ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಇದು ಯುದ್ಧದ ಯುಗವಲ್ಲ– ಮೋದಿ ಮಾತನ್ನು ಪುಟಿನ್‌ ಅರ್ಥ ಮಾಡಿಕೊಳ್ಳಬೇಕು

Last Updated 22 ಸೆಪ್ಟೆಂಬರ್ 2022, 20:30 IST
ಅಕ್ಷರ ಗಾತ್ರ

‘ಇದು ಯುದ್ಧದ ಯುಗವಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ ಅವರಿಗೆ ಕಳೆದ ವಾರ ನಡೆದ ಶಾಂಘೈ ಸಹಕಾರ ಸಂಘಟನೆಯ ಸಭೆಯಲ್ಲಿ ಹೇಳಿರುವುದು ಭಾರತದ ಅತ್ಯಂತ ದಿಟ್ಟವಾದ ಮತ್ತು ಅರ್ಥಗರ್ಭಿತವಾದ ಸಂದೇಶವಾಗಿದೆ. ಯುದ್ಧನಿರತವಾಗಿರುವ ಎರಡೂ ಕಡೆಗಳಿಗೂ– ರಷ್ಯಾ ಮತ್ತು ಉಕ್ರೇನ್‌ ಹಾಗೂ ಪಾಶ್ಚಿಮಾತ್ಯ ದೇಶಗಳು– ಭಾರತದ ಧ್ವನಿ ಬಹಳ ಮಹತ್ವದ್ದಾಗಿದೆ. ಏಕೆಂದರೆ, ಬಹುಕಾಲದಿಂದ ಭಾರತವು ಪಾಲಿಸಿಕೊಂಡು ಬಂದಿರುವ ಅಲಿಪ್ತ ವಿದೇಶಾಂಗ ನೀತಿಗೆ ಅನುಗುಣವಾಗಿ ಭಾರತವುಈ ಯುದ್ಧದ ವಿಚಾರದಲ್ಲಿ ರಾಜಕೀಯವಾಗಿ ತಟಸ್ಥವಾಗಿದೆ; ಎರಡೂ ಕಡೆಯ ದೇಶಗಳ ಜತೆಗೆ ಸ್ನೇಹ ಸಂಬಂಧವನ್ನೇ ಅನುಸರಿಸಿದೆ. ರಷ್ಯಾವನ್ನು ಬಹಿರಂಗವಾಗಿ ಖಂಡಿಸಲು ನಿರಾಕರಿಸಿದರೂ ಯುದ್ಧಕ್ಕೆ ತನ್ನ ಸಮ್ಮತಿ ಇಲ್ಲ ಎಂದು ಪುಟಿನ್‌ ಅವರಿಗೆ ನೇರವಾಗಿಯೇ ಹೇಳುವ ಮೂಲಕ ಚತುರವಾಗಿ ನಡೆದುಕೊಂಡಿದೆ. ವಿಶ್ವಸಂಸ್ಥೆಯಲ್ಲಿ ರಷ್ಯಾ ವಿರುದ್ಧದ ನಿರ್ಣಯಗಳನ್ನು ಮತಕ್ಕೆ ಹಾಕಿದಾಗ ಭಾರತವು ಮತದಾನದಿಂದ ದೂರ ಉಳಿದಿದೆ. ಆದರೆ, ಮಾನವ ಹಕ್ಕುಗಳ ಉಲ್ಲಂಘನೆಯ ವಿಚಾರದ ನಿರ್ಣಯಗಳ ಪರವಾಗಿ ಮತ ಹಾಕಿದೆ. ಇದು ಯುದ್ಧದ ಯುಗವಲ್ಲ ಎಂಬ ಭಾರತದ ನಿಲುವನ್ನು ನೇರವಾಗಿ ಪುಟಿನ್‌ ಅವರಿಗೆ ಹೇಳುವುದಕ್ಕೆ ಭಾರತದ ಸೂಕ್ಷ್ಮ, ತತ್ವಬದ್ಧ ಮತ್ತು ವಾಸ್ತವಿಕವಾದ ಧೋರಣೆಯಿಂದಾಗಿಯೇ ಮೋದಿ ಅವರಿಗೆ ಸಾಧ್ಯವಾಗಿದೆ. ಚೀನಾ ಕೂಡ ಸಂದೇಶವನ್ನು ಗಮನದಲ್ಲಿ ಇರಿಸಿಕೊಳ್ಳಬಹುದು. ಪ್ರಾಚೀನ ನಾಗರಿಕತೆ, ವಸಾಹತೋತ್ತರ ದೇಶವಾಗಿ, ಜಗತ್ತಿನ ಅತ್ಯಂತ ದೊಡ್ಡ ಪ್ರಜಾಸತ್ತೆಯಾಗಿ ಮತ್ತು ಅಲಿಪ್ತ ನೀತಿಯ ದೇಶವಾಗಿ ಜಾಗತಿಕ ವೇದಿಕೆಗಳಲ್ಲಿ ಭಾರತದ ಧ್ವನಿಗೆ ಸದಾ ಮನ್ನಣೆ ಇದೆ. ಈಗ, ಪ್ರವರ್ಧ ಮಾನಕ್ಕೆ ಬರುತ್ತಿರುವ ಶಕ್ತಿ ಎಂಬ ಹೆಸರಿನಲ್ಲಿಯೂ ಭಾರತದ ಧ್ವನಿ ಮಹತ್ವದ್ದೇ ಆಗಿದೆ.

ರಷ್ಯಾಕ್ಕೆ ಯುದ್ಧದಲ್ಲಿ ತೀವ್ರ ಹಿನ್ನಡೆ ಆಗಿದೆ. ಉಕ್ರೇನ್‌ನ ಈಶಾನ್ಯ ಭಾಗದಲ್ಲಿ ರಷ್ಯಾ ವಶಪಡಿಸಿಕೊಂಡಿದ್ದ ಕೆಲವು ಪ್ರದೇಶಗಳನ್ನು ಉಕ್ರೇನ್‌ ಮರಳಿ ಪಡೆದುಕೊಂಡಿದೆ. ಇಂತಹ ಸಂದರ್ಭದಲ್ಲಿ ಮೋದಿ ಅವರು ಯುದ್ಧ ಬೇಡ ಎಂಬ ಹೇಳಿಕೆ ನೀಡಿದ್ದಾರೆ. ರಷ್ಯಾದ ಸೇನೆಯು ಬಹಳ ಬಲಯುತವಾಗಿದೆ ಎಂದು ಜಗತ್ತು ನಂಬುವಂತೆ ಪುಟಿನ್‌ ಅವರ ದೀರ್ಘ ಆಳ್ವಿಕೆಯು ಮಾಡಿತ್ತು. ಆದರೆ, ಅದು ವಾಸ್ತವವಲ್ಲ ಎಂಬುದನ್ನು ಏಳು ತಿಂಗಳ ಯುದ್ಧವು ತೋರಿಸಿಕೊಟ್ಟಿದೆ. ರಷ್ಯಾ ಸೇನೆಯ ದೌರ್ಬಲ್ಯ ಈಗ ಬಯಲಾಗಿದೆ. ಅತ್ಯುತ್ತಮ ತರಬೇತಿ ಮತ್ತು ಬದ್ಧತೆ ಯನ್ನಾಗಲೀ ಅತ್ಯಾಧುನಿಕ ಸಲಕರಣೆಗಳನ್ನಾಗಲೀ ಹೊಂದಿಲ್ಲ ಎಂಬುದು ಸಾಬೀತಾಗಿದೆ. ರಷ್ಯಾದ ಅರ್ಥ ವ್ಯವಸ್ಥೆಯನ್ನು ಗಟ್ಟಿಮುಟ್ಟಾಗಿ ಕಟ್ಟುವಲ್ಲಿಯೂ ಪುಟಿನ್‌ ಅವರು ವಿಫಲರಾಗಿದ್ದಾರೆ ಎಂಬುದು ರಷ್ಯಾದ ಮಟ್ಟಿಗೆ ಇನ್ನಷ್ಟು ಕೆಟ್ಟ ಸುದ್ದಿಯಾಗಿದೆ. ಇಂಧನ ಮತ್ತು ಸೇನಾ ಸಲಕರಣೆ ಉದ್ಯಮವನ್ನು ಬಿಟ್ಟರೆ ಉಳಿದಂತೆ ರಷ್ಯಾದ ಉದ್ಯಮ ವಲಯವು ಬಲಯುತವಾಗಿ ಇಲ್ಲ. ಹಾಗಾಗಿ, ಪಶ್ಚಿಮದ ದೇಶಗಳ ನಿರ್ಬಂಧಗಳನ್ನು ಬಹಳ ಕಾಲ ತಾಳಿಕೊಳ್ಳುವುದು ಸಾಧ್ಯವಿಲ್ಲ.

ಪುಟಿನ್‌ ಅವರ ವೈಫಲ್ಯವನ್ನು ಇಡೀ ಜಗತ್ತು ನೋಡುತ್ತಿರುವ ಈ ಹೊತ್ತಿನಲ್ಲಿ ಮೋದಿ ಅವರ ಬುದ್ಧಿವಾದ ಎಂದೂ ಹೇಳಬಹುದಾದ ಸಲಹೆಯು ಬಂದಿದೆ. ಈ ಸಲಹೆಯು ಯುದ್ಧವನ್ನು ಕೊನೆಗೊಳಿಸಿ ನಷ್ಟವನ್ನು ಕಡಿಮೆ ಮಾಡಿಕೊಳ್ಳುವ ಅವಕಾಶವನ್ನು ಪುಟಿನ್‌ ಅವರ ಮುಂದೆ ತೆರೆದಿಟ್ಟಿದೆ. ದುರದೃಷ್ಟವೆಂದರೆ, ಈ ಅವಕಾಶವನ್ನು ಬಳಸಿಕೊಳ್ಳುವಲ್ಲಿಯೂ ಪುಟಿನ್‌ ವಿಫಲರಾಗಿದ್ದಾರೆ. ಇನ್ನಷ್ಟು ಸೈನಿಕರನ್ನು ನಿಯೋಜಿಸುವುದಾಗಿ ಬುಧವಾರ ಹೇಳಿದ್ದಾರೆ. ಪಶ್ಚಿಮದ ದೇಶಗಳಿಗೆ ಬೆದರಿಕೆ ಒಡ್ಡುವ ಮೂಲಕ ತಮ್ಮ ನಿಲುವನ್ನು ಇನ್ನಷ್ಟು ಕಠಿಣಗೊಳಿಸಿದ್ದಾರೆ. ರಷ್ಯಾದ ಸಾರ್ವಭೌಮತ್ವಕ್ಕೆ ಅಡ್ಡಿ ಎದುರಾದರೆ ಅಣ್ವಸ್ತ್ರದ ಬಳಕೆಯೂ ಆಗಬಹುದು ಎಂದು ನೀಡಿದ್ದ ಹೇಳಿಕೆಯು ಬರಿಮಾತಲ್ಲ ಎಂದೂ ಪುಟಿನ್‌ ಹೇಳಿದ್ದಾರೆ. ಇದು ತಮ್ಮ ಮುಖ ಉಳಿಸಿಕೊಳ್ಳುವುದಕ್ಕಾಗಿ ಪುಟಿನ್‌ ಅವರು ಆಡಿದ ಮಾತು ಆಗಿರಬಹುದು. ಆದರೆ ಯುದ್ಧವನ್ನು ಇನ್ನಷ್ಟು ತೀವ್ರಗೊಳಿಸುವ ಪ್ರಯತ್ನ ಮೂರ್ಖತನ. ಉಕ್ರೇನ್‌ಗೆ ಇನ್ನೂ ಹೆಚ್ಚು ಸೈನಿಕರನ್ನು ಕಳುಹಿಸುವ ನಿರ್ಧಾರದ ವಿರುದ್ಧ ರಷ್ಯಾದಲ್ಲಿ ಪ್ರತಿಭಟನೆ ಆರಂಭವಾಗಿದೆ. ದೇಶದ ಒಳಗೆ ಮತ್ತು ಹೊರಗೆ ಯುದ್ಧಕ್ಕೆ ಇಷ್ಟೊಂದು ಪ್ರತಿರೋಧ ವ್ಯಕ್ತವಾಗುತ್ತಿದ್ದರೂ ಪುಟಿನ್‌ ಅವರು ಮೂಢನಂತೆ ವರ್ತಿಸುತ್ತಿದ್ದಾರೆ. ಪ್ರತಿಭಟನೆ ನಡೆಸಿದ 1300ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಯುದ್ಧ ಬೇಡ ಎಂದು ಬುದ್ಧಿಮಾತು ಹೇಳಿದವರನ್ನೇ ದಮನ ಮಾಡಲು ಹೊರಟಿದ್ದಾರೆ. ಯುದ್ಧ ಬೇಡ ಎಂದು ಎಲ್ಲೆಡೆ ವ್ಯಕ್ತವಾಗುತ್ತಿರುವ ಅಭಿಪ್ರಾಯವನ್ನು ಒಂದು ಅವಕಾಶವಾಗಿ ಬಳಸಿಕೊಂಡು ಪುಟಿನ್‌ ಅವರು ಯುದ್ಧವನ್ನು ಕೊನೆಗಾಣಿ ಸಬೇಕಿದೆ. ಜಗತ್ತಿನ ಆಹಾರ, ಇಂಧನ, ರಸಗೊಬ್ಬರ ಬಿಕ್ಕಟ್ಟಿಗೆ ಪುಟಿನ್‌ ಅವರ ಯುದ್ಧವೇ ಕಾರಣ ಎಂಬುದರತ್ತ ಬೊಟ್ಟು ಮಾಡಿದ ಮೋದಿ ಅವರು ಪುಟಿನ್‌ಗೆ ದಿಟ್ಟವಾದ ಸಲಹೆಯನ್ನೇ ಕೊಟ್ಟಿದ್ದಾರೆ. ಈ ಮೂಲಕ ಮುತ್ಸದ್ದಿತನ ಮೆರೆದಿದ್ದಾರೆ. ಜೊತೆಗೆ, ಜಾಗತಿಕ ಮಟ್ಟದಲ್ಲಿ ದೊಡ್ಡ ಪಾತ್ರ ವಹಿಸಲು ಸಿದ್ಧ ಎಂಬ ಸಂದೇಶವನ್ನೂ ಸಾರಿದ್ದಾರೆ. ಭಾರತವು ಸಂಧಾನಕಾರನ ಪಾತ್ರವನ್ನು ವಹಿಸಬಹುದು, ರಷ್ಯಾ ಮತ್ತು ಉಕ್ರೇನ್‌ ಮಾತುಕತೆಗೆ ವೇದಿಕೆ ಸಿದ್ಧಪಡಿಸಿ, ಯುದ್ಧ ಕೊನೆಯಾಗಲು ನೆರವಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT