ಶನಿವಾರ, ಜುಲೈ 2, 2022
25 °C

ಸಂಪಾದಕೀಯ: ಪದ್ಮ ಪ್ರಶಸ್ತಿಗಳಿಗೆ ಆಯ್ಕೆ ರಾಜಕೀಯ ಲೆಕ್ಕಾಚಾರದ ನೆರಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೇಂದ್ರ ಸರ್ಕಾರ ನೀಡುವ ಪದ್ಮ ಪ್ರಶಸ್ತಿಗಳು ಹಲವು ಸಂದರ್ಭಗಳಲ್ಲಿ ವಿವಾದವನ್ನು ಹುಟ್ಟುಹಾಕಿವೆ. ಅದರಲ್ಲೂ, ಈಚಿನ ವರ್ಷಗಳಲ್ಲಿ ವಿವಾದಗಳು ಜಾಸ್ತಿ ಆಗಿವೆ. ಈ ಪ್ರಶಸ್ತಿಗಳನ್ನು ಅರ್ಹರಲ್ಲದವರಿಗೆ ನೀಡಲಾಗಿದೆ, ಅರ್ಹರಾದ ವ್ಯಕ್ತಿಗಳಿಗೆ ಪ್ರಶಸ್ತಿಗಳು ಸಿಕ್ಕಿಲ್ಲ ಎಂಬುದು ಪದ್ಮ ಪ್ರಶಸ್ತಿಗಳ ವಿಚಾರವಾಗಿ ಇರುವ ಮುಖ್ಯ ಟೀಕೆಗಳು. ಈ ಟೀಕೆಗಳು ಆಧಾರರಹಿತ ಅಲ್ಲ. ಸರ್ಕಾರಗಳು ಪ್ರಶಸ್ತಿಗಳಿಗೆ ವ್ಯಕ್ತಿಗಳನ್ನು ಆಯ್ಕೆ ಮಾಡುವಾಗ ವೈಯಕ್ತಿಕ ಪರಿಗಣನೆಗಳು, ರಾಜಕೀಯ ಲೆಕ್ಕಾಚಾರಗಳು ಮತ್ತು ಇತರ ಕೆಲವು ಲೆಕ್ಕಾಚಾರಗಳು ಕೆಲಸ ಮಾಡಿವೆ. ಕೆಲವು ಪ್ರಲೋಭನೆಗಳನ್ನು ಮೀರಲು ಯಾವ ಸರ್ಕಾರಕ್ಕೂ ಸಾಧ್ಯವಾಗಿಲ್ಲ ಎಂಬುದು ನಿಜ. ಕಲೆಯಂತಹ ಕ್ಷೇತ್ರಗಳಿಂದ ಪದ್ಮ ಪ್ರಶಸ್ತಿಗೆ ವ್ಯಕ್ತಿಗಳನ್ನು ಆಯ್ಕೆ ಮಾಡುವಾಗ ಕೂಡ ರಾಜಕೀಯ ಪ್ರಭಾವವು ಕೆಲಸ ಮಾಡಿದ ನಿದರ್ಶನಗಳು ಇವೆ. ಪದ್ಮ ಪ್ರಶಸ್ತಿಗಳ ಪಟ್ಟಿಯಲ್ಲಿ ರಾಜಕಾರಣಿಗಳು ನ್ಯಾಯಸಮ್ಮತವಲ್ಲದ ರೀತಿಯಲ್ಲಿ, ಇತರರಿಗಿಂತ ತುಸು ಹೆಚ್ಚಿನ ಪ್ರಾತಿನಿಧ್ಯವನ್ನು ಪಡೆದುಕೊಂಡಿದ್ದೂ ಇದೆ. ಉನ್ನತ ಪ್ರಶಸ್ತಿಗಳು ಅವರಿಗೆ ಲಭಿಸಿವೆ. ಇಬ್ಬರು ಹಿರಿಯ ಕಲಾವಿದರು – ಅನಿಂದ್ಯ ಚಟರ್ಜಿ ಮತ್ತು ಸಂಧ್ಯಾ ಮುಖರ್ಜಿ – ಈ ವರ್ಷದ ಪದ್ಮ ಪ್ರಶಸ್ತಿಗಳನ್ನು ತಿರಸ್ಕರಿಸಿದ್ದಾರೆ. ತಮಗೆ ಈ ಪ್ರಶಸ್ತಿಗಳು ಇದಕ್ಕೂ ಮೊದಲೇ ಬರಬೇಕಿತ್ತು ಎಂಬುದು ಅವರ ವಾದ. ಯಾವುದೇ ವರ್ಷದ, ಯಾವುದೇ ಪದ್ಮ ಪ್ರಶಸ್ತಿ ಪಟ್ಟಿಯೂ ಟೀಕೆಗಳಿಂದ ಪೂರ್ಣ ಪ್ರಮಾಣದಲ್ಲಿ ಹೊರತಾಗಿ ಇರಲಿಲ್ಲ. ಹಾಗೆಯೇ, ಸರ್ಕಾರಗಳ ಹಲವು ಆಯ್ಕೆಗಳನ್ನು ಸಾರ್ವಜನಿಕರು ಮುಕ್ತ ಮನಸ್ಸಿನಿಂದ ಪ್ರಶಂಸಿಸಿದ್ದೂ ಇದೆ.

ಈ ವರ್ಷದ ಪದ್ಮ ಪ್ರಶಸ್ತಿಗಳ ಪಟ್ಟಿಯಲ್ಲಿ 128 ಸಾಧಕರ ಹೆಸರುಗಳು ಇವೆ. ಹಲವರು ಈ ಪ್ರಶಸ್ತಿಗೆ ಅರ್ಹರು. ಅವರ ಆಯ್ಕೆಯಲ್ಲಿ ಲೋಪ ಹುಡುಕಲಾಗದು. ವಿಜ್ಞಾನಿಗಳು, ವೈದ್ಯರು, ಸಾಮಾಜಿಕ ಕಾರ್ಯಕರ್ತರು, ಕಲಾವಿದರು, ಕ್ರೀಡಾಪಟುಗಳು ಮತ್ತು ಉದ್ಯಮಿಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಕೋವಿಡ್‌ ವಿರುದ್ಧ ದೇಶ ನಡೆಸಿದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದವರೂ ಪ್ರಶಸ್ತಿಗಳಿಗೆ ಆಯ್ಕೆ ಆಗಿದ್ದಾರೆ. ಈ ಆಯ್ಕೆಗಳಲ್ಲಿ ರಾಜಕೀಯ ಲಾಭದ ಮೇಲೆ ಒಂದು ಕಣ್ಣಿತ್ತು ಎಂಬುದು ಸ್ಪಷ್ಟ. ಗೂಗಲ್‌ ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಸುಂದರ್ ಪಿಚೈ, ಮೈಕ್ರೊಸಾಫ್ಟ್ ಕಂಪನಿಯ ಸಿಇಒ ಸತ್ಯ ನಾದೆಲ್ಲ ಅವರ ಹೆಸರು ಪಟ್ಟಿಯಲ್ಲಿ ಇರುವುದಕ್ಕೆ ಕಾರಣವೇನು ಎಂಬ ಪ್ರಶ್ನೆಗಳು ಮೂಡಿವೆ. ಇವರು ದೇಶಕ್ಕೆ ನೇರವಾಗಿ ಯಾವುದೇ ಕೊಡುಗೆ ನೀಡಿದವರಲ್ಲ. ಆದರೆ, ವಿಶ್ವದರ್ಜೆಯ ಕಂಪನಿಗಳ ನಾಯಕತ್ವ ಸ್ಥಾನದಲ್ಲಿ ಇವರು ಇರುವುದು ಭಾರತದಲ್ಲಿನ ಆಡಳಿತ ನಿರ್ವಹಣಾ ಪ್ರತಿಭೆಗೆ ಒಂದು ಗರಿ ಎಂಬ ಸಮರ್ಥನೆ ಇವರ ಆಯ್ಕೆಗೆ ಇದೆ. ಆದರೆ, ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದಾಗ ಉತ್ತರಪ್ರದೇಶದ ಮುಖ್ಯಮಂತ್ರಿ ಆಗಿದ್ದ, ಬಿಜೆಪಿಯ ನಾಯಕರಾಗಿದ್ದ ಕಲ್ಯಾಣ್ ಸಿಂಗ್ ಅವರಿಗೆ ಮರಣೋತ್ತರವಾಗಿ ಪದ್ಮ ಪ್ರಶಸ್ತಿ ಘೋಷಿಸಿರುವುದು ರಾಜಕೀಯ ಸಂದೇಶವನ್ನು ರವಾನಿಸುತ್ತದೆ. ಉತ್ತರಪ್ರದೇಶದ ವಿಧಾನಸಭೆಗೆ ಚುನಾವಣೆ ಹತ್ತಿರವಾಗುತ್ತಿದೆ ಎಂಬುದು ಇಲ್ಲಿ ಉಲ್ಲೇಖಾರ್ಹ.

ಆದರೆ, ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಮತ್ತು ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ ಭಟ್ಟಾಚಾರ್ಯ ಅವರಿಗೆ ಪ್ರಶಸ್ತಿ ಪ್ರಕಟಿಸಿರುವುದು ಬಹಳ ವಿವಾದಾತ್ಮಕ. ಸಿಪಿಎಂ ಪಕ್ಷದ ನೀತಿ ಹಾಗೂ ಪೂರ್ವನಿದರ್ಶನಗಳನ್ನು ಗಮನದಲ್ಲಿ ಇರಿಸಿಕೊಂಡು, ಭಟ್ಟಾಚಾರ್ಯ ಅವರು ಪ್ರಶಸ್ತಿಯನ್ನು ಸ್ವೀಕರಿಸುವುದಿಲ್ಲ ಎಂದಿದ್ದಾರೆ. ಆಜಾದ್ ಅವರಿಗೆ ಪ್ರಶಸ್ತಿ ಘೋಷಿಸಿರುವುದರ ಹಿಂದೆ ರಾಜಕೀಯ ಉದ್ದೇಶ ಇರುವಂತಿದೆ. ಅವರು ಕಾಂಗ್ರೆಸ್ಸಿನಲ್ಲಿ ಭಿನ್ನಮತೀಯ ನಾಯಕರಾಗಿ ಗುರುತಿಸಿಕೊಂಡಿದ್ದಾರೆ, ಅವರು ಪ್ರಶಸ್ತಿಯನ್ನು ನಿರಾಕರಿಸಿಲ್ಲ. ಕಾಂಗ್ರೆಸ್ಸಿನಲ್ಲಿ ಅತೃಪ್ತಿಯನ್ನು ಸೃಷ್ಟಿಸಿ, ಆಜಾದ್ ಅವರನ್ನು ಪಕ್ಷದಿಂದ ದೂರ ಮಾಡುವ ಉದ್ದೇಶದಿಂದ ಪ್ರಶಸ್ತಿ ಘೋಷಣೆ ಆಗಿರಬಹುದು. ಸರ್ಕಾರಗಳು, ವಿರೋಧ ಪಕ್ಷಗಳ ನಾಯಕರಿಗೆ ಪದ್ಮ ಪ್ರಶಸ್ತಿಯನ್ನು ಈ ಹಿಂದೆಯೂ ಪ್ರಕಟಿಸಿವೆ. ಅದಕ್ಕಾಗಿ ಪ್ರಶಂಸೆಗೂ ಪಾತ್ರವಾಗಿವೆ. ಆದರೆ ಆಜಾದ್ ಅವರಿಗೆ ಪ್ರಶಸ್ತಿ ಘೋಷಿಸಿರುವುದರ ಹಿಂದೆ ಗೌರವ ಸಲ್ಲಿಸುವುದಕ್ಕಿಂತಲೂ ಹೆಚ್ಚಾಗಿ, ಒಂದಿಷ್ಟು ರಾಜಕೀಯ ಸಮಸ್ಯೆ ಸೃಷ್ಟಿಸುವ ಉದ್ದೇಶ ಇರುವಂತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು