತ್ತಿವೆ. ಪರಧರ್ಮ ಮತ್ತು ಪರ ವಿಚಾರಗಳನ್ನು ಅಸಹನೆಯಿಂದ ಕಾಣುವುದೇ ಧರ್ಮ ಎನ್ನುವಂತಹ ಘಟನೆಗಳು ನಡೆಯುತ್ತಿವೆ. ಸಮಾಜವನ್ನು ವಿಭಜಿಸುವ ಕೊಳಕು ರಾಜಕಾರಣದ ಫಲಿತಗಳು ಕರ್ನಾಟಕದ ವರ್ಚಸ್ಸಿಗೆ ಮಸಿ ಬಳಿಯುವಂತಿವೆ ಹಾಗೂ ಜಾಗತಿಕ ಮಟ್ಟದಲ್ಲಿ ಕರ್ನಾಟಕದ ಜಾತ್ಯತೀತ ಸ್ವರೂಪವನ್ನು ಅವಿಶ್ವಾಸದಿಂದ ನೋಡಲು ಕಾರಣವಾಗುವಂತಿವೆ. ‘ಕರ್ನಾಟಕ ಯಾವಾಗಲೂ ಎಲ್ಲರನ್ನೂ ಒಳಗೊಳ್ಳುವ ಆರ್ಥಿಕ ಅಭಿವೃದ್ಧಿ ಮಾದರಿಯನ್ನು ಪಾಲಿಸುತ್ತಿದೆ. ಕೋಮು ಆಧಾರದಲ್ಲಿ ಕೆಲವರನ್ನು ಹೊರಗಿರಿಸುವುದಕ್ಕೆ ಅವಕಾಶ ಕಲ್ಪಿಸಬಾರದು. ಐಟಿ–ಬಿಟಿ ಕ್ಷೇತ್ರಕ್ಕೆ ಕೋಮುವಾದ ಪ್ರವೇಶಿಸಿದರೆ, ಅದು ನಮ್ಮ ಜಾಗತಿಕ ನಾಯಕತ್ವವನ್ನೇ ನಾಶಪಡಿಸುತ್ತದೆ’ ಎಂದು ಉದ್ಯಮಿ ಕಿರಣ್ ಮಜುಂದಾರ್ ಷಾ ಅವರು ವ್ಯಕ್ತಪಡಿಸಿರುವ ಆತಂಕ ಸರಿಯಾದುದು. ಅವರ ಕಾಳಜಿ ನಾಡಿನ ಪ್ರಜ್ಞಾವಂತರೆಲ್ಲರ ಕಳಕಳಿಯೂ ಹೌದು. ‘ಧಾರ್ಮಿಕ ವಿಭಜನೆಯನ್ನು ತಡೆಯಿರಿ’ ಎಂದು ಷಾ ಅವರು ಮಾಡಿಕೊಂಡಿರುವ ಮನವಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗಂಭೀರವಾಗಿ ಪರಿಗಣಿಸಬೇಕು. ಸರ್ಕಾರ ಮಾಡಬೇಕಾದ ಕಾನೂನು ಸಂರಕ್ಷಣೆಯ ಕೆಲಸವನ್ನು ವ್ಯಕ್ತಿಗಳು ಅಥವಾ ಸಂಘಟನೆಗಳು ಮಾಡುವುದನ್ನು ಕೈಕಟ್ಟಿಕೊಂಡು ನೋಡುವುದನ್ನು ಬಿಟ್ಟು, ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ಕ್ಷೋಭೆ ಉಂಟುಮಾಡುತ್ತಿರುವವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.

ಕೋಮುವಾದಕ್ಕೆ ಕುಮ್ಮಕ್ಕು ನೀಡುವ ಶಕ್ತಿಗಳನ್ನು ಮಟ್ಟ ಹಾಕಬೇಕಾದ ಸರ್ಕಾರ ಕೈಚೆಲ್ಲಿ ಕೂತಂತಿದೆ. ಅಲ್ಪಸಂಖ್ಯಾತರಲ್ಲಿ ಆತ್ಮವಿಶ್ವಾಸ ಮೂಡಿಸುವ ಮಾತುಗಳನ್ನಾಡಬೇಕಾದ ಪ್ರಜಾಪ್ರತಿನಿಧಿ
ಗಳು ಜಾಣಮೌನಕ್ಕೆ ಶರಣಾಗಿದ್ದಾರೆ. ಕೆಲವು ಸಚಿವರು ‘ಧರ್ಮ ರಾಜಕಾರಣ’ದೊಂದಿಗೆ ಎಗ್ಗಿಲ್ಲದೆ ಗುರುತಿಸಿಕೊಂಡು ತಮ್ಮ ಸಂವಿಧಾನಾತ್ಮಕ ಜವಾಬ್ದಾರಿಯನ್ನು ಮರೆತವರಂತೆ ವರ್ತಿಸುತ್ತಿದ್ದಾರೆ. ಇಂಥ ವಿಷಮ ಸನ್ನಿವೇಶದಲ್ಲಿ ನಾಡಿನ ವಿವೇಕವನ್ನು ರಕ್ಷಿಸುವುದಕ್ಕೆ ಜನಸಾಮಾನ್ಯರೇ ಮುಂದಾಗಬೇಕು. ರಾಜಕಾರಣಿಗಳಿಗೆ ಮುಖ್ಯವಾಗಿರುವುದು ಚುನಾವಣೆಯಲ್ಲಿನ ಯಶಸ್ಸೇ ಹೊರತು, ಜನರ ಹಿತಾಸಕ್ತಿ
ಯಲ್ಲ. ಮತಗಳಿಗಾಗಿ ಕೋಮುಪ್ರಚೋದನೆಗೆ ಕುಮ್ಮಕ್ಕು ನೀಡುವ ರಾಜಕಾರಣಿಗಳಿಂದ ಏನನ್ನೂ ನಿರೀಕ್ಷಿಸುವಂತಿಲ್ಲ. ಕೋಮುವಿಷ ತುಂಬಿಕೊಂಡ ರಾಜಕಾರಣಿಗಳ ಮಾತುಗಳನ್ನು ಜನ ನಿರ್ಲಕ್ಷಿಸಬೇಕು. ಸ್ವಾಭಿಮಾನಿ,ಸಮೃದ್ಧ ಹಾಗೂ ಸಾಮರಸ್ಯದ ಕರ್ನಾಟಕವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಜನಸಾಮಾನ್ಯರೇ ಕಾರ್ಯೋನ್ಮುಖರಾಗಬೇಕು. ಅಂಥ ಪ್ರಯತ್ನಗಳಿಗೆ ಯುಗಾದಿ ಪ್ರೇರಣೆಯಾಗಲಿ. ಕೊರೊನಾ ಸೋಂಕಿನ ಆತಂಕದಿಂದಾಗಿ ಕಳೆದ ಎರಡು ವರ್ಷಗಳಲ್ಲಿ ಯುಗಾದಿ ಹಬ್ಬವನ್ನು ಆತಂಕ ಮತ್ತು ನಿರ್ಬಂಧದ ನಡುವೆ ಆಚರಿಸಲಾಯಿತು. ಈ ಬಾರಿ ಕೊರೊನಾ ಆತಂಕ ಸದ್ಯಕ್ಕೆ ತಿಳಿಗೊಂಡಿರುವುದ
ರಿಂದಾಗಿ ಯುಗಾದಿ ಸಂಭ್ರಮ ಇಮ್ಮಡಿಗೊಂಡಿದೆ. ಪ್ರಕೃತಿಯಲ್ಲಿ ಹೊಸ ಚಿಗುರಿನ ಜೀವಚೈತನ್ಯ ಕಾಣಿಸಿಕೊಳ್ಳುವ ಸಂದರ್ಭದ ಯುಗಾದಿ ಹಿಂದೂಗಳ ಪಾಲಿಗೆ ಹೊಸ ಸಂವತ್ಸರವೂ ಹೌದು. ಯಾವುದೇ ರೂಪದಲ್ಲಿ ನಮ್ಮೊಳಗೆ ಸೇರಿಕೊಂಡಿರುವ ಮತ್ಸರವನ್ನು ‘ಶುಭಕೃತು’ ಹೆಸರಿನ ಸಂವತ್ಸರ ನೀಗಲಿ, ಮಾನವೀಯತೆ ಹಾಗೂ ಸಹಬಾಳ್ವೆಯ ಹಂಬಲವನ್ನು ಯುಗಾದಿ ಹೆಚ್ಚಿಸಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT