ನ್ಯಾಯಾಂಗ ನಿಂದನೆಯ ಪ್ರಕರಣಗಳು ಸಾರ್ವಜನಿಕ ಜೀವನದಲ್ಲಿ ಪ್ರಮುಖವಾಗಿ ಚರ್ಚೆಯಾದಾಗಲೆಲ್ಲ, ನ್ಯಾಯಶಾಸ್ತ್ರಜ್ಞ, ನ್ಯಾಯಮೂರ್ತಿ ಲಾರ್ಡ್ ಡೆನಿಂಗ್ ಅವರ ಮಾತೊಂದು ಉಲ್ಲೇಖವಾಗುವುದಿದೆ. ನ್ಯಾಯಾಂಗ ನಿಂದನೆಯ ಕಾನೂನುನ್ಯಾಯಾಲಯದ ಘನತೆಯನ್ನು ಎತ್ತಿಹಿಡಿಯಲು ಬಳಕೆಯಾಗಬೇಕಿಲ್ಲ. ಈ ಕಾನೂನನ್ನು ಅಪರೂಪಕ್ಕೆ ಬಳಸಿಕೊಳ್ಳಬೇಕು. ವಾಕ್ ಸ್ವಾತಂತ್ರ್ಯವನ್ನು ರಕ್ಷಿಸಬೇಕಿರುವುದು ಬಹುಮುಖ್ಯವಾದುದು ಎನ್ನುವುದು ಲಾರ್ಡ್ ಡೆನಿಂಗ್ ಅವರು ಆಡಿದ್ದ ಮಾತುಗಳು. ನ್ಯಾಯದಾನ ಮಾಡುವ ಸ್ಥಾನದಲ್ಲಿ ಕುಳಿತಿರುವ ವ್ಯಕ್ತಿಗಳ ಬಗ್ಗೆ ಟೀಕೆ ಮಾಡುವಾಗ, ‘ನ್ಯಾಯಸಮ್ಮತವಾದ ಟೀಕೆಗಳು ಬರಲಿ; ಏಕೆಂದರೆ, ನ್ಯಾಯಮೂರ್ತಿಗಳಿಗೆ ಅವರು ಹೊಂದಿರುವ ಘನತೆಯ ಕಾರಣದಿಂದಾಗಿ, ಟೀಕೆಗಳು ಸುಳ್ಳು ಎಂದು ಸಾಬೀತು ಮಾಡಲುಸಾಧ್ಯವಾಗದಂತಹ ಸ್ಥಿತಿ ಇರುತ್ತದೆ’ ಎಂದು ಲಾರ್ಡ್ ಡೆನಿಂಗ್ ಅವರು 1968ರ ಸುಮಾರಿಗೆ ಹೇಳಿದ್ದರು.

ಸರಿಸುಮಾರು ಇದೇ ನೆಲೆಯಲ್ಲಿನ ಮಾತುಗಳನ್ನು ಭಾರತದ ನ್ಯಾಯಾಂಗ ಕೂಡ ಆಡಿದ್ದಿದೆ. ಟೀಕೆಗಳನ್ನು ನಿರ್ಲಕ್ಷಿಸುವಂತಹವಿಶಾಲ ಹೃದಯ ನ್ಯಾಯಾಂಗಕ್ಕೆ ಇದೆ ಎಂಬ ಮಾತುಗಳು ಸುಪ್ರೀಂ ಕೋರ್ಟ್ನಿಂದಲೇ ಬಂದಿವೆ. ಎಸ್. ಮಳಗಾಂವಕರ್ ಪ್ರಕರಣದಲ್ಲಿ ನ್ಯಾಯಾಂಗ ನಿಂದನೆ ವಿಚಾರವಾಗಿ ಸುಪ್ರೀಂ ಕೋರ್ಟ್ ಆಡಿದ್ದ ಮಾತುಗಳು ಅವಿಸ್ಮರಣೀಯ. ‘... ಅತ್ಯಂತ ಕಟುವಾದ, ತರವಲ್ಲದ ಟೀಕೆಗಳನ್ನು ಒಳ್ಳೆಯ ಉದ್ದೇಶದಿಂದ ಮಾಡಿದಾಗ ಅವುಗಳ ವಿಚಾರದಲ್ಲಿ ಹೃದಯವೈಶಾಲ್ಯದ, ಮಾನವೀಯವಾದ ನಿಲುವು ತಾಳುವುದು ಒಳಿತು’ ಎಂದು ಆಗ ಸುಪ್ರೀಂ ಕೋರ್ಟ್ನಲ್ಲಿ ನ್ಯಾಯಮೂರ್ತಿ ಆಗಿದ್ದ ವಿ.ಆರ್. ಕೃಷ್ಣ ಅಯ್ಯರ್ ಹೇಳಿದ್ದರು. ವಾಸ್ತವದಲ್ಲಿ, ಭಾರತದ ನ್ಯಾಯಾಂಗಕ್ಕೆ ‘ವಿಶ್ವದ ಅತ್ಯಂತ ಶಕ್ತಿವಂತ ನ್ಯಾಯಾಂಗಗಳಲ್ಲಿ ಒಂದು’ ಎಂಬ ಖ್ಯಾತಿಯೂ ಇದೆ.

ಈ ಖ್ಯಾತಿ ಬಂದಿದ್ದು ಏಕೆ ಎಂಬುದನ್ನು ವಿಸ್ತೃತವಾಗಿ ವಿವರಿಸಿ ಹೇಳಬೇಕಾಗಿಲ್ಲ. ದೇಶದ ಪ್ರಜೆಗಳ ಹಕ್ಕುಗಳನ್ನು ಮುಂದೆ ನಿಂತು ರಕ್ಷಿಸಿದ್ದರಿಂದಾಗಿ, ಕಾರ್ಯಾಂಗವು ತನ್ನ ಮಿತಿಯನ್ನು ಮೀರಿ ವರ್ತಿಸಿದಾಗ ನಾಗರಿಕರ ಸ್ವಾತಂತ್ರ್ಯಗಳನ್ನು ಕಾಪಾಡಿದ್ದರಿಂದಾಗಿ, ಕೇಶವಾನಂದ ಭಾರತಿ ಪ್ರಕರಣದಲ್ಲಿ ಚಾರಿತ್ರಿಕ ತೀರ್ಪು ನೀಡಿ ಸಂಸತ್ತಿನ ಅಧಿಕಾರವ್ಯಾಪ್ತಿಗೂ ಲಕ್ಷ್ಮಣರೇಖೆ ಎಳೆದು, ದೇಶದ ಸಂವಿಧಾನಕ್ಕೊಂದು ರಕ್ಷಣಾ ಕವಚವನ್ನು ಕೊಟ್ಟಿದ್ದಕ್ಕಾಗಿ... ಇವೆಲ್ಲ ಕಾರಣಗಳಿಂದಾಗಿ ಭಾರತೀಯ ನ್ಯಾಯಾಂಗಕ್ಕೆ ಆ ಖ್ಯಾತಿ ಯಥೋಚಿತವಾಗಿ ದಕ್ಕಿದೆ.

ಹೀಗಿದ್ದರೂ, ವಕೀಲ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಭೂಷಣ್ ಅವರು ಮಾಡಿದ್ದ ಎರಡು ಟ್ವೀಟ್ಗಳು ಕ್ರಿಮಿನಲ್ ನ್ಯಾಯಾಂಗ ನಿಂದನೆಗೆ ಸಮ ಎಂದು ಸುಪ್ರೀಂ ಕೋರ್ಟ್ನ ತ್ರಿಸದಸ್ಯ ಪೀಠವು ತೀರ್ಪು ನೀಡಿದ್ದು ದುರದೃಷ್ಟಕರ. ಅವರು ಮಾಡಿದ್ದ ಒಂದು ಟ್ವೀಟ್ ಸುಪ್ರೀಂ ಕೋರ್ಟ್ನ ಈ ಹಿಂದಿನ ಕೆಲವು ಮುಖ್ಯ ನ್ಯಾಯಮೂರ್ತಿಗಳಿಗೆ (ಸಿಜೆಐ) ಸಂಬಂಧಿಸಿದ್ದಾಗಿತ್ತು. ಇನ್ನೊಂದು ಟ್ವೀಟ್, ಹಾಲಿ ಸಿಜೆಐ ಅವರ ಚಿತ್ರವೊಂದನ್ನು ಉಲ್ಲೇಖಿಸಿ ಮಾಡಿದ್ದಾಗಿತ್ತು. ಟ್ವೀಟ್ಗಳ ಮೂಲಕ ಪ್ರಶಾಂತ್ ಭೂಷಣ್ ಅವರು ಆಡಿರುವ ಮಾತುಗಳು ‘ಕೀಳು, ಹಗೆತನದಿಂದ’ ಕೂಡಿದವು ಎಂದು ಕೋರ್ಟ್ ಹೇಳಿದೆ.

ಸಂವಿಧಾನದ ವಿವಿಧ ವಿಧಿಗಳನ್ನು ಅರ್ಥೈಸಿ, ಸಂವಿಧಾನದಲ್ಲಿ ವಾಚ್ಯವಾಗಿ ಹೇಳಿಲ್ಲದ ಹಕ್ಕುಗಳನ್ನೂ ತನ್ನ ತೀರ್ಪುಗಳ ಮೂಲಕವೇ ಪ್ರಜೆಗಳಿಗೆ ಕೊಡಮಾಡಿದ ಹೆಗ್ಗಳಿಕೆ ಇರುವ ಸುಪ್ರೀಂ ಕೋರ್ಟ್, ಪ್ರಶಾಂತ್ ಭೂಷಣ್ ಅವರ ಎರಡು ಟ್ವೀಟ್ಗಳನ್ನು ಹೀಗೆ ಅರ್ಥೈಸಿದ್ದು ಅಭಿವ್ಯಕ್ತಿ ಸ್ವಾತಂತ್ರ್ಯದ ಪರ ಮನಸ್ಸುಗಳನ್ನು ನಿರಾಸೆಗೊಳಿಸಿದೆ. ಪ್ರಶಾಂತ್ ಭೂಷಣ್ ಅವರು ಹಿರಿಯ ವಕೀಲರು, ಹಲವು ಪ್ರಕರಣಗಳಲ್ಲಿ ಸಾರ್ವಜನಿಕ ಹಿತಾಸಕ್ತಿಯ ಪರವಾಗಿ ದನಿ ಎತ್ತಿರುವವರು, ಕೆಲವು ಪ್ರಕರಣಗಳಲ್ಲಿ ಅಮೈಕಸ್ ಕ್ಯೂರಿ ಆಗಿಯೂ ಕರ್ತವ್ಯ ನಿಭಾಯಿಸಿದವರು. ಆದರೆ, ಅವರು ಆಡಿದ ಮಾತುಗಳ ವಿಚಾರವಾಗಿ ಕಠಿಣ ನಿಲುವು ತಾಳಿರುವ ಕೋರ್ಟ್, ಅವರನ್ನು ತಪ್ಪಿತಸ್ಥ ಎಂದು ಹೇಳಿದೆ. ‘ಇಂತಹ ಟೀಕೆಗಳು ನ್ಯಾಯಾಂಗದ ಅಡಿಪಾಯವನ್ನು ಅಲುಗಾಡಿಸುತ್ತವೆ, ಇವುಗಳನ್ನು ಉಕ್ಕಿನ ಮುಷ್ಟಿಯಿಂದ ನಿಭಾಯಿಸಬೇಕು’ ಎಂದು ಕೋರ್ಟ್ ಹೇಳಿರುವುದು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಪ್ರತಿಕ್ರಿಯೆ ಎಂಬ ಅಭಿಪ್ರಾಯವು ಈಗ ನಿವೃತ್ತ ನ್ಯಾಯಮೂರ್ತಿಗಳಿಂದಲೂ ವ್ಯಕ್ತವಾಗಿರುವುದು ಇಲ್ಲಿ ಉಲ್ಲೇಖಾರ್ಹ.

ಹಾಗೆಯೇ, ನ್ಯಾಯಾಂಗ ನಿಂದನೆ ಎಂದು ಹೇಳಲಾಗಿರುವ ಮಾತುಗಳನ್ನು ‘ರಾಷ್ಟ್ರದ ಗೌರವ ಮತ್ತು ಪ್ರತಿಷ್ಠೆ’ಯ ಜೊತೆಗಿಟ್ಟು ಗ್ರಹಿಸಿರುವ ಕೋರ್ಟ್ನ ಕ್ರಮ ಕಳವಳಕಾರಿ.ಭಾರತದ ಪ್ರಜಾತಂತ್ರ ವ್ಯವಸ್ಥೆಗಿಂತ ಹಳೆಯದಾದ ಕೆಲವು ಪ್ರಜಾತಂತ್ರ ವ್ಯವಸ್ಥೆಗಳು ನ್ಯಾಯಾಂಗ ನಿಂದನೆಯನ್ನು ಕ್ರಿಮಿನಲ್ ಅಪರಾಧವನ್ನಾಗಿ ಕಾಣುವುದನ್ನು ಕೈಬಿಟ್ಟಿವೆ. ಭಾರತವೂ ಕ್ರಿಮಿನಲ್ ನ್ಯಾಯಾಂಗ ನಿಂದನೆಯ ವಿಚಾರವಾಗಿ ಹೆಚ್ಚು ಉದಾರವಾದಿ ನಿಲುವು ತಾಳುವುದು ಅಪೇಕ್ಷಣೀಯ. ಇಲ್ಲವಾದಲ್ಲಿ, ಈ ಕಾನೂನಿನ ಭೀತಿಯು ಸದಾಶಯದ ಟೀಕೆಗಳೂ ವ್ಯಕ್ತವಾಗದಂತೆ ಮಾಡಬಹುದು. ಟೀಕೆಗಳನ್ನು ಸ್ವೀಕರಿಸುವ ಸಂಸ್ಥೆಗಳು ಗಟ್ಟಿಯಾಗುತ್ತವೆಯೇ ವಿನಾ, ದುರ್ಬಲ ಆಗುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.