ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಶಾಲೆ ಪುನರಾರಂಭ– ಕಲಿಕೆಯೊಂದಿಗೆ ವಿದ್ಯಾರ್ಥಿಗಳ ಆರೋಗ್ಯದ ಕಾಳಜಿ ಅಗತ್ಯ

Last Updated 12 ಮೇ 2022, 22:00 IST
ಅಕ್ಷರ ಗಾತ್ರ

ಬಿಸಿಲ ಝಳ, ಮಳೆಯ ಕಣ್ಣಾಮುಚ್ಚಾಲೆ ಹಾಗೂ ಕೊರೊನಾದಸಂಭಾವ್ಯ ನಾಲ್ಕನೇ ಅಲೆಯ ಆತಂಕದ ನಡುವೆಯೇ ಮೇ 16ರಿಂದ ಶಾಲೆಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಸಾಮಾನ್ಯವಾಗಿ ಪ್ರತಿವರ್ಷ ಮೇ ಅಂತ್ಯಕ್ಕೆ ತೆರೆಯುತ್ತಿದ್ದ ಶಾಲೆಗಳು, ಈ ವರ್ಷ ಎರಡು ವಾರ ಮೊದಲೇ ಆರಂಭವಾಗುತ್ತಿವೆ. ಕೊರೊನಾ ಕಾರಣದಿಂದಾಗಿ ಎರಡು ವರ್ಷಗಳಿಂದ ಮಕ್ಕಳ ಕಲಿಕೆಗೆ ತೀವ್ರ ಹಿನ್ನಡೆಯಾಗಿತ್ತು. ಆ ಕೊರತೆಯನ್ನು ಸ್ವಲ್ಪವಾದರೂ ತುಂಬುವ ಉದ್ದೇಶದಿಂದ, ಪ್ರಸಕ್ತ ಬೇಸಿಗೆ ರಜೆಯನ್ನು ಕಡಿತಗೊಳಿಸಿ ಶಾಲೆಗಳನ್ನು ಬೇಗನೆ ಆರಂಭಿಸುವ ರಾಜ್ಯ ಸರ್ಕಾರದ ನಿರ್ಧಾರ ಸ್ವಾಗತಾರ್ಹ.

2022–23ನೇ ಶೈಕ್ಷಣಿಕ ವರ್ಷವನ್ನು ‘ಕಲಿಕಾ ಚೇತರಿಕೆ ವರ್ಷ’ವೆಂದು ಘೋಷಿಸಲಾಗಿದ್ದು, ಕೊರೊನಾ ಅವಧಿಯಲ್ಲಿ ಕುಂಠಿತಗೊಂಡಿರುವ ಮಕ್ಕಳ ಕಲಿಕೆಗೆ ಚೈತನ್ಯ ತುಂಬಲು ಸರ್ಕಾರ ಪ್ರಯತ್ನಿಸುತ್ತಿದೆ. ಕಲಿಕಾ ಹಿನ್ನಡೆಯನ್ನು ಸರಿದೂಗಿಸಲು ವಿಶೇಷ ಕಾರ್ಯಕ್ರಮವನ್ನು ರೂಪಿಸಿರುವ ದೇಶದ ಪ್ರಥಮ ರಾಜ್ಯ ಕರ್ನಾಟಕ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಹೇಳಿದ್ದಾರೆ. ಆತಂಕದ ಸನ್ನಿವೇಶದಲ್ಲೂ ಶಾಲೆಗಳನ್ನು ಆರಂಭಿಸುತ್ತಿರುವ ಹಾಗೂ ವಿದ್ಯಾರ್ಥಿಗಳ ಕಲಿಕೆಗಾಗಿ ವಿಶೇಷ ಕಾರ್ಯ
ಕ್ರಮಗಳನ್ನು ರೂಪಿಸಿರುವ ಸರ್ಕಾರದ ಉದ್ದೇಶ ಮೆಚ್ಚತಕ್ಕದ್ದು. ಆದರೆ, ಶಾಲೆಗಳ ಪುನರಾರಂಭಕ್ಕಷ್ಟೇ ಈ ಉತ್ಸಾಹ ಸೀಮಿತಗೊಳ್ಳಬಾರದು. ಮಕ್ಕಳ ಕಲಿಕೆಯನ್ನು ಪರಿಣಾಮಕಾರಿ ಆಗಿಸುವುದರ ಜೊತೆಗೆ, ಅವರಿಗೆ ಸುರಕ್ಷಿತ ವಾತಾವರಣವನ್ನೂ ಸರ್ಕಾರ ಕಲ್ಪಿಸಬೇಕು. ಕೊರೊನಾ ಆತಂಕದ ಕಾರಣದಿಂದಾಗಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂಜರಿಯುತ್ತಿರುವ ಪೋಷಕರಿಗೆ ಧೈರ್ಯ ತುಂಬುವ ಕೆಲಸವನ್ನು ಮೊದಲು ಮಾಡಬೇಕು.

ಐದರಿಂದ ಹನ್ನೆರಡು ವರ್ಷದೊಳಗಿನ‌ ಮಕ್ಕಳಿಗೆ ಲಸಿಕೆ ನೀಡುವುದಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಈ ಅವಕಾಶವನ್ನು ಬಳಸಿಕೊಂಡು ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಲಸಿಕೆಯನ್ನು ಶಾಲೆಗಳಲ್ಲಿಯೇ ನೀಡಲು ವ್ಯವಸ್ಥೆ ಮಾಡುವ ಮೂಲಕ, ಮಕ್ಕಳನ್ನು ಸುರಕ್ಷತಾ ವಲಯದೊಳಗೆ ತರುವುದನ್ನು ಸರ್ಕಾರ ಆದ್ಯತೆಯ ವಿಷಯವಾಗಿ ಪರಿಗಣಿಸಬೇಕು. ರಾಜ್ಯದ ಕೆಲವು ಭಾಗಗಳು ತೀವ್ರ ಬಿಸಿಲಿನ ಝಳದ ಬಾಧೆಗೊಳಗಾಗಿವೆ. ಆ ಪ್ರತಿಕೂಲ ಪರಿಸ್ಥಿತಿ ಮಕ್ಕಳನ್ನು ಗಾಸಿಗೊಳಿಸದಂತೆಯೂ ಎಚ್ಚರ ವಹಿಸಬೇಕಾಗಿದೆ. ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಕೇಂದ್ರ ಶಿಕ್ಷಣ ಸಚಿವಾಲಯ ಬಿಡುಗಡೆ ಮಾಡಿರುವ ಮಾರ್ಗಸೂಚಿಯು ಅಗತ್ಯವಿರುವ ಪ್ರದೇಶಗಳಲ್ಲಿ ಶಾಲೆಗಳನ್ನು ಮುಂಜಾನೆಯಿಂದ ಮಧ್ಯಾಹ್ನದವರೆಗೆ ನಡೆಸಬಹುದು ಎಂದು ಸೂಚಿಸಿದೆ. ಈ ಸಾಧ್ಯತೆಯನ್ನು ಸ್ಥಳೀಯ ಅಗತ್ಯಕ್ಕೆ ತಕ್ಕಂತೆ ರಾಜ್ಯದಲ್ಲೂ ಅನುಸರಿಸಬಹುದು.

ಕೊರೊನಾ ನಿಯಂತ್ರಣಕ್ಕಾಗಿ ಜಾರಿಗೆ ತಂದಿದ್ದ ಲಾಕ್‌ಡೌನ್‌ ಸಮಯದಲ್ಲಿ ಅನೇಕ ಮಕ್ಕಳು ಬೇರೆ ಬೇರೆ ಕಾರಣಗಳಿಂದಾಗಿ ಶಾಲೆಗಳಿಂದ ಹೊರಗುಳಿದಿದ್ದಾರೆ. ವಲಸೆ ಕಾರ್ಮಿಕ ಕುಟುಂಬಗಳಲ್ಲಿನ ಎಳೆಯರು ಕಲಿಕೆಯನ್ನು ಬಿಟ್ಟು ಪೋಷಕರೊಂದಿಗೆ ದುಡಿಮೆಗೆ ಕೈಜೋಡಿಸಿದ್ದಾರೆ. ಅಂಥ ಮಕ್ಕಳನ್ನು ಗುರುತಿಸಿ ಶಾಲೆಗಳಿಗೆ ಮರಳಿ ಕರೆತರುವ ನಿಟ್ಟಿನಲ್ಲಿ ಸರ್ಕಾರ ಎಲ್ಲ ಪ್ರಯತ್ನಗಳನ್ನೂ ನಡೆಸಬೇಕಾಗಿದೆ. ಮೇ 16ರಿಂದ 20ರವರೆಗೆ ದಾಖಲಾತಿ ಆಂದೋಲನ ನಡೆಸುವುದಾಗಿ ಹಾಗೂ ಜುಲೈ ಕೊನೆಯ ವೇಳೆಗೆ ದಾಖಲಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದಾಗಿ ಶಿಕ್ಷಣ ಇಲಾಖೆ ಹೇಳಿದೆ. ಕಲಿಕಾ ಪುನಶ್ಚೇತನದ ಜೊತೆಗೆ ಮಕ್ಕಳನ್ನು ಶಾಲೆಗಳಿಗೆ ಮರಳಿ ಕರೆತರುವ ಕೆಲಸವೂ ಶಿಕ್ಷಕರ ಮೇಲಿದೆ. ಶಿಕ್ಷಕರ ಕೊರತೆ ಕೂಡ ಅನೇಕ ಶಾಲೆಗಳನ್ನು ಬಾಧಿಸುತ್ತಿದೆ. 27 ಸಾವಿರ ಅತಿಥಿ ಶಿಕ್ಷಕರನ್ನು ಒಂದು ವರ್ಷದ ಮಟ್ಟಿಗೆ ನೇಮಿಸಿಕೊಳ್ಳುವ ಮೂಲಕ ಶಿಕ್ಷಕರ ಕೊರತೆಗೆ ತಕ್ಷಣದ ಪರಿಹಾರ ಕಂಡುಕೊಳ್ಳಲು ಸರ್ಕಾರ ಮುಂದಾಗಿದೆ. ಆದರೆ, ಶಿಕ್ಷಕರ ಕೊರತೆಯ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳದ ಹೊರತು ಗುಣಮಟ್ಟದ ಕಲಿಕೆ ಸಾಧ್ಯವಾಗುತ್ತದೆಂದು ನಿರೀಕ್ಷಿಸಲಾಗದು.

ಎರಡು ವರ್ಷಗಳ ಅವಧಿಯಲ್ಲಿ ಮಕ್ಕಳ ಕಲಿಕೆಯ ಮನಃಸ್ಥಿತಿಗಷ್ಟೇ ಧಕ್ಕೆಯಾಗಿಲ್ಲ, ಶಿಕ್ಷಕರ ಕಲಿಸುವ ಮನಃಸ್ಥಿತಿಗೂ ಪೆಟ್ಟುಬಿದ್ದಿದೆ. ಬೋಧನೆಗಿಂತಲೂ ಅನ್ಯಕಾರ್ಯಗಳೇ ಶಿಕ್ಷಕರನ್ನು ಹಣ್ಣಾಗಿಸಿವೆ. ಮಕ್ಕಳ ಜೊತೆಗೆ ಶಿಕ್ಷಕರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹುರಿದುಂಬಿಸುವ ಕೆಲಸವನ್ನು ಸರ್ಕಾರ ಮಾಡಬೇಕಾಗಿದೆ. ಬೋಧನೆಯನ್ನು ಹೊರತುಪಡಿಸಿದ ಕಾರ್ಯಕ್ರಮಗಳಿಂದ ಈ ವರ್ಷವಾದರೂ ಶಿಕ್ಷಕರನ್ನು ಹೊರಗಿಟ್ಟು, ಅವರ ಸಂಪೂರ್ಣ ಶಕ್ತಿ ಶೈಕ್ಷಣಿಕ ಚಟುವಟಿಕೆಗಳಿಗೆ ದೊರೆಯುವಂತೆ ನೋಡಿಕೊಳ್ಳುವುದು ಮಕ್ಕಳ ಹಿತಾಸಕ್ತಿಯ ದೃಷ್ಟಿಯಿಂದ ಅಗತ್ಯವಾದುದು. ಸುರಕ್ಷಿತ ಹಾಗೂ ಉಲ್ಲಾಸದಾಯಕ ವಾತಾವರಣವು ಮಕ್ಕಳ ಕಲಿಕೆಗೆ ಅಗತ್ಯವಾಗಿರುವಂತೆಯೇ, ಅದನ್ನು ಸಾಧ್ಯವಾಗಿಸುವ ಶಿಕ್ಷಕರಿಗೂ ಉತ್ತೇಜಕ ಪರಿಸರ ಬೇಕು. ಅನಗತ್ಯ ಒತ್ತಡಗಳಿಂದ ಶಿಕ್ಷಕರನ್ನು ಪಾರು ಮಾಡಿ, ಮಕ್ಕಳ ಕಲಿಕೆಯಲ್ಲಿ ಅವರು ಸಂಪೂರ್ಣವಾಗಿ ತೊಡಗಿಕೊಳ್ಳುವಂತೆ ಆರೋಗ್ಯಕರ ಶೈಕ್ಷಣಿಕ ಪರಿಸರವನ್ನು ಸರ್ಕಾರ ರೂಪಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT