ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೃಷ್ಟಿಯಾಗದ ಐತಿಹಾಸಿಕ ಕ್ಷಣ: ಮಹಿಳೆಗೆ ಕಾನೂನು ಹಕ್ಕು ನಿರಾಕರಣೆ ಖಂಡನೀಯ

Last Updated 17 ಅಕ್ಟೋಬರ್ 2018, 18:21 IST
ಅಕ್ಷರ ಗಾತ್ರ

ಶಬರಿಮಲೆ ದೇವಾಲಯದಲ್ಲಿ ನಿರ್ಮಾಣವಾಗಬೇಕಿದ್ದ ಐತಿಹಾಸಿಕ ಕ್ಷಣ ಕಡೆಗೂ ಘಟಿಸಲಿಲ್ಲ. ಮಹಿಳೆಯನ್ನು ಎರಡನೇ ದರ್ಜೆ ಪ್ರಜೆಯಾಗಿ ಕಾಣುವಂತಹ ತಾರತಮ್ಯದ ಭಾವನೆಗಳೇ ಮೇಲುಗೈ ಪಡೆದುಕೊಂಡವು. ಶಬರಿಮಲೆ ದೇವಾಲಯ ಪ್ರವೇಶಕ್ಕೆ 10ರಿಂದ 50 ವರ್ಷದೊಳಗಿನ ಮಹಿಳೆಯರಿಗೆ ಇದ್ದ ನಿಷೇಧವನ್ನು ಸೆಪ್ಟೆಂಬರ್ 28ರಂದು ಸುಪ್ರೀಂ ಕೋರ್ಟ್‌ ರದ್ದುಪಡಿಸಿದ್ದು ಮಹತ್ವದ ತೀರ್ಪು.

ತೀರ್ಪು ಪ್ರಕಟವಾದ ನಂತರ ಇದೇ ಮೊದಲ ಬಾರಿಗೆ ತಿಂಗಳ ಪೂಜೆಗಾಗಿ ದೇವಾಲಯದ ಬಾಗಿಲು ತೆರೆದ ಸಂದರ್ಭದಲ್ಲಿ ದೇವಾಲಯ ಪ್ರವೇಶಿಸುವ ಮಹಿಳೆಯರ ಪ್ರಯತ್ನಕ್ಕೆ ಹಿಂಸಾತ್ಮಕ ರೀತಿಯಲ್ಲಿ ತಡೆ ಒಡ್ಡಿದ್ದು ಖಂಡನೀಯ. ಮಹಿಳೆಯರ ಪ್ರವೇಶ ವಿರೋಧಿಸುತ್ತಿದ್ದ ಪ್ರತಿಭಟನಾ ಗುಂಪುಗಳಿಂದ ಪತ್ರಕರ್ತೆಯರ ಮೇಲೆ ಹಲ್ಲೆ, ದೌರ್ಜನ್ಯ ನಡೆದಿರುವುದಂತೂ ಆಘಾತಕಾರಿ. ವರದಿಗಾರಿಕೆಯ ಕಾರ್ಯ ನಿರ್ವಹಿಸಲೂ ಪತ್ರಕರ್ತರಿಗೆ ಅಡ್ಡಿಪಡಿಸಿದ್ದು ಅಕ್ಷಮ್ಯ. ನೂರಾರು ಪೊಲೀಸರ ಉಪಸ್ಥಿತಿಯಲ್ಲೇ ಇಂತಹ ಹಿಂಸಾತ್ಮಕ ನಡೆ ಪ್ರದರ್ಶಿಸಿರುವುದು ವಿಪರ್ಯಾಸ.

ಪ್ರತಿಭಟನೆ ಹಾಗೂ ಗೊಂದಲಗಳ ನಡುವೆಯೂ ಅನೇಕ ಯುವ ಮಹಿಳಾ ಯಾತ್ರಾರ್ಥಿಗಳು ದೇವಾಲಯದ ಮೆಟ್ಟಿಲುಗಳನ್ನು ಏರಲು ಯತ್ನಿಸಿದರು. ಆದರೆ, ದಾದಾಗಿರಿ ಹಾಗೂ ಘೆರಾವ್‌ಗಳ ಮೂಲಕಮಹಿಳಾ ಭಕ್ತರನ್ನು ಬೆದರಿಸುವ ಪ್ರಯತ್ನ ಮಾಡಲಾಯಿತು. ಹೀಗಾಗಿ ಪೂಜಿಸಲು ತಮಗಿರುವ ಹಕ್ಕನ್ನು ಚಲಾಯಿಸುವುದು ಈ ಮಹಿಳೆಯರಿಗೆ ಸಾಧ್ಯವಾಗಲಿಲ್ಲ.ಕಾನೂನು ಕೈಗೆತ್ತಿಕೊಂಡು ‘ಭಕ್ತರು’ ನಡೆಸಿದ ದಾಳಿಗಳು ಭಾರತೀಯ ಸಂಸ್ಕೃತಿ, ಪರಂಪರೆ ಹೆಸರಲ್ಲಿ ಮಹಿಳೆ ಮೇಲೆ ಹೇರುವ ದ್ವಿಮುಖ ಧೋರಣೆಗಳು ಹಾಗೂ ಆಷಾಢಭೂತಿತನಕ್ಕೆಮತ್ತೊಮ್ಮೆ ಪ್ರತೀಕವಾಯಿತು.

ಸುಪ್ರೀಂ ಕೋರ್ಟ್ ತೀರ್ಪು ಪಾಲಿಸಬೇಕಾದದ್ದು ಸಾಂವಿಧಾನಿಕ ಕರ್ತವ್ಯ.ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಮರುಪರಿಶೀಲನಾ ಅರ್ಜಿ ಸಲ್ಲಿಸುವುದಿಲ್ಲ ಎಂದು ಹೇಳಿದ್ದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ಅವರು, ದೇಗುಲಪ್ರವೇಶಕ್ಕೆಮಹಿಳೆಯರಿಗೆ ತಡೆ ಒಡ್ಡಿದರೆ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಆದರೆ, ಮಹಿಳೆಯರ ದೇವಾಲಯ ಪ್ರವೇಶ ಶಾಂತಿಯುತವಾಗಿರುವಂತೆ ನೋಡಿಕೊಳ್ಳಬೇಕಾದದೊಡ್ಡ ಹೊಣೆಗಾರಿಕೆ ನಿಭಾಯಿಸುವಲ್ಲಿ ಕೇರಳ ಸರ್ಕಾರ ಕಡೆಗೂ ವಿಫಲವಾಯಿತು.

ಕಳೆದ ತಿಂಗಳು, ಸುಪ್ರೀಂ ಕೋರ್ಟ್ ತೀರ್ಪು ಪ್ರಕಟವಾದಾಗ ಕಾಂಗ್ರೆಸ್ ಹಾಗೂ ಬಿಜೆಪಿ ಮೃದು ಧೋರಣೆ ತಳೆದಿದ್ದವು. ಆದರೆ ಈಗ ಗೊಂದಲ ಸೃಷ್ಟಿಸಿ ರಾಜಕೀಯ ಅನುಕೂಲ ಪಡೆದುಕೊಳ್ಳುವ ಪ್ರಯತ್ನ ಈ ರಾಜಕೀಯ ‍ಪಕ್ಷಗಳಲ್ಲಿರುವುದು ಸ್ಪಷ್ಟ.ಸುಪ್ರೀಂ ಕೋರ್ಟ್ ತೀರ್ಪಿಗೆ ತಲೆಬಾಗಿರುವ ನಾಸ್ತಿಕರಾಗಿರುವ ಮುಖ್ಯಮಂತ್ರಿ ಹಾಗೂ ಅವರ ಸಂಪುಟವನ್ನು ಟೀಕೆಗೆ ಗುರಿಪಡಿಸಲಾಗಿದೆ.ಧಾರ್ಮಿಕ ಸಂಗತಿಯನ್ನೂ ಮತ ಗಳಿಕೆಗೆ ಸಾಧನವಾಗಿ ರಾಜಕೀಯಗೊಳಿಸುತ್ತಿರುವ ಪರಿ ದುರದೃಷ್ಟಕರ. ಕೇರಳದಲ್ಲಿ 140 ಸದಸ್ಯ ಬಲದ ವಿಧಾನಸಭೆಯಲ್ಲಿ 2016ರಲ್ಲಿ ಒಂದು ಸೀಟು ಗೆಲ್ಲುವ ಮೂಲಕ ಬಿಜೆಪಿ ಖಾತೆ ತೆರೆದಿದೆ ಎಂಬುದು ಇಲ್ಲಿ ಉಲ್ಲೇಖಾರ್ಹ.

ಬರೀ ರಾಜಕೀಯ ಪಕ್ಷಗಳಲ್ಲ, ನಾಯರ್ ಸರ್ವೀಸ್ ಸೊಸೈಟಿ ಹಾಗೂ ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಮ್‌ನಂತಹ ಸಶಕ್ತ ಸಾಮಾಜಿಕ, ರಾಜಕೀಯ ಸಂಘಟನೆಗಳೂ ತಮ್ಮದೇ ರಾಜಕೀಯ ಕಾರ್ಯಸೂಚಿಗಳ ಮೂಲಕ ವಾತಾವರಣವನ್ನು ಇನ್ನಷ್ಟು ಕದಡಿವೆ. ಜಾತಿ ಶ್ರೇಣೀಕರಣ ವ್ಯವಸ್ಥೆಯ ವಿರುದ್ಧ ಸಿಡಿದೆದ್ದಿದ್ದಂತಹ ಪರಂಪರೆ ಹೊಂದಿರುವ ಈ ಸಂಘಟನೆಗಳು ಪ್ರದರ್ಶಿಸಿರುವ ಪ್ರತಿಗಾಮಿ ಧೋರಣೆ ದುರದೃಷ್ಟಕರ.ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಅಸಮಾಧಾನಇದ್ದರೆ ಮೇಲ್ಮನವಿ ಸಲ್ಲಿಸಲು ಅವಕಾಶ ಇದ್ದೇ ಇದೆ. ಆದರೆ, ಅದು ಬಿಟ್ಟು ಹಿಂಸಾತ್ಮಕವಾಗಿ ಮಹಿಳೆಯರಿಗೆ ಅಡ್ಡಿಪಡಿಸಿದ ರೀತಿ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಣಕಿಸಿದಂತಾಗಿದೆ. ಕೇರಳದಲ್ಲಿ ಸಾಕ್ಷರತೆ ಪ್ರಮಾಣ ಅತ್ಯಂತ ಹೆಚ್ಚಿದೆ.

ಮಾನವ ಅಭಿವೃದ್ಧಿ ಸೂಚ್ಯಂಕಗಳು ಕೇರಳ ಸಾಧಿಸಿರುವ ಪ್ರಗತಿಗೆ ದ್ಯೋತಕವಾಗಿವೆ. ಆದರೆ ದೇವಾಲಯ ಪ್ರವೇಶ ವಿಚಾರದಲ್ಲಿ ಹೆಣ್ಣು ಗಂಡು ಎಂದು ಭೇದ ಮಾಡುವುದು ಸಂವಿಧಾನ ವಿರೋಧಿ. ಪ್ರಗತಿಪರ ರಾಜ್ಯ ಎಂಬ ಪ್ರತಿಷ್ಠೆಗೆ ಮಸಿ ಬಳಿಯುವಂತಹದ್ದು. ಪಿತೃಪ್ರಧಾನ ಮೌಲ್ಯಗಳನ್ನು ಎತ್ತಿಹಿಡಿಯವ ಇಂತಹ ತಾರತಮ್ಯದ ಆಚರಣೆಗಳು ಆಧುನಿಕ ಸಮಾಜ ನಿರ್ಮಾಣಕ್ಕೆ ಅಡ್ಡಿ. ಈ ವಿಚಾರವನ್ನು ಅಭಿವೃದ್ಧಿ ಮಂತ್ರ ಜಪಿಸುವ ರಾಜಕೀಯ ಪಕ್ಷಗಳು ಅರ್ಥ ಮಾಡಿಕೊಳ್ಳಬೇಕು.

ರಾಜಕೀಯ ಲಾಭಕ್ಕಾಗಿ ಧಾರ್ಮಿಕ ವಿಚಾರಗಳನ್ನು ಕೆದಕಿ ಸಮುದಾಯಗಳನ್ನು ಸಂಪ್ರೀತಗೊಳಿಸುವ ಈ ಪ್ರವೃತ್ತಿ ನಾಚಿಕೆಗೇಡಿನದು. ಇದಕ್ಕಾಗಿ ಮಹಿಳಾ ಹಕ್ಕುಗಳನ್ನು ಮೊಟಕುಗೊಳಿಸುವುದು ಸಲ್ಲದು. ಮೌನ ಶಕ್ತಿಯಾಗಿ ಮಹಿಳೆಯರೂ ಮುನ್ನೆಲೆಗೆ ಬರಬಹುದಾದ ಸಾಧ್ಯತೆಗಳಿಗೆ ಕುರುಡುಗಣ್ಣಾಗುವುದು ಬೇಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT