ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ರಮೇಶ ಜಾರಕಿಹೊಳಿ ಪ್ರಕರಣ ಸಮಗ್ರ ತನಿಖೆಗೆ ಆದೇಶಿಸಿ

Last Updated 3 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಕೆಲಸ ಕೊಡಿಸುವ ಆಮಿಷವೊಡ್ಡಿ ಒಬ್ಬ ಯುವತಿಯನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ ರಾಜ್ಯ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದ ಆಡಿಯೊ ಮತ್ತು ವಿಡಿಯೊ ತುಣುಕುಗಳುಮಂಗಳವಾರ ದೃಶ್ಯಮಾಧ್ಯಮಗಳಲ್ಲಿ ಪ್ರಸಾರವಾದ ಪರಿಣಾಮವಾಗಿ ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಉಂಟಾಗಿತ್ತು. ಸಿ.ಡಿ.ಯಲ್ಲಿ ಅಸಭ್ಯ ಸಂಭಾಷಣೆ ಮತ್ತು ದೃಶ್ಯಗಳಿವೆ. ಸಂತ್ರಸ್ತೆಯ ಪರವಾಗಿ ಸಾಮಾಜಿಕ ಕಾರ್ಯಕರ್ತರೊಬ್ಬರು ಇದಕ್ಕೆ ಸಂಬಂಧಿಸಿ ಬೆಂಗಳೂರಿನ ಪೊಲೀಸ್ ಠಾಣೆಯೊಂದರಲ್ಲಿ ದೂರು ನೀಡಿದ್ದಾರೆ. ‘ನಾನು ತಪ್ಪು ಮಾಡಿಲ್ಲ. ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ’ ಎಂದು ಮಂಗಳವಾರ ರಾತ್ರಿ ಹೇಳಿದ್ದ ಸಚಿವರು, ವಿರೋಧ ಪಕ್ಷಗಳ ಮತ್ತು ಸ್ವಪಕ್ಷೀಯರ ಒತ್ತಡಕ್ಕೆ ಮಣಿದು ಬುಧವಾರ ಬೆಳಿಗ್ಗೆ ರಾಜೀನಾಮೆ ನೀಡಿದ್ದಾರೆ.ರಾಜೀನಾಮೆ ನೀಡುವ ಮೂಲಕ, ಅವರು ಪಕ್ಷಕ್ಕೆ ಹಾಗೂ ಸರ್ಕಾರಕ್ಕೆ ಇನ್ನೂ ಹೆಚ್ಚಿಗೆ ಆಗಬಹುದಾಗಿದ್ದ ಮುಜುಗರವನ್ನು ತಪ್ಪಿಸಿದ್ದಾರೆ. ವಿರೋಧ ಪಕ್ಷಗಳಿಗೆ ಈ ಪ್ರಕರಣವು ದೊಡ್ಡ ಅಸ್ತ್ರವಾಗಿ ಒದಗಿಬಂದಿತ್ತು. ವಿಧಾನಮಂಡಲದ ಅಧಿವೇಶನ ಗುರುವಾರದಿಂದ ಆರಂಭವಾಗಲಿದೆ. ಅಲ್ಲಿ ಆಡಳಿತಾರೂಢ ಪಕ್ಷವು ಮುಖ ಮುಚ್ಚಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತಿತ್ತು. ರಾಜೀನಾಮೆಯಿಂದಾಗಿ ಇಕ್ಕಟ್ಟಿನ ಸ್ಥಿತಿ ತುಸು ಸಡಿಲವಾಗಬಹುದು. ಆದರೆ, ರಾಜೀನಾಮೆಯಿಂದ ಈ ಪ್ರಕರಣಕ್ಕೆ ತಾರ್ಕಿಕ ಅಂತ್ಯ ದೊರೆತಂತಾಗದು.‘ಇದು ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ರಾಜಕೀಯ ವಿರೋಧಿಗಳು ಮಾಡಿರುವ ಪಿತೂರಿ. ಯಾವುದೋ ವಿಡಿಯೊ ಮತ್ತು ಆಡಿಯೊ ವಿರೂಪಗೊಳಿಸಿ ನನ್ನ ತೇಜೋವಧೆ ಮಾಡಲಾಗಿದೆ. ಈ ಬಗ್ಗೆ ಸಿಐಡಿ ಅಥವಾ ಸಿಬಿಐ ತನಿಖೆ ನಡೆಸಬೇಕು’ ಎಂದು ರಮೇಶ‌ ಜಾರಕಿಹೊಳಿ ಮಂಗಳವಾರ ಹೇಳಿರುವ ಮಾತಿಗೆ ಬದ್ಧರಾಗಿರಬೇಕು. ಈ ಪ್ರಕರಣದ ಸಮಗ್ರ ತನಿಖೆಗೆ ಸರ್ಕಾರ ಆದೇಶಿಸಬೇಕು.

ಸಚಿವರು, ಶಾಸಕರು ಹೀಗೆ ಲೈಂಗಿಕ ಹಗರಣಗಳಲ್ಲಿ ಸಿಕ್ಕಿಬೀಳುವುದು, ಆ ಬಳಿಕ ರಾಜೀನಾಮೆ ಕೊಡುವುದು ಇದು ಮೊದಲೇನೂ ಅಲ್ಲ.ತಮ್ಮದು ಶಿಸ್ತಿನ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿ ವರಿಷ್ಠರಿಗೆ ಈಗಿನ ಪ್ರಕರಣ ನುಂಗಲಾರದ ತುತ್ತಾಗಿರುವುದು ಸುಳ್ಳೇನೂ ಅಲ್ಲ. ಸದನದಲ್ಲಿ ಮೊಬೈಲ್‍ ಫೋನ್‌ನಲ್ಲಿ ಕಾಮಪ್ರಚೋದಕ ದೃಶ್ಯಗಳಿದ್ದ ವಿಡಿಯೊ ನೋಡಿದ ಆರೋಪದಡಿ, ದೂರವಾಣಿಯಲ್ಲಿ ಮಹಿಳೆಯೊಬ್ಬರ ಜೊತೆಗೆ ಲೈಂಗಿಕತೆಗೆ ಸಂಬಂಧಿಸಿದ ಸಂಭಾಷಣೆ ನಡೆಸಿದ ಹಾಗೂ ಮಹಿಳೆಯೊಬ್ಬರ ಜೊತೆ ವಿವಾಹೇತರ ಸಂಬಂಧ ಹೊಂದಿದ್ದ ಆರೋಪ ಹೊತ್ತು ಸಚಿವರು, ಜನಪ್ರತಿನಿಧಿಗಳು ರಾಜೀನಾಮೆ ನೀಡಿದ ಉದಾಹರಣೆಗಳಿವೆ. ಕೆಲವರು ತನಿಖೆಯ ಬಳಿಕ ಆರೋಪಮುಕ್ತರಾಗಿ ಮತ್ತೆ ಅಧಿಕಾರಕ್ಕೆ ಬಂದ ಉದಾಹರಣೆಯೂ ಇದೆ. ರಮೇಶ ಜಾರಕಿಹೊಳಿ ಮೇಲೆ ಬಂದಿರುವ ಈ ಆರೋಪ ‘ಹನಿಟ್ರ್ಯಾಪ್’ ಪ್ರಕರಣ ಎಂಬ ವಾದವೂ ಇದೆ. ‘ಈ ರೀತಿ ಮಾಧ್ಯಮಗಳಲ್ಲಿ ವಿಡಿಯೊಗಳನ್ನು ಹರಿಬಿಟ್ಟು ಜನಪ್ರತಿನಿಧಿಗಳ ತೇಜೋವಧೆ ನಡೆಸುವ ಪ್ರಯತ್ನಗಳು ಹೆಚ್ಚಾಗುತ್ತಿವೆ. ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂಬ ಮಾತು ಕೂಡ ಇದೆ. ಇಂತಹ ಗೊಂದಲ, ಅನುಮಾನ ಕೊನೆಗೊಳಿಸಲು ಸರ್ಕಾರವು ಉನ್ನತ ಮಟ್ಟದ ತನಿಖೆ ನಡೆಸಬೇಕು. ತನಿಖೆಯನ್ನು ವೃಥಾ ವಿಳಂಬ ಮಾಡದೆ ಕಾಲಮಿತಿಯಲ್ಲಿ ಪೂರ್ಣಗೊಳಿಸಿ ವರದಿಯನ್ನು ಪಡೆಯಬೇಕು. ತನಿಖೆಯು ಪ್ರಕರಣಗಳನ್ನು ಮುಚ್ಚಿಹಾಕುವ ಸಾಧನ ಕೂಡ ಆಗಬಾರದು. ಸಾರ್ವಜನಿಕ ಜೀವನದಲ್ಲಿ ಇರುವವರು ವೈಯಕ್ತಿಕ ಚಾರಿತ್ರ್ಯ ಮತ್ತು ನಡವಳಿಕೆಗಳ ಬಗ್ಗೆ ಎಚ್ಚರದಿಂದ ಇರಬೇಕು. ನೈತಿಕವಾಗಿ ಅವರು ಸಮಾಜಕ್ಕೆ ಮಾದರಿ ಆಗಿರಬೇಕು ಎಂದು ಸಾರ್ವಜನಿಕರು ಬಯಸುವುದರಲ್ಲಿ ತಪ್ಪೇನಿಲ್ಲ. ಸಂಪೂರ್ಣ ಸತ್ಯ ಜನರಿಗೆ ತಿಳಿಯಬೇಕು. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಆಗಬೇಕು. ಇದೊಂದು ‘ಹನಿಟ್ರ್ಯಾಪ್’ ಪ್ರಕರಣ ಎಂದಾದಲ್ಲಿ, ಅದರ ಹಿಂದಿರುವ ವ್ಯಕ್ತಿಗಳು ಯಾರು, ಅವರ ಉದ್ದೇಶ ಏನಿತ್ತು ಎಂಬುದು ಬಹಿರಂಗವಾಗಬೇಕು. ರಮೇಶ ಅವರು ಅಧಿಕಾರಾರೂಢ ಪಕ್ಷದ ಜೊತೆ ಇರುವವರು. ಈ ಪ್ರಕರಣದ ತನಿಖೆಯ ಸಂದರ್ಭದಲ್ಲಿ ತನಿಖಾಧಿಕಾರಿಗಳು ಮುಕ್ತವಾಗಿ ಕೆಲಸ ನಿರ್ವಹಿಸುವಂತಹ ವಾತಾವರಣ ಸೃಷ್ಟಿಸಿಕೊಡುವ ಹೊಣೆ ಸರ್ಕಾರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT