ಹಾಸನ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ, ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿ ಎಂದು ತೀರ್ಮಾನಿಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಜೀವಾವಧಿ ಕಠಿಣ ಜೈಲುಶಿಕ್ಷೆ ವಿಧಿಸಿದೆ. ಮನೆಗೆಲಸದ ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿರುವ ಅಪರಾಧದಲ್ಲಿ ಜೈಲು ಶಿಕ್ಷೆ ಅನುಭವಿಸುವುದರ ಜೊತೆಗೆ, ₹11.25 ಲಕ್ಷ ಪರಿಹಾರವನ್ನು ಸಂತ್ರಸ್ತೆಗೆ ಮತ್ತು ₹35 ಸಾವಿರ ಮೊತ್ತವನ್ನು ರಾಜ್ಯ ಸರ್ಕಾರಕ್ಕೆ ಪಾವತಿಸಬೇಕು ಎಂದು ನ್ಯಾಯಾಧೀಶರು ಆದೇಶಿಸಿದ್ದಾರೆ. ಶಾಸಕರು ಹಾಗೂ ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ನೀಡಿರುವ ಈ ತೀರ್ಪು, ಸಾಮಾಜಿಕ ಸ್ವಾಸ್ಥ್ಯದ ಬಗ್ಗೆ ಕಾಳಜಿ ಉಳ್ಳವರಿಗೆ ಸಮಾಧಾನ ತರುವಂತಹದ್ದು ಹಾಗೂ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಗೌರವ ಮೂಡಿಸುವಂತಹದ್ದು. ಪ್ರಜ್ವಲ್ಗೆ ಆಗಿರುವ ಜೈಲುಶಿಕ್ಷೆಗೆ ಸಾಮಾಜಿಕ ಹಾಗೂ ರಾಜಕೀಯ ಮಹತ್ವವೂ ಇದೆ. ಅಧಿಕಾರ, ಹಣ ಹಾಗೂ ಜಾತಿಬಲದಿಂದ ಅಪರಾಧ ಎಸಗಿಯೂ ತಪ್ಪಿಸಿಕೊಳ್ಳಲು ಕೆಲವರಿಗೆ ಸಾಧ್ಯವಿದೆ ಎನ್ನುವ ಭಾವನೆ ಸಾರ್ವಜನಿಕರಲ್ಲಿದೆ. ಇದಕ್ಕೆ ಅಪವಾದ ಎನ್ನುವಂತೆ ಮಾಜಿ ಸಂಸದನಿಗೆ ಕಠಿಣ ಶಿಕ್ಷೆಯಾಗಿರುವುದು ನ್ಯಾಯಾಂಗದ ಬಗೆಗಿನ ಜನಸಾಮಾನ್ಯರ ನಂಬಿಕೆಯನ್ನು ಬಲಪಡಿಸುವ ವಿರಳ ವಿದ್ಯಮಾನವಾಗಿದೆ. ತಪ್ಪು ಮಾಡಿದ ವ್ಯಕ್ತಿ ಎಷ್ಟೇ ಪ್ರಭಾವಿಯಾಗಿದ್ದರೂ ಕಾನೂನು ಕ್ರಮಕ್ಕೆ ಒಳಗಾಗಲೇಬೇಕು ಎನ್ನುವ ಸ್ಥಿತಿ ಸಮಾಜದ ನೈತಿಕಶಕ್ತಿ ಹೆಚ್ಚಿಸು ವಂತಹದ್ದು. ರಾಜಕಾರಣಿಗಳಿಗೆ ಸಂಬಂಧಿಸಿದ ಲೈಂಗಿಕ ಹಗರಣಗಳು ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ, ರಾಜಕಾರಣದ ಕೊಳಕು ತೊಳೆಯಲಿಕ್ಕೆ ಪ್ರಜ್ವಲ್ ಪ್ರಕರಣವನ್ನು ಆರಂಭಿಕ ಚಲನೆಯ ರೂಪದಲ್ಲಿ ನೋಡಬಹುದು. ಪ್ರಜೆಗಳಿಗೆ ಸೇವೆ ಸಲ್ಲಿಸಲಿಕ್ಕಾಗಿ ಪ್ರಜಾ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾ ಗುತ್ತದೆಯೇ ಹೊರತು, ದೌರ್ಜನ್ಯ ಎಸಗಲು ಅಲ್ಲ ಎನ್ನುವ ಸಂದೇಶವನ್ನು ನ್ಯಾಯಾಲಯ ನೀಡಿರುವ ತೀರ್ಪು ಧ್ವನಿಸುತ್ತಿರುವಂತಿದೆ. ಹಾಸನದ ಯುವ ರಾಜಕಾರಣಿಗೆ ಸಾರ್ವಜನಿಕ ಜೀವನದಲ್ಲಿ ಮಹತ್ವದ್ದನ್ನು ಸಾಧಿಸುವ ಅವಕಾಶವಿತ್ತು. ಆ ಅವಕಾಶವನ್ನು ಅಧಿಕಾರದ ಅಮಲಿನಲ್ಲಿ ಕೈಯಾರೆ ಹಾಳು ಮಾಡಿಕೊಂಡಿದ್ದು ಆತ್ಮಘಾತುಕ ಕೃತ್ಯ ಮಾತ್ರವಾಗಿರದೆ, ಮತದಾರರಿಗೆ ಎಸಗಿರುವ ವಿಶ್ವಾಸದ್ರೋಹವೂ ಆಗಿದೆ. ಯುವ ರಾಜಕಾರಣಿಗಳಿಗೆ ಮೌಲಿಕ ಹಾಗೂ ನೈತಿಕ ಮಾದರಿಯೊಂದರ ಕಲಿಕೆಯ ಪಠ್ಯದ ರೂಪದಲ್ಲಿ ಈ ಘಟನೆಗೆ ಮಹತ್ವವಿದೆ.
.ಸಂಪಾದಕೀಯ Podcast |ಪ್ರಜ್ವಲ್ ರೇವಣ್ಣಗೆ ಜೈಲುಶಿಕ್ಷೆ; ಜನರ ನಂಬಿಕೆಗೆ ಕಾನೂನುಬಲ.
2024ರ ಲೋಕಸಭಾ ಚುನಾವಣೆಗೂ ಮುನ್ನ ಪ್ರಜ್ವಲ್ ರೇವಣ್ಣ ಎಸಗಿದ್ದಾರೆ ಎನ್ನಲಾದ ಲೈಂಗಿಕ ದೌರ್ಜನ್ಯಗಳ ದೃಶ್ಯಗಳನ್ನೊಳಗೊಂಡ ಪೆನ್ಡ್ರೈವ್ಗಳು ಹಾಸನದ ರಸ್ತೆಗಳಲ್ಲಿ ದೊರೆತಿದ್ದವು. ಆ ಪೆನ್ಡ್ರೈವ್ಗಳಲ್ಲಿನ ದೃಶ್ಯಗಳಲ್ಲಿ, ಯುವ ರಾಜಕಾರಣಿಯ ಕೊಳಕು, ಕ್ರೌರ್ಯ ಹಾಗೂ ವಿಕೃತಿ ಅನಾವರಣಗೊಂಡಿತ್ತು. ಅದರ ಬೆನ್ನಿಗೆ, ಅತ್ಯಾಚಾರದ ಪ್ರಕರಣಗಳೂ ವರದಿಯಾಗತೊಡಗಿ, ಮನೆ ಕೆಲಸದ ಮಹಿಳೆಯ ಮೇಲೆ ನಿರಂತರವಾಗಿ ಅತ್ಯಾಚಾರ ನಡೆದ ದೂರು ದಾಖಲಾಗಿತ್ತು. ಆ ಪ್ರಕರಣ ತಾರ್ಕಿಕ ಹಂತವೊಂದನ್ನು ತಲುಪಿ, ಅಪರಾಧಿಗೆ ಶಿಕ್ಷೆಯಾಗಿದೆ. ಅಧಿಕಾರ ಮತ್ತು ಕುಟುಂಬದ ವರ್ಚಸ್ಸನ್ನು ದುರುಪಯೋಗ ಮಾಡಿಕೊಂಡು ಎಸಗಿದ್ದ ಅಪರಾಧದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದಂತೆ ಪೊಲೀಸರ ತನಿಖೆ ಹಾಗೂ ವಿಚಾರಣೆ ನಡೆದಿರುವುದು ಗಮನಾರ್ಹ. ಈ ಪ್ರಕರಣ, ರಾಜ್ಯ ರಾಜಕಾರಣದಲ್ಲಿ ಕಪ್ಪುಚುಕ್ಕೆಯಾಗಿ ಉಳಿಯಲಿದೆ. ಪ್ರಜ್ವಲ್ ಪ್ರಕರಣದಲ್ಲಿ ರಾಜಕಾರಣಿಗಳ ಸೋಗಲಾಡಿತನ ಲಜ್ಜೆ ಹುಟ್ಟಿಸುವಂತಿತ್ತು. ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕಳಂಕಿತನ ಬೆನ್ನಿಗೆ ನಿಂತ ರಾಜಕಾರಣಿಗಳ ಆತ್ಮಾವಲೋಕನಕ್ಕೆ ಪ್ರಸಕ್ತ ತೀರ್ಪು ಒತ್ತಾಯಿಸುವಂತಿದೆ. ಪ್ರಜ್ವಲ್ ವಿರುದ್ಧ ರಾಜಕೀಯ ಕುತಂತ್ರ ನಡೆಯುತ್ತಿದೆ ಎನ್ನುವ ವಿಶ್ಲೇಷಣೆಗಳಿಗೆ ಕೋರ್ಟ್ ತೀರ್ಪು ಉತ್ತರದಂತಿದೆ. ಅಪರಾಧಗಳನ್ನು ಸಹಿಸಿಕೊಳ್ಳುವುದು ಹಾಗೂ ಅಪರಾಧಿಗಳನ್ನು ರಕ್ಷಿಸಲು ಪ್ರಯತ್ನಿಸುವುದು ಸಾಮಾಜಿಕ ಹೊಣೆಗಾರಿಕೆಯ ಲಕ್ಷಣವಲ್ಲ ಹಾಗೂ ಪ್ರಜಾಪ್ರತಿನಿಧಿಗಳಿಗೆ ತಕ್ಕುದಾದ ನಡವಳಿಕೆಯೂ ಅಲ್ಲ ಎನ್ನುವುದನ್ನು ರಾಜಕಾರಣಿಗಳು ಅರ್ಥ ಮಾಡಿಕೊಳ್ಳಬೇಕು.

ಪ್ರಭಾವಿ ರಾಜಕಾರಣಿಗೆ ಶಿಕ್ಷೆಯಾಗಲಿಕ್ಕೆ ಅತ್ಯಾಚಾರಕ್ಕೆ ಒಳಗಾದ ಮಹಿಳೆ ಪ್ರದರ್ಶಿಸಿದ ದಿಟ್ಟತನ ಪ್ರಮುಖ ಕಾರಣವಾಗಿದೆ. ಭಯ, ಆತಂಕ ಹಾಗೂ ಕುತೂಹಲದ ಕಣ್ಣುಗಳ ನೋಟಕ್ಕೆ ಅಳುಕದೆ ದೂರು ನೀಡಿದ ಸಂತ್ರಸ್ತ ಮಹಿಳೆ, ತನಿಖೆಗೆ ನೀಡಿದ ಸಂಪೂರ್ಣ ಸಹಕಾರದಿಂದಾಗಿ ಪ್ರಕರಣ ತಾರ್ಕಿಕ ಹಂತವೊಂದನ್ನು ಮುಟ್ಟುವುದು ಸಾಧ್ಯವಾಗಿದೆ. ಈ ಮಹಿಳೆಗೆ ದೊರೆತಿರುವ ನ್ಯಾಯ, ಉಳಿದ ಸಂತ್ರಸ್ತ ಮಹಿಳೆಯರಿಗೂ ಸಾಂತ್ವನ ಹಾಗೂ ಧೈರ್ಯ ತುಂಬುವಂತಹದ್ದು. ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಮಾನ ಹಾಗೂ ಪ್ರಾಣಕ್ಕಂಜಿ ತಮ್ಮ ಸಂಕಟವನ್ನು ಮೌನವಾಗಿ ಸಹಿಸಿಕೊಳ್ಳುವ ಉದಾಹರಣೆಗಳೇ ಹೆಚ್ಚಾಗಿರುವ ಸಂದರ್ಭದಲ್ಲಿ, ನ್ಯಾಯಕ್ಕಾಗಿ ಹೋರಾಟ ಮಾಡಿದ ಮಹಿಳೆಯ ದಿಟ್ಟತನ ಪ್ರಶಂಸೆಗೆ ಅರ್ಹವಾದುದು. ದೌರ್ಜನ್ಯದ ಸಂಕಟವನ್ನು ಕಡಿಮೆ ಮಾಡಿಕೊಳ್ಳಲಿಕ್ಕೆ ಕಾನೂನು ಹೋರಾಟವೇ ಸರಿಯಾದ ಮಾರ್ಗ ಎನ್ನುವುದಕ್ಕೆ ಸಂತ್ರಸ್ತ ಮಹಿಳೆ ಉದಾಹರಣೆಯಾಗಿ ಉಳಿಯಲಿದ್ದಾಳೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.