ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‌ಮುಸ್ಲಿಮರ ಕುರಿತು ಭಾಗವತ್‌ ಮಾತು: ಅಲ್ಪಸಂಖ್ಯಾತರನ್ನು ಅನ್ಯರನ್ನಾಗಿಸುವ ಯತ್ನ

ಸಂಪಾದಕೀಯ
Last Updated 13 ಜನವರಿ 2023, 19:31 IST
ಅಕ್ಷರ ಗಾತ್ರ

ಆರ್‌ಎಸ್‌ಎಸ್‌ ಸರಸಂಘಚಾಲಕ ಮೋಹನ್‌ ಭಾಗವತ್‌ ಅವರು ಸಂಘ ಪರಿವಾರದ ನಿಯತಕಾಲಿಕಗಳಾದ ‘‍ಪಾಂಚಜನ್ಯ’ ಮತ್ತು ‘ಆರ್ಗನೈಸರ್‌’ನ ಸಂಪಾದಕರಿಗೆ ನೀಡಿದ ಸಂದರ್ಶನವು ಅಪಾಯಕಾರಿ ಸಂದೇಶಗಳನ್ನು ರವಾನಿಸಿದೆ; ದೇಶದಲ್ಲಿ ಈಗ ಇರುವ ವಿಭಜನಕಾರಿ ವಾತಾವರಣ ವನ್ನು ಇನ್ನಷ್ಟು ಉಲ್ಬಣಗೊಳಿಸುವಂತಿದೆ. ‘ಹಿಂದೂ ಸಮಾಜ’ದ ಕುರಿತು ಅವರು ಆಡಿರುವ ಮಾತುಗಳು ಅತ್ಯಂತ ಆಕ್ರಮಣಕಾರಿ ಸ್ವರೂಪವನ್ನು ಹೊಂದಿವೆ. ಸಮಾಜ ಮತ್ತು ಪೌರರ ಕುರಿತು ಸಂವಿಧಾನದಲ್ಲಿ ಅಡಕವಾಗಿರುವ ಪರಿಕಲ್ಪನೆಗಳಿಗೆ ಅನುಗುಣವಾಗಿ ಈ ಮಾತುಗಳು ಇರಲಿಲ್ಲ. ಹಿಂದೂ ಮತ್ತು ಮುಸ್ಲಿಂ ಸಮುದಾಯಗಳು ಪರಸ್ಪರ ಸಂಘರ್ಷದಲ್ಲಿರುವ ಭಿನ್ನ ಸಮುದಾಯಗಳು ಎಂದು ಅವರು ಪರಿಗಣಿಸಿರುವಂತಿದೆ. ಆದರೆ, ಇಂತಹ ವಿಭಜನೆ ಮತ್ತು ವೈಷಮ್ಯವನ್ನು ಸಂವಿಧಾನವು ಒಪ್ಪುವುದಿಲ್ಲ. ಪೌರರಿಗೆ ಸಮಾನ ಹಕ್ಕುಗಳಿವೆ ಮತ್ತು ಅವರೆಲ್ಲರೂ ಕಾನೂನಿನ ಆಳ್ವಿಕೆಗೆ ಒಳಪಟ್ಟವರು ಎಂಬುದು ಸಂವಿಧಾನದಲ್ಲಿ ಇದೆ. ಸಮಾಜದ ಕುರಿತಂತೆ ಇಂತಹುದೊಂದು ವ್ಯಾಖ್ಯಾನವನ್ನು ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆ ಕೂಡ ಒಪ್ಪುವುದಿಲ್ಲ. ಭಾಗವತ್‌ ಅವರು ತಮ್ಮ ಈ ವಿಚಾರಧಾರೆಯನ್ನು ಆರ್‌ಎಸ್‌ಎಸ್‌ನ ಕೈಪಿಡಿಯಿಂದ ಎತ್ತಿಕೊಂಡಿರುವಂತಿದೆ.

ಮುಸ್ಲಿಮರು ತಮ್ಮ ‘ಮೇಲರಿಮೆಯ ಕುರಿತಂತೆ ಇರುವ ಭಾವ’ವನ್ನು ಕೈಬಿಟ್ಟು ಹಿಂದೂಗಳ ಜೊತೆಗೆ ಶಾಂತಿಯಿಂದ ಬದುಕಬೇಕು ಎಂಬುದು ಭಾಗವತ್‌ ಅವರ ವಾದವಾಗಿದೆ. ಇದು ಆ ಸಮುದಾಯದ ಬಗೆಗಿನ ಕಲ್ಪಿತ ಗೊಣಗಾಟ ಮತ್ತು ದುರುದ್ದೇಶದಿಂದ ಮಾತ್ರ ಮಾಡಲಾಗಿರುವ ಆಪಾದನೆ. ಮೇಲರಿಮೆ ಅಥವಾ ಕೀಳರಿಮೆ ಎಂಬುದು ವ್ಯಕ್ತಿಗಳ ವೈಯಕ್ತಿಕ ಅನುಭವ ಅಥವಾ ಲೋಕಗ್ರಹಿಕೆಯ ಕಾರಣಕ್ಕೆ ಸೃಷ್ಟಿಯಾಗುವ ಭಾವ. ಆದರೆ, ಅದನ್ನು ಯಾವುದೇ ಒಂದು ಸಮುದಾಯಕ್ಕೆ ಇಡಿಯಾಗಿ ಆರೋಪಿಸಲು ಸಾಧ್ಯವಿಲ್ಲ. ಹಾಗೆ ಮಾಡಿದ್ದೇ ಆದರೆ ಅದು ಸಮುದಾಯವನ್ನು ಹಣಿಯುವ ಉದ್ದೇಶವನ್ನಷ್ಟೇ ಹೊಂದಿದೆ ಎಂಬುದು ಸ್ಪಷ್ಟ.

ಮುಸ್ಲಿಮರು ಈ ದೇಶದಲ್ಲಿ ಬದುಕಬೇಕಿದ್ದರೆ ಹೀಗೆಯೇ ಇರಬೇಕು ಎಂಬ ಷರತ್ತುಗಳನ್ನು ಹಾಕುವುದಕ್ಕೆ ಯಾರಿಗೂ ಅವಕಾಶ ಇಲ್ಲ. ಹಾಗೆಯೇ ಮುಸ್ಲಿಮರಿಗೆ ಈ ದೇಶದಲ್ಲಿ ಬದುಕಲು ಯಾರದ್ದೇ ಅನುಮತಿಯ ಅಗತ್ಯವೂ ಇಲ್ಲ. ‘1,000ಕ್ಕೂ ಹೆಚ್ಚು ವರ್ಷಗಳ ಯುದ್ಧ’ ಎಂಬ ಅವರ ಯೋಚನೆ ಕೂಡ ಕಲ್ಪಿತವೇ ಆಗಿದೆ. ಹಿಂದೂಗಳಲ್ಲಿ ಅಸುರಕ್ಷ ಭಾವವನ್ನು ಮೂಡಿಸಿ ತಾವು ಸಂತ್ರಸ್ತರು ಎಂದು ಭಾವಿಸುವಂತೆ ಮಾಡಲು ಸಂಘ ಪರಿವಾರವು ಸದಾ ಶ್ರಮಿಸುತ್ತಲೇ ಬಂದಿದೆ ಮತ್ತು ಇಂತಹ ಪ್ರಯತ್ನಗಳಿಗೆ ಉತ್ತೇಜನವನ್ನೂ ನೀಡುತ್ತಿದೆ. ‘ಯುದ್ಧದ ನಡುವೆ ಆಕ್ರಮಣಕಾರಿಯಾಗಿರುವುದು ಸಹಜ’, ‘ಒಳಗೇ ಇರುವ ಶತ್ರು’ ಎಂಬ ಅವರ ಮಾತುಗಳು ಆಕ್ರಮಣಕಾರಿಗಳಾಗಿ ಎಂಬ ಕರೆಯೇ ಆಗಿದೆ ಮತ್ತು ಅಲ್ಪಸಂಖ್ಯಾತ ಸಮುದಾಯದ ಮೇಲೆ ಬಲಪ್ರಯೋಗ ನಡೆಸಿ ಎಂಬ ಕುಮ್ಮಕ್ಕು ಕೂಡ ಇದರಲ್ಲಿ ಇದೆ. ಹಿಂಸೆಯನ್ನು ಸಹಜಗೊಳಿಸಿ, ಅದುವೇ ಸರಿ ಎಂಬಂತೆ ಮಾಡುವ ಪ್ರಯತ್ನ ಇದು; ಹಾಗೆಯೇ ಅಲ್ಪಸಂಖ್ಯಾತರನ್ನು ರಕ್ಕಸರೆಂದು, ಅನ್ಯರೆಂದು ಬಿಂಬಿಸಿ ಅವರನ್ನು ಬಹಿಷ್ಕರಿಸಿ, ದಮನಗೊಳಿಸಿ ತಾರತಮ್ಯದಿಂದ ನೋಡುವ ದುರುದ್ದೇಶವೂ ಇಂತಹ ಮಾತುಗಳ ಹಿಂದೆ ಇದೆ. ಭಾಗವತ್‌ ಅವರು ಈ ಅರ್ಥದಲ್ಲಿ ಮಾತುಗಳನ್ನು ಆಡಿದ್ದಾರೆಯೋ ಇಲ್ಲವೋ ತಿಳಿದಿಲ್ಲ– ಆದರೆ, ಯುದ್ಧದಲ್ಲಿ ಎಲ್ಲವೂ ಸರಿ ಎಂಬ ನಿಲುವಿಗೆ ಬಂದಿದ್ದೇ ಆದರೆ ಹತ್ಯೆ, ಹಲ್ಲೆ, ಪ್ರಾರ್ಥನೆ ವೇಳೆ ದಾಂದಲೆ, ನ್ಯಾಯದ ನಿರಾಕರಣೆ ಎಲ್ಲವೂ ಸರಿ ಎನಿಸಿಕೊಳ್ಳುತ್ತವೆ.

ಭಾಗವತ್‌ ಅವರ ಮಾತಿಗೆ ವಿವರಣೆಗಳು ಮತ್ತು ಸ್ಪಷ್ಟೀಕರಣಗಳು ಬಂದಿವೆ. ಅವರು ಹಿಂದೂಗಳನ್ನೂ ಕಮ್ಯುನಿಸ್ಟರನ್ನೂ ಉಲ್ಲೇಖಿಸಿದ್ದಾರೆ. ಅವರು ಯುದ್ಧ ಎಂದು ಕರೆದಿರುವುದು ವಿದೇಶಿ ಪ್ರಭಾವದ ವಿರುದ್ಧದ ಮತ್ತು ವಸಾಹತುಶಾಹಿ ಪ‍ರಂಪ‍ರೆಯ ವಿರುದ್ಧದ ಯುದ್ಧ ಎಂಬ ವಿವರಣೆಗಳನ್ನು ನೀಡಲಾಗಿದೆ. ಭಾಗವತ್‌ ಅವರದ್ದು ರಾಷ್ಟ್ರವಾದಿ ಹೇಳಿಕೆ ಎಂಬ ಸ್ಪಷ್ಟನೆಯನ್ನೂ ನೀಡಲಾಗಿದೆ. ಆದರೆ, ಭಾಗವತ್‌ ಅವರ ಮಾತುಗಳು ಮುಸ್ಲಿಮರನ್ನು ಗುರಿಯಾಗಿಸಿಕೊಂಡಿದ್ದವು ಎಂಬುದರಲ್ಲಿ ಸಂದೇಹವೇನೂ ಇಲ್ಲ. ಇದು ಸಂಘರ್ಷ ಮತ್ತು ದ್ವೇಷ ರಾಜಕಾರಣದ ಕೂಗು; ಭುಜಬಲದ ಬಹು ಸಂಖ್ಯಾತವಾದಿ ಭಾವನೆಯನ್ನು ಇನ್ನಷ್ಟು ಗಾಢಗೊಳಿಸುವ ಯತ್ನವೂ ಹೌದು. ಇಂತಹ ಮಾತುಗಳು ನಾವು ಅರ್ಥ ಮಾಡಿಕೊಂಡ ಸಂವಿಧಾನ ಮತ್ತು ದೇಶದಲ್ಲಿರುವ ಪ್ರಜಾತಂತ್ರಕ್ಕೆ ವಿರುದ್ಧವಾಗಿವೆ ಮತ್ತು ಅವೆರಡನ್ನೂ ನಿರ್ಲಕ್ಷಿಸುವಂತಹವಾಗಿವೆ. ನೆಲದ ಕಾನೂನು ಭಾಗವತ್‌ ಅವರಿಗೂ ಅನ್ವಯ ಆಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT